ವಿಷ್ಣು ಪುಣ್ಯಸ್ಮರಣೆ; ಸಮಾಧಿಗೆ ಪೂಜೆ ಸಲ್ಲಿಸಲು ಅವಕಾಶ ನಿರಾಕರಣೆ, ಫ್ಯಾನ್ಸ್ ಆಕ್ರೋಶ
ಸಾಹಸಸಿಂಹ ವಿಷ್ಣುವರ್ಧನ್ ಅಗಲಿ 15 ವರ್ಷ ಕಳೆದಿದೆ. ಇಂದು(ಡಿಸೆಂಬರ್ 30) ವಿಷ್ಣು ಪುಣ್ಯಸ್ಮರಣೆ ಹಿನ್ನೆಲೆಯಲ್ಲಿ ಅಭಿಮಾನಿಗಳು ನೆಚ್ಚಿನ ನಟನನ್ನು ಸ್ಮರಿಸುತ್ತಿದ್ದಾರೆ. ಮೈಸೂರಿನ ವಿಷ್ಣುವರ್ಧನ್ ಸ್ಮಾರಕಕ್ಕೆ ಕುಟುಂಬ ಸದಸ್ಯರು ಭೇಟಿ ನೀಡಿದ್ದಾರೆ. ಇತ್ತ ಅಭಿಮಾನ್ ಸ್ಟುಡಿಯೋದಲ್ಲಿ ವಿಷ್ಣು ಸಮಾಧಿಗೆ ಪೂಜೆ ಸಲ್ಲಿಸಲು ಅಭಿಮಾನಿಗಳಿಗೆ ಅವಕಾಶ ದೊರೆತಿಲ್ಲ.
15 ವರ್ಷ ಕಳೆದರೂ ಅಭಿಮಾನ್ ಸ್ಟುಡಿಯೋದಲ್ಲಿ ವಿಷ್ಣುವರ್ಧನ್ ಸ್ಮಾರಕ ವಿಚಾರ ಕಗ್ಗಂಟಾಗಿಯೇ ಉಳಿದಿದೆ. ಈ ರಗಳೆ ಬೇಡ ಎಂದು ಭಾರತಿ ವಿಷ್ಣುವರ್ಧನ್ ಮೈಸೂರಿನಲ್ಲಿ ಸ್ಮಾರಕ ನಿರ್ಮಿಸಲು ಒಪ್ಪಿದ್ದರು. ಸ್ಮಾರಕ ಲೋಕಾರ್ಪಣೆ ಕೂಡ ಆಗಿದೆ. ಆದರೆ ಅಭಿಮಾನಿಗಳು ಮಾತ್ರ ದಾದಾ ಅಂತ್ಯಕ್ರಿಯೆ ನಡೆದ ಅಭಿಮಾನ್ ಸ್ಟುಡಿಯೋದಲ್ಲಿ ಸ್ಮಾರಕ ಬೇಕು ಎಂದು ಆಗ್ರಹಿಸುತ್ತಾ ಬರುತ್ತಿದ್ದಾರೆ.

ಪ್ರತಿ ವರ್ಷ ವಿಷ್ಣುವರ್ಧನ್ ಹುಟ್ಟುಹಬ್ಬ ಹಾಗೂ ಪುಣ್ಯಸ್ಮರಣೆ ದಿನ ಅಭಿಮಾನಿಗಳು ಅಭಿಮಾನ್ ಸ್ಟುಡಿಯೋಗೆ ಭೇಟಿ ನೀಡಿ ದಾದಾ ಸಮಾಧಿಗೆ ನಮಿಸುತ್ತಿದ್ದರು. ರಕ್ತದಾನ, ಅನ್ನದಾನ ರೀತಿಯ ಸಾಮಾಜಿಕ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿದ್ದರು. ವಿಷ್ಣುವರ್ಧನ್ ಸಮಾಧಿಸಿ ಹೂವಿನ ಅಲಂಕಾರ ಮಾಡಿ ಪೂಜೆ ನೆರವೇರಿಸಿ ಸರತಿ ಸಾಲಿನಲ್ಲಿ ಹೋಗಿ ನಮನ ಸಲ್ಲಿಸುತ್ತಿದ್ದರು. ಆದರೆ ಈ ವರ್ಷ ಅದಕ್ಕೆ ಅಡಚಣೆ ಆಗಿದೆ.
ವಿಷ್ಣು ಸಮಾಧಿ ಜಾಗದ ವಿವಾದ ಇನ್ನು ಬಗೆಹರಿದಿಲ್ಲ. ಅಭಿಮಾನ್ ಸ್ಟುಡಿಯೋ ಮಾಲೀಕರು ವಿಷ್ಣು ಸ್ಮಾರಕ ನಿರ್ಮಾಣಕ್ಕೆ ಒಪ್ಪುತ್ತಿಲ್ಲ. ಅಭಿಮಾನಿಗಳು ಎಷ್ಟೇ ಹೋರಾಟ ನಡೆಸಿದರೂ ಜಾಗ ಬಿಟ್ಟುಕೊಡಲು ಬಾಲಣ್ಣನ ಮಕ್ಕಳು ಸಿದ್ಧರಿಲ್ಲ. ಅಭಿಮಾನಿಗಳು ಹೋಗಿ ದಾದಾ ಸಮಾಧಿಗೆ ಪೂಜೆ ಮಾಡಲು ಅವಕಾಶ ಕೊಡುತ್ತಿಲ್ಲ. ಕಳೆದ ವರ್ಷ ಇದೇ ರೀತಿ ಆಗಿತ್ತು. ಈ ವರ್ಷ ಕೂಡ ಅದು ಪುನರಾವರ್ತನೆ ಆಗಿದೆ. ಇದು ಅಭಿಮಾನಿಗಳು ಆಕ್ರೋಶ, ಬೇಸರಕ್ಕೆ ಕಾರಣವಾಗಿದೆ.
ವಿಷ್ಣುವರ್ಧನ್ ಸಮಾಧಿ ಬಳಿ ಪೂಜೆ, ಅನ್ನದಾನ, ರಕ್ತದಾನ ಶಿಬಿರ ನಡೆಸದಂತೆ ಅಭಿಮಾನ್ ಸ್ಟುಡಿಯೋ ಮಾಲೀಕ ಕಾರ್ತಿಕ್ ಸ್ಟೇ ತಂದಿದ್ದಾರೆ. ಸಮಾಧಿಗೆ ಪೂಜೆ ಮಾಡಬೇಕು ಅಂದ್ರೆ ಮೈಸೂರಿನ ವಿಷ್ಣು ಸ್ಮಾರಕದ ಬಳಿ ಹೋಗಿ ಅಂತ ಬೋರ್ಡ್ ಸಹ ಹಾಕಲಾಗಿದೆ. ಇದು ಸಹಜವಾಗಿಯೇ ಅಭಿಮಾನಿಗಳನ್ನು ಕೆರಳಿಸಿದೆ. ಪೊಲೀಸರು ಸಹ ಬಿಗಿ ಭದ್ರತೆ ಒದಗಿಸಿದ್ದು ಪೂಜೆ ಮಾಡದಂತೆ ಅಭಿಮಾನಿಗಳಿಗೆ ಹೇಳಿ ಕಳುಹಿಸುತ್ತಿದ್ದಾರೆ.
ಅಭಿಮಾನ್ ಸ್ಟುಡಿಯೋ ಹೊರಭಾಗದಲ್ಲಿ ವಿಷ್ಣುವರ್ಧನ್ ಅಭಿಮಾನಿಗಳು ಜಮಾಯಿಸಿ ಆಕ್ರೋಶ ಹೊರ ಹಾಕುತ್ತಿದ್ದಾರೆ. ದಾದಾ ಅಭಿಮಾನಿಗಳಿಗೆ ಬಾಲಣ್ಣ ಮಗ ಕಾರ್ತಿಕ್ ಅವಾಚ್ಯ ಪದಗಳಿಂದ ನಿಂದಿಸಿದ್ದಾರೆ ಎಂದು ಆರೋಪಿಸಿದ್ದಾರೆ. ನಮಗೆ ನ್ಯಾಯ ಸಿಗುವವರೆಗೂ ನಾವು ಹೋರಾಟ ಮಾಡ್ತಿವಿ ಎಂದು ನೋವು ತೋಡಿಕೊಂಡಿದ್ದಾರೆ. ಸ್ಟೇ ತಂದಿದ್ದರೂ ಕೂಡ ಅಭಿಮಾನಿಗಳು ವಿಷ್ಣು ಸಮಾಧಿಗೆ ಪೂಜೆ ಸಲ್ಲಿಸಲು ಬಂದಿದ್ದರು. ಆದರೆ ನಿರಾಸೆ ಅನುಭವಿಸುವಂತಾಗಿದೆ.
ಪ್ರಾಣ ಬೇಕಾದ್ರು ಕೊಡ್ತಿವಿ ಸಮಾಧಿ ಜಾಗ ಬಿಡಲ್ಲ, ಸಮಾಧಿ ಇರುವ 10ಗುಂಟೆ ಜಾಗಕೊಡಲಿ, ಅವರು ಕೇಳಿದಷ್ಟು ಹಣ ನಾವು ಕೊಡ್ತೀವಿ ಎಂದು ಅಭಿಮಾನಿಗಳು ಹೇಳುತ್ತಿದ್ದಾರೆ. ಒಟ್ಟಾರೆ ವಿಷ್ಣು ಪುಣ್ಯಸ್ಮರಣೆ ದಿನವೇ ಅಭಿಮಾನಿಗಳಿಗೆ ಕಹಿ ಅನುಭವ ಆಗಿದೆ. ಅಂಬರೀಶ್ ಸೇರಿದಂತೆ ಸಾಕಷ್ಟು ಜನ ಅಭಿಮಾನ್ ಸ್ಟುಡಿಯೋದಲ್ಲಿ ವಿಷ್ಣು ಸ್ಮಾರಕ ನಿರ್ಮಾಣಕ್ಕೆ ಪ್ರಯತ್ನಿಸಿದ್ದರು. ಆದರೆ ಸಾಧ್ಯವಾಗಲೇ ಇಲ್ಲ.


Click it and Unblock the Notifications











