"ದರ್ಶನ್ ಮಾಡಿದ್ದು ಸರಿಯಿದೆ, ನಮ್ಮಪ್ಪ ಆ ಜಾಗದಲ್ಲಿ ಇದ್ದಿದ್ರೂ ಅದನ್ನೇ ಮಾಡ್ತಿದ್ರು"; ನಟಿ ಪ್ರಗತಿ
ರೇಣುಕಾಸ್ವಾಮಿ ಹತ್ಯೆ ಪ್ರಕರಣದ ಬಗ್ಗೆ ಈಗಾಗಲೇ ಸಾಕಷ್ಟು ನಟ, ನಟಿಯರು ಮಾತನಾಡಿದ್ದಾರೆ. ಕೆಲವರು ದರ್ಶನ್ ಪರ ನಿಂತಿದ್ದರೆ ಮತ್ತೆ ಕೆಲವರು ತಪ್ಪು ಮಾಡಿದ್ದರೆ ಶಿಕ್ಷೆ ಆಗಲಿ ಎನ್ನುತ್ತಿದ್ದಾರೆ. ಇನ್ನು ಕೆಲವರು ದರ್ಶನ್ ಮಾಡಿದ್ದರಲ್ಲಿ ತಪ್ಪಿಲ್ಲ. ರೇಣುಕಾಸ್ವಾಮಿ ಮಾಡಿದ್ದಕ್ಕೆ ಶಿಕ್ಷೆ ಕೊಟ್ಟಿದ್ದಾರೆ ಅಷ್ಟೇ ಎನ್ನುತ್ತಿದ್ದಾರೆ.
ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಹತ್ಯೆಯಾಗಿ ಎರಡು ತಿಂಗಳು ಕಳೆಯುತ್ತಾ ಬಂತು. ಈಗಾಗಲೇ ನಟ ದರ್ಶನ್ ಸೇರಿದಂತೆ 17 ಜನ ಆರೋಪಿಗಳು ಜೈಲು ಸೇರಿ 50 ದಿನಗಳಾಗಿದೆ. ಪರಪ್ಪನ ಅಗ್ರಹಾರ ಜೈಲಿನಲ್ಲಿ ನ್ಯಾಯಾಂಗ ಬಂಧನ ಮುಂದುವರೆದಿದೆ. ನಟ ದರ್ಶನ್ ವಿಚಾರಣಾಧೀನ ಕೈದಿಯಾಗಿದ್ದಾರೆ. ದರ್ಶನ್ ಮನೆ ಊಟ ಕೋರಿ ವಕೀಲರ ಮೂಲಕ ಕೋರ್ಟ್ ಮೆಟ್ಟಿಲೇರಿದ್ದರು. ಅದರಲ್ಲಿ ಅವರಿಗೆ ಹಿನ್ನಡೆ ಆಗಿದೆ.

ನಟ ದರ್ಶನ್ ಪರ ಮೊದಲಿಗೆ ನಟಿ ಭಾವನಾ ರಾಮಣ್ಣ ಬ್ಯಾಟ್ ಬೀಸಿದ್ದರು. ಒಂದು ವೇಳೆ ದರ್ಶನ್ ಅಪರಾಧಿ ಎಂದು ಸಾಬೀತಾದರೂ ನಾನು ಅವರ ಪರ ನಿಲ್ಲುತ್ತೇನೆ ಎಂದಿದ್ದರು. ನಿಧಾನವಾಗಿ ಕೆಲವರು ಇದೇ ಮಾತು ಹೇಳಿದ್ದರು. ಇದೀಗ ಕಿರುತೆರೆ ನಟಿ ಪ್ರಗತಿ ಕೂಡ ಇದೇ ಮಾತು ಹೇಳಿದ್ದಾರೆ. ಬಾಲ ನಟಿಯಾಗಿ ಕನ್ನಡ ಕಿರುತೆರೆಗೆ ಬಂದ ಪ್ರಗತಿ ಸದ್ಯ ತೆಲುಗು ಕಿರುತೆರೆಯಲ್ಲಿ ಬ್ಯುಸಿಯಾಗಿದ್ದಾರೆ.
'ಮನೆಯೇ ಮಂತ್ರಾಲಯ' ಕನ್ನಡ ಧಾರಾವಾಹಿಯ ಮುಖ್ಯ ಪಾತ್ರದಲ್ಲಿ ನಟಿಸಿದ್ದ ಪ್ರಗತಿ ಸದ್ಯ ತೆಲುಗಿನಲ್ಲಿ ಎರಡು ಧಾರಾವಾಹಿಗಳಲ್ಲಿ ನಟಿಸಿದ್ದಾರೆ. 'ಮಟ್ಟಿಗಾಜಲು' ಧಾರಾವಾಹಿ ಪಾತ್ರದಿಂದ ಅಲ್ಲಿ ಜನಪ್ರಿಯತೆ ಗಳಿಸಿದ್ದಾರೆ. ಬೆಂಗಳೂರಿನಲ್ಲೇ ಆಕೆ ಹುಟ್ಟಿ ಬೆಳೆದಿದ್ದು. ತೆಲುಗು ಯೂಟ್ಯೂಬ್ ಚಾನಲ್ ಸಂದರ್ಶನದಲ್ಲಿ ಪ್ರಗತಿ ಭಾಗಿ ಆಗಿದ್ದರು. ಈ ವೇಳೆ ರೇಣುಕಾಸ್ವಾಮಿ ಪ್ರಕರಣ, ದರ್ಶನ್ ಬಂಧನ ವಿಚಾರದ ಬಗ್ಗೆಯೂ ಪ್ರಶ್ನೆ ಎದುರಾಯಿತು.

ನಟ ದರ್ಶನ್ ಅಭಿಮಾನಿ ಕೂಡ ಆಗಿರುವ ಪ್ರಗತಿ ಸಂದರ್ಶನದಲ್ಲಿ ರೇಣುಕಸ್ವಾಮಿ ಪ್ರಕರಣದ ಬಗ್ಗೆ ಮಾತನಾಡಿದ್ದಾರೆ. "ನಟ ದರ್ಶನ್ ಮಾಡಿದ್ದು ನನಗೆ ಸರಿ ಎನಿಸುತ್ತಿದೆ. ಅಂತಹ ಮೆಸೇಜ್ ಯಾರಿಗಾದರೂ ಕಳುಹಿಸಿದರೆ ಎಂಥಹವರು ಟ್ರಿಗರ್ ಆಗುತ್ತಾರೆ. ನನಗೂ ಅಂತಹ ಮೆಸೇಜ್‌ಗಳು ಬಂದಿತ್ತು."
"ನನಗೆ ಆಗ 17 ವರ್ಷ ವಯಸ್ಸು. ಸೋಶಿಯಲ್ ಮೀಡಿಯಾ ಬಳಸುತ್ತಿದ್ದಾಗ ನನಗೂ ಅಂಥದ್ದೇ ಮೆಸೇಜ್‌ಗಳು ಬಂದಿತ್ತು. ಕೆಲವು ಸ್ಟ್ರಾಂಗ್ ಹೆಣ್ಣು ಮಕ್ಕಳು ಇರುತ್ತಾರೆ. ಅವರು ಹೋಗ್ಲಿ ಎಂದು ಸುಮ್ಮನಾಗುತ್ತಾರೆ. ಕೆಲವರು ಹೆಣ್ಣು ಮಕ್ಕಳು ಮೆಂಟಲಿ ಡಿಸ್ಟರ್ಬ್ ಆಗ್ತಾರೆ. ಮಾಧ್ಯಮಗಳು ಸಹ ದರ್ಶನ್ ಮಾಡಿದ್ದಾರೆ ಎನ್ನುವ ಅರ್ಥದಲ್ಲಿ ಸುದ್ದಿ ಮಾಡುತ್ತಿದ್ದಾರೆ. ಅದಕ್ಕೆ ಯಾವುದೇ ಸಾಕ್ಷ್ಯಾಧಾರ ಇಲ್ಲ. ಇನ್ನು ತೀರ್ಪು ಬಂದಿಲ್ಲ. ಹಾಗಿರುವಾಗ ಅಪರಾಧಿ ಹೇಗಾಗುತ್ತಾರೆ? ಎಂದು ಪ್ರಶ್ನಿಸಿದ್ದಾರೆ.
"ಒಂದು ವೇಳೆ ನಟ ದರ್ಶನ್ ಆ ರೀತಿ ಮಾಡಿದ್ದರೂ ಅವರು ಮಾಡಿದ್ದು ಸರಿಯಿದೆ. ಏನು ಮಾಡಿದರೋ ಅದು ಸರಿಯಿದೆ. ನನಗೆ ಅಂತಹ ಮೆಸೇಜ್ ಬಂದು ನಾನು ನಮ್ಮ ತಂದೆಗೆ ಹೇಳಿದ್ದರೆ ಅವರು ಅದೇ ರೀತಿ ಪ್ರಭಾವಿ ಆಗಿದ್ದರೇ ಇದನ್ನೇ ಮಾಡುತ್ತಿದ್ದರು. ಹಾಗಾಗಿ ದರ್ಶನ್ ಮಾಡಿದ್ದರಲ್ಲಿ ತಪ್ಪೇನು ಇಲ್ಲ" ಎಂದು ಕಿರುತೆರೆ ನಟಿ ಪ್ರಗತಿ ವಿವರಿಸಿದ್ದಾರೆ.


Click it and Unblock the Notifications











