ಸೋಷಿಯಲ್ ಮೀಡಿಯಾದಲ್ಲಿ ಹೊಸ ಅಲೆ ಎಬ್ಬಿಸಿರುವ ವಿಕ್ಕಿಪೀಡಿಯಾಗೆ ಫಿಲ್ಮ್ ಕ್ರಿಟಿಕ್ ಅವಾರ್ಡ್!
ಇತ್ತೀಚಿಗಷ್ಟೇ ನಾಲ್ಕನೇ ಚಂದನವನ ಫಿಲ್ಮ್ ಕ್ರಿಟಿಕ್ಸ್ ಅವಾರ್ಡ್ಸ್ ಕಾರ್ಯಕ್ರಮ ಜರುಗಿತು. ಈ ಪ್ರಶಸ್ತಿ ಪ್ರದಾನ ಕಾರ್ಯದಲ್ಲಿ 2022ರಲ್ಲಿ ತೆರೆಕಂಡ ಅತ್ಯುತ್ತಮ ಚಿತ್ರಗಳನ್ನು ಗುರುತಿಸಿ ವಿವಿಧ ವಿಭಾಗಗಳ ಅಡಿಯಲ್ಲಿ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.
ಕಳೆದ ವರ್ಷ ತೆರೆ ಕಂಡು ಅಬ್ಬರಿಸಿದ ಕಾಂತಾರ ಹಾಗೂ ಕೆಜಿಎಫ್ ಚಾಪ್ಟರ್ 2 ಚಿತ್ರಗಳು ಈ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಹೆಚ್ಚು ಪ್ರಶಸ್ತಿಗಳನ್ನು ಬಾಚಿಕೊಂಡವು. ಇದೇ ಕಾರ್ಯಕ್ರಮದಲ್ಲಿ ಸಾಮಾಜಿಕ ಜಾಲತಾಣದಲ್ಲಿ ಅತ್ಯುತ್ತಮವಾಗಿ ನೆಟ್ಟಿಗರಿಗೆ ಮನರಂಜನೆ ನೀಡುವ ವಿಡಿಯೊ ಕ್ರಿಯೇಟರ್ 'ವಿಕ್ಕಿಪೀಡಿಯಾ ದ ಗ್ಯಾಂಗ್‌ಸ್ಟರ್'ಗೂ ಸಹ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

ವಿವೇಕ್ ಪತ್ತರ್ ಹಾಗೂ ಅಮಿತ್ ಚಿಟ್ಟೆ ಎಂಬ ಇಬ್ಬರು ಯುವಕರು ವಿಕ್ಕಿಪೀಡಿಯಾ ದ ಗ್ಯಾಂಗ್‌ಸ್ಟರ್ ಎಂಬ ಪೇಜ್ ಮಾಡಿ ಅದರಲ್ಲಿ ಭಿನ್ನ ವಿಭಿನ್ನವಾದ ಕಾಮಿಡಿ ವಿಡಿಯೊಗಳನ್ನು ಮಾಡುತ್ತಿದ್ದಾರೆ. ನನ್ ಹೆಸ್ರು ಮುದ್ದು ಕುಮಾರ ಅಂತ, ನಾನು ರಮ್ಮಿ ಆಡ್ತಿದ್ದೆ.. ಎಂದು ಡೈಲಾಗ್ ಹೇಳುತ್ತಾ ಆನ್ ಲೈನ್ ರಮ್ಮಿ ತಪ್ಪು ಎಂಬುದನ್ನು ಫನ್ನಿಯಾಗಿ ತೋರಿಸಿ ವೈರಲ್ ಆಗಿದ್ದರು.
ಬಳಿಕ ಮಲ್ಲೇಶ್ ಪಾಳ್ಯ ಬಾಯ್ಸ್ ಕಾಮಿಡಿ ವಿಡಿಯೊಗಳು, ರಹಸ್ಯ ಕಾರ್ಯಾಚರಣೆ, ಅಂಬಿಕಾ ಮಲತಾಯಿ ಮಗಳು, ಹಳ್ಳಿಹುಡುಗಿ ಸೇರಿದಂತೆ ಹಲವಾರು ವಿಡಿಯೊಗಳು ಸಿಕ್ಕಾಪಟ್ಟೆ ವೈರಲ್ ಆದವು.
ಡಬಲ್ ಮೀನಿಂಗ್ ಸಂಭಾಷಣೆ ಬಳಸದೇ ಒಳ್ಳೊಳ್ಳೆ ಕಾನ್ಸೆಪ್ಟ್ ಮೂಲಕ ಜನರನ್ನು ನಗಿಸುತ್ತಿರುವ ಈ ಜೋಡಿಗೆ ಚಂದನವನ ಫಿಲ್ಮ್ ಕ್ರಿಟಿಕ್ಸ್ ಅಕಾಡೆಮಿ 'ಬೆಸ್ಟ್ ಸೋಷಿಯಲ್ ಮೀಡಿಯಾ ಎಂಟರ್ಟೈನರ್' ಅವಾರ್ಡ್ ನೀಡಿದೆ.
ಇನ್ನುಳಿದಂತೆ ಅತ್ಯುತ್ತಮ ನಟ ಪ್ರಶಸ್ತಿಯನ್ನು ಕಾಂತಾರ ಚಿತ್ರದ ಕಾಡುಬೆಟ್ಟು ಶಿವನ ಪಾತ್ರಕ್ಕಾಗಿ ರಿಷಬ್ ಶೆಟ್ಟಿ ಪಡೆದುಕೊಂಡರೆ, ಗಾಳಿಪಟ 2 ಚಿತ್ರಕ್ಕಾಗಿ ಶರ್ಮಿಳಾ ಮಾಂಡ್ರೆ ಅತ್ಯುತ್ತಮ ನಟಿ ಪ್ರಶಸ್ತಿ ಪಡೆದರು. ಇನ್ನುಳಿದಂತೆ ಅತ್ಯುತ್ತಮ ಸಿನಿಮಾ ಪ್ರಶಸ್ತಿ ಕೂಡ 'ಕಾಂತಾರ' ಪಾಲಾಯಿತು. ಅತ್ಯುತ್ತಮ ಸಂಗೀತ ಕಾಂತಾರ ಚಿತ್ರಕ್ಕಾಗಿ ಅಜನೀಶ್ ಲೋಕನಾಥ್ ಪಡೆದುಕೊಂಡರೆ, ಅತ್ಯುತ್ತಮ ಸಾಹಸ ಸಂಯೋಜನೆಗಾಗಿ ವಿಕ್ರಮ್ ಮೋರ್ ಸಾಹಸ ಸಂಯೋಜನೆಗಾಗಿ ಪ್ರಶಸ್ತಿ ಸ್ವೀಕರಿಸಿದರು.
ಯಶ್ ಹಾಗೂ ಪ್ರಶಾಂತ್ ನೀಲ್ ಜೋಡಿಯ 'KGF'- 2 ಸಿನಿಮಾ ಒಟ್ಟು ಮೂರು ಪ್ರಶಸ್ತಿಗಳು ಬಾಚಿಕೊಂಡಿದೆ. ಛಾಯಾಗ್ರಹಣಕ್ಕಾಗಿ ಭುವನ್ ಗೌಡ, ಅತ್ಯುತ್ತಮ ಸಂಕಲನಕ್ಕಾಗಿ ಪ್ರಜ್ವಲ್ ಕುಲಕರ್ಣಿ ಹಾಗೂ ಅತ್ಯುತ್ತಮ ವಿಎಫ್‌ಎಕ್ಸ್‌ಗಾಗಿ ಉದಯ ರವಿ ಹೆಗಡೆ ಪ್ರಶಸ್ತಿ ಪಡೆದುಕೊಂಡರು. '777 ಚಾರ್ಲಿ' ಚಿತ್ರದ ನಿರ್ದೇಶನಕ್ಕಾಗಿ ಕಿರಣ್ ರಾಜ್ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡರು.


Click it and Unblock the Notifications











