ರಾಜವಂಶ ಫ್ಯಾನ್ಸ್ ತಿರುಗೇಟು; ಅಣ್ಣಾವ್ರ ಫ್ಯಾಮಿಲಿ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದ ವ್ಯಕ್ತಿ ಈಗ ಸೈಲೆಂಟ್
ಕಲಾವಿದರ ನಡುವೆ ಯಾವುದೇ ಭಿನ್ನಾಭಿಪ್ರಾಯ ಇರಲ್ಲ. ಆದರೆ ಅವರ ಅಭಿಮಾನಿಗಳು ಎಂದು ಹೇಳಿಕೊಂಡ ಕೆಲ ವ್ಯಕ್ತಿಗಳು ಸುಖಾಸುಮ್ಮನೆ ಸೋಶಿಯಲ್ ಮೀಡಿಯಾದಲ್ಲಿ ತಂಟೆ ತರಲೆ ಮಾಡುತ್ತಿರುತ್ತಾರೆ. ಇಲ್ಲ ಸಲ್ಲದ ಪೋಸ್ಟ್ ಮಾಡಿ ಬೇರೆಯವರನ್ನು ಕೆಣಕುವ ಪ್ರಯತ್ನ ಮಾಡುತ್ತಾರೆ. ನಟ ವಿಷ್ಣುವರ್ಧನ್ ಸಮಾಧಿ ತೆರವು ಘಟನೆ ಹಿನ್ನೆಲೆಯಲ್ಲಿ ಅಣ್ಣಾವ್ರ ಕುಟುಂಬವನ್ನು ದೂಷಿಸಿ ಕೆಲವರು ಕಾಮೆಂಟ್ ಮಾಡುತ್ತಿದ್ದಾರೆ.
ವಿಷ್ಣುವರ್ಧನ್ ಇದ್ದಾಗಲೂ ಕಷ್ಟ ಅನುಭವಿಸಿದ್ರು, ಹೋದ ಮೇಲೂ ಸಂಕಷ್ಟ ಎದುರಾಯ್ತು ಎಂದು ಕೆಲವರು ಕಾಮೆಂಟ್ ಮಾಡುತ್ತಿದ್ದಾರೆ. ಅದರಲ್ಲಿ ಅಣ್ಣಾವ್ರ ಕುಟುಂಬದ ಬಗ್ಗೆ ವಿನೋದ್ ಶೆಟ್ಟಿ ಎಂಬಾತ ಕೆಟ್ಟದಾಗಿ ಮಾತನಾಡಿದ್ದ ವೀಡಿಯೋ ವೈರಲ್ ಆಗಿತ್ತು. ಡಾ. ರಾಜ್‌ಕುಮಾರ್, ಶಿವಣ್ಣ, ಅಪ್ಪು, ರಾಘಣ್ಣ ಎಲ್ಲರ ಬಗ್ಗೆ ಬಾಯಿಗೆ ಬಂದಂತೆ ಮಾತನಾಡಿದ್ದ ವ್ಯಕ್ತಿ ಕೊನೆಗೆ ಫೋನ್ ನಂಬರ್ ಹಾಕಿ ಚರ್ಚೆಗೆ ನಾನು ಸಿದ್ಧ ಎಂದು ಸವಾಲು ಹಾಕಿದ್ದ. ಇದೀಗ ರಾಜವಂಶ ಅಭಿಮಾನಿಗಳು ಪ್ರತಿಕ್ರಿಯಿಸುತ್ತಿದ್ದಂತೆ ಫೋನ್ ನಂಬರ್ ಸ್ವಿಚ್‌ಆಫ್ ಮಾಡಿ ಸೈಲೆಂಟ್ ಆಗಿದ್ದಾನೆ ಎಂದು ಪೋಸ್ಟ್‌ಗಳು ವೈರಲ್ ಆಗ್ತಿದೆ.

ದಾದಾ ಅಭಿಮಾನಿ ಹೆಸರಿನಲ್ಲಿ ವಿನೋದ್ ಶೆಟ್ಟಿ ಮಾಡಿದ್ದ ವೀಡಿಯೋ ಬಗ್ಗೆ ಸ್ವತಃ ದಾದಾ ಅಭಿಮಾನಿಗಳೇ ಬೇಸರ ವ್ಯಕ್ತಪಡಿಸಿದ್ದರು. ಸಮಾಧಿ ತೆರವು ವಿಚಾರದ ಬಗ್ಗೆ ಮಾತನಾಡಬೇಕು. ಅದು ಬಿಟ್ಟು ಬೇಡದ ವಿಚಾರಗಳನ್ನು ಮಾತನಾಡಬಾರದು. ಸಮಾಧಿ ನೆಲಸಮಕ್ಕೂ ಅಣ್ಣಾವ್ರ ಕುಟುಂಬದಕ್ಕೂ ಎತ್ತಣದಿಂದೆತ್ತಣ ಸಂಬಂಧ. ಒಂದಕ್ಕೊಂದು ಲಿಂಕ್ ಮಾಡಿ ಮಾತನಾಡಬಾರದು. ಸತ್ಯ ಗೊತ್ತಿಲ್ಲದೇ ಬಾಯಿಗೆ ಬಂದಂತೆ ಆಡುವುದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದರು.
ಇದೀಗ ರಾಜ್‌ಕುಮಾರ್ ಅಭಿಮಾನಿಗಳು ವಿನೋದ್ ಶೆಟ್ಟಿಗೆ ಫೋನ್ ಮಾಡಿದರೆ ಪ್ರತಿಕ್ರಿಯೆ ಇಲ್ಲ. ನಂಬರ್ ಬ್ಲಾಕ್ ಮಾಡುವುದು, ಸ್ವಿಚ್‌ಆಫ್ ಮಾಡಿಕೊಳ್ಳುವುದು ಮಾಡುತ್ತಿದ್ದಾನೆ. ತನ್ನನ್ನು ಜಾತ್ಯಾತೀತವಾದಿ ಹಾಗೂ ಚಿಂತಕ ಎಂದು ಹೇಳಿಕೊಂಡು ಸೋಶಿಯಲ್ ಮೀಡಿಯಾದಲ್ಲಿ ಹೀಗೆ ಕೆಟ್ಟದಾಗಿ ಪೋಸ್ಟ್ ಮಾಡಿ, ರಾಜ್-ವಿಷ್ಣು ಅಭಿಮಾನಿಗಳ ನಡುವೆ ತಂದಿಟ್ಟು ಈಗ ಸುಮ್ಮನಾಗಿರುವುದು ಯಾಕೆ? ಎಂದು ನೆಟ್ಟಿಗರು ಪ್ರಶ್ನಿಸುತ್ತಿದ್ದಾರೆ.
ಇದೆಲ್ಲಾ ಪ್ರಚಾರದ ಹುಚ್ಚು, ಪಬ್ಲಿಸಿಟಿ ಗಿಮಿಕ್. ಅಣ್ಣಾವ್ರ ಕುಟುಂಬದ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿ ಗಮನ ಸೆಳೆಯುವ ಪ್ರಯತ್ನ ಇದು ಎಂದು ಕೆಲವರು ಕಾಮೆಂಟ್ ಮಾಡುತ್ತಿದ್ದಾರೆ. ಮತ್ತೊಂದು ಕಡೆ ದಾದಾ ಸಮಾಧಿ ತೆರವು ವಿಚಾರದ ಬಗ್ಗೆ ಕನ್ನಡ ಚಿತ್ರರಂಗದ ತಾರೆಯರು ಪ್ರತಿಕ್ರಿಯಿಸಿದ್ದಾರೆ. ದೊಡ್ಮನೆ ಕುಡಿ ರಾಘವೇಂದ್ರ ರಾಜ್‌ಕುಮಾರ್ ಕೂಡ ಇದಕ್ಕೆ ಬೇಸರ ವ್ಯಕ್ತಪಡಿಸಿ ಪೋಸ್ಟ್ ಮಾಡಿದ್ದಾರೆ.

ಅಭಿಮಾನ್ ಸ್ಟುಡಿಯೋದಲ್ಲೇ ಮತ್ತೆ ಸ್ಮಾರಕ ನಿರ್ಮಾಣ ಆಗಬೇಕು ಎಂದು ಅಭಿಮಾನಿಗಳು ಆಗ್ರಹಿಸುತ್ತಿದ್ದಾರೆ. ಕಿಚ್ಚ ಸುದೀಪ್ ಪ್ರತಿಕ್ರಿಯಿಸಿ ದಾದಾ ಸ್ಮಾರಕ ಮತ್ತೆ ಸ್ಥಾಪಿಸಲು ನಾನು ಬದ್ಧ. ಅದಕ್ಕಾಗಿ ಕೋರ್ಟ್ ಮೆಟ್ಟಿಲೇರಲು ಸಿದ್ಧನಿದ್ದೇನೆ. ಹಣಕಾಸು ಬೇಕು ಅಂದರೆ ಅದಕ್ಕೂ ತಯಾರಿದ್ದೇನೆ ಎಂದಿದ್ದಾರೆ. ಇನ್ನುಳಿದಂತೆ ನಟರಾದ ಉಪೇಂದ್ರ, ರಿಷಬ್ ಶೆಟ್ಟಿ, ವಸಿಷ್ಠ ಸಿಂಹ ಸೇರಿ ಹಲವರು ಈ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಈ ವಿಚಾರದಲ್ಲಿ ಅಭಿಮಾನಿಗಳ ಪರ ನಿಲ್ಲುತ್ತೇವೆ ಎಂದಿದ್ದಾರೆ.
ಅಭಿಮಾನ್ ಸ್ಟುಡಿಯೋದಲ್ಲಿ ವಿಷ್ಣುವರ್ಧನ್ ಸಮಾಧಿ ಸಂರಕ್ಷಣೆ ಕೋರಿ ಕೇಂದ್ರ ಕಾರ್ಮಿಕ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಅವರು ಸಿಎಂ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದಾರೆ.


Click it and Unblock the Notifications











