»   » ನಿರ್ಮಾಪಕರು ಸಾಲುಗಟ್ಟಿದ್ದರೂ ವಿಚಲಿತರಾಗದ ವಿಷ್ಣು

ನಿರ್ಮಾಪಕರು ಸಾಲುಗಟ್ಟಿದ್ದರೂ ವಿಚಲಿತರಾಗದ ವಿಷ್ಣು

Posted By: ಸತ್ಯವ್ರತ ಹೊಸಬೆಟ್ಟು
Subscribe to Filmibeat Kannada

ವಿಷ್ಣುವರ್ಧನ್‌ ತಮ್ಮ ಇಮೇಜ್‌ ಬದಲಾಯಿಸಿಕೊಳ್ಳುವ ಪ್ರಯತ್ನದಲ್ಲಿ ಇದ್ದಾರಾ ?

ಅವರ ಇತ್ತೀಚಿನ ಮಾತುಗಳು ಅದನ್ನೇ ಪುಷ್ಟೀಕರಿಸುತ್ತವೆ. ಕಳೆದ ವಾರ ಚಿಕ್ಕಮಗಳೂರಿನಲ್ಲಿ ಸೆಟ್ಟೇರಿದ ಪರ್ವ ಚಿತ್ರದಲ್ಲಿ ಅವರದು ಸಂಗೀತಗಾರನ ಪಾತ್ರ. ರವೀ ನಿರ್ದೇಶನದ ಮಲಯ ಮಾರುತ ಬಿಟ್ಟರೆ, ವಿಷ್ಣು ಹೆಚ್ಚಾಗಿ ಸಂಗೀತಗಾರನ ಪಾತ್ರದಲ್ಲಿ ಕಾಣಿಸಿಕೊಂಡಿಲ್ಲ . ಕಳೆದ ನಾಲ್ಕು ವರ್ಷಗಳಲ್ಲಿ ಅವರು ನಟಿಸಿದ ಪಾತ್ರಗಳೆಲ್ಲವೂ ಪಂಚೆ ಪ್ರಧಾನವಾದವುಗಳೇ. ವೀರಪ್ಪ ನಾಯ್ಕ, ಸೂರಪ್ಪ , ಸೂರ್ಯವಂಶ, ದಿಗ್ಗಜರು, ಹಬ್ಬ ಚಿತ್ರಗಳಲ್ಲಿ ಅವರ ಪಾತ್ರವೂ ಹಿರಿತನದ್ದು. ಇದೀಗ ಸುನೀಲ್‌ ಕುಮಾರ್‌ ದೇಸಾಯಿ ನಿರ್ದೇಶನದ ಪರ್ವ ಚಿತ್ರದಲ್ಲಿ ನಟಿಸಲು ಒಪ್ಪಿಕೊಳ್ಳುವ ಮೂಲಕ ವಿಷ್ಣು ಮತ್ತೊಂದು ಹಂತ ತಲುಪಿದ್ದಾರೆ ಅನ್ನುವುದು ನಿಜ. ಅವರು ಬದಲಾಗಿದ್ದಾರೆ ಅನ್ನೋದು ಅವರ ಮಾತಲ್ಲೇ ಗೊತ್ತಾಗುತ್ತದೆ. ಹಿಂದಿನಂತೆ ಕಾಂಟ್ರವರ್ಸಿಗಳಲ್ಲಿ ಅವರಿಗೆ ಆಸಕ್ತಿ ಇಲ್ಲ. ಪಾರಮಾರ್ಥಿಕ ಒಲವು ಅವರನ್ನು ಎಂದಿಗಿಂತ ಹೆಚ್ಚಾಗಿ ಆಕರ್ಷಿಸಿದೆ. ವಿಷ್ಣು ಮುಂದೆ ಆರಿಸಿಕೊಳ್ಳುವ ಚಿತ್ರಗಳು ಹೇಗಿರುತ್ತವೆ ?

  • ಕೆ. ವಿಶ್ವನಾಥ್‌ ನಿರ್ದೇಶನದ ಶ್ರೀರಂಗಪಟ್ಟಣದ ಸಹೋದರರು ಚಿತ್ರದಲ್ಲಿ ವಿಷ್ಣು ಸಂಗೀತಗಾರರಾಗಿ ನಟಿಸುತ್ತಿರುವುದು ವಿಶೇಷ.
  • ಗಿರೀಶ್‌ ಕಾರ್ನಾಡ್‌ ಲಂಡನ್‌ನಿಂದ ಮರಳಿದ ತಕ್ಷಣ ವಿಷ್ಣುವರ್ಧನ್‌ ಅವರಿಗಾಗಿ ಒಂದು ಸಿನಿಮಾ ನಿರ್ದೇಶಿಸಲಿದ್ದಾರೆ. ನಿರ್ಮಾಪಕರು ಯಾರು ಅನ್ನೋದು ಸದ್ಯಕ್ಕೆ ನಿಗೂಢ.
  • ನಾಗಣ್ಣ ನಿರ್ದೇಶನದಲ್ಲಿ ಕೋಟಿಗೊಬ್ಬ ಎಂಬ ಸಿನಿಮಾ ತಯಾರಾಗುತ್ತಿದೆ. ಯಥಾ ಪ್ರಕಾರ ಇಮೇಜ್‌ ಒರಿಯಂಟೆಡ್‌ ಚಿತ್ರ ಇದು.
  • ಎಸ್‌. ನಾರಾಯಣ್‌ ನಿರ್ದೇಶಿಸಬೇಕಿದ್ದ ಜಮೀನ್ದಾರ ಚಿತ್ರ ಮುಂದಕ್ಕೆ ಹೋಗುವ ಸೂಚನೆಗಳು ಕಾಣಿಸುತ್ತಿವೆ.

ಇವೆಲ್ಲದರ ನಡುವೆ ವಿಷ್ಣು ಸಹಸ್ರನಾಮ ಮತ್ತು ಭಗವನ್ನಾಮ ಸ್ಮರಣೆಯತ್ತ ವಿಷ್ಣುವರ್ಧನ್‌ ಆಕರ್ಷಿತರಾಗಿದ್ದಾರೆ. ಹಣಕ್ಕಾಗಿ ನಟಿಸುವುದನ್ನು ಕಡಿಮೆ ಮಾಡಿದ್ದಾರೆ ಎಂದು ಅವರನ್ನು ಹತ್ತಿರದಿಂದ ಬಲ್ಲ ನಿರ್ಮಾಪಕರೇ ಹೇಳುತ್ತಾರೆ. ಹಿಂದೊಮ್ಮೆ ರಾಜೇಂದ್ರ ಸಿಂಗ್‌ ಬಾಬು, ವಿಷ್ಣು ಮೇಲೆ ಹೊರಿಸಿದ ಆಪಾದನೆ ನಿಮಗೆ ನೆನಪಿರಬಹುದು. ವಿಷ್ಣು ಹಿಟ್‌ ಸಿನಿಮಾ ಕೊಡೋದು ನಾನು. ಅದರ ಲಾಭ ಪಡೆದುಕೊಳ್ಳುವುದು ಅವನು. ಬಂಧನ ಮಾಡಿದಾಗ ಅವನಿಗೆ ಸಾಕಷ್ಟು ಆಫರ್‌ ಬಂತು. ನಾನು ಕಾಲ್‌ ಶೀಟ್‌ ಕೇಳಲಿಲ್ಲ. ಮುತ್ತಿನ ಹಾರ ಮಾಡಿದಾಗಲೂ ಹಾಗೇ ಆಯ್ತು . ಎಂದು ಸಿಂಗ್‌ ಬಾಬು ದೂರಿದ್ದರು. ಆದರೆ ಈ ಬಾರಿ ನಿರ್ಮಾಪಕರು ಸಾಲುಗಟ್ಟಿ ನಿಂತಿದ್ದರೂ ವಿಷ್ಣು ವಿಚಲಿತರಾಗಿಲ್ಲ. ಕತೆ ಚೆನ್ನಾಗಿಲ್ಲದೇ ಇದ್ದರೆ ನಟಿಸೋಲ್ಲ ಅಂತ ಹೇಳಿಬಿಟ್ಟಿದ್ದಾರೆ.

ಅಂದ ಹಾಗೆ ವಿಷ್ಣು ಈ ಬಾರಿ ವಿಧಾನ ಪರಿಷತ್‌ ಸದಸ್ಯರಾಗಿ ನೇಮಕವಾಗುವ ಸಾಧ್ಯತೆಗಳೂ ಇವೆ. ಅವರ ಹೆಸರು ಜೋರಾಗಿ ಕೇಳಿಬರುತ್ತಿದ್ದರೂ ವಿಷ್ಣು ಮಾತ್ರ ನಮಗೆಲ್ಲ ಅದು ಸರಿಹೋಗಲ್ಲ . ಹೆಸರು ಹೇಳ್ತಿದ್ದಾರೆ. ಮುಂದೆ ನೋಡೋಣ ಅನ್ನುತ್ತಿದ್ದಾರೆ.

ಅಂಬರೀಷ್‌ ಸ್ನೇಹಕ್ಕೆ ಬೆಲೆ ಅದು ಎನ್ನುವ ಮಾತೂ ಹಬ್ಬಿದೆ.

English summary
Now Vishnuvardhan is not giving priority towards money

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada