"ಯಾವ ನಾಯಿಗೆ ಬೇಕೋ ನಿನ್ನ ಟಿಕೇಟ್.." ಹೀಗಂತಲೇ 'ವಲವಾರ' ಸಿನಿಮಾ ನೋಡಲು ಕರೆದ್ರು
ಒಳ್ಳೆಯ ಸಿನಿಮಾಗಳು ಕೆಲವೊಮ್ಮೆ ತಾವಾಗಿಯೇ ಪ್ರಚಾರ ಪಡೆದುಕೊಳ್ಳುತ್ತವೆ. ಸೆಲೆಬ್ರೆಟಿಗಳು ಸ್ವಯಂ ಪ್ರೇರಿತರಾಗಿ ಸಿನಿಮಾ ಪ್ರಚಾರ ಮಾಡುವುದಕ್ಕೆ ಮುಂದು ಬಂದು ಬಿಡುತ್ತಾರೆ. ಸೋಶಿಯಲ್ ಮೀಡಿಯಾದಲ್ಲಿ ಜನರೇ ಪ್ರಚಾರ ಮಾಡುವುದಕ್ಕೆ ಇಳಿದು ಬಿಡುತ್ತಾರೆ. ಇಂತಹ ಉದಾಹರಣೆಗಳು ಸಾಕಷ್ಟು ಇವೆ. ಈಗ ಮತ್ತೆ 'ವಲವಾರ' ಸಿನಿಮಾ ಅದೇ ಅನುಭವ ಆಗಿದೆ. ಸಿನಿಮಾ ಮೆಚ್ಚಿ ಕನ್ನಡದ ಗಣ್ಯರು ಪ್ರೇಕ್ಷಕರನ್ನು ಥಿಯೇಟರ್‌ಗೆ ಕರೆಯುತ್ತಿದ್ದಾರೆ.
ಇಂತಹ ಸಮಯದಲ್ಲಿ ವಿನೂತನವಾಗಿ ಪ್ರೇಕ್ಷಕರನ್ನು ಚಿತ್ರಮಂದಿರಕ್ಕೆ ಕರೆದವರು ಡಾ.ವಿಷ್ಣುವರ್ಧನ್ ಅಭಿಮಾನಿ ವೀರಕಪುತ್ರ ಶ್ರೀನಿವಾಸ್. ಈಗಾಗಲೇ ಅವರು ಅವರು ಕರೆದು ಜನರು ಸಿನಿಮಾ ನೋಡಿದ್ದೂ ಆಗಿದೆ. ಆದರೆ, ಹೀಗೆ ವಿಶಿಷ್ಟವಾಗಿ ಸಿನಿಮಾ ನೋಡಿ ಅಂತನೂ ಜನರಿಗೆ ಹೇಳಬಹುದು ಅನ್ನೋದನ್ನು ತೋರಿಸಿದ್ದಾರೆ. ಫ್ರೀ ಟಿಕೇಟ್ ಕೊಡ್ತೀವಿ ಅನ್ನೋರಿಗೆ.. ಯಾವ ನಾಯಿಗೆ ಬೇಕೋ ನಿನ್ನ ಟಿಕೇಟ್.. ಅಂತ ಚಿತ್ರಮಂದಿರಕ್ಕೆ ಕರೆದಿದ್ದಾರೆ.

ಈಗಾಗಲೇ 'ವಲವಾರ' ಸಿನಿಮಾಗೆ ಶಿವಣ್ಣ, ರಿಷಬ್ ಶೆಟ್ಟಿ, ಕವಿರಾಜ್ ಸೇರಿದಂತೆ ಚಿತ್ರರಂಗದ ಗಣ್ಯರು ಬೆಂಬಲ ನೀಡಿದ್ದಾರೆ. ವೀರಕಪುತ್ರ ಶ್ರೀನಿವಾಸ್ ಕೂಡ ಹೀಗೆ ವಿನೂತನವಾಗಿ ಪ್ರೇಕ್ಷಕರನ್ನು ಚಿತ್ರಮಂದಿರಕ್ಕೆ ಕರೆದಿದ್ದರು. ಅವರ ಫೇಸ್ ಬುಕ್‌ನಲ್ಲಿ ಸಂಪತ್ತಿಗೆ ಸವಾಲ್ ಸಿನಿಮಾದಲ್ಲಿನ ಅಣ್ಣಾವ್ರ ಶೈಲಿಯಂತೆ "ಯಾವ ನಾಯಿಗೇ ಬೇಕೋ ನಿನ್ನ ಟಿಕೆಟ್! ಯಾವ ನಾಯಿಗೆ ಬೇಕೋ... ಅಂತ ಬೈದಾದರೂ ಬಂದು ನಿಮ್ಮದೇ ಹಣದಲ್ಲಿ ಸಿನಿಮಾ ನೋಡಿ" ಕರೆ ನೀಡಿದ್ದರು.
ವೀರಕಪುತ್ರ ಅವರ ಫೇಸ್ ಬುಕ್ ಖಾತೆಯಲ್ಲಿ ಅವರು ಬರೆದುಕೊಂಡಿದ್ದ ಸಾಲುಗಳು ಹೀಗಿವೆ.
"ಯಾವ ನಾಯಿಗೆ ಬೇಕೋ ನಿನ್ನ ಟಿಕೇಟ್...ಈ ಸಿನಿಮಾವನ್ನು ಗೆಲ್ಲಿಸಿಕೊಳ್ಳದಿದ್ದ ಮೇಲೆ, ಉತ್ತಮ ಸಿನಿಮಾಗಳು ಬರುತ್ತಿಲ್ಲ ಎಂದು ಆರೋಪಿಸುವ ಹಕ್ಕು ನಮಗಿಲ್ಲ. ಇದು ಸಿನಿಮಾವಲ್ಲ; 70-90 ರ ನಡುವಿನಲ್ಲಿ ಹಳ್ಳಿಯಲ್ಲಿ ಹುಟ್ಟಿದ ಪ್ರತಿ ಬಡವನ ಕತೆ! ಇಲ್ಲಿ ನಿಮ್ಮ ಅಮ್ಮ ನಿಮಗೆ ಹೊಸ ರೂಪದಲ್ಲಿ ಸಿಗುತ್ತಾರೆ. ನೀವಾಕೆಯನ್ನು ಅಪ್ಪಿ ಅಳುವಿರಿ. ನಿಮ್ಮ ಬಾಲ್ಯ ನಿಮಗೆ ಟನ್ ಗಟ್ಟಲೆ ವಾಪಸ್ ಸಿಗುತ್ತದೆ. ನೀವದನ್ನು ಅಪ್ಪಿ ನಗುವಿರಿ. ಆ ಊರು, ಆ ಕೆರೆ, ಆ ಹಸು, ಆ ಹೊಲ, ಆ ಕೋಳಿ, ಅದೊಂದು ಪೊದೆ.. ಎಲ್ಲವೂ ನಮ್ಮದೇ! ಒಂದು ಫೀಲ್ ಗುಡ್ ಮೂವಿ.. ಇವತ್ತು ಸಂಜೆ 6.45ಕ್ಕೆ ವೇಗ ಸಿಟಿ ಮಾಲ್ನಲ್ಲಿ ಈ ಸಿನಿಮಾವನ್ನು ನಾನು ಮತ್ತೊಮ್ಮೆ ನಿಮ್ಮ ಜೊತೆ ನೋಡಬೇಕೆನಿಸಿದೆ. ಬರ್ತೀರಾ ಪ್ಲೀಸ್...?
ಟಿಕೆಟ್ ನಾನೇ ಕೊಡಿಸುವೆ.. ಅಥವಾ ಸಂಪತ್ತಿಗೆ ಸವಾಲ್ ಸಿನಿಮಾದ ಡಾ.ರಾಜ್ ಅವರ ಸ್ಟೈಲಿನಲ್ಲಿ ಯಾವ ನಾಯಿಗೇ ಬೇಕೋ ನಿನ್ನ ಟಿಕೆಟ್! ಯಾವ ನಾಯಿಗೆ ಬೇಕೋ... ಅಂತ ಬೈದಾದರೂ ಬಂದು ನಿಮ್ಮದೇ ಹಣದಲ್ಲಿ ಸಿನಿಮಾ ನೋಡಿ. ಒಟ್ನಲ್ಲಿ ನೋಡಿ! ಏಕೆಂದರೆ ಇದು ಕನ್ನಡಕ್ಕಾಗಿ ಮಾತ್ರವಲ್ಲ; ನಮಗಾಗಿಯೂ ಹೌದು. ಬರ್ತೀರಾ?" ಎಂದು ವೀರಕಪುತ್ರ ಶ್ರೀನಿವಾಸ್ ಫೇಸ್‌ಬುಕ್‌ನಲ್ಲಿ ಕರೆ ನೀಡಿದ್ದರು.
ಇದರ ಹಿಂದೇನೆ ಕನಕಪುರ ಶ್ರೀನಿವಾಸ್ ಮತ್ತೊಂದು ಫೋಸ್ಟ್ ಕೂಡ ಮಾಡಿದ್ದರು. 'ವಲವಾರ' ಸಿನಿಮಾ ತನ್ನ ಮಕ್ಕಳಿಗೆ ಇಷ್ಟ ಆಗಿಲ್ಲ ಅಂತನೂ ಪೋಸ್ಟ್ ಮಾಡಿದ್ದರು. ಅದ್ಯಾಕೆ ಅಂತನೂ ಬರೆದುಕೊಂಡಿದ್ದಾರೆ.
"ನನ್ನ ಮಕ್ಕಳಿಗೆ ಈ ಸಿನಿಮಾ ಇಷ್ಟವಾಗಲಿಲ್ಲ. ಈ ವಲವಾರ ಸಿನಿಮಾವನ್ನು ನಾನು ನನ್ನ ಮಕ್ಕಳ ಜೊತೆ ನೋಡ್ದೆ. ನಾನಿಲ್ಲಿ ಕಣ್ತುಂಬಿಕೊಂಡು ಕೂತಿದ್ರೆ, ನನ್ನ ಮಕ್ಕಳು ನಗ್ತಿದ್ರು. ಈ ಸಿನಿಮಾ ಅವರಿಗೆ ಕನೆಕ್ಟ್ ಆಗಲೇ ಇಲ್ಲ. ಕೊನೆಗೆ, ಅದ್ಯಾಕಪ್ಪ... ನೂರೈವತ್ತು ರೂಪಾಯಿಗೆ ಇಷ್ಟು ಪಡ್ತಾವ್ರೆ ಅಂತ ಕೇಳಿದ್ರು. ಆಗಲೇ ನಾನು ಈ ಸಿನಿಮಾದ ಮಹತ್ವವನ್ನು ಅರಿತಿದ್ದು. ನಮ್ಮ ಮಕ್ಕಳಿಗೆ ನಮ್ಮ ಕಷ್ಟಗಳೇ ಗೊತ್ತಿಲ್ಲ. ಅವರಿಗೆ ನಮ್ಮ ಬದುಕುಗಳ ಪರಿಚಯವಿಲ್ಲ. ಅವರಿಗೆ ಎಲ್ಲವೂ ಸಲೀಸಾಗಿ ಸಿಗ್ತಿರೋ ಕಾರಣ ನಮ್ಮ ಬಾಲ್ಯ, ಬವಣೆ, ಪ್ರೀತಿ, ನಂಬಿಕೆ, ಕಣ್ಣೀರು ದೊಡ್ಡದೆನಿಸುತ್ತಿಲ್ಲ. ಅವತ್ತು ರಾತ್ರಿ ಮಕ್ಕಳಿಗೆ ನಾವು ನಮ್ಮ ಬಾಲ್ಯವನ್ನು, ನಾವು ಐದು ಪೈಸೆಗೆ ಪಡ್ತಿದ್ದ ಕಷ್ಟವನ್ನು, ನಮ್ಮ ಅಮ್ಮ ಹರಕಲು ಸೀರೆ ಉಟ್ಟು ನಮ್ಮನ್ನು ಪೊರೆದ ಕತೆಯನ್ನು ಹೇಳಿದೆ. ಅಲ್ಲಿಂದಾಚೆಗೆ ಅವರು ನಗಲಿಲ್ಲ, ಮೌನವಾದರು.. ನಮ್ಮ ಮಕ್ಕಳಿಗೆ ಎಲ್ಲವೂ ಸುಲಭಕ್ಕೆ ಸಿಗುತ್ತಿರುವಾಗ ಅವರ ಆದ್ಯತೆಗಳು ಬದಲಾಗಿವೆ. ಬೇರುಗಳು ಸಡಿಲಗೊಂಡಿವೆ. ಆ ಬೇರುಗಳನ್ನು ಗಟ್ಟಿಗೊಳಿಸುವ ಕೆಲಸವನ್ನು ಈ ಸಿನಿಮಾ ಮಾಡಬಲ್ಲದು. ಅದನ್ನೂ ಬಿಡಿ; ಇಲ್ಲಿಯ ಪ್ರತಿ ದೃಶ್ಯವೂ ಒಂದು ಕಾವ್ಯದ ರೀತಿ ಕಟ್ಟಿಕೊಡಲಾಗಿದೆ. ಇದನ್ನು ನೋಡುವುದು ಸಿನಿಮಾದವರಿಗೆ ಮಾಡುವ ಉಪಕಾರವಲ್ಲ. ನಮ್ಮ ಸಮಯಕ್ಕೆ ನಾವು ಕೊಟ್ಟು ಕೊಳ್ಳುವ ಗೌರವ. ನಮ್ಮ ಭಾವುಕತೆಗೆ ನಾವು ಮಾಡುವ ಹೂಡಿಕೆ. ನಮ್ಮ ಬಾಲ್ಯಕ್ಕೆ ನಾವು ವಾಪಸ್ಸಾಗುವ ಅವಕಾಶ. ನಮ್ಮ ಅಮ್ಮನನ್ನು ಮತ್ತೆ ಅಪ್ಪುವಂತೆ ಮಾಡುವ ಜಾದೂ." ಎಂದು ವೀರಕಪುತ್ರ ಶ್ರೀನಿವಾಸ ಕರೆ ನೀಡಿದ್ದರು. ಅದಕ್ಕೆ ಪ್ರತಿಕ್ರಿಯೆ ಹೇಗೆ ಸಿಕ್ಕಿದೆಯೋ ಮುಂದೆ ಹೇಳಬಹುದು.


Click it and Unblock the Notifications











