Stars Birthday: ಚಂದನವನದಲ್ಲಿ ವಿಷ್ಣುವರ್ಧನ್, ಶೃತಿ, ಉಪೇಂದ್ರ ಹುಟ್ಟುಹಬ್ಬದ ಸಂಭ್ರಮ
ಸೆಪ್ಟೆಂಬರ್ 18 ಕನ್ನಡ ಸಿನಿಮಾ ರಂಗದಲ್ಲಿ ವಿಶೇಷ ದಿನ. ಒಬ್ಬ ನಟನ ಹುಟ್ಟಿದ ದಿನವನ್ನೇ ಹಬ್ಬವನ್ನಾಗಿ ಮಾಡುವ ಅಭಿಮಾನಿಗಳಿಗೆ ಇಂದು ಒಂದೇ ದಿನ ಮೂವರು ಕಲಾವಿದರ ಹುಟ್ಟುಹಬ್ಬ ಬಂದುಬಿಟ್ಟಿದೆ. ಅದಕ್ಕೆ ಚಂದನವನದ ಸಿನಿಪ್ರೇಮಿಗಳಿಗೆ ಸೆಪ್ಟೆಂಬರ್ 18 ಸ್ಪೆಷಲ್ ಡೇ. ಈ ದಿನ ಸಾಹಸಸಿಂಹ ಡಾ.ವಿಷ್ಣುವರ್ಧನ್, ರಿಯಲ್ ಸ್ಟಾರ್ ಉಪೇಂದ್ರ ಮತ್ತು ನಟಿ ಶೃತಿ ಅವರ ಹುಟ್ಟುಹಬ್ಬ.
ನಟ ವಿಷ್ಣುವರ್ಧನ್ ಅವರನ್ನು ನೆನಪಿಸಿಕೊಳ್ಳಲು ವಿಷ್ಣುದಾದನ ಅಭಿಮಾನಿಗಳು ಈಗಾಗಲೇ ಸಂಭ್ರಮದಲ್ಲಿದ್ದಾರೆ. ಸಾಮಾಜಿಕ ಮಾಧ್ಯಮಗಳಲ್ಲಿ ಅನೇಕ ಪೋಸ್ಟರ್‌ಗಳ ಮೂಲಕ ತಾರೆಯರ ಜನ್ಮದಿನವನ್ನು ಆಚರಿಸಲಾಗುತ್ತಿದೆ. ನಟ ವಿಷ್ಣುವರ್ಧನ್ ಅವರ ಕಾಮನ್ ಡಿಪಿ ಬಿಡುಗಡೆ ಮಾಡಲಾಗಿದೆ. ಇದರ ಜೊತೆಗೆ ಅದ್ಧೂರಿ ಕಾರ್ಯಕ್ರಮಗಳಿಗೆ ಚಂದನವನ ಸಾಕ್ಷಿಯಾಗಲಿದೆ.

ಸಾಹಸಸಿಂಹ ವಿಷ್ಣುವರ್ಧನ್
ನಟ ವಿಷ್ಣುವರ್ಧನ್ ನಮ್ಮ ಜೊತೆ ದೈಹಿಕವಾಗಿ ಇಲ್ಲದಿದ್ದರೂ ಕನ್ನಡಿಗರ ಮನದಲ್ಲಿ ಜೀವಂತವಾಗಿದ್ದಾರೆ. ಚಿತ್ರರಂಗ ಕಂಡ ಅದ್ಭುತ ನಟ ವಿಷ್ಣುವರ್ಧನ್ ಅವರು. 200ಕ್ಕೂ ಅಧಿಕ ಕನ್ನಡ ಚಿತ್ರಗಳಲ್ಲಿ ನಟಿಸಿರುವ ಅವರು ಸಾಕಷ್ಟು ಸೂಪರ್ ಹಿಟ್ ಚಿತ್ರಗಳನ್ನು ಕನ್ನಡಕ್ಕೆ ನೀಡಿದ್ದಾರೆ. ಹಲವಾರು ತಮಿಳು, ತೆಲುಗು, ಮಲಯಾಳಂ, ಹಿಂದಿ ಸಿನೆಮಾಗಳಲ್ಲೂ ನಟಿಸಿದ್ದಾರೆ. ಅವರು ನಮ್ಮೊಂದಿಗೆ ಇದ್ದಿದ್ದರೇ ತಮ್ಮ 73ನೇ ವರ್ಷದ ಬರ್ತ್‌ಡೇ ಆಚರಿಸಿಕೊಳ್ಳುತ್ತಿದ್ದರು.
ವಿಷ್ಣುದಾದ ಇಲ್ಲದಿದ್ದರೂ ಅವರ ಅಭಿಮಾನಿಗಳು ಅವರನ್ನು ನೆನಪಿಸಿಕೊಳ್ಳುವ ಕೆಲಸ ಮಾಡುತ್ತಿದ್ದಾರೆ. 'ನಾಗರಹಾವು' ಸಿನಿಮಾ ಮೂಲಕ ಕನ್ನಡದಲ್ಲಿ ಸ್ಟಾರ್ ನಟರಾಗಿ ಗುರುತಿಸಿಕೊಂಡ ವಿಷ್ಣುವರ್ಧನ್ ಮತ್ತೆ ಹಿಂತಿರುಗಿ ನೋಡಲೆ ಇಲ್ಲ. 2010ರಲ್ಲಿ ಬಿಡುಗಡೆಯಾದ 'ಆಪ್ತರಕ್ಷಕ' ವಿಷ್ಣು ನಟನೆಯ ಕೊನೆಯ ಸಿನಿಮಾ. ಸತತ ಸಿನಿಮಾಗಳಲ್ಲಿ ನಟಿಸಿದ ಅವರು 2009 ರ ಡಿಸೆಂಬರ್ 30 ರಂದು ನಿಧನರಾದರು. ಬೆಂಗಳೂರಿನ ಅಭಿಮಾನ್ ಸ್ಟುಡಿಯೋದಲ್ಲಿ ಅವರ ಸಮಾಧಿ ಇದ್ದು, ಇಲ್ಲಿ ಹುಟ್ಟುಹಬ್ಬ ಆಚರಿಸಲಾಗುತ್ತದೆ.

ನಟಿ ಶೃತಿ
ಕನ್ನಡ ಸಿನಿಮಾಲೋಕದಲ್ಲಿ ಅಳುಮುಂಜಿ ಎಂದು ಹೆಸರು ಪಡೆದಿದ್ದ ನಟಿ ಶೃತಿ. ಚಿತ್ರಮಂದಿರಗಳಲ್ಲಿ ಮಹಿಳಾ ಅಭಿಮಾನಿಗಳ ಕಣ್ಣೀರ ಕೋಡಿ ಹರಿಸಲು ಕಾರಣವಾಗಿದ್ದು ಇವರ ನಟನೆ. ಶೃತಿ ಸಿನಿಮಾ ಮೂಲಕ ಚಿತ್ರರಂಗಕ್ಕೆ ಪಾದರ್ಪಣೆ ಮಾಡಿದ ಅವರು ಮತ್ತೆ ಹಿಂತಿರುಗಿ ನೋಡಲಿಲ್ಲ. ಶೃತಿ ಕನ್ನಡ ಸೇರಿದಂತೆ ತಮಿಳು, ಮಲಯಾಳಂ, ಚಿತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ.
ಭಾವನಾತ್ಮಕ ಪಾತ್ರಗಳನ್ನು ಮಾಡಿ ಕನ್ನಡಿಗರ ಮನಗೆದ್ದಿದ್ದ ನಟಿ ನಂತರ ಹಾಸ್ಯ ಪಾತ್ರ ಮಾಡಿ ಪ್ರೇಕ್ಷಕರ ಮುಖದಲ್ಲಿ ನಗು ತರಿಸಿದ್ದರು. ವಿಭಿನ್ನ ಪಾತ್ರಗಳ ಮೂಲಕ ಸಿನಿ ರಸಿಕರನ್ನು ರಂಜಿಸುತ್ತಿರುವ ಅವರು, ಹಿರಿತೆರೆಯಿಂದ ಕಿರುತೆರೆಯ ಹಲವು ಕಾರ್ಯಕ್ರಮಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ರಾಜಕಾರಣಿಯಾಗಿಯೂ ಕೆಲಸ ಮಾಡುತ್ತಿದ್ದಾರೆ.

ರಿಯಲ್ ಸ್ಟಾರ್ ಉಪೇಂದ್ರ
ತಮ್ಮದೆ ಆದ್ ವಿಭಿನ್ನ ಶೈಲಿಯಿಂದ ಕನ್ನಡ ಸಿನಿಮಾರಂಗಕ್ಕೆ ಹೊಸ ಅಲೆಯನ್ನು ಕೊಟ್ಟವರು ಉಪೇಂದ್ರ. ನಿರ್ದೇಶಕನಾಗಿ, ನಟನಾಗಿ ಗುರುತಿಸಿಕೊಂಡಿರುವ ಇವರಿಗೆ ಅಪಾರ ಅಭಿಮಾನಿ ಬಳಗವಿದೆ. ಜನ್ಮದಿನ ಆಚರಿಸಿಕೊಳ್ಳುತ್ತಿರುವ ಅವರಿಗೆ ಅಭಿಮಾನಿಗಳ ಶುಭಾಶಯಗಳ ಸಾಗರ ಹರಿದು ಬರುತ್ತಿದೆ. 'ತರ್ಲೆ ನನ್ಮಗ' ಸಿನಿಮಾ ಮೂಲಕ ನಿರ್ದೇಶಕನಾಗಿ ಸ್ಯಾಂಡಲ್‌ವುಡ್‌ಗೆ ಕಾಲಿಟ್ಟ ಅವರು, ಹಲವು ಸೂಪರ್ ಹಿಟ್ ಸಿನಿಮಾಗಳನ್ನು ನೀಡಿದ್ದಾರೆ. ಅವರ ಬಹುನಿರೀಕ್ಷಿತ 'ಯುಐ' ಸಿನಿಮಾ ಟೀಸರ್ ಕೂಡ ಇಂದು ರಿಲೀಸ್ ಆಗಲಿದೆ. ಬೆಂಗಳೂರಿನ ಊರ್ವಶಿ ಚಿತ್ರಮಂದಿರದಲ್ಲಿ ಹುಟ್ಟುಹಬ್ಬದ ಸಂಭ್ರಮಾಚರಣೆ ನಡೆಯಲಿದೆ. ಹಲವು ಸಿನಿಮಾಗಳು ಘೋಷಣೆಯಾಗುವ ಸಾಧ್ಯತೆಯಿದೆ.


Click it and Unblock the Notifications











