ಮಂಡ್ಯದಲ್ಲಿ ಸುಮಲತಾ-ನಿಖಿಲ್ ಸ್ಪರ್ಧೆ: ದರ್ಶನ್, ಸುದೀಪ್, ಯಶ್ ನಿಲುವೇನು?
Recommended Video

ಲೋಕಸಭೆ ಚುನಾವಣೆ ದಿನಾಂಕ ಸದ್ಯದಲ್ಲೇ ಘೋಷಣೆಯಾಗುತ್ತೆ. ಈ ಸಲ ಮಂಡ್ಯ ಲೋಕಸಭೆ ಕ್ಷೇತ್ರ ತೀರಾ ಕುತೂಹಲ ಮೂಡಿಸಿದೆ. ಯಾಕಂದ್ರೆ, ಈ ಕ್ಷೇತ್ರದಲ್ಲಿ ನಿಖಿಲ್ ಕುಮಾರ್ ಮತ್ತು ನಟಿ ಸುಮಲತಾ ಅಂಬರೀಶ್ ಸ್ಪರ್ಧೆ ಮಾಡಲಿದ್ದಾರೆ ಎನ್ನಲಾಗುತ್ತಿದೆ.
ಕಾಂಗ್ರೆಸ್ ಪಕ್ಷದಿಂದ ಸುಮಲತಾ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿದ್ದಾರೆ. ಆದ್ರೆ, ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಂಡಿರುವ ಕಾಂಗ್ರೆಸ್ ಈ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿಗೆ ಬೆಂಬಲ ನೀಡಬೇಕಾದ ಪರಿಸ್ಥಿತಿಯಲ್ಲಿದೆ. ಒಂದು ವೇಳೆ ಕಾಂಗ್ರೆಸ್ ಪಕ್ಷ ಸುಮಲತಾಗೆ ಟಿಕೆಟ್ ನೀಡಿಲ್ಲ ಅಂದ್ರೆ ಸ್ವತಂತ್ರವಾಗಿ ಸ್ಪರ್ಧಿಸುವ ಯೋಚನೆಯೂ ಅವರ ಮುಂದಿದೆ.
ಈ ಕಡೆ ಜೆಡಿಎಸ್ ಪಕ್ಷದಿಂದ ನಿಖಿಲ್ ಕುಮಾರ್ ಅಖಾಡಕ್ಕೆ ಇಳಿಯಬಹುದು. ಹೀಗಾಗಿ, ಮಂಡ್ಯ ಕ್ಷೇತ್ರದಲ್ಲಿ ಸುಮಲತಾ ವರ್ಸಸ್ ನಿಖಿಲ್ ಕುಮಾರ್ ಹಣಾಹಣಿ ಪಕ್ಕಾ ಎಂದು ಹೇಳಲಾಗ್ತಿದೆ. ಇವರಿಬ್ಬರ ಸ್ಪರ್ಧೆ ಈಗ ದರ್ಶನ್, ಸುದೀಪ್, ಯಶ್ ಗೆ ಭಾರಿ ತಲೆ ನೋವಾಗಲಿದೆ. ಹೌದು, ಯಾರ ಪರ ಯಾರು ಪ್ರಚಾರ ಮಾಡ್ತಾರೆ ಎಂಬ ಟಾಕ್ ಶುರುವಾಗಿದೆ. ಹಾಗಿದ್ರೆ, ಯಾರಿಗೆ ಯಾರ ಒಲವಿದೆ? ಮುಂದೆ ಓದಿ....

ಸುಮಲತಾಗಿದೆ ದರ್ಶನ್ ಬಲ
ಸುಮಲತಾ ಅಂಬರೀಶ್ ಅವರು ಯಾವುದೇ ಪಕ್ಷದಿಂದ ಸ್ಪರ್ಧೆ ಮಾಡಲಿ ಅಥವಾ ಸ್ವತಂತ್ರವಾಗಿ ಸ್ಪರ್ಧೆ ಮಾಡಿದ್ರೂ ಅವರಿಗೆ ದರ್ಶನ್ ಬಲ ಗ್ಯಾರೆಂಟಿ ಇರುತ್ತೆ. ಯಾಕಂದ್ರೆ, ಅಂಬಿ ನಂತರ ಅಂಬರೀಶ್ ಕುಟುಂಬಕ್ಕೆ ದರ್ಶನ್ ದೊಡ್ಡ ಮಗನಂತಿದ್ದಾರೆ. ಅಲ್ಲಿಗೆ ಸುಮಲತಾಗೆ ಡಿ ಬಾಸ್ ಅಭಿಮಾನಿಗಳ ಶಕ್ತಿ ಸಿಗೋದು ಪಕ್ಕಾ.

ಸುಮಲತಾ ಅವರನ್ನ ಗೆಲ್ಲಿಸುವುದು ನನ್ನ ಕೆಲಸ
ಈ ಕುರಿತು ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಸಿದ್ದರಾಮಯ್ಯ ಅವರ ಬಳಿ ದರ್ಶನ್ ಭೇಟಿಯಾಗಿದ್ದಾಗ ಚರ್ಚೆ ಕೂಡ ಮಾಡಿದ್ರಂತೆ. ಸುಮಲತಾ ಅವರಿಗೆ ಟಿಕೆಟ್ ಕೊಟ್ರೆ ಮಂಡ್ಯದಿಂದ ಅವರನ್ನ ಗೆಲ್ಲಿಸುವುದು ನನ್ನ ಕೆಲಸ ಎಂದು ಹೇಳಿದ್ದರಂತೆ. ಮಂಡ್ಯದಲ್ಲಿ ದರ್ಶನ್ ಬಳಗ ದೊಡ್ಡದಿದೆ. ಬಹುಶಃ ಇದು ಸುಮಲತಾ ಅವರಿಗೆ ದೊಡ್ಡ ಪ್ಲಸ್ ಪಾಯಿಂಟ್ ಆಗಬಹುದು. ಈ ಕಡೆ ಕುಮಾರಸ್ವಾಮಿ ಅವರ ಜೊತೆ ದರ್ಶನ್ ಹೆಚ್ಚು ಸಂಪರ್ಕ ಹೊಂದಿಲ್ಲ.

ಸಿಎಂ ಪುತ್ರನಿಗೆ ಸಿಗುತ್ತಾ ಸುದೀಪ್ ಅಭಯಹಸ್ತ
ಸುಮಲತಾ ಅವರಿಗೆ ಕಿಚ್ಚ ಸುದೀಪ್ ಕೂಡ ತುಂಬಾ ಆಪ್ತ ವ್ಯಕ್ತಿ. ಸುಮಲತಾ ಅವರು ಸ್ಪರ್ಧೆ ಮಾಡಿದ್ರೆ ಸುದೀಪ್ ಸಹ ಬೆಂಬಲಿಸಬಹುದು ಎಂಬ ಮಾತಿದೆ. ಅಂಬರೀಶ್ ಅವರ ಮೇಲಿನ ಗೌರವದಿಂದ, ಸುಮಲತಾ ಅವರ ಪ್ರೀತಿಯ ಪ್ರತಿಕಾರವಾಗಿ ಪ್ರಚಾರ ಮಾಡಬಹುದು. ಆದ್ರೆ, ಅದು ಎಷ್ಟರ ಮಟ್ಟಿಗೆ ಎಂಬುದು ಗೊತ್ತಿಲ್ಲ.

ಸಿಎಂ ಜೊತೆ ಒಳ್ಳೆಯ ಬಾಂಧವ್ಯ ಇದೆ
ಯಾಕಂದ್ರೆ, ಈ ಕಡೆ ಸುದೀಪ್ ಅವರಿಗೆ ಸಿಎಂ ಕುಮಾರಸ್ವಾಮಿ ಜೊತೆಯೂ ಒಳ್ಳೆಯ ಬಾಂಧವ್ಯ ಇಟ್ಟುಕೊಂಡಿದ್ದಾರೆ. ಹಾಗಾಗಿ, ಸಿಎಂ ಪುತ್ರನ ಪರ ಪ್ರಚಾರಕ್ಕೆ ಬನ್ನಿ ಸಿಎಂ ಕೇಳಬಹುದು. ಬಟ್, ಸುಮಲತಾ ಮತ್ತು ಸಿಎಂ ನಡುವೆ ಸುದೀಪ್ ಏನ್ ಮಾಡ್ತಾರೆ? ಕಾದುನೋಡಬೇಕಿದೆ.

ಸುಮಲತಾಗೆ ಯಶ್ ಸಪೋರ್ಟ್?
ದರ್ಶನ್ ಅವರಂತೆ ನಟ ಯಶ್ ಕೂಡ ಸುಮಲತಾ ಅವರಿಗೆ ಸಂಪೂರ್ಣ ಬೆಂಬಲ ನೀಡಬಹುದು. ಅಂಬರೀಶ್ ಕುಟುಂಬದ ಜೊತೆ ಯಶ್ ಅವರ ಸಂಬಂಧ ಕೂಡ ಆತ್ಮೀಯವಾಗಿದೆ. ಹೇಳಿ ಕೇಳಿ ಯಶ್ ಕೂಡ ಮಂಡ್ಯದವರೇ. ಸುಮಲತಾ ಸ್ಪರ್ಧಿಸಿದ್ರೆ ಯಶ್ ಕೂಡ ಪ್ರಚಾರಕ್ಕೆ ಇಳಿಯಬಹುದು.

ಜೆಡಿಎಸ್ ನಾಯಕರ ಜೊತೆಯೂ ಯಶ್ ಇದ್ದಾರೆ
ಹಾಗ್ನೋಡಿದ್ರೆ, ಯಶ್ ಅವರಿಗೆ ಜೆಡಿಎಸ್ ಪಕ್ಷದಲ್ಲೂ ಸ್ನೇಹಿತರಿದ್ದಾರೆ. ಮಂಡ್ಯದ ಎಲ್ಲಾ ಜೆಡಿಎಸ್ ಶಾಸಕರ ಜೊತೆಯೂ ಯಶ್ ಪರಿಚಯ ಹೊಂದಿದ್ದಾರೆ. ಮೈಸೂರು ಶಾಸಕ ಸಾರಾ ಮಹೇಶ್ ಪರವಾಗಿ ಪ್ರಚಾರ ಕೂಡ ಮಾಡಿದ್ರು. ಅಲ್ಲಿಗೆ ಜೆಡಿಎಸ್ ನಾಯಕರ ಒತ್ತಾಯಕ್ಕೆ ಮಣಿಯುತ್ತಾರಾ ರಾಜಾಹುಲಿ?

ಪ್ರಚಾರಕ್ಕೆ ಯಾರು ಬರ್ತಾರೆ, ಯಾರು ಬರಲ್ಲ.!
ಸುಮಲತಾ ಮತ್ತು ಸಿಎಂ ಕುಮಾರಸ್ವಾಮಿ ಜೊತೆ ಬಾಂಧವ್ಯ ಗಟ್ಟಿಯಾಗಿರುವ ಹಿನ್ನೆಲೆ ಯಶ್, ಸುದೀಪ್, ದರ್ಶನ್ ಅವರ ನಡೆ ಮಂಡ್ಯ ಲೋಕಕ್ಷೇತ್ರದಲ್ಲಿ ಏನಿರಲಿದೆ ಎಂಬುದು ಈಗ ಟಾಕ್ ಆಫ್ ದಿ ಮಂಡ್ಯ ಆಗಿದೆ. ಅಂಬಿ ಮೇಲಿನ ಅಭಿಮಾನಕ್ಕಾಗಿ ಸುಮಲತಾ ಪ್ರಚಾರ ಮಾಡ್ತಾರಾ ಅಥವಾ ಸಿಎಂ ಜೊತೆಗಿನ ಸಂಬಂಧವೂ ಚೆನ್ನಾಗಿರಲಿ ಎಂದು ಪ್ರಚಾರದಿಂದ ಹಿಂದೆ ಉಳಿಯುತ್ತಾರಾ?


Click it and Unblock the Notifications











