Royal Challengers 'Bangalore' ಬೇಡ ಎಂದ ರಿಷಬ್ ಶೆಟ್ಟಿ; ವಿಡಿಯೋ ವೈರಲ್
ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸಿನಿರಸಿಕರು 'ಕಾಂತಾರ' ಪ್ರೀಕ್ವೆಲ್ ಸಿನಿಮಾ ನೋಡಲು ಕಾಯುತ್ತಿದ್ದಾರೆ. ಸಿನಿಮಾ ಮುಹೂರ್ತ ಮಾಡಿ ಮತ್ತೆ ರಿಷಬ್ ಶೆಟ್ಟಿ ಸೈಲೆಂಟ್ ಆಗಿಬಿಟ್ಟಿದ್ದಾರೆ. ಮುಂದಿನ ವರ್ಷ ಸಿನಿಮಾ ತೆರೆಗೆ ಬರುವ ಸಾಧ್ಯತೆಯಿದೆ.
'ಕಾಂತಾರ' ಚಿತ್ರದ ಕಾಡುಬೆಟ್ಟು ಶಿವ ಆಗಿ ರಿಷಬ್ ಶೆಟ್ಟಿ ನ್ಯಾಷನಲ್ ಸ್ಟಾರ್ ಪಟ್ಟಕ್ಕೇರಿದ್ದು ಗೊತ್ತೇಯಿದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸಿನಿರಸಿಕರಿಗೆ ರಿಷಬ್ ಪರಿಚಯವಾಗಿದೆ. ಇತ್ತೀಚೆಗೆ ರಾಮ್‌ರಾಜ್ ಬ್ರ್ಯಾಂಡ್ ಅಂಬಾಸಿಡರ್ ಆಗಿ ಕೂಡ ರಿಷಬ್ ಆಯ್ಕೆ ಆಗಿದ್ದಾರೆ. ಈ ಹಿಂದೆ ರಾಕಿಂಗ್ ಸ್ಟಾರ್ ಯಶ್ ಆ ಸಂಸ್ಥೆ ಅಂಬಾಸಿಡರ್ ಆಗಿದ್ದರು. ಇದೀಗ ರಿಷಬ್ ಆರ್‌ಸಿಬಿ ಜೊತೆ ಕೈ ಜೋಡಿಸಿದ್ದಾರೆ.

'ಆರ್‌ಸಿಬಿ' ಐಪಿಎಲ್ ಕ್ರಿಕೆಟ್ ತಂಡದ ಜೊತೆ ಹೊಂಬಾಳೆ ಫಿಲ್ಮ್ಸ್ ಸಂಸ್ಥೆ ಕೈ ಜೋಡಿಸಿರುವುದು ಗೊತ್ತೇಯಿದೆ. ಆರ್‌ಸಿಬಿ ತಂಡದ ಡಿಜಿಟಲ್ ಪಾರ್ಟ್ನರ್ ಆಗಿ ಹೊಂಬಾಳೆ ಸಂಸ್ಥೆ ಜೊತೆಯಾಗಿದೆ. ಕಳೆದೆರಡು ವರ್ಷಗಳಿಂದ ಆರ್ಸಿಬಿಯ ಎಲ್ಲ ಅಧಿಕೃತ ವಿಡಿಯೋ ನಿರ್ಮಾಣ ಹಾಗೂ ಪ್ರಸಾರವನ್ನು ಹೊಂಬಾಳೆ ಫಿಲ್ಮ್ಸ್ ಸಂಸ್ಥೆ ಮಾಡುತ್ತಾ ಬರ್ತಿದೆ.
ಮಾರ್ಚ್ 22ರಿಂದ 17ನೇ ಐಪಿಎಲ್ ಸೀಸನ್ ಆರಂಭವಾಗಲಿದೆ. ಈ ಬಾರಿ ಆದರೂ ಆರ್‌ಸಿಬಿ ತಂಡ ಕಪ್ ಎತ್ತಿ ಹಿಡಿಯುತ್ತಾ ಎಂದು ಕ್ರಿಕೆಟ್ ಪ್ರೇಮಿಗಳು ಕಾಯುತ್ತಿದ್ದಾರೆ. ಮತ್ತೊಂದು ಕಡೆ ಹೊಂಬಾಳೆ ಫಿಲ್ಮ್ಸ್ ಆರ್‌ಸಿಬಿ ಬಗ್ಗೆ ಹೊಸ ಹೊಸ ವಿಚಾರಗಳನ್ನು ಹಂಚಿಕೊಳ್ಳುತ್ತಿದೆ. ಸದ್ಯ ರಿಷಬ್ ಶೆಟ್ಟಿ ಆರ್‌ಸಿಬಿ ಅಭಿಮಾನಿಗಳಿಗೆ ಸಿಹಿಸುದ್ದಿ ಕೊಟ್ಟಿದ್ದಾರೆ. ಅಭಿಮಾನಿಗಳ ಬಹಳ ದಿನಗಳ ಬೇಡಿಕೆಯನ್ನು ಆರ್‌ಸಿಬಿ ತಂಡದ ಮಾಲೀಕರು ಈ ಬಾರಿ ಈಡೇರಿಸುತ್ತಿದ್ದಾರೆ. ಆ ಬಗ್ಗೆ ರಿಷಬ್ ಸುಳಿವು ಕೊಟ್ಟಿದ್ದಾರೆ.
"ರಿಷಬ್ ಶೆಟ್ಟಿ ಎನ್ ಹೇಳ್ತಿದ್ದಾರೆ ಅರ್ಥ ಆಯ್ತಾ?" ಎಂದು 'ರಾಯಲ್ ಚಾಲೆಂಜರ್ಸ್ ಬೆಂಗಳೂರು' ಅಧಿಕೃತ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಒಂದು ವೀಡಿಯೋ ರಿಲೀಸ್ ಆಗಿದೆ. ಇದರಲ್ಲಿ Bangalore ಎಂದು ಕೋಣದ ಮೇಲೆ ಬರೆದ ಕೋಣವನ್ನು ನೋಡಿ, "ಭಟ್ರೆ ತಗೊಂಡೋಗಿ ಇದನ್ನ.. ಅರ್ಥ ಆಯ್ತಾ?" ಎಂದು ಕೇಳಿದ್ದಾರೆ. 8 ವರ್ಷಗಳ ಹಿಂದೆ ಬೆಂಗಳೂರು ಎನ್ನುವುದನ್ನು ಇಂಗ್ಲೀಷ್‌ನಲ್ಲಿ ಬರೆಯುವಾಗ ಮತ್ತು ಉಚ್ಛರಿಸುವಾಗ ಸಣ್ಣ ಬದಲಾವಣೆ ಮಾಡಲಾಗಿತ್ತು.
Bangalore ಎನ್ನುವುದನ್ನು Bengaluru ಎಂದು ಬದಲಾಯಿಸಲಾಗಿತ್ತು. ಆರ್‌ಸಿಬಿ ತಂಡದ ಬಗ್ಗೆ ಮಾತನಾಡುವಾಗ ಮಾತ್ರ ಅದು Bangalore ಎಂದೇ ಇತ್ತು. ಅಭಿಮಾನಿಗಳು ಇದನ್ನು ಬದಲಿಸಿ Bengaluru ಎಂದು ಮಾಡಬೇಕು ಎಂದು ಮನವಿ ಮಾಡುತ್ತಿದ್ದರು. ಅಂತೂ ಇಂತೂ ಈ ಬಾರಿ ಆರ್‌ಸಿಬಿ ಮಾಲೀಕರು ಇದಕ್ಕೆ ಒಪ್ಪಿದ್ದಾರೆ. ರಿಷಬ್ ಶೆಟ್ಟಿ ಸ್ಪೆಷಲ್ ವಿಡಿಯೋದಲ್ಲಿ ಆ ಬಗ್ಗೆ ಸುಳಿವು ಕೊಟ್ಟಿದ್ದಾರೆ. ಮಾರ್ಚ್ 19ರಂದು ಅನ್‌ಬಾಕ್ಸ್ ಈವೆಂಟ್ ನಡೆಯಲಿದ್ದು ಅಂದು ಅಧಿಕೃತವಾಗಿ ಇದು ಗೊತ್ತಾಗಲಿದೆ.
ಒಟ್ನಲ್ಲಿ 'ರಾಯಲ್ ಚಾಲೆಂಜರ್ಸ್ ಬೆಂಗಳೂರು' ಹೆಸರಿನಲ್ಲಿ ಬದಲಾವಣೆ ಮಾಡುತ್ತಿರುವುದು ಕ್ರಿಕೆಟ್ ಪ್ರೇಮಿಗಳಿಗೆ ಖುಷಿ ಕೊಟ್ಟಿದೆ. ಅಂತೂ ಇಂತೂ ನಮ್ಮ ಮನವಿಗೆ ಸ್ಪಂದಿಸಿದ್ದಕ್ಕೆ ಧನ್ಯವಾದ ಎಂದು ಕಾಮೆಂಟ್ ಮಾಡುತ್ತಿದ್ದಾರೆ. ನಿರ್ದೇಶಕ ಸಿಂಪಲ್ ಸುನಿ ಟ್ವೀಟ್ ಮಾಡಿ "ಈಗ ಅಂಟಿರೋ ಪೀಡೆ ಬಿಡ್ತದೇ ..ಹಾಗಾಗಿ , ಈ ಸಲ ಅಂತೂ ಕಪ್ ನಮ್ದೇ" ಎಂದು ಬರೆದಿದ್ದಾರೆ. ಇನ್ನು 'ರಾಯಲ್ ಚಾಲೆಂಜರ್ಸ್ ಬೆಂಗಳೂರು' ತಂಡದ ಜೊತೆ ಹೊಂಬಾಳೆ ಫಿಲ್ಮ್ಸ್ ಸಂಸ್ಥೆ ಅದ್ಭುತ ಕಂಟೆಂಟ್ ನಿರೀಕ್ಷೆ ಮಾಡಬಹುದು.
ಆರ್‌ಸಿಬಿ ಹಾಗೂ ಹೊಂಬಾಳೆ ಫಿಲ್ಮ್ಸ್ ಸಂಸ್ಥೆಗಳು ಜಂಟಿಯಾಗಿ ಸಿನಿಮಾ ಹಾಗೂ ಕ್ರಿಕೆಟ್ ಪ್ರಚಾರವನ್ನು ದೊಡ್ಡಮಟ್ಟದಲ್ಲಿ ಮಾಡುತ್ತಿವೆ. ಈ ಹಿಂದೆ ಆರ್‌ಸಿಬಿ ತಂಡಕ್ಕೆ ಹೊಂಬಾಳೆ ಸಂಸ್ಥೆ KGF-2 ಚಿತ್ರದ ವಿಶೇಷ ಪ್ರದರ್ಶನ ಆಯೋಜಿಸಿತ್ತು.
ರಿಷಬ್ ಶೆಟ್ಟಿ ಎನ್ ಹೇಳ್ತಿದ್ದಾರೆ ಅರ್ಥ ಆಯ್ತಾ?
— Royal Challengers Bangalore (@RCBTweets) March 13, 2024
Understood what Rishabh Shetty is trying to say?
You’ll find out at RCB Unbox. Buy your tickets now. 🎟️@shetty_rishab #RCBUnbox #PlayBold #ArthaAytha #ನಮ್ಮRCB pic.twitter.com/sSrbf5HFmd
ಈ ಬಾರಿ ಐಪಿಎಲ್ ಪ್ರಚಾರಕ್ಕಾಗಿ ಹೊಂಬಾಳೆ ಸಂಸ್ಥೆ ಸಾಕಷ್ಟು ಹೊಸ ಹೊಸ ಪ್ರಯತ್ನಗಳನ್ನು ಮಾಡಲು ಮುಂದಾಗಿದೆ. ಅದಕ್ಕೆ ರಿಷಬ್ ಶೆಟ್ಟಿ ಕೂಡ ಕೈಜೋಡಿಸಲಿದ್ದಾರೆ. ಇದು ಸಹಜವಾಗಿಯೇ ಸಿನಿಮಾ ಹಾಗೂ ಕ್ರಿಕೆಟ್ ಪ್ರೇಮಿಗಳ ಕುತೂಹಲ ಹೆಚ್ಚಿಸಿದೆ.


Click it and Unblock the Notifications










