ಅಭಿಮಾನ್ ಸ್ಟುಡಿಯೋದಲ್ಲೇ ವಿಷ್ಣು 75ನೇ ಜಯಂತೋತ್ಸವ; ಆ ದಿನ ಫ್ಯಾನ್ಸ್ ಏನ್ ಮಾಡ್ಬೇಕು?
ಸಾಹಸಸಿಂಹ ವಿಷ್ಣುವರ್ಧನ್ ಅವರಿಗೆ ಮರಣೋತ್ತರ ಕರ್ನಾಟಕ ರತ್ನ ಪ್ರಶಸ್ತಿಯನ್ನು ಸರ್ಕಾರ ಘೋಷಿಸಿದೆ. ಈ ಸಂಭ್ರಮದಲ್ಲಿ ಈ ಬಾರಿ ದಾದಾ 75ನೇ ವರ್ಷದ ಹುಟ್ಟುಹಬ್ಬ ಆಚರಣೆಗೆ ಅಭಿಮಾನಿಗಳು ಸಜ್ಜಾಗಿದ್ದಾರೆ. ಆದರೆ ಅಭಿಮಾನ್ ಸ್ಟುಡಿಯೋದಲ್ಲಿ ಸ್ಮಾರಕ ಇಲ್ಲ. ಹಾಗಿದ್ದರೆ ಸಂಭ್ರಮಾಚರಣೆ ಎಲ್ಲಿ? ಹೇಗೆ? ಎನ್ನುವ ಗೊಂದಲ ಅಭಿಮಾನಿಗಳಲ್ಲಿ ಮೂಡಿದೆ.
ಸೆಪ್ಟೆಂಬರ್ 18, ಅಂದರೆ ಈ ಗುರುವಾರ ವಿಷ್ಣುವರ್ಧನ್ 75ನೇ ವರ್ಷದ ಜಯಂತೋತ್ಸವ ಆಚರಣೆಗೆ ಅಭಿಮಾನಿಗಳು ಕಾಯುತ್ತಿದ್ದಾರೆ. ಆದರೆ ಆ ದಿನ ಎಲ್ಲಿಗೆ ಹೋಗಬೇಕು ಎನ್ನುವ ಗೊಂದಲ ಮೂಡಿದೆ. ಕಳೆದೆರಡು ವರ್ಷಗಳಿಂದ ಅಭಿಮಾನ್ ಸ್ಟುಡಿಯೋದಲ್ಲಿ ಸಂಭ್ರಮಾಚರನೆಗೆ ಬಾಲಕೃಷ್ಣ ಕುಟುಂಬಸ್ಥರು ಅಡ್ಡಿಪಡಿಸಿದ್ದರು. ಈ ವರ್ಷ ಸ್ಮಾರಕವನ್ನೇ ಧ್ವಂಸ ಮಾಡಿ ಯಾವುದೇ ಕುರುಹು ಇಲ್ಲದಂತೆ ಮಾಡಿಬಿಟ್ಟಿದ್ದಾರೆ. ಇದೆಲ್ಲದರ ನಡುವೆ ಅಭಿಮಾನ್ ಸ್ಟುಡಿಯೋವನ್ನು ಮುಟ್ಟುಗೋಲು ಹಾಕಿಕೊಳ್ಳಲು ರಾಜ್ಯ ಸರ್ಕಾರ ಮುಂದಾಗಿದೆ.

ಈ ಬಾರಿ ಅಭಿಮಾನ್ ಸ್ಟುಡಿಯೋದಲ್ಲಿ ಅಭಿಮಾನಿಗಳು ವಿಷ್ಣು ಹುಟ್ಟುಹಬ್ಬ ಆಚರಣೆಗೆ ಸರ್ಕಾರ ಅನುಮತಿ ನೀಡುತ್ತಾ ಎಂದು ಕಾದು ನೋಡಬೇಕಿದೆ. ಈ ಬಗ್ಗೆ ವಿಷ್ಣು ಸೇನಾ ಸಮಿತಿ ಅಧ್ಯಕ್ಷ ವೀರಕಪುತ್ರ ಶ್ರೀನಿವಾಸ್ ಪ್ರತಿಕ್ರಿಯೆ ಎಲ್ಲಾ ಅಭಿಮಾನಿಗಳಲ್ಲಿ ಮನವಿ ಮಾಡಿದ್ದಾರೆ. ಆ ದಿನ ನಾವೆಲ್ಲಾ ಏನು ಮಾಡಬೇಕು ಎಂದು ತಿಳಿಸಿದ್ದಾರೆ. ಅಭಿಮಾನ್ ಸ್ಟುಡಿಯೋಗೆ ಒಂದು ಗುಲಾಬಿ ಹೂ ಹಿಡಿದು ಹೋಗೋಣ ಎಂದಿದ್ದಾರೆ.
"ಅಭಿಮಾನ್ ಸ್ಟುಡಿಯೋಗೆ ಒಂದು ಗುಲಾಬಿ ಹೂ ಹಿಡಿದು ಎಲ್ಲರೂ ಹೋಗೋಣ. ಸರ್ಕಾರ ಅನುಮತಿ ಕೊಟ್ಟರೆ ಒಳಗಡೆ ಹೋಗಿ ಯಜಮಾನರು ಇದ್ದ ಜಾಗದಲ್ಲಿ ಹೂ ಇಟ್ಟು ಕೈ ಮುಗಿದು ಪ್ರಾರ್ಥಿಸಿ ಬರೋಣ. ಅವಕಾಶ ಕೊಡದೇ ಇದ್ದರೆ ಮೌನವಾಗಿ ನಮ್ಮ ಭಾವನೆಗಳನ್ನು ಅರ್ಥ ಮಾಡಿಕೊಳ್ಳುವಂತೆ ಸರ್ಕಾರಕ್ಕೆ ಹೇಳಿ ಗೇಟ್ ಬಳಿ ಹೂ ಇಟ್ಟು ಬರೋಣ" ಎಂದು ವೀರಕಪುತ್ರ ಶ್ರೀನಿವಾಸ್ ಹೇಳಿದ್ದಾರೆ.
ಸರ್ಕಾರ ಅವಕಾಶ ಕೊಡದೇ ಇದ್ದರೆ ಅಭಿಮಾನ್ ಸ್ಟುಡಿಯೋ ಅಕ್ಕ ಪಕ್ಕ ಜಾಗದ ವ್ಯವಸ್ಥೆ ಮಾಡಿ ಅಭಿಮಾನಿಗಳೆಲ್ಲಾ ಅಲ್ಲಿ ಸೇರುವ ಪ್ರಯತ್ನ ಮಾಡುತ್ತಿದ್ದೇವೆ. ಅಲ್ಲಿ ಯಜಮಾನರ ಮಂಟಪ ಕಟ್ಟಿ ದರ್ಶನಕ್ಕೆ ವ್ಯವಸ್ಥೆ ಮಾಡಬೇಕೆಂದುಕೊಂಡಿದ್ದೀವಿ. ಬಂದವರಿಗೆ ನಿರಾಸೆ ಆಗದಂತೆ ಅಲ್ಲಿ ಅನ್ನದಾನ ಸೇರಿದಂತೆ ಸಮಾಜಮುಖಿ ಕೆಲಸಗಳನ್ನು ಮಾಡಲು ಯೋಚಿಸುತ್ತಿದ್ದೇವೆ ನೋಡೊಣ. ನಾವಿರುವ ಕಡೆ ಸಂಭ್ರಮಾಚರಣೆ ಕಾಣೋಣ. ಮತ್ತೆ ಎಂದೂ ಯಜಮಾನ ಹೆಸರು ವಿವಾದಗಳಲ್ಲಿ ಕಾಣುವುದು ಬೇಡ, ಸಂಭ್ರಮಾಚರಣೆಯಲ್ಲಿ ಇರುವಂತಾಗಲಿ ಎಂದು ಶ್ರೀನಿವಾಸ್ ಮನವಿ ಮಾಡಿದ್ದಾರೆ.
ಸುದೀಪ್ ಸರ್, ನಾನು ಹಾಗೂ ನೀವೆಲ್ಲಾ ಸೇರಿ ವಿಷ್ಣುವರ್ಧನ್ ಅವರ ದರ್ಶನ ಕೇಂದ್ರ ಸ್ಥಾಪನೆಗೆ ಮುಂದಾಗಿದ್ದೇವೆ. ಕೆಂಗೇರಿ ಬಳಿ ಇದು ನಿರ್ಮಾಣವಾಗಲಿದೆ. ಅದಕ್ಕೆ ಸಂಬಂಧಿಸಿ ಬ್ಲೂ ಪ್ರಿಂಟ್ ಸಿದ್ಧವಾಗಿದೆ. ಅದರ ಹೆಸರು, ಬ್ಲೂ ಪ್ರಿಂಟ್ ಅನ್ನು ಚಾಮರಾಜಪೇಟೆಯ ಕಲಾವಿದರ ಸಂಘ ಥಿಯೇಟರ್‌ನಲ್ಲಿ ಪ್ರದರ್ಶನ ಮಾಡಲಾಗುತ್ತದೆ. ಸಂಜೆ 5 ಗಂಟೆಗೆ ಅದನ್ನು ಪ್ರದರ್ಶಿಸುತ್ತೇವೆ, ಸುದ್ದಿಗೋಷ್ಠಿ ನಡೆಯುತ್ತದೆ. ಫ್ಯಾನ್ ಮೇಡ್ ಸಾಂಗ್ ರಿಲೀಸ್ ಮಾಡುತ್ತೇವೆ ಅಲ್ಲಿಗೆ ಬನ್ನಿ ಎಂದು ಶ್ರೀನಿವಾಸ್ ಕರೆ ಕೊಟ್ಟಿದ್ದಾರೆ.
ಇತ್ತೀಚೆಗೆ ರಾಜ್ಯ ಸರ್ಕಾರ ನಟ ವಿಷ್ಣುವರ್ಧನ್ ಹಾಗೂ ನಟಿ ಬಿ. ಸರೋಜಾ ದೇವಿ ಅವರಿಗೆ ಮರಣೋತ್ತರ ಕರ್ನಾಟಕ ರತ್ನ ಘೋಷಿಸಿದೆ. ಶೀಘ್ರದಲ್ಲೇ ಪ್ರಶಸ್ತಿ ಪ್ರದಾನ ಸಮಾರಂಭದ ಬಗ್ಗೆ ಮಾಹಿತಿ ಸಿಗಲಿದೆ. ಅಂತೂ ಇಂತೂ ಬಹು ದಿನಗಳ ಅಭಿಮಾನಿಗಳ ಆಸೆಯಂತೆ ದಾದಾಗೆ ಈ ಗೌರವ ಸಿಗುತ್ತಿದೆ. ಇದು ಅವರ ಅಸಂಖ್ಯಾತ ಅಭಿಮಾನಿಗಳು ಹಾಗೂ ಆಪ್ತರ ಸಂಭ್ರಮ ದುಪಟ್ಟು ಮಾಡಿದೆ.


Click it and Unblock the Notifications