ವಿಷ್ಣುವರ್ಧನ್ ಚಿತ್ರದಲ್ಲಿ ನಟಿಸದೇ ಹೊರಬಂದಿದ್ದೆ, ಕೊಬ್ಬು ಅಂದಿದ್ರು, ವಿಷ್ಣು ಸರ್ ಮಾತು ಬಿಟ್ಟಿದ್ರು ಎಂದ ಕೋಮಲ್!
ಕೋಮಲ್.. 1992ರಲ್ಲಿ ತೆರೆಗೆ ಬಂದಿದ್ದ ನವರಸ ನಾಯಕ ಜಗ್ಗೇಶ್ ನಟನೆಯ ಸೂಪರ್ ನನ್‌ಮಗ ಚಿತ್ರದ ಮೂಲಕ ಬೆಳ್ಳಿ ತೆರೆಗೆ ಕಾಲಿಟ್ಟ ಪ್ರತಿಭೆ. ತನ್ನ ಅಣ್ಣ ಜಗ್ಗೇಶ್ ಅಂದಿಗೆ ಸ್ಟಾರ್ ಎನಿಸಿಕೊಂಡಿದ್ದರೂ ಸಹ ಕೋಮಲ್ ತನ್ನದೇ ಆಗ ಪ್ರತಿಭೆಯಿಂದ ಜನರ ಮನಸ್ಸಿಗೆ ಹತ್ತಿರವಾದಂತಹ ಕಲಾವಿದ. ಹೀಗೆ ಮೊದಲಿಗೆ ಜಗ್ಗೇಶ್ ನಟನೆಯ ಹಲವಾರು ಚಿತ್ರಗಳಲ್ಲಿ ಹಾಸ್ಯ ಕಲಾವಿದನಾಗಿ ನಟಿಸಿದ ಕೋಮಲ್ ಅಭಿನಯ ಜನರಿಗೆ ಇಷ್ಟವಾದ ಬಳಿಕ ಕೋಮಲ್ ಹಲವಾರು ಚಿತ್ರಗಳಲ್ಲಿ ನಟಿಸುವ ಅವಕಾಶಗಳನ್ನು ಗಿಟ್ಟಿಸಿಕೊಂಡರು.
ಮೂವರು ನಾಯಕರಿದ್ದ ಕತ್ತೆಗಳು ಸಾರ್ ಕತ್ತೆಗಳು ಚಿತ್ರದಲ್ಲಿ ಲೀಡ್ ರೋಲ್ ಪಡೆದುಕೊಂಡ ಕೋಮಲ್ ಬಳಿಕ ಶಿವ ರಾಜ್‌ಕುಮಾರ್, ಪುನೀತ್ ರಾಜ್‌ಕುಮಾರ್, ದರ್ಶನ್ ಸೇರಿದಂತೆ ಹಲವಾರು ಸ್ಟಾರ್ ನಟರ ಚಿತ್ರಗಳಲ್ಲಿ ಹಾಸ್ಯ ಕಲಾವಿದನಾಗಿ ನಟಿಸಿ ಸ್ಟಾರ್ ಕಾಮಿಡಿಯನ್ ಎನಿಸಿಕೊಂಡರು. ಹೀಗೆ ಸಾಲು ಸಾಲು ಚಿತ್ರಗಳಲ್ಲಿ ನಟಿಸಿದ್ದ ಕೋಮಲ್ ಕುಮಾರ್ 2008ರಲ್ಲಿ ತೆರೆಗೆ ಬಂದ ಮಿಸ್ಟರ್ ಗರಗಸ ಚಿತ್ರದಲ್ಲಿ ಪರಿಪೂರ್ಣ ಲೀಡ್ ರೋಲ್ ಪಡೆದುಕೊಂಡರು.

ಹೀಗೆ ಅನೇಕ ಚಿತ್ರಗಳಲ್ಲಿ ನಾಯಕನಾಗಿ, ಹಾಸ್ಯ ನಟನಾಗಿ ಬಣ್ಣ ಹಚ್ಚಿರುವ ಕೋಮಲ್‌ಗೆ ಆಪ್ತರಕ್ಷಕ ವಿಶೇಷ ಚಿತ್ರ. ಏಕೆಂದರೆ ಸಾಹಸಸಿಂಹ ವಿಷ್ಣುವರ್ಧನ್ ನಟಿಸಿದ್ದ ಕೊನೆಯ ಚಿತ್ರವಿದು. ಈ ಚಿತ್ರದಲ್ಲಿ ಕೋಮಲ್ ಪ್ರಮುಖ ಹಾಸ್ಯ ನಟನಾಗಿ ನಟಿಸಿ ವಿಷ್ಣುವರ್ಧನ್ ಜತೆಗೆ ಚಿತ್ರದ ಮೊದಲಾರ್ಧದಲ್ಲಿ ಅನೇಕ ಸಮಯದವರೆಗೆ ತೆರೆ ಹಂಚಿಕೊಂಡಿದ್ದಾರೆ. ಇನ್ನು ಕೋಮಲ್ ವಿಷ್ಣುವರ್ಧನ್ ಜತೆ ಬೆಳ್ಳಿತೆರೆ ಮೇಲೆ ಒಟ್ಟಿಗೆ ಕಾಣಿಸಿಕೊಂಡಿದ್ದು ಇದೇ ಮೊದಲು ಹಾಗೂ ಇದೇ ಕೊನೆ.
ಇನ್ನು ಮೊದಲಿಗೆ ವಿಷ್ಣುವರ್ಧನ್ ಕೋಮಲ್ ಅವರ ಜತೆ ಆಪ್ತರಕ್ಷಕ ಸೆಟ್‌ನಲ್ಲಿ ಮಾತನಾಡುತ್ತಿರಲಿಲ್ಲ. ಹೌದು, ಕೋಮಲ್ ಹಿಂದೆ ಮಾಡಿದ್ದ ಕೆಲಸವೊಂದರಿಂದಾಗಿ ಬೇಸರಕ್ಕೊಳಗಾಗಿದ್ದ ವಿಷ್ಣುವರ್ಧನ್ ತಮ್ಮ ಜತೆ ಮಾತನಾಡುತ್ತಿರಲಿಲ್ಲ ಎಂದು ಸ್ವತಃ ಕೋಮಲ್ ಅವರೇ ಸದ್ಯ ನಡೆದ ಸಂದರ್ಶವೊಂದರಲ್ಲಿ ಬಿಚ್ಚಿಟ್ಟಿದ್ದಾರೆ.
ನಮ್ಮ ಕೆಎಫ್ಐ ಯುಟ್ಯೂಬ್ ಚಾನೆಲ್ ಇದೇ ಏಪ್ರಿಲ್ 14ರಂದು ಬಿಡುಗಡೆಯಾಗುತ್ತಿರುವ ಕೋಮಲ್ ನಟನೆಯ ಉಂಡೆನಾಮ ಚಿತ್ರದ ಸಲುವಾಗಿ ಮಾಡಿದ ಸಂದರ್ಶನದಲ್ಲಿ ಭಾಗವಹಿಸಿದ್ದಾಗ ಈ ವಿಷಯ ಹೊರಬಿದ್ದಿದೆ. ವಿಷ್ಣುವರ್ಧನ್ ಅವರ ಜತೆ ಕೆಲಸ ಮಾಡಿದ್ದರ ಬಗ್ಗೆ ಮಾತು ಆರಂಭಿಸಿದ ಕೋಮಲ್ "ವಿಷ್ಣುವರ್ಧನ್ ಅವರು ಅವರಿಗೆ ಇಷ್ಟವಾಗದಿರೋ ವ್ಯಕ್ತಿನ ಮಾತನಾಡಿಸುತ್ತಿರಲಿಲ್ಲ. ಮಾತಾಡ್ ಮಾತಾಡ್ ಮಲ್ಲಿಗೆ ಎಂಬ ಚಿತ್ರದಲ್ಲಿ ನನ್ನ ರೋಲ್ ಚೆನ್ನಾಗಿಲ್ಲ ಅಂದ್ರೆ ನಾನು ಹೊರಟು ಹೋಗ್ತೀನಿ ಅಂತ ನೂರು ಸಾರಿ ಹೇಳಿದ್ದೆ. ಅದರಲ್ಲಿ ನಲವತ್ತು ಜನರ ಮಧ್ಯೆ ನನ್ನನ್ನು ನಿಲ್ಲಿಸಿದ್ರು. ಹಾಗಾಗಿ ಅದನ್ನು ಬಿಟ್ಟು ಹೊರಟುಬಿಟ್ಟಿದ್ದೆ. ವಿಷ್ಣು ಸರ್‌ಗೆ ಹೋಗಿ ಯಾರೋ ಕಂಪ್ಲೆಂಟ್ ಹೇಳಿಬಿಟ್ಟಿದ್ರು. ಸರ್ ಅವನಿಗೆ ಭಯಂಕರ ಕೊಬ್ಬು, ಬಿಟ್ಟು ಹೋಗಿಬಿಟ್ಟಿದ್ದಾನೆ ಅಂತ" ಎಂದು ತಿಳಿಸಿದರು.

ಮುಂದುವರೆದು ಮಾತನಾಡಿದ ಕೋಮಲ್ "ಚಮ್ಕಾಯಿಸಿ ಚಿಂದಿ ಉಡಾಯಿಸಿ ಚಿತ್ರದ ಶೂಟಿಂಗ್‌ಗಾಗಿ ಮಲೇಶಿಯಾದಲ್ಲಿದ್ದೆ. ಆಗ ಪಿ ವಾಸು ಅವರು ನೀನು ಈ ಚಿತ್ರ ಮಾಡಲೇಬೇಕು ಅಂತ ಕರೆ ಮಾಡಿದ್ರು. ಶೂಟಿಂಗ್ ಬಿಟ್ಟು ಬಂದೆ ಇಲ್ಲಿಗೆ. ವಿಷ್ಣು ಸರ್ ಒಂದೆರಡು ದಿನ ಮಾತನಾಡಿಸುತ್ತಿರಲಿಲ್ಲ. ಏನಪ್ಪಾ ಬೇಜಾರು ಮಾಡಿಕೊಂಡುಬಿಟ್ಟಿದ್ದಾರೆ ಅಂತ ವಿವರಿಸೋಣ ಅಂದುಕೊಂಡ್ರೆ ಅವರು ಮೊದಲೇ ಮಾತನಾಡಿಸುತ್ತಿರಲಿಲ್ಲ. ಆ ಸಮಯದಲ್ಲಿ ಗೋಡೆ ಮೇಲೆ ಹಾಕಿದ್ದ ಬೆಲ್ಟ್ ಹಾವಿನ ಹಾಗೆ ಕಾಣುವ ಒಂದು ಕಾಮಿಡಿ ಸೀನ್ ಮಾಡೋಣ ಎಂದು ವಾಸು ಅವರ ಬಳಿ ಹೇಳಿದೆ, ಅವರು ತುಂಬಾ ಎಂಜಾಯ್ ಮಾಡಿದ್ರು. ವಾಸು ಅವರು ಅದನ್ನು ವಿಷ್ಣು ಸರ್ ಬಳಿ ಹೇಳಿ ಅಂತ ಕರೆದ್ರು. ಮೊದಲೇ ಮಾತನಾಡಿಸುತ್ತಿಲ್ಲ ಅಂತ ಮನದಲ್ಲಿ ಭಯ ಇತ್ತು, ಬೈತಾರೆ ಅಂತ ಹೇಳಿದೆ" ಎಂದರು.
ಬಳಿಕ "ವಾಸು ಅವರು ವಿಷ್ಣು ಸರ್ ಬಳಿ ಕರೆದುಕೊಂಡು ಹೋಗಿ. ಕೋಮಲ್ ಅವರು ಒಂದು ದೃಶ್ಯವನ್ನು ಹೇಳ್ತಾರೆ ನೋಡಿ ಸರ್ ಎಂದು ಹೇಳಿದ್ರು. ವಿಷ್ಣು ಸರ್ ಕಣ್ಣೆಲ್ಲಾ ಕೆಂಪಾಗಿತ್ತು. ಮೊದಲೇ ಅವರಿಗೆ ಸ್ಕ್ರಿಪ್ಟ್‌ನಲ್ಲಿ ಇಲ್ಲದ ದೃಶ್ಯ ಸೇರಿಸಿದ್ರೆ ಸಿಟ್ಟು ಬರುತ್ತಿತ್ತು. ಈ ದೃಶ್ಯ ಸ್ಕ್ರಿಪ್ಟ್‌ನಲ್ಲಿ ಇದೆಯಾ ಅಂತ ಕೇಳಿದ್ರು. ಆದ್ರೂ ವಾಸು ಅವರು ಒಮ್ಮೆ ಕೇಳಿ ಸರ್ ನಿಮಗೆ ಇಷ್ಟವಾಗುತ್ತೆ ಅಂತ ಮನವೊಲಿಸಿದ್ರು. ನಾನು ದೃಶ್ಯವನ್ನು ವಿವರಿಸಿದೆ. ಅವರಿಗೆ ಅದು ತುಂಬಾ ಇಷ್ಟವಾಗಿ ಸಿಕ್ಕಾಪಟ್ಟೆ ನಕ್ಕುಬಿಟ್ರು. ಆಮೇಲೆ ಸರಿ ಮಾಡಿ ಎಂದ್ರು. ನೀವು ನಂಬ್ತೀರೋ ಬಿಡ್ತೀರೋ, ಅಲ್ಲಿಂದಲೇ ನನ್ನ ಹಾಗೂ ವಿಷ್ಣು ಸರ್ ಮಧ್ಯೆ ಕನೆಕ್ಷನ್ ಸ್ಟಾರ್ಟ್ ಆಯಿತು" ಎಂದು ಕೋಮಲ್ ಹೇಳಿಕೊಂಡರು.


Click it and Unblock the Notifications











