'ಅಮೀರ್ ಖಾನ್ ಮಾತು ಕೇಳಿ ನನಗೆ ಶಾಕ್ ಆಯ್ತು, ನಾನು ನಿರೀಕ್ಷೆ ಮಾಡಿರಲಿಲ್ಲ'- ಉಪೇಂದ್ರ..!
ಉಪೇಂದ್ರ ಕನ್ನಡ ಚಿತ್ರರಂಗದ ಬುದ್ದಿವಂತ . ಕೇವಲ ಕನ್ನಡದಲ್ಲಿ ಮಾತ್ರ ಅಲ್ಲ ಅಕ್ಕ-ಪಕ್ಕದ ರಾಜ್ಯದಲ್ಲಿ ಕೂಡ ಉಪೇಂದ್ರ ಅವರಿಗೆ ಅಭಿಮಾನಿಗಳಿದ್ದಾರೆ. ಉಪೇಂದ್ರ ನಿರ್ದೇಶನದ ಚಿತ್ರಗಳನ್ನು ನೋಡಲು ಕುತೂಹಲದಿಂದ ಕಾಯುತ್ತಿರುತ್ತಾರೆ. ಈ ಕುತೂಹಲ ತಣಿಸಲೆಂದು ಕನ್ನಡ ಚಿತ್ರರಂಗದ ರಿಯಲ್ ಸ್ಟಾರ್ ಉಪ್ಪಿ ಯುಐ ಚಿತ್ರವನ್ನು ಮಾಡಿದ್ದಾರೆ. ಇದೇ 20ಕ್ಕೆ ಚಿತ್ರವನ್ನು ಬಿಡುಗಡೆ ಮಾಡುತ್ತಿದ್ದಾರೆ.
ಇನ್ನು, ಉಪೇಂದ್ರ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಗುರುತಿಸಿಕೊಳ್ಳುವ ಪ್ರಯತ್ನವನ್ನು ಯುಐ ಚಿತ್ರದ ಮೂಲಕ ಇಂದು ಮತ್ತೊಮ್ಮೆ ಮಾಡುತ್ತಿರಬಹುದು. ಆದರೆ, ಆ ಕಾಲದಲ್ಲಿಯೇ ಉಪೇಂದ್ರ ಪ್ಯಾನ್ ಇಂಡಿಯಾ ಡೈರೆಕ್ಟರ್ ಆಗಿ ಮಿಂಚಿದವರು. ಮೆರೆದವರು. ಕೇವಲ ಜನಸಾಮಾನ್ಯರು ಮಾತ್ರವಲ್ಲ ಉಪೇಂದ್ರ ಅವರ ನಿರ್ದೇಶನಕ್ಕೆ ಬೇರೆ ಭಾಷೆಯ ಚಿತ್ರರಂಗದಲ್ಲಿ ಕೂಡ ಅಭಿಮಾನಿಗಳಿದ್ದಾರೆ. ಉಪೇಂದ್ರ ಅವರ ಕಥೆಗಳಿಂದ ಪ್ರೇರಣೆ ಪಡೆದು ಚಿತ್ರಗಳನ್ನು ಮಾಡಿದವರು ಇದ್ದಾರೆ. ಪ್ರೇರಣೆ ಗೀತೆಯನ್ನು ಹಾಡುತ್ತಾ ಚಿತ್ರ ಮಾಡಿದವರ ಸಾಲಿನಲ್ಲಿ ಅಮೀರ್ ಖಾನ್ ನಿಲ್ಲದಿದ್ದರೂ ಉಪೇಂದ್ರ ಅವರ ಅಭಿಮಾನಿಗಳ ಸಾಲಿನಲ್ಲಿ ಅಮೀರ್ ಖಾನ್ ನಿಲ್ಲುತ್ತಾರೆ. ಖುದ್ದು ಅಮೀರ್ ಖಾನ್ ಮೊನ್ನೆ ಈ ಮಾತನ್ನು ಒಪ್ಪಿಕೊಂಡಿದ್ದಾರೆ. ನಾನು ಕೂಡ ಉಪೇಂದ್ರ ಅವರ ಅಭಿಮಾನಿಯೆಂದು ಮೊನ್ನೆ ಹೇಳಿದ್ದಾರೆ. ಯುಐ ಚಿತ್ರದ ವಾರ್ನರ್ ನೋಡಿ ತಮ್ಮ ಅಭಿಮಾನದ ಮಾತುಗಳನ್ನು ಹಂಚಿಕೊಂಡಿದ್ಧಾರೆ. ಇದೀಗ ಅಮೀರ್ ಖಾನ್ ಮಾತನಾಡಿದ್ದ ಅಭಿಮಾನದ ಮಾತುಗಳ ಬಗ್ಗೆ ಉಪೇಂದ್ರ ಮಾತನಾಡಿದ್ದಾರೆ.

ಹೌದು, ನ್ಯೂಸ್ 18 ಕನ್ನಡಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಉಪೇಂದ್ರ ನಾನು ಕೇವಲ ವಾರ್ನರ್ ಟೀಸರ್ ನ ಅಮೀರ್ ಖಾನ್ ಅವರಿಗೆ ತೋರಿಸಿದೆ, ಆದರೆ ಅವರೇ ವಾರ್ನರ್ ನೋಡಿದ ಮೇಲೆ ವಿಡಿಯೋ ಮಾಡಿದರು ನನಗೆ ಅದನ್ನು ನೋಡಿ ಶಾಕ್ ಆಯ್ತು ಎಂದಿದ್ದಾರೆ. ಅವರಿಗೆ ಅನ್ಸಿದ್ದನ್ನು ಅವರು ನೇರವಾಗಿ ಹೇಳಿದ್ದಾರೆ, ಸಿನಿಮಾ ನೋಡಬೇಕೆನ್ನುವ ಆಶಯ ಕೂಡ ವ್ಯಕ್ತಪಡಿಸಿದ್ದಾರೆ ಎಂದು ಹೇಳಿರುವ ಉಪೇಂದ್ರ ಸಾಧ್ಯವಾದರೆ ಅಮೀರ್ ಖಾನ್ ಅವರಿಗೆ ವಿಶೇಷ ಪ್ರದರ್ಶನವನ್ನು ಹಮ್ಮಿಕೊಳ್ಳುವುದಾಗಿ ಹೇಳಿದ್ದಾರೆ. ಸೂಪರ್ ಸ್ಟಾರ್ ರಜಿನಿಕಾಂತ್ ಕೂಡ ಯುಐ ಚಿತ್ರದ ವಾರ್ನರ್ ಟೀಸರ್ ನೋಡಿ ಮೆಚ್ಚಿಕೊಂಡಿದ್ದಾರೆ ಎಂದು ಉಪೇಂದ್ರ ಹೇಳಿದ್ದಾರೆ.
ಅಂದ್ಹಾಗೇ ಉಪೇಂದ್ರ ಮೊದಲಿಂದ ಎಲ್ಲರಂತೆ ಟ್ರೆಂಡ್ ಹಿಂದೆ ಹೋದವರಲ್ಲ. ಬದಲಿಗೆ ಟ್ರೆಂಡ್ ಸೃಷ್ಟಿಸಿದವರು. ಚಿತ್ರದ ಟ್ರೇಲರ್-ಟೀಸರ್-ಹಾಡು-ಪಾಡು ಇದ್ಯಾವುದನ್ನು ಪ್ರೇಕ್ಷಕರ ಮುಂದಿಡದೇ ಕೇವಲ ತಮ್ಮ ಹೆಸರಿನ ಬ್ರ್ಯಾಂಡ್ ಮೂಲಕ ಪ್ರೇಕ್ಷಕರನ್ನು ಚಿತ್ರಮಂದಿರಕ್ಕೆ ಕರೆತಂದವರು. ಚಿತ್ರವನ್ನು ಗೆಲ್ಲಿಸಿದವರು.
ಆದರೆ. ತಮ್ಮ ಈ ಸಂಪ್ರದಾಯವನ್ನು ಉಪೇಂದ್ರ ಯುಐ ಚಿತ್ರದಲ್ಲಿ ಪಾಲಿಸಿಲ್ಲ. ಬದಲಿಗೆ ಚಿತ್ರದ ಬಿಡುಗಡೆಗೆ ಇನ್ನೂ ಆರು ತಿಂಗಳಿರುವಾಗ ಟ್ರೋಲ್ ಹಾಡನ್ನು ಬಿಡುಗಡೆ ಮಾಡಿದರು. ಮೊನ್ನೆ ತಮ್ಮ ಚಿತ್ರದ ವಾರ್ನರ್ ಎಂಬ ತುಣುಕನ್ನು ಹಂಚಿಕೊಂಡರು. ಈ ಬದಲಾವಣೆಯ ಬಗ್ಗೆ ಉಪೇಂದ್ರ ಮಾತನಾಡಿದ್ದಾರೆ. ಚಿತ್ರದ ಕುರಿತು ಒಂದು ಚಿಕ್ಕ ಸುಳಿವು ಕೂಡ ನನಗೆ ಬಿಟ್ಟು ಕೊಡಲು ಇಷ್ಟ ಇಲ್ಲ ಆದರೆ ನಾವೆಲ್ಲ ಪರಿಸ್ಥಿತಿಯ ಕೈಗೊಂಬೆಗಳು ಎಂದಿದ್ದಾರೆ.
ಹೌದು, ನ್ಯೂಸ್ 18 ಕನ್ನಡಗೆ ನೀಡಿದ ಇದೇ ಸಂದರ್ಶನದಲ್ಲಿ ಮಾತನಾಡಿರುವ ಉಪೇಂದ್ರ ನನಗೆ ಒಂದು ಟೀಸರ್ ಬಿಡುಗಡೆ ಮಾಡೋಕೆ ಕೂಡ ಮನಸಿರಲ್ಲ, ಪೋಸ್ಟರ್ ಕೂಡ ಬಿಡುಗಡೆ ಮಾಡೋಕೆ ಮನಸಿರಲ್ಲ ಯಾಕೆಂದರೆ ಕುತೂಹಲದಿಂದ ಬಂದು ಚಿತ್ರ ನೋಡಿದಾಗ ಆಗುವ ಅನುಭವ ತುಂಬಾನೇ ಸುಂದರ ಎನ್ನುವುದು ನನ್ನ ಅಭಿಪ್ರಾಯ. ಆದರೆ ನನಗೆ ಗೊತ್ತಿಲ್ಲ ಈಗ ಪರಿಸ್ಥಿತಿ ಬದಲಾಗಿದೆ. ಅನಿವಾರ್ಯವಾಗಿ ಕೆಲವೊಂದನ್ನು ಮಾಡಬೇಕಾಗುತ್ತೆ, ನಿರ್ಮಾಪಕರಿಗೆ ಕೂಡ ಟೆನ್ಷನ್ ಇರುತ್ತೆ, ಈ ಕಾರಣಕ್ಕೆ ನಾನೇ ಎಲ್ಲೋ ಒಂದು ಕಡೆ ರಾಜಿಯಾಗಬೇಕಾಗುತ್ತೆ ಎಂದಿದ್ದಾರೆ. ಅದಕ್ಕೆ ನಾನೇ ಚಿತ್ರವನ್ನು ಪ್ರೊಡ್ಯೂಸ್ ಮಾಡ್ಕೊಂಡು ನಾನೇ ಆ ತರಹದ ರಿಸ್ಕ್ ತಗೋಬೇಕಾಗುತ್ತೆ ಎಂದಿರುವ ಉಪೇಂದ್ರ ಖಂಡಿತ ನೋಡೋಣ ಆ ಭಗವಂತ ಆಶೀರ್ವಾದ ಮಾಡಿದರೆ ಅದನ್ನು ಕೂಡ ಮಾಡುತ್ತೇನೆ ಎಂದು ಹೇಳಿದ್ದಾರೆ.


Click it and Unblock the Notifications











