ಮೈಸೂರು ಸ್ಯಾಂಡಲ್‌ಗೆ ತಮನ್ನಾ ರಾಯಭಾರಿ, ಜನರ ತೆರಿಗೆ ಹಣ ವೇಸ್ಟ್ ಮಾಡ್ತಿದ್ದಾರೆ ಅಷ್ಟೇ- ರಮ್ಯಾ ..!
ಮೈಸೂರು ಸ್ಯಾಂಡಲ್ ಸೋಪ್ ಈ ಹೆಸರು ಕೇಳದ ಮಂದಿ ಬಹುಶಃ ನಮ್ಮ ರಾಜ್ಯದಲ್ಲಿ ಇಲ್ಲವೇನೋ ! ದೇಶ, ವಿದೇಶಗಳಲ್ಲಿ ಕಂಪು ಸೂಸಿ ಕರ್ನಾಟಕದ ಹೆಮ್ಮೆಯೆನಿಸಿಕೊಂಡ ನಮ್ಮದೇ ಸಾಬೂನು ಇದು. 1916ರಲ್ಲಿ ಮೈಸೂರು ಸಂಸ್ಥಾನದ ರಾಜರಾಗಿದ್ದ ನಾಲ್ವಡಿ ಕೃಷ್ಣರಾಜ ಒಡೆಯರ್ ಸ್ಥಾಪಿಸಿದ್ದ ಮೈಸೂರು ಸಾಬೂನು ಫ್ಯಾಕ್ಟರಿಗೆ 100ಕ್ಕೂ ಅಧಿಕ ವರ್ಷಗಳ ಇತಿಹಾಸ ಇದೆ. ಹಲವರ ಮನೆ ಮತ್ತು ಮನೆಗಳಲ್ಲಿ ಮೈಸೂರು ಸ್ಯಾಂಡಲ್‌ಗೆ ವಿಶೇಷ ಸ್ಥಾನ ಇದೆ.
ಮೈಸೂರು ಸ್ಯಾಂಡಲ್ ಸೋಪ್ ಭಾರತದಲ್ಲಿರುವ ಅತೀ ದೊಡ್ಡ ಸೋಪ್ ನಿರ್ಮಾಣ ಕಂಪನಿಗಳಲ್ಲೊಂದಾಗಿದೆ. ಸಂಪೂರ್ಣ ಗಂಧದೆಣ್ಣೆಯಿಂದ ತಯಾರಿಸಲಾಗುವ ಜಗತ್ತಿನ ಏಕೈಕ ಸಾಬೂನು ಎಂದು ಕೂಡ ಪ್ರಸಿದ್ಧವಾಗಿದೆ.

ಕೇವಲ ಸೋಪ್ ಮಾತ್ರವಲ್ಲ ಡಿಟರ್ಜೆಂಟ್ ಪೌಡರ್, ಕ್ಲೀನಿಂಗ್ ಆಯಿಲ್, ಶ್ರೀಗಂಧದ ಕಡ್ಡಿ, ಬೇಬಿ ಆಯಿಲ್, ಟಾಲ್ಕಂ ಪೌಡರ್ ಹೀಗೆ ಮೊದಲಾದವುಗಳನ್ನು ಈ ಕಂಪನಿ ನಿರ್ಮಿಸುತ್ತಿದೆ. ಮೈಸೂರ್ ಸ್ಯಾಂಡಲ್ಸ್ ಎಂಬ ಬ್ರಾಂಡ್‌ನಿಂದ ಜಗದ್ವಿಖ್ಯಾತಿಯಾಗಿದೆ. ಆದರೆ ಇದರಲ್ಲಿ ಇವತ್ತು ಕೂಡ ಹೆಚ್ಚು ಮಾರಾಟವಾಗುವುದು ಮೈಸೂರ್ ಸ್ಯಾಂಡಲ್ ಸೋಪ್ ಮಾತ್ರ.
ಇಂತಹ ಮೈಸೂರು ಸ್ಯಾಂಡಲ್ ಸೋಪ್‌ಗೆ ಕನ್ನಡತನದ ಗಂಧ ಗಾಳಿ ಗೊತ್ತಿಲ್ಲದ ತಮನ್ನಾ ಭಾಟಿಯಾ ಅವರನ್ನು ಕರ್ನಾಟಕ ಸರ್ಕಾರ ರಾಯಭಾರಿಯನ್ನಾಗಿ ಮಾಡಿದೆ. ಸಾಲದಕ್ಕೆ ಗಂಧದ ಸೋಪಿನ ಸಂಸ್ಥೆಗೆ ರಾಯಭಾರಿಯನ್ನಾಗಿ ಮಾಡಲು 6.20 ಕೋಟಿ ಹಣವನ್ನು ಕೂಡ ನೀಡಿದೆ.
ಇದರಿಂದ ಕರುನಾಡಿನೆಲ್ಲೆಡೆ ಆಕ್ರೋಶ ವ್ಯಕ್ತವಾಗುತ್ತಿದೆ. ರಾಯಭಾರಿಯನ್ನಾಗಿ ಯಾರನ್ನಾದರೂ ಆಯ್ಕೆ ಮಾಡಲೇಬೇಕು ಅಂದಿದ್ದರೆ ಕನ್ನಡದಲ್ಲಿಯೇ ಹಲವಾರು ಖ್ಯಾತ ನಾಯಕಿಯರಿದ್ದರು ಅವರನ್ನೇ ಆಯ್ಕೆ ಮಾಡಬಹುದಿತ್ತು ಎನ್ನುವ ಅಭಿಪ್ರಾಯ ಕೂಡ ಸಾರ್ವತ್ರಿಕ ವಲಯದಲ್ಲಿ ವ್ಯಕ್ತವಾಗುತ್ತಿದೆ.
ಹೀಗಿರುವಾಗ ಇದೀಗ ಮೈಸೂರು ಸ್ಯಾಂಡಲ್ ಸೋಪ್‌ಗೆ ತಮನ್ನಾ ಅವರನ್ನು ರಾಯಭಾರಿಯನ್ನಾಗಿ ಆಯ್ಕೆ ಮಾಡಿದ್ದಕ್ಕೆ ಕನ್ನಡ ಚಿತ್ರರಂಗದ ಮೋಹಕ ತಾರೆ ರಮ್ಯಾ ತಮ್ಮ ಅಸಮಾಧಾನ ಹೊರ ಹಾಕಿದ್ದಾರೆ. ಕನ್ನಡಿಗರ ತೆರಿಗ ಹಣವನ್ನು ಸುಖಾ ಸುಮ್ಮನೆ ವೇಸ್ಟ್ ಮಾಡಲಾಗುತ್ತಿದೆ ಎಂದು ತಮ್ಮ ಬೇಸರ ಹೊರಹಾಕಿದ್ದಾರೆ.
ಈ ಕುರಿತು ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಬರೆದುಕೊಂಡಿರುವ ರಮ್ಯಾ, ''ಉತ್ಪನ್ನ ಯಾವುದೇ ಇರಲಿ ಆ ಉತ್ಪನ್ನಗಳನ್ನು ಪ್ರಚಾರ ಮಾಡಲು ಈಗ ಹಲವು ದಾರಿಗಳಿವೆ, ಇದಕ್ಕೆ ಹಳೆಯ ಕಾಲದಲ್ಲಿ ಇದ್ದಂತೆ ಈಗ ಪ್ರಚಾರ ರಾಯಭಾರಿ ಬೇಕಿಲ್ಲ, ಇದರಿಂದ ತೆರಿಗೆ ಪಾವತಿ ಮಾಡುವ ಜನರ ಹಣವನ್ನು ವೇಸ್ಟ್ ಮಾಡಿದಂತೆ ಆಗುತ್ತೆ'' ಎಂದು ಹೇಳಿದ್ಧಾರೆ. ಈ ಮೂಲಕ ತೆರಿಗೆದಾರರ ದುಡ್ಡನ್ನು ಪ್ರಚಾರಕ್ಕೆ ರಾಯಭಾರಿಗೆ ಕೊಡುವುದು ತಪ್ಪು ಎಂದು ಹೇಳಿದ್ದಾರೆ.
''ಇನ್ನು ಈಗ ಕಾಲ ಬದಲಾಗಿದೆ. ಮೊದಲಾದರೆ ಸೆಲೆಬ್ರೇಟಿಗಳನ್ನು ನೋಡಿ ಅನೇಕರು ಕಣ್ಮುಚ್ಚಿ ವಸ್ತುಗಳನ್ನು ಖರೀದಿ ಮಾಡುತ್ತಿದ್ದರು. ಆದರೆ ಈಗ ಉತ್ತಮ ಗುಣಮಟ್ಟದಾದರೆ ಮಾತ್ರ ಜನ ಖರೀದಿಸುತ್ತಾರೆ.ಮೈಸೂರು ಸ್ಯಾಂಡಲ್ ಸೋಪ್‌ನ ಗುಣಮಟ್ಟ ಅತ್ಯುತ್ತಮವಾಗಿದೆ. ಅದಕ್ಕೆ ದೊಡ್ಡ ಇತಿಹಾಸ ಇದೆ. ಘನತೆ ಮತ್ತು ಜನಪ್ರಿಯತೆ ಎರಡು ಕೂಡ ಮೈಸೂರು ಸ್ಯಾಂಡಲ್ ಸೋಪ್‌ಗೆ ಇದೆ. ಪ್ರತಿಯೊಬ್ಬ ಕನ್ನಡಿಗರು ಕೂಡ ಈ ಮೈಸೂರು ಸ್ಯಾಂಡಲ್ ಸೋಪ್‌ನ ರಾಯಭಾರಿ'' ಎಂದು ರಮ್ಯಾ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.
ಇದೇ ಸಮಯದಲ್ಲಿ ಆಪಲ್ ಫೋನ್ ಉದಾಹರಣೆಯನ್ನು ಕೂಡ ನೀಡಿರುವ ರಮ್ಯಾ, ''ಆಪಲ್ ಫೋನ್‌ಗೆ ಯಾರು ದೊಡ್ಡ ಬ್ರ್ಯಾಂಡ್ ಅಂಬಾಸಿಡರ್ ಇಲ್ಲ, ಆದರೂ ಕೂಡ ಆಪಲ್ ಮಾರುಕಟ್ಟೆಯಲ್ಲಿದೆ, ಜನಪ್ರಿಯವಾಗಿದೆ. ಉತ್ಪನ್ನಗಳಿಗೆ ಬ್ರ್ಯಾಂಡ್ ಅಂಬಾಸಿಡರ್ ಆಯ್ಕೆ ಮಾಡಿ ಆ ಮೂಲಕ ಮಾರುಕಟ್ಟೆಯಲ್ಲಿ ತಮ್ಮ ಉತ್ಪನ್ನಗಳ ಜನಪ್ರಿಯತೆ ಹೆಚ್ಚಿಸಿಕೊಳ್ಳುವ ಕಾಲ ಇದಲ್ಲ ಎಂದು ರಮ್ಯಾ ಕಿಡಿ ಕಾರಿದ್ದಾರೆ.



Click it and Unblock the Notifications











