twitter
    For Quick Alerts
    ALLOW NOTIFICATIONS  
    For Daily Alerts

    ಸುಮಲತಾ-ಕುಮಾರಸ್ವಾಮಿ: ಹಿತೈಷಿಗಳಾಗಿದ್ದವರು, ಶತ್ರುಗಳಾಗಿದ್ದು ಹೇಗೆ?

    |

    ನಟಿ, ಸಂಸದೆ ಸುಮಲತಾ ವಿರುದ್ಧ ಎಚ್‌ಡಿ.ಕುಮಾರಸ್ವಾಮಿ ಆಡಿರುವ ಮಾತುಗಳು ವಿವಾದಕ್ಕೆ ಕಾರಣವಾಗಿವೆ. ಕುಮಾರಸ್ವಾಮಿ ಅವರ ಸ್ವಪಕ್ಷದ ಕೆಲವು ನಾಯಕರೇ ಕುಮಾರಸ್ವಾಮಿ ಮಾತುಗಳನ್ನು ಖಂಡಿಸಿದ್ದಾರೆ. ಕುಮಾರಸ್ವಾಮಿ ಆಡಿದ ಮಾತುಗಳಿಗೆ ತೀಕ್ಷ್ಣವಾಗಿಯೇ ಸುಮಲತಾ ಉತ್ತರ ಸಹ ನೀಡಿದ್ದಾರೆ.

    Recommended Video

    ಸುಮಲತಾ-ಕುಮಾರಸ್ವಾಮಿ ಈಗ ಶತ್ರುಗಳಾಗಿರೋದಕ್ಕೆ ನಿಜವಾದ ಕಾರಣ ಇದೇ.. | Filmibeat Kannada

    ಹಾಗೆ ನೋಡಿದರೆ ಅಂಬರೀಶ್ ಹಾಗೂ ದೇವೇಗೌಡರ ಕುಟುಂಬದ ನಡುವೆ ಬಾಂಧವ್ಯ ಚೆನ್ನಾಗಿಯೇ ಇತ್ತು. ಅಸಲಿಗೆ 1996ರ ಚುನಾವಣೆಗೆ ಸ್ಪರ್ಧಿಸಲು ಕಾಂಗ್ರೆಸ್ ಟಿಕೆಟ್ ನಿರಾಕರಿಸಿದಾಗ ಬೇಸರಗೊಂಡಿದ್ದ ಅಂಬರೀಶ್‌ ಅನ್ನು ಜೆಡಿಯುಗೆ ಸೇರಿಸಿಕೊಂಡಿದ್ದು ದೇವೇಗೌಡರು. ಅಂಬರೀಶ್ ಮೊದಲ ಬಾರಿಗೆ ಚುನಾವಣೆ ಎದುರಿಸಿ ಗೆದ್ದು ಬಂದುದ್ದು ದೇವೇಗೌಡರು ಮುಖಂಡರಾಗಿದ್ದ ಜನತಾ ದಳ (ಯು)ನಿಂದಲೇ. 1996ರ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಬಗ್ಗೆ ಬೇಸರಗೊಂಡಿದ್ದ ಅಂಬರೀಶ್, ಕನಕಪುರದಿಂದ ಮೊದಲ ಬಾರಿಗೆ ಚುನಾವಣೆಗೆ ಸ್ಪರ್ಧಿಸಿದ್ದ ಎಚ್‌ಡಿ.ಕುಮಾರಸ್ವಾಮಿ ಚುನಾವಣೆ ಗೆಲ್ಲಲು ಸಹಾಯ ಮಾಡಿದ್ದರು.

    1999 ರಲ್ಲಿ ಅಂಬರೀಶ್ ಕಾಂಗ್ರೆಸ್‌ ಮರಳಿದರಾದರೂ ಎರಡೂ ಕುಟುಂಬದ ನಡುವೆ ಬಾಂಧವ್ಯ ಚೆನ್ನಾಗಿಯೇ ಇತ್ತು. ಎಚ್‌ಡಿಕೆ ಸಿನಿಮಾ ರಂಗಕ್ಕೆ ಕಾಲಿಟ್ಟಾಗ ಅಂಬರೀಶ್ ಸಾಕಷ್ಟು ಸಹಾಯ ಮಾಡಿದ್ದರು ಎನ್ನಲಾಗುತ್ತದೆ. ಇಬ್ಬರೂ ಒಂದೇ ಸಮುದಾಯಕ್ಕೆ ಸೇರಿದವರಾದ್ದರಿಂದ ಇಬ್ಬರ ನಡುವೆ ಗಾಢ ಸ್ನೇಹವಿಲ್ಲದಿದ್ದರೂ ದ್ವೇಷವಂತೂ ಇರಲಿಲ್ಲ. 2013 ರಲ್ಲಿ ಮಂಡ್ಯ ಲೋಕಸಭೆ ಉಪಚುನಾವಣೆಯಲ್ಲಿ ಅಂಬರೀಶ್ ಹಾಗೂ ಕುಮಾರಸ್ವಾಮಿ ಮುಖಾ-ಮುಳಿಯಾದರು. ನಟಿ ರಮ್ಯಾ ಪರವಾಗಿ ಅಂಬರೀಶ್ ಸಾರಥ್ಯ ವಹಿಸಿದರೆ ಸಿಎಸ್ ಪುಟ್ಟರಾಜು ಪರವಾಗಿ ಕುಮಾರಸ್ವಾಮಿ ಸಾರಥ್ಯ ವಹಿಸಿದ್ದರು. ನಟಿ ರಮ್ಯಾ ಚುನಾವಣೆಯಲ್ಲಿ ಗೆದ್ದರು. ಇದು ಕುಮಾರಸ್ವಾಮಿಗೆ ಸಣ್ಣ ಹಿನ್ನಡೆಯಾಯಿತು. ಆದರೆ ಮುಂದಿನ ವರ್ಷವೇ ನಡೆದ ಮುಖ್ಯ ಚುನಾವಣೆಯಲ್ಲಿ ಪುಟ್ಟರಾಜು ಗೆದ್ದು ರಮ್ಯಾ ಸೋತು ಹೋದರು.

    ಎಲ್ಲವೂ ಆರಂಭವಾಗಿದ್ದು ಅಂಬರೀಶ್ ಕಾಲವಾದ ಬಳಿಕ

    ಎಲ್ಲವೂ ಆರಂಭವಾಗಿದ್ದು ಅಂಬರೀಶ್ ಕಾಲವಾದ ಬಳಿಕ

    ಆ ನಂತರ ಅಂಬರೀಶ್ ಕಾಲವಾಗುವವರೆಗೂ ಎಲ್ಲವೂ ಸಾಮಾನ್ಯದಂತೆ ನಡೆದುಕೊಂಡು ಹೋಗುತ್ತಿತ್ತು. 2018 ರ ವಿಧಾನಸಭೆ ಚುನಾವಣೆಯಿಂದ ಅಂಬರೀಶ್ ದೂರ ಉಳಿದ ಕಾರಣ ಕುಮಾರಸ್ವಾಮಿ-ಅಂಬರೀಶ್ ಎದುರಾಗಲೇ ಇಲ್ಲ. ಆ ಚುನಾವಣೆಯಲ್ಲಿ ಅಂಬರೀಶ್‌ ಜೆಡಿಎಸ್‌ ಪರ ಇದ್ದರು ಎಂಬ ಸುದ್ದಿಗಳು ಹರಿದಾಡಿದ್ದವು. ಚುನಾವಣೆ ದಿನವೂ ಸಹ ಜೆಡಿಎಸ್ ಅಭ್ಯರ್ಥಿಯ ಕಾರಿನಲ್ಲಿ ಬಂದು ಮತಚಲಾಯಿಸಿದರು ಅಂಬರೀಶ್. ಆದರೆ ಚಿತ್ರಣ ಬದಲಾಗಿದ್ದು ಅಂಬರೀಶ್ ಕಾಲವಾದ ಬಳಿಕ. ಅಂಬರೀಶ್ ನಿಧನರಾದಾಗ ಸಿಎಂ ಆಗಿದ್ದ ಕುಮಾರಸ್ವಾಮಿ, ತಮ್ಮ ಎಲ್ಲ ಕಾರ್ಯ ಬದಿಯಲ್ಲಿಟ್ಟು ಸ್ಥಳದಲ್ಲಿದ್ದು ಮೇಲುಸ್ತುವಾರಿ ನೋಡಿಕೊಂಡರು. ಅಂಬರೀಶ್ ಪಾರ್ಥಿವ ಶರೀರವನ್ನು ಮಂಡ್ಯಕ್ಕೆ ಕರೆತಂದರು. ಮಂಡ್ಯಕ್ಕೆ ಬಂದಾಗ ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರಸ್ವಾಮಿ ಮುನ್ನೆಲೆಯಲ್ಲಿ ಕಾಣಿಸಿಕೊಂಡರು. ಆಗಲೇ ಮಾಧ್ಯಮಗಳಿಗೆ, ಜನರಿಗೆ ಅರ್ಥವಾಗಿಬಿಟ್ಟಿತ್ತು ಇದರ ಹಿಂದೆ ರಾಜಕೀಯ ಉದ್ದೇಶವಿದೆ ಎಂದು.

    ಮಂಡ್ಯದಲ್ಲಿ ಮಗನಿಗೆ ನೆಲೆ ಕಲ್ಪಿಸಲು ಯತ್ನಿಸಿದ್ದ ಎಚ್‌ಡಿಕೆ

    ಮಂಡ್ಯದಲ್ಲಿ ಮಗನಿಗೆ ನೆಲೆ ಕಲ್ಪಿಸಲು ಯತ್ನಿಸಿದ್ದ ಎಚ್‌ಡಿಕೆ

    ಮಗ ನಿಖಿಲ್ ಕುಮಾರಸ್ವಾಮಿಗೆ ರಾಜಕೀಯ ಭವಿಷ್ಯ ನಿರ್ಮಿಸಲಿ ಕೊಡಲು ಕುಮಾರಸ್ವಾಮಿ ಮಂಡ್ಯವನ್ನು ಆಯ್ಕೆ ಮಾಡಿದ್ದರು. 2019 ರ ಲೋಕಸಭೆ ಚುನಾವಣೆಗೆ ಮಗನನ್ನು ಕಾಂಗ್ರೆಸ್-ಜೆಡಿಎಸ್ ಜಂಟಿ ಪಕ್ಷಗಳ ವತಿಯಿಂದ ಕಣಕ್ಕೆ ಇಳಿಸಿದರು. ಸುಮಲತಾ ಚುನಾವಣೆ ಕಣಕ್ಕೆ ಬರುವ ಮುನ್ನ ಅಂಬರೀಶ್‌ ಬಗ್ಗೆ ಒಳ್ಳೆಯ ನುಡಿಗಳನ್ನಾಡುತ್ತಿದ್ದ ಕುಮಾರಸ್ವಾಮಿ, ಆ ನಂತರ ವರಸೆ ಬದಲಿಸಿದರು. ಸ್ವತಃ ಕುಮಾರಸ್ವಾಮಿ ಸೇರಿದಂತೆ ಜೆಡಿಎಸ್‌ ಶಾಸಕರು, ಮುಖಂಡರು ಮಹಿಳೆಯೆಂಬ ಕನಿಷ್ಠ ಗೌರವವನ್ನೂ ನೀಡದೆ ಬಹು ತುಚ್ಛವಾಗಿ ವಾಗ್ದಾಳಿ ಮಾಡಿದರು. ಅಭ್ಯರ್ಥಿಯಾಗಿದ್ದ ನಿಖಿಲ್ ಕುಮಾರಸ್ವಾಮಿ ಬಿಟ್ಟರೆ ಬಹುತೇಕರು ಸುಮಲತಾ ವಿರುದ್ಧ ಕಠಿಣ ವಾಗ್ದಾಳಿ ಮಾಡಿದ್ದರು. ಸುಮಲತಾ ಮಾತ್ರವೇ ಅಲ್ಲದೆ ಅವರಿಗೆ ಜೊತೆಯಾಗಿದ್ದ ಯಶ್, ದರ್ಶನ್ ವಿರುದ್ಧವೂ ತೀಕ್ಷ್ಣವಾಗಿ, ಅಗೌರವದ ಮಾತುಗಳನ್ನಾಡಿದ್ದರು.

    ಸುಮಲತಾ ಹಾಗೂ ಬಳಗವೂ ಸೂಕ್ತ ಪ್ರತ್ಯುತ್ತರ ನೀಡಿತ್ತು

    ಸುಮಲತಾ ಹಾಗೂ ಬಳಗವೂ ಸೂಕ್ತ ಪ್ರತ್ಯುತ್ತರ ನೀಡಿತ್ತು

    ಸುಮಲತಾ ಹಾಗೂ ಅವರ ಬಳಗ ಸಹ ಕುಮಾರಸ್ವಾಮಿ ಹಾಗೂ ಅವರ ಬಳಗಕ್ಕೆ ಸೂಕ್ತ ಪ್ರತ್ಯುತ್ತರಗಳನ್ನೇ ನೀಡಿದರು. ಯಶ್ ಅಂತೂ, ''ಅಂಬರೀಶಣ್ಣನಿಗೆ ಇರುವುದು ಒಬ್ಬರೇ ಹೆಂಡತಿ'' ಎಂದು ಛೇಡಿಸಿದ್ದರು ಸಹ. ಸುಮಲತಾ ಅನ್ನು ಸೋಲಿಸಲು ಸಕಲ ಪ್ರಯತ್ನಗಳನ್ನು ಮಾಡಲಾಗಿತ್ತು. ನಕಲಿ ಸುಮಲತಾರನ್ನು ಕರೆಸಿ ಚುನಾವಣೆಗೆ ನಿಲ್ಲಿಸಲಾಗಿತ್ತು. ಆದರೆ ಅದೆಲ್ಲದರ ಬಳಿಕವೂ ಸುಮಲತಾ ದೊಡ್ಡ ಅಂತರದಲ್ಲಿಯೇ ನಿಖಿಲ್ ಅವರನ್ನು ಸೋಲಿಸಿದರು. ಅದು ನಿಖಿಲ್ ಸೋಲು ಎಂಬುದಕ್ಕಿಂತಲೂ ಕುಮಾರಸ್ವಾಮಿ ಸೋಲಾಗಿತ್ತು. ರಾಷ್ಟ್ರಮಟ್ಟದಲ್ಲಿ ಕುಮಾರಸ್ವಾಮಿಗೆ ಮುಖಭಂಗವಾಯಿತು. ಇದಕ್ಕೆ ಮುಖ್ಯ ಕಾರಣವಾಗಿ ಕಂಡವರು ಸುಮಲತಾ. ಹಾಗಾಗಿ ಅವರ ಮೇಲೆ ಈಗಾಗಲೇ ಇದ್ದ ವಿರೋಧ ದ್ವೇಷವಾಗಿ ಪರಿಣಮಿಸಿತು.

    ಅವಹೇಳನಕಾರಿ ಮಾತುಗಳಾಡಿದ ಕುಮಾರಸ್ವಾಮಿ

    ಅವಹೇಳನಕಾರಿ ಮಾತುಗಳಾಡಿದ ಕುಮಾರಸ್ವಾಮಿ

    ಅದೇ ಈಗಲೂ ಮುಂದುವರೆದಿದೆ. ಮಂಡ್ಯ ವಿಷಯ ಚರ್ಚೆಗೆ ಬಂದಾಗಲೆಲ್ಲ ಕುಮಾರಸ್ವಾಮಿ, ಸುಮಲತಾ ವಿರುದ್ಧ ವಾಗ್ದಾಳಿ ನಡೆಸುತ್ತಲೇ ಇರುತ್ತಾರೆ. ಸುಮಲತಾ ವಿಷಯದಲ್ಲಿಯಂತೂ ಕಠಿಣವಾದ ಮಾತುಗಳನ್ನೇ ಅವರು ಬಳಸುತ್ತಾರೆ. ಈ ಬಾರಿಯೂ ಹಾಗೆಯೇ ಆಗಿದೆ. ಕೆಆರ್‌ಎಸ್ ಬಿರುಕು ಬಿಟ್ಟು ನೀರು ಪೋಲಾಗುತ್ತಿದೆ ಎಂದು ಕೇಳಿದರೆ, ''ಸುಮಲತಾರನ್ನು ಡ್ಯಾಂಡ್‌ಗೆ ಅಡ್ಡ ಮಲಗಿಸಿ'' ಎಂದಿದ್ದಾರೆ. ಈ ಹೇಳಿಕೆಗೆ ವಿರೋಧವಾದ ಬಳಿಕವೂ ತಿದ್ದಿಕೊಳ್ಳದೆ, ''ಆ ಯಮ್ಮನ ಗಂಡ ಮಂಡ್ಯದಲ್ಲಿ ಏನೇನು ಹಗರಣ ಮಾಡಿದ್ದಾನೆ ಗೊತ್ತಿದೆ'' ಎಂದು ಮತ್ತೊಮ್ಮೆ ಲಘುವಾಗಿ ಮಾತನಾಡಿದ್ದಾರೆ.

    ಬೆದರಿಕೆ ಶೈಲಿಯ ಎಚ್ಚರಿಕೆ ಕೊಟ್ಟಿರುವ ರಾಕ್‌ಲೈನ್ ವೆಂಕಟೇಶ್

    ಬೆದರಿಕೆ ಶೈಲಿಯ ಎಚ್ಚರಿಕೆ ಕೊಟ್ಟಿರುವ ರಾಕ್‌ಲೈನ್ ವೆಂಕಟೇಶ್

    ಇದಕ್ಕೆಲ್ಲ ಇಂದು ಉತ್ತರ ನೀಡಿರುವ ಸುಮಲತಾ, ಅಂಬರೀಶ್ ಸ್ಮಾರಕ ನಿರ್ಮಾಣ ಮಾಡಲು ಕುಮಾರಸ್ವಾಮಿ ನಿರಾಕರಿಸಿದ್ದರು ಎಂಬ ಸತ್ಯವನ್ನು ಹೊರಹಾಕಿದ್ದಾರೆ. ರಾಕ್‌ಲೈನ್ ವೆಂಕಟೇಶ್ ಮಾತನಾಡಿ ಬೆದರಿಕೆ ಶೈಲಿಯಲ್ಲಿಯೇ ಕುಮಾರಸ್ವಾಮಿಗೆ ಎಚ್ಚರಿಕೆ ನೀಡಿದ್ದಾರೆ. ಒಟ್ಟಿನಲ್ಲಿ ಈ ಇಬ್ಬರ ರಾಜಕೀಯ ಕಿತ್ತಾಟ, ಬಹುತೇಕ ಸಭ್ಯ ರಾಜಕಾರಣ (ಮಾತುಗಳಲ್ಲಿ) ನೋಡಿಕೊಂಡು ಬಂದಿದ್ದ ರಾಜ್ಯದ ಜನರಿಗೆ ಕೆಟ್ಟ ಸಂದೇಶವನ್ನಂತೂ ತಲುಪಿಸುತ್ತಿದೆ.

    English summary
    What Is The Reason Behind War Of Words Between HD Kumaraswamy And Sumalatha Ambareesh. They both were engaged in verbal fight since 2019.
    Friday, July 9, 2021, 20:04
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X