'ನಾಗರಹಾವು' ಸಿನಿಮಾವನ್ನು ಕಲ್ಪನಾ ರಿಜೆಕ್ಟ್ ಮಾಡಿದ್ದರು!
ಒಂದು ಸಿನಿಮಾದಲ್ಲಿ ಹೇಗೆ ಕುತೂಹಲಕಾರಿ ಕಥೆ ಇರುತ್ತದೆಯೋ ಅದೇ ಈ ರೀತಿ ಆ ಸಿನಿಮಾದ ಹಿಂದೆ ಅನೇಕ ಇಂಟರೆಸ್ಟಿಂಗ್ ಘಟನೆಗಳು ನಡೆದಿರುತ್ತದೆ. 'ನಾಗರಹಾವು' ರೀತಿಯ ಮಹಾ ಸಿನಿಮಾದ ಹಿಂದೆ ಅದೆಷ್ಟೋ ಗೊತ್ತಿಲ್ಲದ ಕಥೆಗಳು ಇವೆ.
'ನಾಗರಹಾವು' ಆ ಕಾಲಕ್ಕೂ ಈ ಕಾಲಕ್ಕೂ ಎಲ್ಲ ಕಾಲಕ್ಕೂ ಸಲ್ಲುವ ಸಿನಿಮಾ. ಇಂತಹ ಸಿನಿಮಾದ ಭಾಗ ಆಗಬೇಕು ಎನ್ನುವುದು ಅದೆಷ್ಟೋ ನಟ ನಟಿಯರ ಕನಸಾಗಿತ್ತು. ಆದರೆ, ನಟಿ ಕಲ್ಪನಾ ಈ ಚಿತ್ರವನ್ನು ಒಲ್ಲೆ ಎಂದಿದ್ದರಂತೆ. ಹೌದು, 'ನಾಗರಹಾವು' ಸಿನಿಮಾದಲ್ಲಿ ನಟಿ ಆರತಿ, ಶುಭಾ, ಲೀಲಾವತಿ, ಜಯಂತಿ ನಟಿಸಿದ್ದಾರೆ. ಆದರೆ ವಾಸ್ತವವಾಗಿ ಈ ಚಿತ್ರದಲ್ಲಿ ಕಲ್ಪನಾ ನಟಿಸಬೇಕಿತ್ತು.
ಅಂದಹಾಗೆ, 'ನಾಗರಹಾವು' ಸಿನಿಮಾದ ಯಾವ ಪಾತ್ರದಲ್ಲಿ ಕಲ್ಪನಾ ನಟಿಸಬೇಕಿತ್ತು ಹಾಗೂ ಯಾಕೆ ಅವರು ಈ ಸಿನಿಮಾವನ್ನು ರಿಜೆಕ್ಟ್ ಮಾಡಿದರು ಎಂಬ ವಿವರ ಮುಂದಿದೆ ಓದಿ...

ಕಲ್ಪನಾಗೆ ಆಫರ್ ಹೋಗಿತ್ತು
'ನಾಗರಹಾವು' ಚಿತ್ರದ ಹಾಡಿನಲ್ಲಿ ನಟಿಸುವುದಕ್ಕೆ ಮೊದಲು ಪುಟ್ಟಣ್ಣ ಕಣಗಾಲ್ ನಟಿ ಕಲ್ಪನಾ ಅವರಿಗೆ ಆಫರ್ ನೀಡಿದ್ದರು. ಆದರೆ, ಸಣ್ಣ ಪಾತ್ರ ಎಂಬ ಕಾರಣಕ್ಕೆ 'ಯಾರು ಇಂತಹ ಸಣ್ಣ ರೋಲ್ ಮಾಡ್ತಾರೆ..?' ಎಂದು ಹೇಳಿ ಚಿತ್ರದಲ್ಲಿ ನಟಿಸೋಲ್ಲ ಎಂದು ಬಂದ ಅವಕಾಶವನ್ನು ಬಿಟ್ಟಿದ್ದರು.

ಯಾವ ಪಾತ್ರ ?
ಚಿತ್ರದ 'ಕನ್ನಡ ನಾಡಿನ..' ಹಾಡಿನಲ್ಲಿ ಬರು ಓಬವ್ವನ ಪಾತ್ರದಲ್ಲಿ ಕಲ್ಪನಾ ಅವರು ಕಾಣಿಸಿಕೊಳ್ಳಬೇಕಿತ್ತು. ಚಿತ್ರದಲ್ಲಿ ಬರೀ ಒಂದೇ ಹಾಡಿನಲ್ಲಿ ಈ ಪಾತ್ರ ಸಣ್ಣದಾಗಿ ಬಂದು ಹೋಗುತ್ತದೆ ಎಂಬ ಕಾರಣಕ್ಕೆ ಕಲ್ಪನಾ ಆ ಚಿತ್ರ ಬಿಟ್ಟರು. ನಂತರ ಈ ಪಾತ್ರ ಜಯಂತಿ ಅವರ ಬಳಿಗೆ ಹೋಯ್ತು. ಜಯಂತಿ ಈ ಪಾತ್ರವನ್ನು ಪ್ರೀತಿಯಿಂದ ಸ್ವೀಕರಿಸಿದರು.

ಓಬವ್ವನ ಪಾತ್ರವನ್ನು ನೆನೆದ ಜಯಂತಿ
''ನಾಗರಹಾವು ಸಿನಿಮಾ ಮಾಡಿ 45 ವರ್ಷ ಆಯ್ತು. ಅಷ್ಟು ವರ್ಷ ಆಗಿದ್ದರು ಈಗ ನೋಡುತ್ತಿದ್ದರೆ ಮೈ ಜುಮ್ ಎನಿಸುತ್ತದೆ. ಹಾಡು, ಡೈಲಾಗ್ ಗಳಲ್ಲಿ ಸೌಂಡ್ ತುಂಬ ಚೆನ್ನಾಗಿದೆ. ನನ್ನ ಹಾಡು ಕೂಡ ತುಂಬ ಚೆನ್ನಾಗಿದೆ. ಓಬವ್ವನ ಹಾಡನ್ನು ಪುಟ್ಟಣ್ಣ ಚಾಲೆಂಜ್ ನಿಂದ ಮಾಡಿದ್ದರು. ನಮ್ಮ ಮನೆಗೆ ಪುಟ್ಟಣ್ಣ ಹಾಗೂ ವೀರಸ್ವಾಮಿ ಅಣ್ಣ ಬಂದು ಚಿತ್ರದ ಹಾಡಿನಲ್ಲಿ ನಟಿಸುತ್ತಿರಾ ಎಂದು ಹೇಳಿದರು. ನಾನು ಒಪ್ಪಿಕೊಂಡೆ.'' ಎಂದು ತಮ್ಮ ಪಾತ್ರವನ್ನು ನೆನಪು ಮಾಡಿಕೊಂಡರು ಜಯಂತಿ.

ಮತ್ತೆ ಈಶ್ವರಿ ಪ್ರೊಡಕ್ಷನ್ಸ್ ನಿಂದ ಶೀಲ್ಡ್ ತೆಗೆದುಕೊಳ್ಳಬೇಕು
''7.1 ಸೌಂಡ್ ನಲ್ಲಿ ಈಗ ಈ ಹಾಡು ಕೇಳಿದರೆ ನಾನೇನಾ ಈ ಹಾಡಿನಲ್ಲಿ ನಟಿಸಿರುವುದು ಎನಿಸಿತ್ತದೆ. ಅಷ್ಟೊಂದು ಚೆನ್ನಾಗಿ ಹಾಡು ಬಂದಿದೆ. ಈ ರೀತಿಯ ಸಿನಿಮಾಗಳು ಮತ್ತೆ ಬಂದಿರುವುದರಿಂದ ನೂರು ದಿನ ಓಡಬೇಕು. ಮತ್ತೆ ನಾವು ಈಶ್ವರಿ ಪ್ರೊಡಕ್ಷನ್ಸ್ ನಿಂದ ಶೀಲ್ಡ್ ತೆಗೆದುಕೊಳ್ಳಬೇಕು ಎನ್ನುವ ಆಸೆ ಇದೆ. ಎಲ್ಲರೂ ನೋಡುವಂತಹ ಸಿನಿಮಾ. ಹಾಗಾಗಿ ತಾವೆಲ್ಲರು ಈ ಸಿನಿಮಾವನ್ನು ನೋಡಿ ಸಕ್ಸಸ್ ಮಾಡಿ. ಎಂದು ಚಿತ್ರಕ್ಕೆ ಜಯಂತಿ ಶುಭ ಕೋರಿದ್ದರು.

ಹೊರ ರಾಜ್ಯದಲ್ಲಿಯೂ ಪ್ರದರ್ಶನ
ಕರುನಾಡಿನಲ್ಲಿ ಬಿಡುಗಡೆಯಾಗಿ ಅಬ್ಬರಿಸುತ್ತಿರುವ 'ನಾಗರಹಾವು' ಸಿನಿಮಾ ಹೊರ ರಾಜ್ಯದಲ್ಲಿಯೂ ಬಿಡುಗಡೆಯಾಗುತ್ತಿದೆ. ಇದೇ ವಾರದಲ್ಲಿ ಅಹಮದಾಬಾದ್, ಹೈದ್ರಾಬಾದ್ ಹಾಗೂ ಮತ್ತಷ್ಟು ರಾಜ್ಯಗಳ ಚಿತ್ರಮಂದಿರದಲ್ಲಿ ಸಿನಿಮಾ ರಿಲೀಸ್ ಆಗಲಿದೆ. ಸ್ಯಾಂಡಲ್ ವುಡ್ ಟಾಕೀಸ್ ಅಡಿಯಲ್ಲಿ 'ನಾಗರಹಾವು' ಸಿನಿಮಾ ಹೊರ ರಾಜ್ಯ ಹಾಗೂ ವಿದೇಶದಲ್ಲಿಯೂ ಆದಷ್ಟು ಬೇಗ ಪ್ರೇಕ್ಷಕರ ಮುಂದೆ ಬರಲಿದೆ. ಈ ವಿಚಾರವನ್ನು 'ನಾಗರಹಾವು' ಸಿನಿಮಾ ವಿತರಕ ಕಾರ್ತಿಕ್ ಗೌಡ ಸ್ಪಷ್ಟ ಪಡಿಸಿದ್ದಾರೆ.


Click it and Unblock the Notifications











