»   » ನಾಗರಹಾವಿನ ನಂತರ ನೆನಪುಳಿಯುವ ಎಷ್ಟು ಚಿತ್ರಗಳಲ್ಲಿ ವಿಷ್ಣು

ನಾಗರಹಾವಿನ ನಂತರ ನೆನಪುಳಿಯುವ ಎಷ್ಟು ಚಿತ್ರಗಳಲ್ಲಿ ವಿಷ್ಣು

Posted By: *ರಘುನಾಥ ಚ.ಹ.
Subscribe to Filmibeat Kannada
  1. ಛೇ ಛೇ! ಇಷ್ಟೊಂದು ಕೆಟ್ಟದಾಗಿ ಆಡುವುದಾ? ನಮ್ಮ ಕ್ರಿಕೆಟಿಗರಿಗೆ ಕನ್ಸಿಸ್ಟೆನ್ಸಿ ಅನ್ನುವುದೇ ಇಲ್ಲ .
  2. ಸುನಿಲ್‌ಕುಮಾರ್‌ ದೇಸಾಯಿ ಬಯಸುವಂತೆ ಅಭಿನಯಿಸುವುದು ಕಷ್ಟವಾಗುತ್ತಿದೆ. 'ಪರ್ವ" ಮುಗಿದರೆ ಸಾಕು ಅನ್ನಿಸಿದೆ.

ವಿಷ್ಣುವರ್ಧನ್‌ ಅವರಿಗೆ ಕ್ರಿಕೆಟ್ಟು ಅಚ್ಚುಮೆಚ್ಚು ಹಾಗೂ ಹುಚ್ಚು ಎನ್ನುವುದನ್ನು ಅನೇಕ ಸಲ ಅವರೇ ಹೇಳಿಕೊಂಡಿದ್ದಾರೆ. ಸೆಟ್‌ಗಳಲ್ಲಿ ಕೂಡ ವಿಷ್ಣು ಕಾಮೆಂಟರಿ ಕೇಳುವುದುಂಟು, ಭಾರತ ಸೋತಾಗ ಮೂಡ್‌ ಕಳಕೊಂಡು ಮೂಡಿಯಾಗುವುದುಂಟು. ಆಗಾಗ ಅವರಲ್ಲಿ ಇಣುಕುವ ವಿರಾಗ ಇಂಥ ಸಂದರ್ಭದಲ್ಲಿ ಹೆಚ್ಚು ದಟ್ಟವಾಗುವುದುಂಟು. ಇದೇ ವಿಷ್ಣು , ಇತ್ತೀಚೆಗೆ 'ಪರ್ವ" ಚಿತ್ರದ ಚಿತ್ರೀಕರಣದ ಸಂದರ್ಭದಲ್ಲಿ ಕಲಾವಿದನಾಗಿ ಖಾಲಿತನ ಅನುಭವಿಸಿದ್ದರು. ಸ್ಫೂರ್ತಿಗಾಗಿ ರಮೇಶ್‌ ಅವರನ್ನು ನೆನಪಿಸಿಕೊಂಡಿದ್ದರು.

ವಿಷ್ಣು ಖಾಲಿಯಾಗುತ್ತಿದ್ದ್ದಾರಾ?
ಡಬ್ಬಲ್‌ ಸೆಂಚುರಿಗೆ ಹತ್ತಿರದಲ್ಲಿರುವ ಹಿರೀಕ ಈ ರೀತಿ ದಣಿಯುವುದು, ಸೆಂಚುರಿ ಬಾರಿಸದ (ರಮೇಶ್‌) ನಟನಿಂದ ಸ್ಫೂರ್ತಿ ಪಡೆಯುವುದೆಂದರೆ ತಮಾಷೆ ಅನ್ನಿಸುವುದಿಲ್ಲವಾ? ಚಿತ್ರದಿಂದ ಚಿತ್ರಕ್ಕೆ ಕಲಾವಿದ ಮಾಗುವುದು ಸಹಜ. ಆದರೆ, ವಿಷ್ಣು ಖಾಲಿಯಾಗುತ್ತಿದ್ದ್ದಾರಾ?

ರಟ್ಟೆಗಾತ್ರದ ಮೀಸೆ, ರಾಜಪೋಷಾಕು, ತ್ಯಾಗಿ ಅಣ್ಣ, ಜನನಾಯಕ.. ಇತ್ತೀಚೆಗೆ ವಿಷ್ಣುವರ್ಧನ್‌ ನಟಿಸುತ್ತಿರುವ ಈ ಪಾತ್ರಗಳೇ ಇಂತಹ ಸಂಶಯಗಳಿಗೆ ಕಾರಣ. ಮತ್ತೂ ವಿಷಾದದ ಸಂಗತಿಯೆಂದರೆ, ಈ ಚಿತ್ರಗಳಲ್ಲಿ ಬಹುತೇಕ ರಿಮೇಕ್‌ ಆಗಿರುವುದು. ಅರವತ್ತರ ಹೊಸಿತಿಲಲ್ಲಿರುವ ವಿಷ್ಣು , ಪ್ರತಿಭೆಗೆ ಸವಾಲೊಡ್ಡುವ ಪಾತ್ರಗಳಲ್ಲಿ ನಟಿಸುವುದು ಯಾವಾಗ? ಚರಿತ್ರೆಗೆ, ಪುರಾಣಕ್ಕೆ, ವರ್ತಮಾನದ ತುರ್ತುಗಳಿಗೆ ಮುಖಾಮುಖಿಯಾಗುವುದು ಯಾವಾಗ?

ಹೀಗಿರಬೇಕು, ಇಂಥದ್ದೇ ಪಾತ್ರಗಳಲ್ಲಿ ಅಭಿನಯಿಸಬೇಕು ಎಂದು ಯಾವುದೇ ಕಲಾವಿದನಿಗೆ ಒತ್ತಾಯ ಹೇರುವ ಹಕ್ಕು ಯಾರಿಗೂ ಇಲ್ಲ , ನಿಜ. ಆದರೆ; ರಾಜ್‌ಕುಮಾರ್‌ ನಂತರದ ಅತ್ಯಂತ ಜನಪ್ರಿಯ ಕನ್ನಡ ನಟ ಎನ್ನುವ ಹಿನ್ನೆಲೆಯಲ್ಲಿ ವಿಷ್ಣುವರ್ಧನ್‌ ಅವರಿಂದ ಹೆಚ್ಚಿನದನ್ನು ನಿರೀಕ್ಷಿಸಿದರೆ ತಪ್ಪೇನು? ನಾಗರಹಾವಿನಂಥಾ ಅದ್ಭುತ ಚಿತ್ರದ ಮೂಲಕ ಎಂಟ್ರಿ ಪಡೆದ ವಿಷ್ಣು ಆನಂತರ ಅಂಥ ಎಷ್ಟು ಚಿತ್ರಗಳನ್ನು ಕೊಟ್ಟಿದ್ದಾರೆ. ಅಪರೂಪಕ್ಕೊಂದು ಬಂಧನ, ಮುತ್ತಿನಹಾರ, ಲಾಲಿ, ಸುಪ್ರಭಾತಗಳನ್ನು ಬಿಟ್ಟರೆ ಉಳಿದಂತೆ ವಿಷ್ಣು ವನ್ನು ನೆನಪಿಸಿಕೊಳ್ಳುವುದು ಎಲ್ಲಿ?

ಸಾಹಸಸಿಂಹನಿಂದ ಯಜಮಾನನವರೆಗೆ
ಸಾಹಸಸಿಂಹ ಹಿಟ್‌ ಆದದ್ದೇ ತಡ, ಸಾಹಸ ಪ್ರಧಾನ ವಿಷ್ಣು ಚಿತ್ರಗಳು ಸಾಲು ಸಾಲು ಬರತೊಡಗಿದವು. ಜೋಸೈಮನ್‌ನಂಥ ಡಿಶುಂ ನಿರ್ದೇಶಕರನ್ನು ಬೆಳೆಸಿದ್ದೇ ಇಂಥಾ ಚಿತ್ರಗಳು. ಅದೇ ವಿಷ್ಣು ಯಜಮಾನ, ವೀರಪ್ಪನಾಯಕನಂಥ ಸಿನಿಮಾಗಳು ಯಶಸ್ವಿಯಾದಾಗ ಮತ್ತೆ ಮತ್ತೆ ರಟ್ಟೆಗಾತ್ರದ ಮೀಸೆ ಅಂಟಿಸಿಕೊಂಡು ಗೌಡನ ಗತ್ತಿನಲ್ಲಿ ನಟಿಸಲು ಮುಜುಗರ ಪಡುತ್ತಿಲ್ಲ .

ಹೆಚ್ಚೂಕಡಿಮೆ ವಿಷ್ಣು ಪ್ರಾಯದವರೇ ಆದ ತಮಿಳಿನ ಕಮಲಹಾಸನ್‌ ಹೊಸ ಹೊಸ ಪ್ರಯೋಗಗಳಲ್ಲಿ ನಿರತರಾಗಿರುವಾಗ, ವಿಷ್ಣು ಅದೇ ಭಂಗಿಗಳಲ್ಲೇ ಕೊಳೆಯುವುದನ್ನು ನೆನಪಿಸಿಕೊಳ್ಳುವುದು ಕಷ್ಟವಾಗುತ್ತದೆ. ಏಕತಾನತೆ ಅನ್ನುವುದು ವಿಷ್ಣುವನ್ನು ಕಾಡುವುದಿಲ್ಲವಾ? ಎದೆಯಾಳಗಿನ ಕಲಾವಿದ ಹೊಸತಿಗಾಗಿ ಹಸಿದು ಕಾಡಿಸುವುದಿಲ್ಲವಾ?

ನಿರ್ಮಾಪಕರ ದರ್ದುಗಳಿಗಾಗಿ ಇನ್ನೆಷ್ಟು ದಿನ ಅಭಿನಯಿಸುವುದು
ಆರ್ಥಿಕವಾಗಿಯೂ ಸಾಕಷ್ಟು ಬೆಳೆದಿರುವ ವಿಷ್ಣು ನಿರ್ಮಾಪಕರಾಗಲಿಕ್ಕಿದು ಸಕಾಲವೆನಿಸುತ್ತದೆ. ಅಭಿಮಾನಿಗಳ ಪ್ರೀತ್ಯರ್ಥ ನಟಿಸುವುದರ ಬದಲು, ವಿಷ್ಣು ಹೊಸತಿಗಾಗಿ ಕಾತರಿಸಬೇಕು. ಸಂಖ್ಯೆಗಾಗಿ, ಚಾಲ್ತಿಯಲ್ಲಿರಲಿಕ್ಕಾಗಿ ವಿಷ್ಣು ನಟಿಸುವ ಅವಶ್ಯಕತೆಯೇನಿಲ್ಲ . ಯುವನಟರನ್ನು ನಟಿಸಲಿಕ್ಕಾಗಿ ಯುವನಟಿಯರ ಸೊಂಟ ಹಿಡಿದು ಸುತ್ತುವುದು, ಫೈಟ್‌ ಮಾಡುವ ಅಗತ್ಯವೂ ಇಲ್ಲ . ವಿಷ್ಣು ತಮ್ಮದೇ ಮಾರ್ಗ ಕಂಡುಕೊಳ್ಳಬೇಕು. ಅದು ವಿಷ್ಣುಮಾರ್ಗವಾಗಬೇಕು. ನಟ ಮಗುವಾಗಬೇಕು, ಮುದುಕನಾಗಬೇಕು, ಹುಚ್ಚನಾಗಬೇಕು. ಎಲ್ಲವೂ ಆಗಿ ಎಲ್ಲೂ ಅಂಟಿಕೊಳ್ಳದಂತಿರಬೇಕು. ಆಗಷ್ಟೆ ಮೈಲುಗಲ್ಲುಗಳು ಸಾಧ್ಯವಾಗುತ್ತವೆ.

ಇತ್ತೀಚಿನ ವಿಷ್ಣು ಚಿತ್ರಗಳು ಯಶಸ್ಸು ಕಂಡಿವೆಯಲ್ಲಾ ಎಂದು ಸಮಾಧಾನಿಸಿಕೊಳ್ಳುವಂತಿಲ್ಲ . ಯಜಮಾನನ ಯಶಸ್ಸು ಎಷ್ಟೇ ದೊಡ್ಡದಾದರೂ ಅದು ಭೂತಯ್ಯನ ಮಗ ಅಯ್ಯುವಿನಷ್ಟು ಮುಖ್ಯವಾಗುವುದಿಲ್ಲ . ಯಜಮಾನ- ಅಯ್ಯು ನಡುವಣ ವ್ಯತ್ಯಾಸ, ಸಾಂಸ್ಕೃತಿಕ ಮಹತ್ವ ಅರ್ಥವಾದಾಗ ಮಾತ್ರ ವಿಷ್ಣು ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಕಾಲ ಉಳಿಯುತ್ತಾರೆ. ಇಲ್ಲದಿದ್ದಲ್ಲಿ ಹೊಳೆಯಲ್ಲೊಂದು ಹನಿಯಾಗಿ ಕರಗಿಹೋಗುತ್ತಾರೆ. ವಿಷ್ಣು ಹನಿಯಾಗಬಾರದು, ಹೊಳೆಯಾಗಬೇಕು. ಅದು ಅವರ ಕೈಯ್ಯಲ್ಲೇ ಇದೆ.

English summary
Vishnu : an actor yet to become an artist !

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada