3991 ಪುಟ, 231 ಸಾಕ್ಷಿ, ರೇಣುಕಾಸ್ವಾಮಿ ಪ್ರಕರಣದಲ್ಲಿ ದರ್ಶನ್‌ಗೆ ಕಂಟಕವಾಗುವುದೇನು..?
ದರ್ಶನ್ ಜೈಲು ಪಾಲಾಗಿ ಒಂದಲ್ಲ, ಮೂರು ತಿಂಗಳಾಗುತ್ತಾ ಬರುತ್ತಿವೆ. ಈ ಎರಡೂವರೆ ತಿಂಗಳಿನಲ್ಲಿ ಅವರನ್ನು ಹೊರ ತರುವ ಅನೇಕ ಪ್ರಯತ್ನಗಳಾಗಿವೆ. ಆದರೆ, ಫಲಿತಾಂಶ ಮಾತ್ರ ಶೂನ್ಯ. ಜೈಲಾಚೆ ಕರೆತರುವುದು ಇರಲಿ ದರ್ಶನ್ ದುರಾದೃಷ್ಟಕ್ಕೆ ಮನೆಯ ರುಚಿ ಮತ್ತು ಶುಚಿಯಾದ ಊಟ ತಿನ್ನುವ ಸೌಭಾಗ್ಯ ಕೂಡ ಸಿಗಲಿಲ್ಲ. ಮುಂದೆಯಾದರೂ ಸಿಗುತ್ತಾ..? ಸದ್ಯದ ವಾತಾವರಣ ನೋಡಿದರೆ ಅದು ಕೂಡ ಕಷ್ಟವೆನ್ನುವ ಮಾತು ಕೇಳಿ ಬರುತ್ತಿದೆ. ಯಾಕೆಂದರೆ ರೇಣುಕಾಸ್ವಾಮಿಯ ಕೊಲೆ ಪ್ರಕರಣದಲ್ಲಿ ದರ್ಶನ್ ಪಾತ್ರದ ಕುರಿತು ಪೊಲೀಸರು ವಿವರಣೆಯನ್ನು ನೀಡಿದ್ದಾರೆ. ಚಾರ್ಜ್ ಶೀಟ್ ಸಲ್ಲಿಸಿದ್ದಾರೆ.
ಇನ್ನೂ ದರ್ಶನ್ ಅವರನ್ನು ಎ2ದಿಂದ ಎ1 ಮಾಡಲಾಗುತ್ತೆ ಅನ್ನುವ ಮಾತು ಕೇಳಿ ಬರುತ್ತಿತ್ತು. ಆದರೆ.. ಚಾರ್ಜ್ ಶೀಟ್‌ನಲ್ಲಿ ದರ್ಶನ್ ಅವರನ್ನು ಎ2 ಎಂದೇ ನಮೂದಿಸಿರುವ ಪೊಲೀಸರು ರೇಣುಕಾಸ್ವಾಮಿಯ ಅಪಹರಣದ ಹಿಂದೆ ದರ್ಶನ್ ಕೈ ಇದೆ ಎನ್ನುವುದನ್ನು ಸ್ಪಷ್ಟಪಡಿಸಿದ್ದಾರೆ. ದರ್ಶನ್ ಅವರ ಆದೇಶದ ಮೇರೆಗೆ ಅವರ ಸಂಗಡಿಗರು ಚಿತ್ರದುರ್ಗದಿಂದ ರೇಣುಕಾಸ್ವಾಮಿಯನ್ನು ಅಪಹರಿಸಿದ್ದು ಎಂದು ಕೂಡ ಉಲ್ಲೇಖಿಸಿದ್ದಾರೆ. ಪಟ್ಟಣಗೆರೆ ಶೆಡ್‌ಗೆ ಕರೆದೊಯ್ಯುವಂತೆ ಕೂಡ ಹೇಳುವುದಲ್ಲದೇ, ರೇಣುಕಾಸ್ವಾಮಿ ಮೃತ ದೇಹವನ್ನು ಎಲ್ಲಾದರೂ ಬಿಸಾಕುವಂತೆ ಕೂಡ ದರ್ಶನ್ ಅವರೇ ಹೇಳಿದ್ದರು ಎಂದು ಕೂಡ ಪೊಲೀಸರು ಜಾರ್ಜ್‌ಶೀಟ್‌ನಲ್ಲಿ ಉಲ್ಲೇಖ ಮಾಡಿರುವುದಾಗಿ TV9 ಕನ್ನಡ ವರದಿ ಮಾಡಿದೆ.

ಇನ್ನೂ ಕೊಲೆ ನಡೆದ ಸ್ಥಳದಲ್ಲಿ ದರ್ಶನ್ ಇದ್ದರು ಆ ನಂತರ ಸಾಕ್ಷ್ಯಗಳನ್ನು ನಾಶ ಮಾಡುವ ಪ್ರಯತ್ನವನ್ನು ಕೂಡ ದರ್ಶನ್ ಮಾಡಿದ್ದರು ಎಂದು ಚಾರ್ಜ್ ಶೀಟ್‌ನಲ್ಲಿ ಪೊಲೀಸರು ದೃಡ ಪಡಿಸಿದ್ದು, ದರ್ಶನ್ ಬಟ್ಟೆ ಮತ್ತು ಶೂ ಮೇಲೆ ರೇಣುಕಾಸ್ವಾಮಿಯ ರಕ್ತ ಇರುವುದು ಪತ್ತೆಯಾಗಿದೆ ಎಂದು ಕೂಡ TV9 ಕನ್ನಡ ವರದಿ ಮಾಡಿದೆ. ಇದಿಷ್ಟೇ ಅಲ್ಲದೇ ಕೊಲೆಯ ನಂತರ ಪ್ರಕರಣವನ್ನು ಮುಚ್ಚಿ ಹಾಕಲು, ದರ್ಶನ್ ಕೆಲವರಿಗೆ ಹಣದ ಆಮಿಷ ನೀಡಿದ್ದರು ಎಂದು ಕೂಡ ಪೊಲೀಸರು ದೋಷಾರೋಪಣೆ ಪಟ್ಟಿಯಲ್ಲಿ ನಮೂದಿಸಿದ್ದಾರೆ.
ಅಂದ್ಹಾಗೇ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಮತ್ತು ಹದಿನೇಳು ಆರೋಪಿಗಳ ವಿರುದ್ಧ ಏಳು ಸಂಪುಟಗಳ, ಹತ್ತು ಕಡತ ಹೊಂದಿರುವ 3991ಪುಟಗಳ ಚಾರ್ಜ್ ಶೀಟ್ ಸಲ್ಲಿಸಿರುವ ಪೊಲೀಸರು ಈ ಪ್ರಕರಣದಲ್ಲಿ 231 ಸಾಕ್ಷಿಗಳನ್ನು ಉಲ್ಲೇಖ ಮಾಡಿದ್ದಾರೆ. ಆ ಪೈಕಿ ಪ್ರತ್ಯಕ್ಷ ಸಾಕ್ಷಿದಾರರು ಮೂರು ಜನ ಇದ್ದಾರೆ ಎಂದು ಹೇಳಿರುವ ಪೊಲೀಸರು, ಸಿಎಫ್‌ಎಸ್‌ಎಲ್ ವರದಿಯಿಂದ 08 ಸಾಕ್ಷಿಗಳು ಸಿಕ್ಕಿವೆ ಅಂದಿದ್ದಾರೆ. ವೈದ್ಯರು ಮತ್ತು ಆರ್‌ಟಿಒ ಅಧಿಕಾರಿಗಳನ್ನು ಕೂಡ ಪೊಲೀಸರು ಸಾಕ್ಷಿಯನ್ನಾಗಿಸಿದ್ಧಾರೆ.

ಒಟ್ನಲ್ಲಿ ಸದ್ಯಕ್ಕೆ ಪೊಲೀಸರು ಸಲ್ಲಿಸಿರುವ ಈ ಚಾರ್ಜ್‌ಶೀಟ್‌ನಿಂದ ದರ್ಶನ್ ಸಂಕಷ್ಟ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ. ಇನ್ನೂ ಇಲ್ಲಿಯವರೆಗೆ ದರ್ಶನ್ ಈ ದಿನಕ್ಕೆ ಕಾದು ಕುಂತಿದ್ದರು. ಜಾಮೀನಿಗೆ ಅರ್ಜಿ ಸಲ್ಲಿಸದೇ ಪೊಲೀಸರು ಚಾರ್ಜ್‌ಶಿಟ್ ಸಲ್ಲಿಸುವುದಕ್ಕೆ ಕಾಯುತ್ತಿದ್ದರು. ಈಗ ಪೊಲೀಸರು ಚಾರ್ಜ್‌ಶೀಟ್ ಸಲ್ಲಿಸಿದ್ದಾರೆ. ಈ ಹಿನ್ನೆಲೆ ದರ್ಶನ್ ಶೀಘ್ರದಲ್ಲಿಯೇ ಜಾಮೀನಿಗಾಗಿ ಅರ್ಜಿ ಸಲ್ಲಿಸುವ ಸಾಧ್ಯತೆಯೂ ಇದೆ.


Click it and Unblock the Notifications











