Vishnuvardhan Birthday: 'ಹ್ಯಾಪಿ ಬರ್ತ್‌ಡೇ ಯಜಮಾನ್ರೆ' ಎಂದು ಕಿಚ್ಚ ಸುದೀಪ್, ಕಾಮನ್ ಡಿಪಿ ಬಿಡುಗಡೆ
ವಿಷ್ಣುದಾದಾ ಅಭಿಮಾನಿಗಳಿಗೆ ಇಂದು (ಸೆಪ್ಟೆಂಬರ್ 18) ಹಬ್ಬ. ಏಕೆಂದರೆ ವಿಷ್ಣುವರ್ಧನ್ ಜನ್ಮದಿನ. ಅವರು ನಮ್ಮೊಂದಿಗೆ ಇಲ್ಲದಿದ್ದರೂ ಕೂಡ ಅವರ ಅಭಿಮಾನಿಗಳು ಜನ್ಮದಿನವನ್ನು ಖುಷಿಯಿಂದ ಆಚರಿಸುತ್ತಿದ್ದಾರೆ. ಸಾಮಾಜಿಕ ಮಾಧ್ಯಮಗಳಲ್ಲಿ ನಾಗರಹಾವು ಸಿನಿಮಾದಿಂದ ಹಿಡಿದು ಆಪ್ತರಕ್ಷಕ ಸಿನಿಮಾದವರೆಗೂ ಎಲ್ಲಾ ಪೋಸ್ಟರ್‌ಗಳು ಹರಿದಾಡುತ್ತಿವೆ.
ಇನ್ನು, ವಿಷ್ಣುದಾದನ ಬರ್ತ್ಡೇಗೆ ಕಾಮನ್ ಡಿಪಿ ಬಿಡುಗಡೆಯಾಗಿದೆ. ಅದನ್ನು ಸ್ಯಾಂಡಲ್‌ವುಡ್ ಸ್ಟಾರ್ ನಟ ಕಿಚ್ಚ ಸುದೀಪ್ ಅನಾವರಣ ಮಾಡಿದ್ದಾರೆ. ವಿಷ್ಣು ಅಭಿಮಾನಿಗಳಿಗಾಗಿ ಕಿಚ್ಚ ಸುದೀಪ್ ಕಾಮನ್ ಡಿಪಿ ಬಿಡುಗಡೆ ಮಾಡಿದ್ದಾರೆ. ಇದನ್ನು ಡಿಪಿಗೆ ಹಾಕಿಕೊಂಡು ವಿಷ್ಣು ಫ್ಯಾನ್ಸ್ ಖುಷ್ ಆಗಿದ್ದಾರೆ.

"ನಮ್ಮ ಪ್ರೀತಿಯ ವಿಷ್ಣು ಸರ್ ಅವರ ಕಾಮನ್ ಡಿಪಿ (ಸಿಡಿಪಿ) ಬಿಡುಗಡೆ ಮಾಡಲು ತುಂಬಾ ಖುಷಿಯಿದೆ. ಅವರ ಎಲ್ಲಾ ಅಭಿಮಾನಿಗಳಿಗೆ ಇದೊಂದು ಉತ್ತಮ ದಿನ" ಎಂದು ನಟ ಕಿಚ್ಚ ಸುದೀಪ್ ಹೇಳಿದ್ದಾರೆ. ಅವರು ಬಿಡುಗಡೆ ಮಾಡಿರುವ ಫೋಟೋದಲ್ಲಿ ವಿಷ್ಣುವರ್ಧನ್ ಮಹಾರಾಜನಂತೆ ಕಾಣಿಸಿಕೊಂಡಿದ್ದಾರೆ.
ಈ ಕಾಮನ್ ಡಿಪಿಯಲ್ಲಿ ವಿಷ್ಣುವರ್ಧನ್ ಗೋಲ್ಡನ್ ಕಲರ್ ಸಿಂಹಾಸನದಲ್ಲಿ ಕುಳಿತಿದ್ದಾರೆ. ಅವರಿಗೆ ಸಾಹಸಸಿಂಹ ಎಂಬ ಬಿರುದು ಇದ್ದು, ಅದೇ ಥೀಮ್ನಲ್ಲಿ ಕಾಮನ್ ಡಿಪಿಯನ್ನು ಸಿದ್ಧಪಡಿಸಲಾಗಿದೆ. ಸಿಂಹದ ಮುಖ ಇರುವ ಆಸನದ ಮೇಲೆ ವಿಷ್ಣುದಾದಾ ಕುಳಿತಿದ್ದಾರೆ. ಅದರ ಸುತ್ತಲೂ ಅವರ ಅಭಿಮಾನಿಗಳು ತುಂಬಿದ್ದಾರೆ.
ಇನ್ನು, ಫೋಸ್ಟರ್‌ನ ಮೇಲ್ಭಾಗದಲ್ಲಿ ಸಾಹಸ ಸಿಂಹ ಎಂದು ಇಂಗ್ಲೀಷ್‌ನಲ್ಲಿ ಬರೆಯಲಾಗಿದೆ. ಕೆಳ ಭಾಗದಲ್ಲಿ "ಹ್ಯಾಪಿ ಬರ್ತ್‌ಡೇ ಯಜಮಾನ್ರೆ" ಎಂದು ಬರೆಯಲಾಗಿದೆ. ಕಾಮನ್ ಡಿಪಿ ಬಿಡುಗಡೆ ಮಾಡಿದ ನಟ ಕಿಚ್ಚ ಸುದೀಪ್ ವಿಷ್ಣುವರ್ಧನ್ ಅವರಿಗೆ ಹುಟ್ಟುಹಬ್ಬದ ಶುಭಾಶಯ ತಿಳಿಸಿದ್ದಾರೆ.
ನಟ ಕಿಚ್ಚ ಸುದೀಪ್ ಅವರು ಕೂಡ ಸಾಹಸಸಿಂಹ ವಿಷ್ಣುವರ್ಧನ್ ಅವರ ಅಭಿಮಾನಿ.ಇದೇ ಕಾರಣಕ್ಕೆ 'ವಿಷ್ಣುವರ್ಧನ್' ಹೆಸರಿನ ಸಿನಿಮಾ ಕೂಡ ಮಾಡಿದ್ದರು. ಚಿತ್ರದಲ್ಲಿ ಅವರು ವಿಷ್ಣುವಿನ ಅಭಿಮಾನಿಯಾಗಿ ಕಾಣಿಸಿಕೊಂಡಿದ್ದರು. ಇದಲ್ಲದೆ ವಿಷ್ಣುವರ್ಧನ್ ಅವರ ಸೂಪರ್ ಹಿಟ್ ಸಿನಿಮಾ 'ಕೋಟಿಗೊಬ್ಬ' ಸಿನಿಮಾದ ಎರಡು ಸೀಕ್ವೆಲ್‌ಗಳನ್ನು ಮಾಡಿದ್ದರು. ಕೋಟಿಗೊಬ್ಬ 2 ಮತ್ತು ಕೋಟಿಗೊಬ್ಬ 3 ಹೆಸರಿನಲ್ಲಿ ಸಿನಿಮಾ ಮಾಡಿದ್ದರು.
ನಟ ವಿಷ್ಣುವರ್ಧನ್ 'ನಾಗರಹಾವು' ಸಿನಿಮಾ ಮೂಲಕ ಕನ್ನಡದಲ್ಲಿ ಸ್ಟಾರ್ ನಟರಾಗಿ ಗುರುತಿಸಿಕೊಂಡವರು. ಅವರು ನಮ್ಮ ಜೊತೆ ದೈಹಿಕವಾಗಿ ಇಲ್ಲದಿದ್ದರೂ ಕನ್ನಡಿಗರ ಮನದಲ್ಲಿ ಜೀವಂತವಾಗಿದ್ದಾರೆ. 200ಕ್ಕೂ ಅಧಿಕ ಕನ್ನಡ ಚಿತ್ರಗಳಲ್ಲಿ ನಟಿಸಿರುವ ಅವರು ಸಾಕಷ್ಟು ಸೂಪರ್ ಹಿಟ್ ಚಿತ್ರಗಳನ್ನು ನೀಡಿದ್ದಾರೆ. ಹಲವಾರು ತಮಿಳು, ತೆಲುಗು, ಮಲಯಾಳಂ, ಹಿಂದಿ ಸಿನೆಮಾಗಳಲ್ಲೂ ನಟಿಸಿದ್ದಾರೆ. ಅವರು ನಮ್ಮೊಂದಿಗೆ ಇದ್ದಿದ್ದರೇ ತಮ್ಮ 73ನೇ ವರ್ಷದ ಬರ್ತ್‌ಡೇ ಆಚರಿಸಿಕೊಳ್ಳುತ್ತಿದ್ದರು.


Click it and Unblock the Notifications











