ಅದೊಂದು ಕಾರಣಕ್ಕೆ ಮದುವೆ ಬೇಡ ಎಂದು ನಿರ್ಧರಿಸಿದ್ದರು ನಟಿ ಭಾವನಾ
ನಟಿ ಭಾವನಾ ರಾಮಣ್ಣ ಗುಡ್ ನ್ಯೂಸ್ ಕೊಟ್ಟಿದ್ದಾರೆ. ತಾವು 6 ಗರ್ಭಿಣಿ ಆಗಿರುವುದಾಗಿ ಹೇಳಿರುವ ನಟಿ ಶೀಘ್ರದಲ್ಲೇ ಅವಳಿ ಮಕ್ಕಳಿಗೆ ಜನ್ಮ ನೀಡಲು ಸಜ್ಜಾಗುತ್ತಿದ್ದಾರೆ. ಐವಿಎಫ್ (IVF) ತಂತ್ರಜ್ಞಾನದ ಮೂಲಕ ಆಕೆ ಮಕ್ಕಳನ್ನು ಪಡೆಯುವ ಕನಸು ನನಸು ಮಾಡಿಕೊಳ್ಳುತ್ತಿದ್ದಾರೆ. ಮದುವೆ ಆಗದೆಯೇ ಭಾವನಾ ರಾಮಣ್ಣ ತಾಯಿಯಾಗುತ್ತಿದ್ದಾರೆ.
ಹೆಚ್ಚಿನ ದಂಪತಿಗಳು ಸ್ವಾಭಾವಿಕವಾಗಿ ಮಗು ಆಗದಿದ್ದರೆ ಐವಿಎಫ್ ಮೊರೆ ಹೋಗುತ್ತಾರೆ. ಈ ತಂತ್ರಜ್ಞಾನದ ಮೂಲಕ ಸಾಕಷ್ಟು ಜನ ಮಕ್ಕಳನ್ನು ಹೆಸರು ತಮ್ಮ ಕನಸನ್ನು ನನಸು ಮಾಡಿಕೊಂಡಿದ್ದಾರೆ. ನಟಿ ಭಾವನಾ ಮೊದಲಿನಿಂದಲೂ ಮದುವೆ ಬೇಡ ಎನ್ನುತ್ತಲೇ ಬರುತ್ತಿದ್ದರು. ಆದರೆ ಮಗು ಪಡೆಯುವ ಆಸೆಯನ್ನು ಕೆಲ ಸಂದರ್ಶನಗಳಲ್ಲಿ ವ್ಯಕ್ತಪಡಿಸಿದ್ದರು. ವಯಸ್ಸು 40 ದಾಟಿದರೂ ಯಾಕೆ ಭಾವನಾ ಮದುವೆ ಆಗಿಲ್ಲ ಎಂದು ಕೆಲವರು ಕೇಳುತ್ತಲೇ ಇದ್ದರು.

ಅಂತಿಮವಾಗಿ ಮದುವೆ ಆಗದೆಯೇ ಮಕ್ಕಳು ಮಕ್ಕಳು ನಟಿ ಭಾವನಾ ರಾಮಣ್ಣ ಮುಂದಾಗಿದ್ದಾರೆ. ಈಗಾಗಲೇ ಐವಿಎಫ್ (IVF) ತಂತ್ರಜ್ಞಾನದ ಸಹಾಯದಿಂದ ಗರ್ಭಿಣಿಯಾಗಿದ್ದಾರೆ. ಈ ಬಗ್ಗೆ ಇನ್‌ಸ್ಟಾಗ್ರಾಮ್‌ನಲ್ಲಿ ಬರೆದುಕೊಂಡಿದ್ದಾರೆ. ಖುಷಿಯ ವಿಚಾರವನ್ನು ಹಂಚಿಕೊಂಡಿದ್ದಾರೆ. "ಹೊಸ ಅಧ್ಯಾಯ, ಹೊಸ ಲಯ.
ನಾನು ಈ ವಿಚಾರ ಹೇಳುತ್ತೇನೆಂದು ಎಂದಿಗೂ ಊಹಿಸಿರಲಿಲ್ಲ. ನಾನು ಅವಳಿ ಮಕ್ಕಳೊಂದಿಗೆ ಆರು ತಿಂಗಳ ಗರ್ಭಿಣಿಯಾಗಿದ್ದೇನೆ" ಎಂದು ಭಾವನಾ ಪೋಸ್ಟ್ ಮಾಡಿದ್ದಾರೆ.
ಸುದೀರ್ಘವಾಗಿ ಈ ವಿಚಾರದ ಬಗ್ಗೆ ನಟಿ ಭಾವನಾ ಬರೆದುಕೊಂಡಿದ್ದಾರೆ. "ವಯಸ್ಸು 40 ದಾಟಿದ ಬಳಿಕ ತಾಯ್ತನದ ಆಸೆ ಶುರುವಾಯಿತು. ಅದನ್ನು ನಿರಾಕರಿಸಲಾಗಲಿಲ್ಲ. ಅನೇಕ IVF ಚಿಕಿತ್ಸಾಲಯಗಳು ಒಪ್ಪಲಿಲ್ಲ. ಬಳಿಕ ರೇನ್ಬೋ ಆಸ್ಪತ್ರೆಯಲ್ಲಿ ಡಾ. ಸುಷ್ಮಾ ಅವರ ಬೆಂಬಲದೊಂದಿಗೆ, ನಾನು ನನ್ನ ಮೊದಲ ಪ್ರಯತ್ನದಲ್ಲೇ ಗರ್ಭಿಣಿಯಾಗಿದ್ದೆ. ನನ್ನ ಆಪ್ತರು ಜೊತೆಗೆ ನಿಂತರು. ಶೀಘ್ರದಲ್ಲೇ, ಎರಡು ಪುಟ್ಟ ಆತ್ಮಗಳು ನನ್ನನ್ನು ಅಮ್ಮ ಎಂದು ಕರೆಯುತ್ತವೆ" ಎಂದು ಭಾವನಾ ಸಂತಸ ವ್ಯಕ್ತಪಡಿಸಿದ್ದಾರೆ.
ನಟಿ ಭಾವನಾ ಅವರ ನಡೆಯನ್ನು ಸಾಕಷ್ಟು ಜನ ಸ್ವಾಗತಿಸಿದ್ದಾರೆ. ಕಾಮೆಂಟ್ ಮಾಡಿ ಶುಭ ಹಾರೈಸುತ್ತಿದ್ದಾರೆ. ಇನ್ನು ಭಾವನಾ ಅವರು ಮದುವೆ ಆಗದೇ ಇರುವ ತೀರ್ಮಾನಕ್ಕೆ ಬರಲು ಕಾರಣ ಇದೆಯಂತೆ. ಎರಡು ವರ್ಷಗಳ ಹಿಂದೆ ಜೀ ಕನ್ನಡ ನ್ಯೂಸ್ ಸಂದರ್ಶನದಲ್ಲಿ ಈ ಬಗ್ಗೆ ಅವರು ಮಾತನಾಡಿದ್ದರು.
"ನಾನು ಸ್ವಲ್ಪ ಮುಂಗೋಪಿ. ಬೇಗ ಅಪ್‌ಸೆಟ್ ಆಗ್ತೀನಿ. ನನಗೆ ಎಲ್ಲವೂ ಪರ್ಫೆಕ್ಟ್ ಆಗಿ ಇರಬೇಕು. ಹಾಗಾಗಿ ಒಂದು ವೇಳೆ ನಾನು ಮದುವೆ ಆದರೆ ಪತಿಯಾಗಿ ಬರುವವರು ನನ್ನನ್ನು ಸಹಿಸಿಕೊಳ್ಳುವುದು ಸ್ವಲ್ಪ ಕಷ್ಟವಾಗುತ್ತದೆ. ಅದೇ ಕಾರಣಕ್ಕೆ ನನಗೆ ಮದುವೆ ಆಗಲು ಇಷ್ಟವಿಲ್ಲ. ಒಂಟಿಯಾಗಿಯೇ ನೆಮ್ಮದಿಯಾಗಿ ಇದ್ದೀನಿ. ಹೀಗೆ ಜೀವನವನ್ನು ಕಳೆದುಬಿಡ್ತೀನಿ. ಸ್ವತಂತ್ರ ಸ್ವಭಾವದ ನನಗೆ ಸಂಬಂಧಗಳಲ್ಲಿ ಬಂಧಿಯಾಗಲು ಇಷ್ಟವಿಲ್ಲ. ಮದುವೆ ಆಗದಿದ್ದರೆ ಜೀವನ ಹಾಳಾಯ್ತು ಎಂದುಕೊಳ್ಳಲ್ಲ. ಮದುವೆಯಾಗಿ ಪತಿಯನ್ನು ಕಳೆದುಕೊಂಡಿರುವವರನ್ನು ನೋಡಿದ್ದೇನೆ. ಇದನ್ನೆಲ್ಲಾ ನೋಡಿದರೆ ನಾನು ಸೇಫ್" ಎಂದು ಭಾವನಾ ರಾಮಣ್ಣ ಹೇಳಿದ್ದರು.
ಕ್ಲಾಸಿಕಲ್ ಡ್ಯಾನ್ಸರ್ ಕೂಡ ಆಗಿರುವ ನಟಿ ಭಾವನಾ 1996ರಲ್ಲಿ ಚಿತ್ರರಂಗಕ್ಕೆ ಬಂದಿದ್ದರು. 'ಮಾರಿಬಲೆ' ಎಂಬ ತುಳು ಚಿತ್ರದಲ್ಲಿ ಮೊದಲಿಗೆ ನಟಿಸಿದ್ದರು. 'ನೀ ಮುಡಿದ ಮಲ್ಲಿಗೆ', 'ನಂಬರ್ 1' ಚಿತ್ರಗಳಲ್ಲಿ ಮಿಂಚಿದ್ದರು. 'ಚಂದ್ರಮುಖಿ ಪ್ರಾಣಸಖಿ' ಚಿತ್ರದಲ್ಲಿ ಪ್ರೇಮಾ ಸಹೋದರಿ ಪಾತ್ರದಲ್ಲಿ ನಟಿಸಿ ಮೋಡಿ ಮಾಡಿದ್ದರು. ತಮ್ಮ ಅತ್ಯುತ್ತಮ ನಟನೆಯಾಗಿ ಎರಡು ಬಾರಿ ರಾಜ್ಯ ಪ್ರಶಸ್ತಿಯನ್ನು ಭಾವನಾ ಪಡೆದಿದ್ದಾರೆ. ಪೋಷಕ ನಟಿಯಾಗಿ ಒಂದು ರಾಜ್ಯ ಪ್ರಶಸ್ತಿ ಧಕ್ಕಿತ್ತು.
ತಮಿಳು, ತೆಲುಗು ಮಾತ್ರವಲ್ಲ ಒಂದು ಹಿಂದಿ ಚಿತ್ರದಲ್ಲಿ ಕೂಡ ಭಾವನಾ ರಾಮಣ್ಣ ನಟಿಸಿದ್ದಾರೆ. ಅಂದಹಾಗೆ ಅವರ ನಿಜವಾದ ಹೆಸರು ನಂದಿನಿ. ಚಿತ್ರರಂಗಕ್ಕೆ ಬಂದ ಬಳಿಕ ನಿರ್ದೇಶಕ ಕೋಡ್ಲು ರಾಮಕೃಷ್ಣ ಅವರ ಸೂಚನೆಯಂತೆ ಭಾವನಾ ಎಂದು ಹೆಸರನ್ನು ಬದಲಿಸಿಕೊಂಡಿದ್ದರು.


Click it and Unblock the Notifications











