ಸದ್ದಿಲ್ಲದೇ 'KGF -3' ಶೂಟಿಂಗ್, ಯಾರೆಲ್ಲಾ ಭಾಗಿ ಆಗಿದ್ರು; ಮಾಹಿತಿ ನೀಡಿದ ನಟಿ
ಪ್ರಶಾಂತ್ ನೀಲ್ ತೆಲುಗು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಇತ್ತ ಯಶ್ 'ಟಾಕ್ಸಿಕ್' ಚಿತ್ರೀಕರಣದಲ್ಲಿ ಭಾಗಿ ಆಗಿದ್ದಾರೆ. ಶೀಘ್ರದಲ್ಲೇ ರಾವಣನ ಅವತಾರ ತಾಳಲಿದ್ದಾರೆ. ಇದೆಲ್ಲದರ ನಡುವೆ 'KGF' ಚಾಪ್ಟರ್- 3 ಯಾವಾಗ ಎಂದು ಎಲ್ಲರೂ ಕೇಳುವಂತಾಗಿದೆ. ಈಗಾಗಲೇ ಚಿತ್ರತಂಡ ಸರಣಿಯನ್ನು ಮುಂದುವರೆಸುವುದಾಗಿ ಹೇಳಿದೆ.
ಇತ್ತೀಚೆಗೆ ಸ್ವತಃ ಯಶ್ ಕೂಡ 'KGF-3' ಬಗ್ಗೆ ಮಾತನಾಡಿದ್ದರು. 'ಟಾಕ್ಸಿಕ್' ಹಾಗೂ 'ರಾಮಾಯಣ' ಚಿತ್ರಗಳ ಬಳಿಕ ಚಾಪ್ಟರ್-3 ಎಂದಿದ್ದರು. ಬರೀ ಸಿನಿರಸಿಕರು ಮಾತ್ರವಲ್ಲ ಸ್ಟಾರ್ ನಟ, ನಟಿಯರು, ಟಾಪ್ ಫಿಲ್ಮ್ ಮೇಕರ್ಸ್ ಕೂಡ ರಾಕಿ ಭಾಯ್ ಕಥೆಯನ್ನು ಮತ್ತೆ ನೋಡಲು ಕಾಯುತ್ತಿದ್ದಾರೆ. ಈ ವಿಚಾರವನ್ನು ರಾಕಿಂಗ್ ಸ್ಟಾರ್ ರಿವೀಲ್ ಮಾಡಿದ್ದಾರೆ. ಅಷ್ಟರಮಟ್ಟಿಗೆ ಸಿನಿಮಾ ಕ್ರೇಜ್ ಹುಟ್ಟು ಹಾಕಿದೆ.

ಎರಡು ಭಾಗಗಳಾಗಿ ಬಂದ 'KGF' ಬರೆದ ದಾಖಲೆಗಳು ಒಂದೆರಡಲ್ಲ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸಿನಿಮಾ ಬಾಕ್ಸಾಫೀಸ್ ಶೇಕ್ ಮಾಡಿತ್ತು. ಕೋಟಿ ಕೋಟಿ ಕೊಳ್ಳೆ ಹೊಡೆದಿತ್ತು. ಮೊದಲ ಭಾಗ 250 ಕೋಟಿ ರೂ. ಕಲೆಕ್ಷನ್ ಮಾಡಿದರೆ ಎರಡನೇ ಭಾಗ 1000 ಕೋಟಿ ರೂ. ಕ್ಲಬ್ ಸೇರಿ ದಾಖಲೆ ಬರೆದಿತ್ತು. ಹಿಂದಿ ಬೆಲ್ಟ್‌ನಲ್ಲಿ ಕೂಡ ಸಿನಿಮಾ ಬಾಕ್ಸಾಫೀಸ್ ಶೇಕ್ ಮಾಡಿತ್ತು.
ಕ್ಲೈಮ್ಯಾಕ್ಸ್‌ನಲ್ಲಿ ರಾಕಿಭಾಯ್ ಸತ್ತು ಹೋದ ಎನ್ನುವಂತೆ ತೋರಿಸಲಾಗಿತ್ತು. ಆದರೆ ಎಂಡ್ ಕ್ರೆಡಿಟ್ ಕಾರ್ಡ್‌ನಲ್ಲಿ ಸಣ್ಣ ಝಲಕ್‌ನಲ್ಲಿ ಚಾಪ್ಟರ್ -3 ಬಗ್ಗೆ ಸುಳಿವು ಕೊಡಲಾಗಿತ್ತು. ಬಳಿಕ ವಿಜಯ್ ಕಿರಗಂದೂರ್, ನೀಲ್, ಯಶ್ ಎಲ್ಲರೂ ಕಥೆಯನ್ನು ಮುಂದುವರೆಸುವ ಬಗ್ಗೆ ಮಾತನಾಡಿದ್ದಾರೆ. ಆದರೆ ಯಾವಾಗ ಸಿನಿಮಾ ಶುರುವಾಗುತ್ತದೆ ಎನ್ನುವುದು ಮಾತ್ರ ಗೊತ್ತಿಲ್ಲ. ಯಾವಾಗ ಬಂದ್ರೂ ಪ್ರೇಕ್ಷಕರು ನೋಡಲು ಸಿದ್ಧರಿದ್ದಾರೆ.
ಅಂದಹಾಗೆ ಸದ್ದಿಲ್ಲದೇ 'KGF' ಚಾಪ್ಟರ್- 3 ಒಂದಷ್ಟು ದೃಶ್ಯಗಳನ್ನು ಪ್ರಶಾಂತ್ ನೀಲ್ ಈಗಾಗಲೇ ಸೆರೆ ಹಿಡಿದಿದ್ದಾರೆ. ಹೌದು ಈ ಹಿಂದೆ ಚಾಪ್ಟರ್-1 ಚಿತ್ರೀಕರಣದ ಸಮಯದಲ್ಲೇ ಚಾಪ್ಟರ್-2ಗೆ ಸಂಬಂಧಿಸಿದ ಕೆಲ ಸನ್ನಿವೇಶ ಚಿತ್ರೀಕರಣ ನಡೆದಿತ್ತು. 'ಸಲಾರ್- 2' ವಿಚಾರದಲ್ಲಿ ಕೂಡ ಇದೇ ರೀತಿ ನಡೆದಿದೆ. ಇದೀಗ 'KGF'-3 ಚಿತ್ರದಲ್ಲಿ ಕೆಲ ಸನ್ನಿವೇಶಗಳ ಚಿತ್ರೀಕರಣ ಆಗಿರುವ ಬಗ್ಗೆ ನಟಿ ಮಾಳವಿಕಾ ಅವಿನಾಶ್ ಮಾತನಾಡಿದ್ದಾರೆ.
ತಮಿಳು ಸಂದರ್ಶನವೊಂದರಲ್ಲಿ ಮಾಳವಿಕಾ ಅವಿನಾಶ್ ಈ ಬಗ್ಗೆ ಮಾತನಾಡಿದ್ದಾರೆ. ಇಂಡಿಯಾ ಗ್ಲಿಟ್ಸ್ ತಮಿಳು ಯೂಟ್ಯೂಬ್ ಸಂದರ್ಶನದಲ್ಲಿ ಮಾಳವಿಕಾ ತಮ್ಮ ಸಿನಿಮಾ ಹಾಗೂ ವೈಯಕ್ತಿಕ ಜೀವನದ ಬಗ್ಗೆ ಇಂಟ್ರೆಸ್ಟಿಂಗ್ ಸಂಗತಿಗಳನ್ನು ಬಿಚ್ಚಿಟ್ಟಿದ್ದಾರೆ. ಈ ವೇಳೆ 'KGF'-3 ಕುರಿತ ಪ್ರಶ್ನೆ ಎದುರಾಗಿದೆ. ಚಿತ್ರದಲ್ಲಿ ತಮಿಳು ನಟ ಅಜಿತ್ ನಟಿಸುತ್ತಾರಾ? ಎಂದು ಕೇಳಲಾಗಿದೆ.
'KGF'-1 ಕಥೆ ಹೇಳದೆಯೇ ನನ್ನನ್ನು ನಟಿಸುವಂತೆ ಮಾಡಿದರು. ಆದರೆ ಪಾರ್ಟ್-2 ಕಥೆ ಹೇಳದೇ ನಾನು ನಟಿಸಲ್ಲ ಎಂದು ಪಟ್ಟು ಹಿಡಿದೆ. ಬಳಿಕ ಪ್ರಶಾಂತ್ ನೀಲ್ ಕಥೆ ಹೇಳಿದರು ಎಂದು ಮಾಳವಿಕಾ ಅವಿನಾಶ್ ನೆನಪಿಸಿಕೊಂಡಿದ್ದಾರೆ. 'KGF'-3 ಬರುವ ಬಗ್ಗೆ ನನಗೆ ಗೊತ್ತಿಲ್ಲ ಎಂದು ನಕ್ಕಿದ್ದಾರೆ. ಆದರೆ ಪಾರ್ಟ್-3ಗಾಗಿ ನಾನು ಕೆಲ ಸನ್ನಿವೇಶಗಳಲ್ಲಿ ನಟಿಸಿದ್ದೇನೆ ಎಂದು ಮಾಳವಿಕಾ ಹೇಳಿದ್ದಾರೆ.
ಕೋವಿಡ್ ಸಮಯದಲ್ಲಿ ಚಾಪ್ಟರ್-2 ಚಿತ್ರೀಕರಣ ನಡೆಯಿತು. ಒಂದು ದಿನ ಬಹಳ ಕಷ್ಟಪಟ್ಟು ಆ ಲೈಬ್ರರಿ ಸೆಟ್ ಹಾಕಿದ್ದರು. ಚಾಪ್ಟರ್-2 ಶೂಟಿಂಗ್ ಮುಗೀತು. ಮತ್ತೆ ಚಿತ್ರೀಕರಣಕ್ಕೆ ಬರಲು ಹೇಳಿದರು. ಹೋಗಿದ್ದೆ. ಚಾಪ್ಟರ್-3ಗೆ ಲೀಡ್ ಕೊಡುವ ಸನ್ನಿವೇಶಗಳನ್ನು ಚಿತ್ರೀಕರಿಸಿದರು. ನನ್ನೊಟ್ಟಿಗೆ ಪ್ರಕಾಶ್ ರಾಜ್ ಸಹ ಇದ್ದರು. ಒಂದು ದಿನ ಚಿತ್ರೀಕರಣ ನಡೀತು ಎಂದು ಮಾಳವಿಕಾ ವಿವರಿಸಿದ್ದಾರೆ.
ಇನ್ನು ಅಜಿತ್ ಚಿತ್ರದಲ್ಲಿ ನಟಿಸೋ ಬಗ್ಗೆ ನನಗೆ ಗೊತ್ತಿಲ್ಲ. ಯಶ್ ನಂಬರ್, ಅಡ್ರೆಸ್ ಕೊಡ್ತೀನಿ ಅವರನ್ನೇ ಕೇಳಿ. ಅಥವಾ ನನಗೆ ಏನಾದರೂ ಅಜಿತ್ ನಟಿಸೋ ಬಗ್ಗೆ ಚಿತ್ರತಂಡ ಹೇಳಿದರೆ ನಾನು ನಿಮಗೆ ಹೇಳ್ತೀನಿ ಎಂದು ಮಾಳವಿಕಾ ಹೇಳಿರುವುದು ವೈರಲ್ ಆಗುತ್ತಿದೆ. ಮೊದಲಿಗೆ 'KGF' ಪ್ಯಾನ್ ಇಂಡಿಯಾ ಮಟ್ಟಕ್ಕೆ ಬರುವುದು ಗೊತ್ತಿರಲಿಲ್ಲ. ಅನಿಲ್ ತದಾನಿ ಶೋ ರೀಲ್, ಟ್ರೈಲರ್ ನೋಡಿ ಮಾಡೋಣ ಎಂದಮೇಲೆ ಪ್ಲ್ಯಾನ್ ಶುರುವಾಯಿತು. ಆಗ ನನ್ನನ್ನು ಕರೆದು ಹಿಂದಿ ವಾಯ್ಸ್ ಓವರ್ ಕೊಡಿಸಿದರು ಎಂದು ಆ ಘಟನೆ ನೆನಪಿಸಿಕೊಂಡಿದ್ದಾರೆ.


Click it and Unblock the Notifications











