RRR ಇವೆಂಟ್‌ನಲ್ಲಿ ಬಾಟಲಿ, ಚಪ್ಪಲಿ ಎಸೆದಾಟ, ಪೊಲೀಸರ ಲಾಠಿ ಪ್ರಹಾರಕ್ಕೆ ಕೆಲವರಿಗೆ ಗಾಯ
RRR ಸಿನಿಮಾದ ಪ್ರೀ ರಿಲೀಸ್ ಕಾರ್ಯಕ್ರಮ ಚಿಕ್ಕಬಳ್ಳಾಪುರದಲ್ಲಿ ನಿನ್ನೆ (ಮಾರ್ಚ್ 19) ರಾತ್ರಿ ಅದ್ಧೂರಿಯಾಗಿ ನಡೆದಿದೆ. ಕಾರ್ಯಕ್ರಮ ಅದ್ಧೂರಿಯಾಗಿಯೇನೋ ಇತ್ತು ಆದರೆ ಅತಿಯಾದ ಜನ ಪ್ರವಾಹದಿಂದಾಗಿ ವ್ಯವಸ್ಥಿತೆಯನ್ನು ಕಳೆದುಕೊಂಡು ಸೂತ್ರ ಹರಿದ ಗಾಳಿಪಟದಂತೆ ಲಾಗಾ ಹೊಡೆಯಿತು.
ದೊಡ್ಡ ಬಯಲು ಪ್ರದೇಶದಲ್ಲಿಯೇ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಭಾರಿ ಸಂಖ್ಯೆಯಲ್ಲಿ ಅಭಿಮಾನಿಗಳು ಸಮಯಕ್ಕೆ ಮುಂಚಿತವಾಗಿಯೇ ಆಗಮಿಸಿದರು. ನಾಲ್ಕು ಗಂಟೆಯಿಂದಲೇ ವೇದಿಕೆ ಮುಂಭಾಗ ಜನ ಸೇರಲು ಆರಂಭಿಸಿದರು. ಕಾರ್ಯಕ್ರಮ ನಿಗದಿಯಾಗಿದ್ದಿದ್ದು ಸಂಜೆ ಆರು ಗಂಟೆಗೆ. ಆದರೆ ಆರಂಭವಾಗಿದ್ದು ಬಹಳ ತಡವಾಗಿ.
ಆ ಬಿಸಿಯಲ್ಲಿ, ಧೂಳಿನಲ್ಲಿ ಕಾದು ಕಾದು ಸುಸ್ತಾಗಿದ್ದ ಪ್ರೇಕ್ಷಕರು ಬೇಸತ್ತು ಹೋಗಿದ್ದರು. ನಿರೂಪಕಿಯರಾದ ಅನುಶ್ರೀ ಹಾಗೂ ಸುಮಾ ವೇದಿಕೆ ಮೇಲೆ ಆಗಮಿಸುವ ವೇಳೆಗೆ ಸರಿಯಾಗಿ ನೀರು ತುಂಬಿದ್ದ ಬಾಟಲಿಗಳನ್ನು ವೇದಿಕೆಗೆ ಎಸೆಯಲು ಆರಂಭಿಸಿದರು ಅಭಿಮಾನಿಗಳು.

ಹಲವರು ವೇದಿಕೆ ಮೇಲಕ್ಕೆ, ವಿಶೇಷವಾಗಿ ಬೌನ್ಸರ್‌ಗಳನ್ನು ಗುರಿಯಾಗಿಸಿಕೊಂಡು ನೀರಿನ ಬಾಟಲಿಗಳನ್ನು ಎಸೆಯಲು ಆರಂಭಿಸಿದರು. ಬಳಿಕ ಚೇರ್‌ಗಳ ಮೇಲೆ ಹಾಕಲಾಗಿದ್ದ ಬಟ್ಟೆಗಳನ್ನು ಸುತ್ತಿ ಅವನ್ನು ಎಸೆಯಲು ಆರಂಭಿಸಿದರು.
ಬಳಿಕ ಕಾರ್ಯಕ್ರಮ ಆರಂಭವಾಗಿ ಡ್ಯಾನ್ಸ್ ಕಾರ್ಯಕ್ರಮಗಳು ನಡೆಯುವ ವೇಳೆಗೆ ವೇದಿಕೆ ಎಡ ಬದಿಯಲ್ಲಿ ಭಾರಿ ಸಂಖ್ಯೆಯ ಜನ ಸೇರಿಕೊಂಡಿದ್ದರು. ಅವರಲ್ಲಿ ಕೆಲವು ಕಿಡಿಗೇಡಿಗಳು ಚಪ್ಪಲಿಗಳನ್ನು ತೂರಿದರು. ಹೀಗೆ ತೂರಿದ ಚಪ್ಪಲಿಗಳು ಪೊಲೀಸರ ಬಳಿ ಬಿದ್ದ ಕಾರಣ ಅವರು ಒಮ್ಮೆಲೆ ಲಾಠಿ ಮುನ್ನುಗ್ಗಿದರು. ಪೊಲೀಸರ ಲಾಠಿಗೆ ಹೆದರಿ ನೂರಾರು ಮಂದಿ ಹಿಂದಕ್ಕೆ ಓಡಿದರು. ಆಗ ಕಬ್ಬಿಣದ ಗೇಟ್ ಮೇಲೆ ಕುಳಿತಿದ್ದವರು ಕೆಳಗೆ ಬಿದ್ದು ಹಲವರ ಕಾಲುಗಳು ಗೇಟ್ ಕೆಳಗೆ ಸಿಲುಕಿಕೊಂಡು ತೀವ್ರ ಬಾಧೆ ಅನುಭವಿಸಿದರು. ಕೆಲವರಿಗೆ ಗಾಯಗಳಾಗಿ ರಕ್ತ ಸುರಿಯಲಾರಂಭಿಸಿತು. ಲಾಠಿ ಬೀಸಿದ ಪೊಲೀಸರ ಮೇಲೆ ಕೆಲವು ಸಾರ್ವಜನಿಕರು ಜಗಳ ಸಹ ಮಾಡಿದರು.
ವೇದಿಕೆ ಸುತ್ತ-ಮುತ್ತ ಜನ ಬಹಳ ಹೆಚ್ಚಾದ ಕಾರಣ ಪೊಲೀಸರು, ಬೌನ್ಸರ್‌ಗಳು ಆಗಾಗ್ಗೆ ಅಭಿಮಾನಿಗಳಿಗೆ ಲಾಠಿ ರುಚಿ ತೋರಿದರು. ಇವೆಂಟ್ ನಡೆಯುವ ಸ್ಥಳಕ್ಕೆ ಬರಲಾಗದೆ ಹೊರಗೆ ನಿಂತವರು ಸಹ ಕೆಲವರು ಹೊರಗಿನಿಂದ ಒಳಕ್ಕೆ ಜನರ ಮೇಲೆ ಬಾಟಲಿಗಳನ್ನು ಬೀಸಿದ ಘಟನೆಗಳೂ ನಡೆದವು. ಒಟ್ಟಿನಲ್ಲಿ ಹಲವು ಸಮಸ್ಯೆಗಳನ್ನು ಅನುಭವಿಸಿಕೊಂಡೆ ತಮ್ಮ ಮೆಚ್ಚಿನ ನಟರನ್ನು ಕಂಡು ಖುಷಿಪಟ್ಟರು ಅಭಿಮಾನಿಗಳು.


Click it and Unblock the Notifications











