ಕಿಕಿ ಡ್ಯಾನ್ಸ್ ಮಾಡಿ ವೀಲ್ ಚೇರ್ ಮೇಲೆ ಓಡಾಡ್ಬೇಡಿ: ಕಾಜಲ್ ಮನವಿ
ಕಳೆದ ಒಂದು ತಿಂಗಳಿನಿಂದಲೂ 'ಕಿಕಿ' ಕ್ರೇಝ್ ಜೋರಾಗಿದೆ. ಅಪಾಯಕಾರಿ 'ಕಿಕಿ' ಚಾಲೆಂಜ್ ನ ಸ್ವೀಕರಿಸಿ, ಅನಾಹುತಕ್ಕೆ ಎಡೆಮಾಡಿಕೊಡಬೇಡಿ ಅಂತ ಪೊಲೀಸರು ಎಚ್ಚರಿಕೆಯ ಜೊತೆಗೆ ಮನವಿ ಮಾಡುತ್ತಲೇ ಇದ್ದಾರೆ.
ಹೀಗಿದ್ದರೂ, ಕೆಲ ತಾರೆಯರೇ 'ಕಿಕಿ' ಚಾಲೆಂಜ್ ನ ಸ್ವೀಕರಿಸಿದ್ದು ನಿಮಗೆ ಗೊತ್ತಿರಬಹುದು. ನಟಿಯರಾದ ಅದಾ ಶರ್ಮಾ, ರೆಜಿನಾ, ನೋರಾ ಫತೇಹಿ, 'ಬಿಗ್ ಬಾಸ್' ಬೆಡಗಿ ನಿವೇದಿತಾ ಗೌಡ, ಪ್ರಣೀತಾ ಸುಭಾಷ್ ಕಾರಿನಿಂದ ಕೆಳಗೆ ಇಳಿದು 'ಕಿಕಿ ಡು ಯು ಲವ್ ಮಿ' ಹಾಡಿಗೆ ಸ್ಟೆಪ್ ಹಾಕಿದ್ದರು.
ಇದೀಗ 'ಕಿಕಿ ಡು ಯು ಲವ್ ಮಿ' ಹಾಡಿಗೆ ಡ್ಯಾನ್ಸ್ ಮಾಡಿರುವವರು ಟಾಲಿವುಡ್ ಬೆಡಗಿ ಕಾಜಲ್ ಅಗರ್ವಾಲ್ ಮತ್ತು ನಟ ಬೆಲ್ಲಂಕೊಂಡ ಶ್ರೀನಿವಾಸ್.

ಹಾಗ್ನೋಡಿದ್ರೆ, ಕಾರಿನಿಂದ ಇಳಿದು ಇವರಿಬ್ಬರು 'ಕಿಕಿ ಡ್ಯಾನ್ಸ್' ಮಾಡಿಲ್ಲ. ಬದಲಾಗಿ, ವೀಲ್ ಚೇರ್ ಮೇಲೆ ಕುಳಿತು 'ಕಿಕಿ ಡ್ಯಾನ್ಸ್'ನಿಂದ ಆಗುವ ಅಪಾಯದ ಕುರಿತು ಕಾಜಲ್ ಅಗರ್ವಾಲ್ ಹಾಗೂ ಬೆಲ್ಲಂಕೊಂಡ ಶ್ರೀನಿವಾಸ್ ಜನರಿಗೆ ಅರಿವು ಮೂಡಿಸಿದ್ದಾರೆ.
''ಕಿಕಿ' ಡ್ಯಾನ್ಸ್ ಮಾಡಿ, ವೀಲ್ ಚೇರ್ ಮೇಲೆ ಓಡಾಡುವ ಹಾಗೆ ಮಾಡಿಕೊಳ್ಳಬೇಡಿ'' ಎಂಬ ಸಂದೇಶವನ್ನ ಕಾಜಲ್ ಅಗರ್ವಾಲ್ ಹಾಗೂ ಬೆಲ್ಲಂಕೊಂಡ ಶ್ರೀನಿವಾಸ್ ತಮ್ಮ ವಿಡಿಯೋ ಮೂಲಕ ನೀಡಿದ್ದಾರೆ.
ಏನಿದು ಕಿಕಿ ಚಾಲೆಂಜ್:
ಖ್ಯಾತ ಸಂಗೀತಗಾರ ಡ್ರೇಕ್ ರವರ ಹೊಸ ಹಾಡು 'ಕಿಕಿ ಡು ಯು ಲವ್ ಮಿ..' (ಇನ್ ಮೈ ಫೀಲಿಂಗ್ಸ್) ತಿಂಗಳ ಹಿಂದೆ ಬಿಡುಗಡೆ ಆಗಿ, ಬಹು ಜನಪ್ರಿಯತೆ ಪಡೆದಿದೆ. ಅಸಲಿಗೆ, 'ಕಿಕಿ ಚಾಲೆಂಜ್' ಶುರುವಾಗಿದ್ದು ಕೂಡ ಒಂದು ತಿಂಗಳ ಹಿಂದೆಯೇ. 'ಕಿಕಿ ಡು ಯು ಲವ್ ಮಿ..' ಹಾಡಿಗೆ ಕಾಮಿಡಿಯನ್ ಶಿಗ್ಗಿ ನಡು ಬೀದಿಯಲ್ಲಿ ಡ್ಯಾನ್ಸ್ ಮಾಡಿ, ವಿಡಿಯೋನ ಇನ್ಸ್ಟಾಗ್ರಾಮ್ ನಲ್ಲಿ ಶೇರ್ ಮಾಡಿದ್ದರು. ಇಲ್ಲಿಂದಲೇ, 'ಕಿಕಿ ಚಾಲೆಂಜ್'/'ಇನ್ ಮೈ ಫೀಲಿಂಗ್ಸ್' ಚಾಲೆಂಜ್ ಶುರುವಾಗಿದ್ದು.! ಕಾಡ್ಗಿಚ್ಚಿನಂತೆ ಸೋಷಿಯಲ್ ಮೀಡಿಯಾದಲ್ಲಿ 'ಕಿಕಿ ಚಾಲೆಂಜ್' ಹಬ್ಬಿತು. ಚಲಿಸುತ್ತಿರುವ ಕಾರಿನಿಂದ ಇಳಿದು, ಕಾರಿನ ಸ್ಪೀಡ್ ಗೆ ತಕ್ಕ ಹಾಗೆ 'ಕಿಕಿ ಡು ಯು ಲವ್ ಮಿ...' ಹಾಡಿಗೆ ಡ್ಯಾನ್ಸ್ ಮಾಡಿ ನಂತರ ಮತ್ತೆ ಕಾರಿನೊಳಗೆ ಜಿಗಿಯುವ ಅಪಾಯಕಾರಿ ಸವಾಲು ವೈರಲ್ ಆಗಲು ಆರಂಭವಾಯ್ತು. 'ಕಿಕಿ ಚಾಲೆಂಜ್'ನ ನಡು ರಸ್ತೆಯಲ್ಲಿ ಸ್ವೀಕರಿಸಿ ಎಷ್ಟೋ ಮಂದಿ ಅಪಘಾತಕ್ಕೀಡಾಗಿದ್ದಾರೆ. ಕೈ-ಕಾಲು ಮುರಿದುಕೊಂಡಿದ್ದಾರೆ, ತಲೆಗೆ ಪೆಟ್ಟು ಮಾಡಿಕೊಂಡಿದ್ದಾರೆ. ದಿನದಿಂದ ದಿನಕ್ಕೆ 'ಕಿಕಿ ಚಾಲೆಂಜ್'ನಿಂದ ಅವಾಂತರಗಳು ಹೆಚ್ಚಾದಂತೆ ಕೆಲವೆಡೆ ಬ್ಯಾನ್ ಮಾಡಲಾಗಿದೆ.


Click it and Unblock the Notifications











