ನೆಪೋಟಿಸಂ ಅಂದ್ರೆ ಅಪ್ಪು, ದರ್ಶನ್, ಶಿವಣ್ಣ ಇರ್ತಾ ಇರ್ಲಿಲ್ಲ; ಮಗಳ ಬಗ್ಗೆ ಮಾತನಾಡಿದವರಿಗೆ ಪ್ರೇಮ್ ಟಾಂಗ್!
ಟಗರು ಪಲ್ಯ ಕಳೆದ ಎರಡು ದಿನಗಳಲ್ಲಿ ಭಾರೀ ಚರ್ಚೆಗೆ ಒಳಗಾಗಿರುವಂತಹ ಚಿತ್ರ. ಡಾಲಿ ಧನಂಜಯ್ ಅವರ ಡಾಲಿ ಪಿಕ್ಚರ್ಸ್ ಚಿತ್ರ ನಿರ್ಮಾಣ ಸಂಸ್ಥೆ ಅಡಿಯಲ್ಲಿ ಮೂಡಿ ಬರಲಿರುವ ಮೂರನೇ ಚಿತ್ರವಿದು ಎಂದು ಘೋಷಣೆಯಾದ ಬೆನ್ನಲ್ಲೇ ಸದ್ದು ಮಾಡಿದ ಈ ಚಿತ್ರದಲ್ಲಿ ನಾಯಕನಾಗಿ ಇಕ್ಕಟ್ ಚಿತ್ರ ಹಾಗೂ ಹನಿಮೂನ್ ವೆಬ್ ಸರಣಿ ಖ್ಯಾತಿಯ ನಾಗಭೂಷಣ್ ಲೀಡ್ ಆಗಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಮಾಹಿತಿ ಹೊರಬಿದ್ದಿತ್ತು. ಆದ್ರೆ ಈ ಚಿತ್ರದಲ್ಲಿ ನಾಯಕಿ ಯಾರು ಎಂಬುದನ್ನು ಮಾತ್ರ ಚಿತ್ರತಂಡ ಬಿಟ್ಟುಕೊಟ್ಟಿರಲಿಲ್ಲ.
ಇನ್ನು ನಂತರ ವಿಶೇಷ ಪೋಸ್ಟರ್ ಹಂಚಿಕೊಂಡ ಚಿತ್ರತಂಡ ನೆನಪಿರಲಿ ಪ್ರೇಮ್ ಅವರ ಪುತ್ರಿ ಅಮೃತಾ ಪ್ರೇಮ್ ಟಗರು ಪಲ್ಯ ಚಿತ್ರಕ್ಕೆ ನಾಯಕಿಯಾಗಿದ್ದು ಚಂದನವನಕ್ಕೆ ಪದಾರ್ಪಣೆ ಮಾಡಲಿದ್ದಾರೆ ಎಂಬ ಸುದ್ದಿಯನ್ನು ಬಹಿರಂಗಪಡಿಸಿತ್ತು. ಅಷ್ಟೇ ಅಲ್ಲದೇ ವಿಶೇಷ ಕಾರ್ಯಕ್ರಮವನ್ನೂ ಸಹ ಹಮ್ಮಿಕೊಂಡು ಸುದ್ದಿಗೋಷ್ಠಿ ನಡೆಸಿ ಪ್ರೇಮ್ ಮಗಳು ಅಮೃತಾ ಪ್ರೇಮ್ ಅವರನ್ನು ಲಾಂಚ್ ಮಾಡಲಾಯಿತು.
ಇನ್ನು ಈ ಸುದ್ದಿಗೋಷ್ಠಿಯಲ್ಲಿ ಅಮೃತಾ ಪ್ರೇಮ್ ಸಹ ಮಾತನಾಡಿ ಚಿತ್ರದಲ್ಲಿ ನಟಿಸುವ ಬಗ್ಗೆ ಉತ್ಸುಕಳಾಗಿರುವುದಾಗಿ ಹಾಗೂ ಚಿತ್ರದಲ್ಲಿ ನಟಿಸುವ ಅವಕಾಶ ಹೇಗೆ ಲಭಿಸಿತು ಎಂಬುದನ್ನು ಬಿಚ್ಚಿಟ್ಟರು. ಇದೇ ಸಮಯದಲ್ಲಿ ಮಾತನಾಡಿದ ನೆನಪಿರಲಿ ಪ್ರೇಮ್ ಮಗಳು ಟಗರು ಪಲ್ಯ ಚಿತ್ರಕ್ಕೆ ಆಯ್ಕೆಯಾಗುವುದನ್ನು ನೆಪೋಟಿಸಂ ಎನ್ನುವವರಿಗೆ ಟಾಂಗ್ ನೀಡಿದ್ದಾರೆ.

ನಟಿಯಾಗುವ ಅವಕಾಶ ಸಿಕ್ಕಿದ್ದು ಗಂಧದ ಗುಡಿ ಚಿತ್ರದಿಂದ
ಪುನೀತ್ ರಾಜ್‌ಕುಮಾರ್ ಅಭಿನಯದ ಗಂಧದ ಗುಡಿ ಚಿತ್ರದ ಸೆಲೆಬ್ರಿಟಿ ಪ್ರೀಮಿಯರ್ ಪ್ರದರ್ಶನವನ್ನು ವೀಕ್ಷಿಸಲು ಅಮೃತಾ ಪ್ರೇಮ್ ತಮ್ಮ ತಂದೆಯೊಡನೆ ತೆರಳಿದ್ದರು. ಈ ಸಮಯದಲ್ಲಿ ಅಮೃತಾ ಪ್ರೇಮ್ ಅವರನ್ನು ಕಂಡಿದ್ದ ನಿರ್ದೇಶಕ ಉಮೇಶ್ ಕೆ ಕೃಪ ಈಕೆ ತನ್ನ ಟಗರು ಪಲ್ಯ ಚಿತ್ರಕ್ಕೆ ಸೂಕ್ತವಾದ ನಟಿ ಎಂದು ನಿಶ್ಚಯಿಸಿದ್ದರಂತೆ. ಈ ಮೂಲಕ ನಿರ್ಮಾಪಕ ಡಾಲಿ ಧನಂಜಯ್ ನಟಿಯನ್ನು ಆರಿಸಿ ಎಂದಾಗ ನಿರ್ದೇಶಕ ಉಮೇಶ್ ಕೆ ಕೃಪ ಪ್ರೇಮ್ ಮಗಳ ಬಗ್ಗೆ ಚರ್ಚಿಸಿ ಆಯ್ಕೆ ಮಾಡಿದ್ದರು.

ನೆಪೋಟಿಸಂ ಎಂದವರಿಗೆ ಪ್ರೇಮ್ ಟಾಂಗ್
ಇನ್ನು ಅಮೃತಾ ಪ್ರೇಮ್ ಅವರನ್ನು ನಾಯಕಿಯನ್ನಾಗಿ ಆಯ್ಕೆ ಮಾಡಿದ್ದನ್ನು ನೆಪೋಟಿಸಂ ಎಂದವರ ವಿರುದ್ಧ ನೆನಪಿರಲಿ ಪ್ರೇಮ್ ದನಿ ಎತ್ತಿದ್ದಾರೆ. ನೆಪೋಟಿಸಂ ಎನ್ನುತ್ತಾರಲ್ಲ, ನೆಪೋಟಿಸಂ ಅಂತ ವಿರೋಧಿಸಿದ್ರೆ ಪುನೀತ್ ರಾಜ್‌ಕುಮಾರ್, ಶಿವ ರಾಜ್‌ಕುಮಾರ್ ಹಾಗೂ ದರ್ಶನ್ ರೀತಿಯ ಕಲಾವಿದರೇ ಸಿಗ್ತಾ ಇರಲಿಲ್ಲ, ಯಾವುದೇ ಕಲಾವಿದನಾಗಲಿ ಸ್ವಂತ ಪ್ರತಿಭೆ ಇದ್ರೆ ಮಾತ್ರ ಬೆಳಿತಾರೆ ಎಂದು ಪ್ರೇಮ್ ತಿಳಿಸಿದರು. ಅಷ್ಟೇ ಅಲ್ಲದೇ ಚಿತ್ರರಂಗಕ್ಕೆ ಬಂದು ಇಪ್ಪತ್ತು ವರ್ಷಗಳಾಗಿದ್ದರೂ ಸಹ ತಾನೇನೂ ಶ್ರೀಮಂತನಲ್ಲ, ಇಂದಿಗೂ ತನ್ನ ಮಕ್ಕಳು ಬಿಎಂಟಿಸಿ ಬಸ್‌ನಲ್ಲೇ ಓಡಾಡುತ್ತಾರೆ ಎಂದೂ ಸಹ ಪ್ರೇಮ್ ತಿಳಿಸಿದರು.

ಸ್ಟಾರ್ ನಟರ ಮಕ್ಕಳಿಗೆ ಸಾಮಾನ್ಯರಿಗಿಂತ ಜವಾಬ್ದಾರಿ ಹೆಚ್ಚು
ಇನ್ನೂ ಮುಂದುವರಿದು ಮಾತನಾಡಿದ ಪ್ರೇಮ್ ಸ್ಟಾರ್ ನಟರ ಮಕ್ಕಳಿಗೆ ಸಾಮಾನ್ಯರಿಗಿಂತ ಹೆಚ್ಚು ಜವಾಬ್ದಾರಿ ಇರುತ್ತೆ, ಸ್ಟಾರ್ ಮಕ್ಕಳು ಎಂಬ ಕಾರಣಕ್ಕೆ ರೆಡ್ ಕಾರ್ಪೆಟ್ ಸ್ವಾಗತ ಸಿಗಬಹುದು, ಆದ್ರೆ ಹೆಚ್ಚಿನ ಜವಾಬ್ದಾರಿ ಅವರ ಹೆಗಲ ಮೇಲೆ ಇರುತ್ತೆ. ಇತರರಿಗೆ ಹೊಸಬರು ಏನೋ ಮಾಡಿದ್ದಾರೆ ಬಿಡು ಎನ್ನುತ್ತಾರೆ, ಆದರೆ ಸ್ಟಾರ್ ನಟರ ಮಕ್ಕಳು ಮೊದಲ ಪ್ರಯತ್ನದಲ್ಲೇ ತಮ್ಮನ್ನು ತಾವು ಸಾಬೀತುಪಡಿಸಿಕೊಳ್ಳಲೇಬೇಕು ಎಂದು ತಿಳಿಸಿದರು.


Click it and Unblock the Notifications











