ಹಿರಿಯ ನಟಿ ವೈಜಯಂತಿಮಾಲಾ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸಿದ ಕಿಡಿಗೇಡಿಗಳು, ಕುಟುಂಬಸ್ಥರು ಹೇಳಿದ್ದೇನು ?
ವೈಜಯಂತಿ ಮಾಲಾ ಭಾರತೀಯ ಚಿತ್ರರಂಗ ಕಂಡ ಶ್ರೇಷ್ಠ ನಾಯಕಿ. ಅಂದಕಾಲತ್ತಿಲ್ ಇವರನ್ನು ಭಾರತದ ಲೇಡಿ ಸೂಪರ್ ಸ್ಟಾರ್ ಎಂದೇ ಕರೆಯಲಾಗುತ್ತಿತ್ತು. ರಾಜ್ ಕಪೂರ್, ದಿಲೀಪ್ ಕುಮಾರ್, ಕಿಶೋರ್ ಕುಮಾರ್, ಸೇರಿ ಅನೇಕ ದಿಗ್ಗಜರ ಜೊತೆ ತೆರೆ ಹಂಚಿಕೊಂಡಿರುವ ವೈಜಯಂತಿ ಮಾಲಾ ನಿಧನರಾಗಿದ್ದಾರೆ ಎಂದು ಕೆಲ ಕಿಡಿಗೇಡಿಗಳು ಇಂದು ಸೋಶಿಯಲ್ ಮೀಡಿಯಾದಲ್ಲಿ ಸುದ್ದಿಯನ್ನು ಹಬ್ಬಿಸಿದ್ದರು. ಆದರೆ, ಇದು ಸಂಪೂರ್ಣ ಸುಳ್ಳು.
ಈ ಕುರಿತು ಪ್ರತಿಕ್ರಿಯೆಯನ್ನು ನೀಡಿರುವ ವೈಜಯಂತಿ ಮಾಲಾ ಅವರ ಮಗ ಸುಚಿಂದ್ರ ಬಾಲಿ ತಮ್ಮ ತಾಯಿ ಸಂಪೂರ್ಣ ಆರೋಗ್ಯವಾಗಿದ್ದಾರೆ ಎಂದು ಸ್ಪಷ್ಟನೆಯನ್ನು ನೀಡಿದ್ದಾರೆ. ಸುಖಾ ಸುಮ್ಮನೆ ಈ ರೀತಿಯ ಸುಳ್ಳು ಸುದ್ದಿಯನ್ನು ಹಂಚಿಕೊಳ್ಳುವ ಮೊದಲು ದಯವಿಟ್ಟು ಒಮ್ಮೆ ಸುದ್ದಿಗಳನ್ನು ಪರಿಶೀಲಿಸಿ ಎಂದು ಮನವಿಯನ್ನು ಮಾಡಿದ್ದಾರೆ.

ಇನ್ನು ಈ ಕುರಿತು ಚೆನ್ನೈ ಮೂಲದ ಕರ್ನಾಟಕ ಶಾಸ್ತ್ರೀಯ ಸಂಗೀತಗಾರ ಮತ್ತು ವೈಜಯಂತಿ ಮಾಲಾ ಕುಟುಂಬಕ್ಕೆ ಆಪ್ತರಾದ ಗಿರಿಜಾ ಶಂಕರ್ ಸುಂದರೇಶನ್ ಕೂಡ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಬರೆದುಕೊಂಡಿದ್ದು ಆಧಾರ ರಹಿತ ವದಂತಿಗಳನ್ನು ಹಬ್ಬಿಸುವುದನ್ನು ನಿಲ್ಲಿಸಿ ಎಂದು ಹೇಳಿದ್ದಾರೆ. ಡಾ.ವೈಜಯಂತಿ ಮಾಲಾ ಆರೋಗ್ಯವಾಗಿದ್ದಾರೆ ಎಂದು ಹೇಳಿದ್ದಾರೆ.
ಅಂದ್ಹಾಗೇ ವೈಜಯಂತಿ ಮಾಲಾ ಎನ್ನುವ ಈ ಸುರಸುಂದರಿ ಹುಟ್ಟಿದ್ದು ತಮಿಳಿನಾಡಿನ ಟ್ರಿಪ್ಲಿಕೇನ್ ನಲ್ಲಿ. ತಾಯಿ ಖ್ಯಾತ ನಟಿ ವಸುಂಧರ ದೇವಿ. ಹಾಗಾಗಿ ವೈಜಯಂತಿ ಅವರಿಗೆ ಬಣ್ಣದ ಲೋಕದ ನಂಟು ಬಾಲ್ಯದಿಂದಲೇ ಇತ್ತು. ಅಭಿನಯದ ಜೊತೆಗೆ ವೈಜಯಂತಿ ಅದ್ಭುತ ಡ್ಯಾನ್ಸರ್. ಡ್ಯಾನ್ಸ್ ಮೂಲಕವೇ ಇಂಪ್ರೆಸ್ ಮಾಡಿದ್ದ ವೈಜಯಂತಿ 15ನೇ ವಯಸ್ಸಿನಲ್ಲಿಯೆ ಶಾಲೆಗೆ ಹೋಗುತ್ತಿರುವಾಗಲೇ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟಿದ್ದರು. ಕುಟುಂಬದ ಸ್ನೇಹಿತರಾಗಿದ್ದ ಎಂ.ವಿ.ರಾಮನ್ ಸಹಕಾರದ ಮೇರೆಗೆ 1949ರಲ್ಲಿ ಮೊದಲ ತಮಿಳು ಚಿತ್ರದಲ್ಲಿ ಅಭಿನಯಿಸಿದ್ದರು.
ತಮಿಳು ಮತ್ತು ತೆಲುಗು ಚಿತ್ರರಂಗದಲ್ಲಿ ಒಂದೊಂದು ಸಿನಿಮಾ ಮಾಡುತ್ತಿದ್ದಂತೆ ಬಾಲಿವುಡ್ ಚಿತ್ರರಂಗ ಕೈ ಬೀಸಿ ಕರೆಯಿತು. ತಮಿಳಿನಲ್ಲಿ ಸೂಪರ್ ಹಿಟ್ ಆಗಿದ್ದ ಮೊದಲ ಚಿತ್ರ 'ವಾಳ್ಕೈ' ಹಿಂದಿ ರಿಮೇಕ್ ನಲ್ಲಿ ವೈಜಯಂತಿ ಮಾಲಾ ಬಣ್ಣ ಹಚ್ಚಿದರು. ಹಿಂದಿಯಲ್ಲಿ 'ಬಹಾರ್' ಹೆಸರಿನಲ್ಲಿ ಸಿನಿಮಾ ರಿಲೀಸ್ ಆಗುತ್ತೆ. ತಮಿಳು ಚಿತ್ರದಂತೆ 'ಬಹಾರ್' ಕೂಡ ದೊಡ್ಡ ಮಟ್ಟಕ್ಕೆ ಯಶಸ್ಸು ಆಯ್ತು. ಆ ನಂತರ ವೈಜಯಂತಿ ಬಾಲಿವುಡ್ ನಲ್ಲಿ ಖಾಯಂ ಆಗಿ ನೆಲೆಯೂರಿದರು. ಅಭಿನಯದ ಜೊತೆಗೆ ಅದ್ಭುತ ಭರತನಾಟ್ಯ ಕಲಾವಿದೆಯಾಗಿರುವ ವೈಜಯಂತಿ ಮಾಲಾಗೆ ಅವಕಾಶಗಳು ಹಾಗೆ ಅರಸಿ ಬಂದವು. 60-65ರ ದಶಕದಲ್ಲಿ ಬಾಲಿವುಡ್ ನಲ್ಲಿ ಅತೀ ಹೆಚ್ಚು ಸಂಭಾವನೆ ಪಡೆಯುವ ನಟಿ ಎನ್ನುವ ಖ್ಯಾತಿಗೆ ಕೂಡ ಪಾತ್ರರಾದವರು ವೈಜಯಂತಿ ಮಾಲಾ.
ಕಾಲ ಉರುಳಿದಂತೆ ಬಾಲಿವುಡ್‌ನ ಶೋ ಮ್ಯಾನ್ ರಾಜ್ ಕಪೂರ್ ಕುಟುಂಬದ ವೈದ್ಯ ಚಮನ್ ಲಾಲ್ ಬಾಲಿ ಜೊತೆ ಪ್ರೀತಿಯಲ್ಲಿ ಬೀಳುವ ವೈಜಯಂತಿ ಮಾಲಾ ಆ ನಂತರ ಮದುವೆಯಾದರು. ಚಿತ್ರರಂಗದಿಂದ ಅಂತರ ಕಾಪಾಡಿಕೊಂಡು ಮದುವೆ ನಂತರ ಇಬ್ಬರು ಚೆನ್ನೈಗೆ ಬಂದು ನೆಲೆಸಿದರು. ಇದರ ನಡುವೆ ರಾಜಕೀಯದಲ್ಲಿ ಕೂಡ ಅದೃಷ್ಟ ಪರೀಕ್ಷೆ ಮಾಡಿಕೊಂಡವರು ವೈಜಯಂತಿ ಮಾಲಾ ಅವರಿಗೆ 1968ರಲ್ಲಿ ಪದ್ಮಶ್ರೀ ಮತ್ತು 2024ರಲ್ಲಿ ಪದ್ಮವಿಭೂಷಣ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.


Click it and Unblock the Notifications











