ಪುರುಷ ಪಾರುಪತ್ಯದ ಚಿತ್ರರಂಗದಲ್ಲಿ ನಿರ್ದೇಶಕಿ ವಿಸ್ಮಯಾ ಮೊದಲ ಹೆಜ್ಜೆ
ಸಿನಿಮಾರಂಗದದಲ್ಲಿ ಪುರುಷದ್ದೇ ಪಾರುಪತ್ಯ. ತೆರೆಯ ಮೇಲಾಗಲಿ ತೆರೆಯ ಹಿಂದಾಗಲಿ ಪುರುಷರೇ ತುಂಬಿದ್ದಾರೆ. ತೆರೆಯ ಹಿಂದಂತೂ ಮಹಿಳೆಯರಿಗೆ ಅವಕಾಶ ಬಹಳ ವಿರಳ.
ಹಾಗೆಂದು ಮಹಿಳೆಯರು ಸಿನಿಮಾರಂಗದಿಂದ ತೀರಾ ದೂರವೇನೂ ಉಳಿದಿಲ್ಲ. ಸೀಮಿತ ಅವಕಾಶ, ಸಂಪನ್ಮೂಲಗಳನ್ನೇ ಬಳಸಿಕೊಂಡು ತಮ್ಮದೇ ಛಾಪು ಮೂಡಿಸಿದ ನಿರ್ದೇಶಕಿಯರು ಭಾರತೀಯ ಸಿನಿಮಾರಂಗದಲ್ಲಿ ಹಲವರಿದ್ದಾರೆ. ಕನ್ನಡದಲ್ಲಿಯೂ ಸಹ.
ಕನ್ನಡದ ಬೆರಳೆಣಿಕೆಯ ನಿರ್ದೇಶಕಿಯರ ಸಾಲಿಗೆ ಹೊಸದಾಗಿ ಸೇರ್ಪಡೆ ಆಗಲು ತಯಾರಿ ನಡೆಸುತ್ತಿದ್ದಾರೆ ಯುವ ನಿರ್ದೇಶಕಿ ವಿಸ್ಮಯಾ ಗೌಡ. ಮೆಕ್ಯಾನಿಕಲ್ ಎಂಜಿನಿಯರಿಂಗ್ ಓದಿ, ಪ್ರೇರಣಾತ್ಮಕ ಭಾಷಣಕಾರ್ತಿ ಆಗಿರುವ ವಿಸ್ಮಯ ಗೌಡ, ಎಳವೆಯಿಂದಲೇ ಇದ್ದ ಸಿನಿಮಾ ಮೋಹದ ಸೆಳೆತಕ್ಕೆ ಸಿಕ್ಕು ಈಗ ಚಂದನವನದ ಹೊಸಿಲಲ್ಲಿ ನಿಂತಿದ್ದಾರೆ.
ವಿಸ್ಮಯ ಗೌಡ ಅವರು ಹೊಸದೊಂದು ಸಿನಿಮಾ ನಿರ್ದೇಶಿಸುತ್ತಿದ್ದಾರೆ. ಪ್ರೇಮಕತಾ ಸಿನಿಮಾದೊಟ್ಟಿಗೆ ಚಿತ್ರರಂಗಕ್ಕೆ ಮೊದಲ ಹೆಜ್ಜೆ ಇಡಲು ಕತೆ-ಚಿತ್ರಕತೆಯೊಂದಿಗೆ ತಯಾರಾಗಿದ್ದಾರೆ.

ನಾಯಕ-ನಾಯಕಿಯನ್ನು ಆಯ್ಕೆ ಮಾಡಿರುವ ವಿಸ್ಮಯ
ತಾವು ಹೇಳಲಿರುವ ಪ್ರೇಮಕತೆಗೆ ನಾಯಕರನ್ನಾಗಿ ಬಿಗ್‌ಬಾಸ್ ಖ್ಯಾತಿಯ ಕಿಶನ್ ಬಿಳಗಲಿ ಅನ್ನು ಆಯ್ಕೆ ಮಾಡಿಕೊಂಡಿದ್ದಾರೆ. ನಾಯಕಿಯಾಗಿ ನಿರ್ದೇಶಕ ಓಂ ಪ್ರಕಾಶ್ ರಾವ್ ಮಗಳು ಶ್ರಾವ್ಯಾ ರಾವ್ ಅವರನ್ನು ಆಯ್ಕೆ ಮಾಡಿಕೊಂಡಿದ್ದಾರೆ. ನಟಿ ಶ್ರಾವ್ಯ ರಾವ್ ಅವರು ಹೆಸರು ಬದಲಾಯಿಸಿಕೊಂಡು ಸಾತ್ವಿಕಾ ರಾವ್ ಆಗಿದ್ದಾರೆ. ಮತ್ತೊಬ್ಬ ಹೀರೋ ಆಗಿ ಕ್ರಿಕೆಟ್ ಪ್ರವೀಣ್ ಅವರನ್ನು ಆಯ್ಕೆ ಮಾಡಿಕೊಂಡಿದ್ದಾರೆ.

ಕತೆ-ಚಿತ್ರಕತೆ ವಿಸ್ಮಯಾ ಅವರದ್ದೇ
ವಿಸ್ಮಯಾ ಗೌಡ ಅವರು ಈ ವರೆಗೆ ಯಾವುದೇ ಸಿನಿಮಾದಲ್ಲಿ ಸಹಾಯಕಿಯಾಗಿ ಕೆಲಸ ಮಾಡಿಲ್ಲವಾದರೂ, ಸಿನಿಮಾದ ತಂತ್ರಜ್ಞಾನದ ಬಗ್ಗೆ ತಿಳಿದುಕೊಂಡಿದ್ದಾರಂತೆ. 'ಓದಿ, ಕೇಳಿ ತಿಳಿದು ಸಾಕಷ್ಟು ಮಾಹಿತಿ ಪಡೆದಿದ್ದೇನೆ. ಬರವಣಿಗೆ ಬಗ್ಗೆ ಸಾಕಷ್ಟು ಆಸಕ್ತಿ ಮೊದಲಿನಿಂದಲೂ ಇತ್ತಾದ್ದರಿಂದ ಕತೆ-ಚಿತ್ರಕತೆಯನ್ನು ನಾನೇ ಬರೆದುಕೊಂಡಿದ್ದೇನೆ' ಎಂದು ಫಿಲ್ಮೀಬೀಟ್‌ಗೆ ತಿಳಿಸಿದರು ವಿಸ್ಮಯ.

ಅನುಭವಿ ತಂತ್ರಜ್ಞರನ್ನು ಆರಿಸಿಕೊಳ್ಳುತ್ತಿರುವ ವಿಸ್ಮಯ
ತಾವು ಹೊಸಬರಾದ್ದರಿಂದ ಕ್ಯಾಮೆರಾ, ಸಂಕಲನ, ಸಂಗೀತ ನಿರ್ದೇಶನ ಇನ್ನಿತರೆ ಮುಖ್ಯ ಜವಾಬ್ದಾರಿಗಳನ್ನು ನಿರ್ವಹಿಸಲು ಅನುಭವಿ ತಂತ್ರಜ್ಞರನ್ನೇ ಆರಿಸಿಕೊಳ್ಳುತ್ತಿದ್ದಾರೆ ವಿಸ್ಮಯ. ಜೊತೆಗೆ ನಟರಿಗೆ ಈಗಾಗಲೇ ನಟನಾ ಕಾರ್ಯಾಗಾರವನ್ನು ಸಹ ಪ್ರಾರಂಭಿಸಿದ್ದಾರೆ.

ಫೆಬ್ರವರಿ 14 ರಂದು ಹೆಸರು ಘೋಷಣೆ
ನಟ ಸುದೀಪ್ ಅವರು ನಮ್ಮ ತಂಡಕ್ಕೆ ಹಾರೈಸಿದ್ದಾರೆ ಎಂದು ಹೆಮ್ಮೆಯಿಂದ ಹೇಳಿಕೊಂಡ ವಿಸ್ಮಯ, ಜನವರಿ ಮೂರನೇ ಅಥವಾ ಕೊನೆಯ ವಾರದಲ್ಲಿ ನಮ್ಮ ಸಿನಿಮಾಕ್ಕೆ ಮುಹೂರ್ತ ನೆರವೇರಲಿದ್ದು, ಸುದೀಪ್ ಅವರೇ ಕ್ಲ್ಯಾಪ್ ಮಾಡಲಿದ್ದಾರೆ ಎಂದಿದ್ದಾರೆ. ಪ್ರೇಮಕತೆಯಾದ್ದರಿಂದ ಫೆಬ್ರವರಿ 14 ರ ವ್ಯಾಲಂಟೈನ್ ಡೇ ದಿನವೇ ಸಿನಿಮಾದ ಹೆಸರು ಘೋಷಿಸುತ್ತಾರಂತೆ ವಿಸ್ಮಯ.


Click it and Unblock the Notifications











