ಹಳೇ ಯಶ್ ಮಿಸ್ಸಿಂಗ್; ಶ್ರೀನಿಧಿ ಶೆಟ್ಟಿ ಬಾಯಲ್ಲಿ ಫ್ಯಾನ್ಸ್ ಮನದ ಮಾತು!
ರಾಕಿಂಗ್ ಸ್ಟಾರ್ ಯಶ್ ಈಗ ಪ್ಯಾನ್ ಇಂಡಿಯಾ ಸ್ಟಾರ್ ಪಟ್ಟಕ್ಕೇರಿದ್ದಾರೆ. 'KGF' ರಾಕಿಭಾಯ್ ಆಗಿ ಬಹಳ ಎತ್ತರಕ್ಕೆ ಬೆಳೆದುಬಿಟ್ಟಿದ್ದಾರೆ. ಸದ್ಯ 'ಟಾಕ್ಸಿಕ್' ಚಿತ್ರದ ಮೂಲಕ ಮತ್ತೊಂದು ದಾಖಲೆಗೆ ಸಜ್ಜಾಗುತ್ತಿದ್ದಾರೆ. ಇದೆಲ್ಲದರ ನಡುವೆ ಕೆಲ ಅಭಿಮಾನಿಗಳು ಹಳೇ ಯಶ್‌ನ ಮಿಸ್ ಮಾಡಿಕೊಳ್ಳುತ್ತಿದ್ದಾರೆ.
'KGF' ಚಿತ್ರದಿಂದ ಯಶ್ ಬದುಕೇ ಬದಲಾಗಿಬಿಟ್ಟಿದೆ. ಅಷ್ಟು ಸುಲಭಕ್ಕೆ ಯಾರಿಗೂ ಸಿಗದ್ದಷ್ಟು ಎತ್ತರಕ್ಕೇರಿದ್ದಾರೆ. ಕೋಟಿ ಕೋಟಿ ಸಂಭಾವನೆ ಪಡೆಯುತ್ತಿದ್ದಾರೆ. ನೂರಾರು ಕೋಟಿ ಸುರಿದು ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. ಹಾಲಿವುಡ್ ಕಲಾವಿದರು, ತಂತ್ರಜ್ಞರನ್ನು ಕನ್ನಡಕ್ಕೆ ಕರೆದುಕೊಂಡು ಬರ್ತಿದ್ದಾರೆ. ದೊಡ್ಡ ದೊಡ್ಡ ಕನಸು ಕಾಣುತ್ತಿದ್ದಾರೆ. ಅದನ್ನು ನನಸು ಮಾಡಿಕೊಳ್ಳಲು ಕಠಿಣ ಪರಿಶ್ರಮಪಡುತ್ತಿದ್ದಾರೆ.

ರಾಕಿಭಾಯ್ ಕ್ರೇಜ್, 'KGF' ಸೃಷ್ಟಿಸಿದ ಇತಿಹಾಸ ಎಲ್ಲವನ್ನು ಪಕ್ಕಕ್ಕಿಟ್ಟರೆ ನಮ್ ಹಳೇ ಯಶ್ ಮಿಸ್ ಆಗಿದ್ದಾರೆ ಎಂದು ಅಭಿಮಾನಿಗಳು ಆಗಾಗ್ಗೆ ಹೇಳುತ್ತಿದ್ದಾರೆ. ಯಶ್ ಈಗ ನಾಲ್ಕೈದು ವರ್ಷಕ್ಕೆ ಒಂದು ದೊಡ್ಡ ಸಿನಿಮಾ ಮಾಡುತ್ತಿದ್ದಾರೆ. ಅದಕ್ಕಾಗಿ ಕಾದು ಕಾದು ಸುಸ್ತಾಗುವಂತಾಗಿದೆ. ಸಣ್ಣ ಸಿನಿಮಾಗಳನ್ನು ಮಾಡುವ ಮನಸ್ಸು ಇದ್ದಂತೆ ಕಾಣುತ್ತಿಲ್ಲ. ಶುರು ಮಾಡಿದ್ದ 'ಮೈ ನೇಮ್ ಈಸ್ ಕಿರಾತಕ' ಚಿತ್ರವನ್ನು ಕೂಡ ಕೈ ಬಿಟ್ಟರು.
'ಕಿರಾತಕ', 'ಗೂಗ್ಲಿ' ರೀತಿಯ ಸಣ್ಣ ಸಿನಿಮಾಗಳಲ್ಲಿ ನಮ್ಮನೆ ಹುಡುಗನಂತೆ ಇದ್ದ ಯಶ್ ಅವರನ್ನು ಈಗ ನೋಡೋಕೆ ಸಾಧ್ಯವಿಲ್ಲ. ಈಗ ಏನಿದ್ದರೂ ಖಡಕ್ ರಾಕಿಭಾಯ್ ಮಾತ್ರ ಕಾಣುತ್ತಾರೆ. ಈ ವಿಚಾರವನ್ನು ನಟಿ ಶ್ರೀನಿಧಿ ಶೆಟ್ಟಿ ಕೂಡ ಹೇಳಿದ್ದಾರೆ. ತಮಿಳು ಸಂದರ್ಶನವೊಂದರಲ್ಲಿ ಮಾತನಾಡುತ್ತಾ ಈ ವಿಚಾರ ಹಂಚಿಕೊಂಡಿದ್ದಾರೆ. ನಾನಿ ಜೊತೆ ಶ್ರೀನಿಧಿ ಶೆಟ್ಟಿ ನಟನೆಯ 'ಹಿಟ್'-3 ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಪ್ರಚಾರಕ್ಕಾಗಿ ನೀಡಿದ ಸಂದರ್ಶನದಲ್ಲಿ ಅವರು ಮಾತನಾಡಿದ್ದಾರೆ.
"ಆರಂಭದಲ್ಲಿ ಯಶ್ ಅವರ ಸಿನಿಮಾಗಳು ಬೇರೆ ರೀತಿ ಇರುತ್ತಿತ್ತು. ಅಂದರೆ ಕ್ಯೂಟ್ ಲವ್ ಸ್ಟೋರಿ, ರೊಮ್ಯಾಂಟಿಕ್ ಕಾಮಿಡಿ, ರಗಡ್ ಹಳ್ಳಿ ಹೈದ ಅಂತಹ ಸಿನಿಮಾಗಳಲ್ಲಿ ಅವರು ನಟಿಸಿದ್ದರು. ನನಗೆ ಯಶ್ ಅವರನ್ನು ಆ ರೀತಿ ನೋಡಿ ಬಹಳ ಇಷ್ಟ. ಆ ಸಿನಿಮಾಗಳನೆಲ್ಲಾ ನೋಡಿ ಬಹಳ ಎಂಜಾಯ್ ಮಾಡಿದ್ದೀನಿ. ಮಂಡ್ಯ ಹೈದ, ಮೈಸೂರು ಹುಡುಗ, ಕನ್ನಡ ಹುಡುಗನಂತಹ ಪಾತ್ರಗಳು ಇಷ್ಟ, ಅದನ್ನು ಅವರಿಗೂ ಹೇಳಿದ್ದೀನಿ" ಎಂದು ಶ್ರೀನಿಧಿ ಹೇಳಿದ್ದಾರೆ.
"ನಾನು ಯಶ್ ಜೊತೆ ನಟಿಸುವ ಅವಕಾಶ ಪಡೆದಾಗ ಅವರು ಗಡ್ಡ ಬೆಳೆಸಿ ಖಡಕ್ ಆಗಿ ಕಾಣಲು ಆರಂಭಿಸಿದ್ದರು. ಏಯ್ ಈ ಯಶ್ ಅಲ್ಲ, ನಾನು ನೋಡಿದ್ದು, ಹಳೇ ಯಶ್ ಎನಿಸುತ್ತಿತ್ತು. ಅವರೊಟ್ಟಿಗೆ ನಟಿಸಿದ್ದು ನಿಜಕ್ಕೂ ಅದ್ಭುತ ಅನುಭವ. ಆದರೆ 'KGF' ಚಿತ್ರಕ್ಕೆ ಅವರ ಪರಿಶ್ರಮ, ವಿಷನ್, ಗುರಿ ನಿಜಕ್ಕೂ ಅದ್ಭುತ" ಎಂದು ಶ್ರೀನಿಧಿ ವಿವರಿಸಿದ್ದಾರೆ.
ಸದ್ಯ ನೆಟ್ಟಿಗರೊಬ್ಬರು ಈ ವಿಡಿಯೋ ಪೋಸ್ಟ್ ಮಾಡಿ ವೈರಲ್ ಮಾಡಿದ್ದಾರೆ. ಸಾಕಷ್ಟು ಜನ ಶ್ರೀನಿಧಿ ಮಾತಿಗೆ ದನಿಗೂಡಿಸಿದ್ದಾರೆ. ನಮ್ಮ ಮನದ ಮಾತನ್ನು ಆಕೆ ಹೇಳಿದ್ದಾರೆ ಎಂದು ಕಾಮೆಂಟ್ ಮಾಡುತ್ತಿದ್ದಾರೆ. 'ರಾಮಾಯಣ' ಚಿತ್ರದಲ್ಲಿ ಸೀತೆ ಪಾತ್ರಕ್ಕೆ ಸ್ಕ್ರೀನ್ ಟೆಸ್ಟ್ ಕೊಟ್ಟಿದ್ದೆ. ಆದರೆ ಯಶ್ ಕಾರಣಕ್ಕೆ ನಟಿಸೋಕೆ ಒಪ್ಪಲಿಲ್ಲ ಎಂದು ಆಕೆ ಇತ್ತೀಚೆಗೆ ಹೇಳಿದ್ದರು.
ಸೀತಾ ಪಾತ್ರದಲ್ಲಿ ನಾನು ನಟಿಸಬೇಕಿತ್ತು. ಆದರೆ 'KGF' ಚಿತ್ರದಲ್ಲಿ ನಾಯಕ-ನಾಯಕಿಯಾಗಿ ನಾನು ಯಶ್ ನಟಿಸಿದ್ದೆವು. ನಮ್ಮ ಜೋಡಿಯನ್ನು ಜನ ಬಹಳ ಇಷ್ಟಪಟ್ಟಿದ್ದರು. 'ರಾಮಾಯಣ' ಚಿತ್ರದಲ್ಲಿ ಸೀತಾ ಹಾಗೂ ರಾವಣ ಆಗಿ ನಾವಿಬ್ಬರು ನಟಿಸಿದರೆ ಚೆನ್ನಾಗಿರಲ್ಲ ಎಂದು ಹಿಂದೇಟು ಹಾಕಿದ್ದಾಗಿ ಆಕೆ ಹೇಳಿಕೊಂಡಿದ್ದರು.


Click it and Unblock the Notifications











