Exclusive: ಡಾ. ವಿಷ್ಣುವರ್ಧನ್ ಮೊಮ್ಮಗ ಜೇಷ್ಠ ಚಿತ್ರರಂಗ ಪ್ರವೇಶಕ್ಕೆ ತಯಾರಿ; ತಂದೆ ಅನಿರುದ್ಧ್ ಮಾತು
ಚಿತ್ರರಂಗದ ಹಿನ್ನೆಲೆಯಿಂದ ಬಂದು ಬಣ್ಣದಲೋಕದಲ್ಲಿ ಸಾಕಷ್ಟು ಜನ ಗೆದ್ದಿದ್ದಾರೆ. ಸ್ಟಾರ್ ನಟರ ಮಕ್ಕಳು, ಮೊಮ್ಮಕ್ಕಳು ಚಿತ್ರರಂಗದಲ್ಲಿ ಅದೃಷ್ಟ ಪರೀಕ್ಷೆ ಮಾಡಿಕೊಳ್ಳುವುದು ಹೊಸದೇನು ಅಲ್ಲ. ಇದೀಗ ಸಾಹಸ ಸಿಂಹ ಡಾ. ವಿಷ್ಣುವರ್ಧನ್ ಮೊಮ್ಮಗ ಜೇಷ್ಠವರ್ಧನ್ ಕನ್ನಡ ಚಿತ್ರರಂಗ ಪ್ರವೇಶಕ್ಕೆ ಸಿದ್ಧತೆ ನಡೆಸಿದ್ದಾರೆ. ಈ ಬಗ್ಗೆ ತಂದೆ ಅನಿರುದ್ಧ್ ಜತ್ಕರ್ ಫಿಲ್ಮಿಬೀಟ್ ಕನ್ನಡಕ್ಕೆ ಪ್ರತಿಕ್ರಿಯಿಸಿದ್ದಾರೆ.
ವಿಷ್ಣುವರ್ಧನ್ ತಂದೆ ಹೆಚ್.ಎಲ್. ನಾರಾಯಣ ರಾವ್ ಕೂಡ ಬರಹಗಾರರಾಗಿ ಚಿತ್ರರಂಗದಲ್ಲಿ ಗುರ್ತಿಸಿಕೊಂಡಿದ್ದರು. ಬಳಿಕ 'ವಂಶವೃಕ್ಷ' ಸಿನಿಮಾ ಮೂಲಕ ವಿಷ್ಣು ಬಣ್ಣದಲೋಕಕ್ಕೆ ಬಂದರು. ಪುಟ್ಟಣ್ಣ ಕಣಗಾಲ್ ನಿರ್ದೇಶನದ 'ನಾಗರಹಾವು' ಚಿತ್ರದಿಂದ ಸ್ಟಾರ್ ನಟನಾಗಿ ಹೊರಹೊಮ್ಮಿದ್ದರು. ನಟಿ ಭಾರತಿ ವಿಷ್ಣುವರ್ಧನ್ ಅವರನ್ನು ದಾದಾ ಪ್ರೀತಿಸಿ ಮದುವೆ ಆಗಿದ್ದರು. ವಿಷ್ಣುವರ್ಧನ್ ದತ್ತುಪುತ್ರಿ ಕೀರ್ತಿ ಅವರನ್ನು ನಟ ಅನಿರುದ್ಧ್ ಜತ್ಕರ್ ಕೈ ಹಿಡಿದಿದ್ದಾರೆ. ದಂಪತಿಗೆ ಇಬ್ಬರು ಮಕ್ಕಳು. ಮಗ ಜೇಷ್ಠವರ್ಧನ್ ಇದೀಗ ಬಣ್ಣದಲೋಕದತ್ತ ಮುಖ ಮಾಡಿದ್ದಾರೆ.

ತಾತ, ಅಜ್ಜಿ ಹಾಗೂ ತಂದೆಯ ರೀತಿಯಲ್ಲಿ ಜೇಷ್ಠ ಕೂಡ ಕ್ಯಾಮರಾ ಎದುರಿಸಲು ಅಣಿಯಾಗುತ್ತಿದ್ದಾರೆ. ಈಗಾಗಲೇ ಡ್ಯಾನ್ಸ್, ಆಕ್ಟಿಂಗ್ ಕಲಿಯುತ್ತಿದ್ದಾರೆ. ಬೆಂಗಳೂರಿನ ಕ್ರೈಸ್ಟ್ ಕಾಲೇಜಿನಲ್ಲಿ ಪದವಿ ಪಡೆದಿರುವ ಜೇಷ್ಠವರ್ಧನ್ ಬಣ್ಣದಲೋಕದ ಕನಸು ಕಾಣುತ್ತಿದ್ದಾರೆ. ಇತ್ತೀಚೆಗೆ ಜೇಷ್ಠವರ್ಧನ್ ಸ್ಪೆಷಲ್ ಫೋಟೊಶೂಟ್ ವೈರಲ್ ಆಗಿತ್ತು. ಇನ್‌ಸ್ಟಾಗ್ರಾಮ್‌ನಲ್ಲಿ ಆಕ್ವೀವ್ ಆಗಿರುವ ವಿಷ್ಣುವರ್ಧನ್ ಮೊಮ್ಮಗ ತಮ್ಮ ಸ್ಟೈಲಿಶ್ ಲುಕ್‌ನಿಂದ ಗಮನ ಸೆಳೆಯುತ್ತಿದ್ದಾರೆ.
ಜೇಷ್ಠ ಸಿನಿ ಆರಂಗೇಟ್ರಂ ಬಗ್ಗೆ ಬಿಸಿಬಿಸಿ ಚರ್ಚೆ ಶುರುವಾಗಿದೆ. ಈ ಬಗ್ಗೆ ಫಿಲ್ಮಿಬೀಟ್ ಕನ್ನಡ ಅನಿರುದ್ಧ್ ಅವರನ್ನು ಸಂಪರ್ಕಿಸಿತ್ತು. "ಎಲ್ಲರ ಆಶೀರ್ವಾದ, ಹಾರೈಕೆ ಇದ್ದರೆ ಜೇಷ್ಠ ಚಿತ್ರರಂಗಕ್ಕೆ ಬರ್ತಾನೆ" ಎಂದು ಅನಿರುದ್ಧ್ ಪ್ರತಿಕ್ರಿಯಿಸಿದ್ದಾರೆ. ಈಗಾಗಲೇ ಅದಕ್ಕಾಗಿ ಮಗ ಸಿದ್ಧತೆ ಆರಂಭಿಸಿದ್ದಾನೆ ಎಂದು ತಿಳಿಸಿದ್ದಾರೆ.

"ಖಂಡಿತ ಜೇಷ್ಠ ಚಿತ್ರರಂಗಕ್ಕೆ ಬರ್ತಾನೆ. ಅದಕ್ಕೆ ಎಲ್ಲರ ಆಶೀರ್ವಾದ, ಹಾರೈಕೆ ಬೇಕು. ಮಗನನ್ನು ಚಿತ್ರರಂಗಕ್ಕೆ ಪರಿಚಯಿಸಲು ಖುಷಿಯಾಗುತ್ತಿದೆ. ಮೀಡಿಯಾ ಅಂಡ್ ಮಾಸ್ ಕಮ್ಯೂನಿಕೇಷನ್ ವಿಭಾಗದಲ್ಲಿ ಪದವಿ ಪಡೆದುಕೊಂಡಿದ್ದಾನೆ. ಮೊದಲಿನಿಂದಲೂ ಡ್ಯಾನ್ಸ್ ಅಭ್ಯಾಸ ಮಾಡುತ್ತಿದ್ದಾನೆ. ಇತ್ತೀಚೆಗೆ ತಮಿಳುನಾಡಿನ ಆದಿಶಕ್ತಿ ಥಿಯೇಟರ್‌ನಲ್ಲಿ ವರ್ಕ್‌ಶಾಪ್ ಮುಗಿಸಿ ಬಂದಿದ್ದಾನೆ" ಎಂದು ಅನಿರುದ್ಧ್ ಜತ್ಕರ್ ಮಾಹಿತಿ ನೀಡಿದ್ದಾರೆ.
ಜೇಷ್ಠವರ್ಧನ್ ಹೀರೊ ಆಗಿ ಚಿತ್ರ ನಿರ್ಮಾಣಕ್ಕೆ ಕೆಲವರು ಪ್ರಯತ್ನಿಸಿದ್ದಾರೆ. ಈ ಬಗ್ಗೆ ಅನಿರುದ್ಧ್ ಮಾತನಾಡಿ "ಹೌದು.. ಈಗಾಗಲೇ ಕೆಲವರು ಬಂದು ಮಾತುಕತೆ ನಡೆಸಿದ್ದಾರೆ. ನಾವು ಕೂಡ ಒಳ್ಳೆ ಸ್ಕ್ರಿಪ್ಟ್ ಹುಡುಕುತ್ತಿದ್ದೇವೆ. ನಾವೇ ಸಿನಿಮಾ ನಿರ್ಮಾಣ ಮಾಡಬೇಕು ಎನ್ನುವ ಆಲೋಚನೆ ಇಲ್ಲ. ಒಳ್ಳೆ ಸ್ಕ್ರಿಪ್ಟ್, ಬ್ಯಾನರ್, ತಂಡ ಸಿಕ್ಕರೆ ಜೇಷ್ಠ ನಟಿಸುತ್ತಾನೆ" ಎಂದು ತಿಳಿಸಿದ್ದಾರೆ.
ದಾದಾ ಮೊಮ್ಮಗ ಜೇಷ್ಠವರ್ಧನ್ ಇನ್‌ಸ್ಟಾಗ್ರಾಮ್‌ನಲ್ಲಿ ಸಖತ್ ಆಕ್ಟೀವ್ ಆಗಿದ್ದಾರೆ. ಪದೇ ಪದೆ ಫೋಟೊಶೂಟ್ ಮಾಡಿಸಿ ಹಂಚಿಕೊಳ್ಳುತ್ತಾರೆ. ಸ್ನೇಹಿತರ ಜೊತೆ ಟ್ರಿಪ್‌ಗೆ ಹೋಗುತ್ತಿರುತ್ತಾರೆ. ಅದಕ್ಕೆ ಸಂಬಂಧಿಸಿದ ಫೋಟೊ, ವೀಡಿಯೋ ಪೋಸ್ಟ್ ಮಾಡುತ್ತಾರೆ. 25 ಸಾವಿರಕ್ಕೂ ಅಧಿಕ ಫಾಲೋವರ್ಸ್ ಇದ್ದು ಜೇಷ್ಠ ಯಾವುದೇ ಪೋಸ್ಟ್ ಮಾಡಿದರೂ ನೆಟ್ಟಿಗರು ಲೈಕ್ಸ್, ಕಾಮೆಂಟ್ಸ್ ಮೂಲಕ ಮೆಚ್ಚುಗೆ ಸೂಚಿಸುತ್ತಾರೆ. ನಿಮ್ಮನ್ನು ಆದಷ್ಟು ಬೇಗ ತೆರೆಮೇಲೆ ನೋಡಲು ಕಾಯುತ್ತಿದ್ದೇವೆ ಎಂದು ಕಾಮೆಂಟ್ ಮಾಡುತ್ತಾರೆ.
ಗಾಯನದಲ್ಲಿ ಕೂಡ ಜೇಷ್ಠವರ್ಧನ್‌ಗೆ ಬಹಳ ಆಸಕ್ತಿ ಇದೆ. ಆಗಾಗ್ಗೆ ತಂದೆ ಹಾಗೂ ಸಹೋದರಿ ಜೊತೆ ಹಾಡು ಹಾಡಿ ವೀಡಿಯೋಗಳನ್ನು ಶೇರ್ ಮಾಡುತ್ತಾರೆ. ಹಾಗಾಗಿ ಮುಂದೆ ಜೇಷ್ಠವರ್ಧನ್ ಸಿನಿಮಾ ಹಿನ್ನೆಲೆ ಗಾಯಕರಾಗಿಯೂ ಗುರ್ತಿಸಿಕೊಳ್ಳುವ ಸಾಧ್ಯತೆ ದಟ್ಟವಾಗಿದೆ. ಸಾಹಸ ಸಿಂಹ ವಿಷ್ಣುವರ್ಧನ್ ಅಭಿಮಾನಿಗಳು ಕೂಡ ಜೇಷ್ಠವರ್ಧನ್ ಚಿತ್ರರಂಗ ಪ್ರವೇಶಕ್ಕೆ ಕಾಯುತ್ತಿದ್ದಾರೆ. ಈ ವರ್ಷದ ಕೊನೆ ಅಥವಾ ಮುಂದಿನ ವರ್ಷ ದಾದಾ ಮೊಮ್ಮಗ ನಟನೆಯ ಸಿನಿಮಾ ಶುರುವಾಗುವ ಸಾಧ್ಯತೆಯಿದೆ. ಆಲ್ ದಿ ಬೆಸ್ಟ್ ಜೇಷ್ಠವರ್ಧನ್.


Click it and Unblock the Notifications











