14 ದಿನ ಜೈಲಿನಲ್ಲಿದ್ದಾಗ ಕಲಿತ ಪಾಠವನ್ನು ದರ್ಶನ್ ಅಷ್ಟು ಬೇಗ ಮರೆತುಬಿಟ್ರಾ?
ನಟ ದರ್ಶನ್‌ಗೆ ಪೊಲೀಸ್ ಸ್ಟೇಷನ್, ಕೋರ್ಟು, ಕೇಸು, ಜೈಲು, ವಿವಾದಗಳು ಹೊಸದೇನು ಅಲ್ಲ. ಈ ಹಿಂದೆ ಕೂಡ 14 ದಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ಇದ್ದು ಬಂದವರು. ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ದರ್ಶನ್ ಎ2 ಆಗಿರುವುದರಿಂದ ಸದ್ಯಕ್ಕೆ ಬೇಲ್ ಸಿಗುವುದು ಕಷ್ಟ, ಆರೋಪ ಸಾಬೀತಾದರೆ ಕಠಿಣ ಶಿಕ್ಷೆ ಗ್ಯಾರಂಟಿ ಎನ್ನುವ ಚರ್ಚೆ ನಡೀತಿದೆ.
ತಮ್ಮ ಪ್ರೇಯಸಿ ಪವಿತ್ರಾ ಗೌಡಗೆ ಕೆಟ್ಟ ಮೆಸೇಜ್ ಕಳುಹಿಸಿದ್ದಾನೆ ಎನ್ನುವ ಕಾರಣಕ್ಕೆ ರೇಣುಕಾಸ್ವಾಮಿಯನ್ನು ಅಪಹರಿಸಿ, ಹತ್ಯೆ ಮಾಡಿರುವ ಗಂಭೀರ ಆರೋಪ ದರ್ಶನ್ ಮೇಲಿದೆ. ಪ್ರಕರಣ ಸಂಬಂಧ 13 ಜನರನ್ನು ಬಂಧಿಸಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಚಿತ್ರದುರ್ಗದಿಂದ ರೇಣುಕಾಸ್ವಾಮಿಯನ್ನು ಕರೆತಂದು ಪಟ್ಟಣಗೆರೆಯ ಶೆಡ್‌ನಲ್ಲಿ ಕೂಡಿ ಹಾಕಿ ಥಳಿಸಲಾಗಿದೆ. ಚಿತ್ರಹಿಂಸೆ ನೀಡಿದ್ದು ಆತ ಜೀವಬಿಟ್ಟಿದ್ದಾನೆ ಎಂದು ಹೇಳಲಾಗುತ್ತಿದೆ.

ಪ್ರಕರಣದಲ್ಲಿ ದರ್ಶನ್ ಹಾಗೂ 12 ಜನ ಆರೋಪಿಗಳನ್ನು ಮೊದಲು 6, ಬಳಿಕ 5 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ. ಪೊಲೀಸರು ನಾನಾ ಕೋನಗಳಲ್ಲಿ ಪ್ರಕರಣದ ತನಿಖೆ ನಡೆಸುತ್ತಿದ್ದಾರೆ. ಶೀಘ್ರದಲ್ಲೇ ಚಾರ್ಜ್‌ಶೀಟ್ ಸಿದ್ಧವಾಗಲಿದೆ ಆರೋಪಿಗಳ ಭವಿಷ್ಯ ಏನಾಗುತ್ತದೋ ಕಾದು ನೋಡಬೇಕಿದೆ. ಒಂದು ಕೆಟ್ಟ ಮೆಸೇಜ್ ಅನ್ನು ಗಂಭೀರವಾಗಿ ಪರಿಗಣಿಸಿದ್ದಕ್ಕೆ ಇವತ್ತು ಅಷ್ಟು ಜನರ ಜೀವನವೇ ರಿಸ್ಕ್‌ನಲ್ಲಿದೆ ಎಂದು ಕೆಲವರು ಮಾತನಾಡುತ್ತಿದ್ದಾರೆ.
ಇನ್ನು ಕಳೆದೊಂದು ವಾರದಿಂದ ರೇಣುಕಾಸ್ವಾಮಿ ಹತ್ಯೆ ಪ್ರಕರಣದ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆ ನಡೆಯುತ್ತಿದೆ. ಖುದ್ದು ನಟ ದರ್ಶನ್ ಮಾತನಾಡಿರುವ ಹಳೆಯ ವೀಡಿಯೋಗಳು ವೈರಲ್ ಆಗುತ್ತಿದೆ. ದರ್ಶನ್ ಈ ಹಿಂದೆ ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಜೈಲಿಗೆ ಹೋಗಿದ್ದಾಗ ಕಲಿತ ಪಾಠ ಏನು ಎಂದು ಮಯೂರ ರಾಘವೇಂದ್ರ ಯೂಟ್ಯೂಬ್ ಚಾನಲ್ ಸಂದರ್ಶನದಲ್ಲಿ ಹೇಳಿಕೊಂಡಿದ್ದರು. ಆ ವಿಡಿಯೋ ಇದೀಗ ಬಹಳ ಸದ್ದು ಮಾಡುತ್ತಿದೆ.
"ನಾನು ಮೊದಲು ಎಲ್ಲದ್ದಕ್ಕೂ ಕೋಪ ಮಾಡಿಕೊಂಡು ತಕ್ಷಣ ಪ್ರತಿಕ್ರಿಯಿಸುತ್ತಿದ್ದೆ. ಅದರಿಂದ ಏನೇನೋ ಆಗುತ್ತಿತ್ತು. ಒಮ್ಮೆ 'ಕುರುಕ್ಷೇತ್ರ' ಚಿತ್ರೀಕರಣದ ವೇಳೆ ಹೈದರಾಬಾದ್‌ನಲ್ಲಿದ್ದೆ. ಬೆಂಗಳೂರಿನಲ್ಲಿ ಏನೋ ಸಮಸ್ಯೆ ಆಗಿತ್ತು. ತಕ್ಷಣ ಬರಬೇಕು ಎಂದುಕೊಂಡೆ. ಫ್ಲೈಟ್ ಸಿಗದೇ ಸಾಧ್ಯವಾಗಲಿಲ್ಲ. ಆಗ ಯೋಚಿಸಿದರೆ ಕೊಂಚ ಸುಮ್ಮನಿದ್ದರೆ ಆ ಸಮಸ್ಯೆ ಚಿಕ್ಕದಾಗುತ್ತದೆ. ತಕ್ಷಣ ಯಾವುದಕ್ಕೂ ಪ್ರತಿಕ್ರಿಯಿಸಬಾರದು ಎನಿಸಿತು"
"ಈ ರೀತಿ ತಾಳ್ಮೆ ವಹಿಸುವುದನ್ನು ನನಗೆ ನಾನೇ ಕಲಿತೆ. ನನಗೆ ಯಾರು ಹೇಳಿಕೊಡಲಿಲ್ಲ. ನಾನು 14 ದಿನ ಜೈಲಲ್ಲಿ ಇದ್ದವನು. ಅಲ್ಲಿ ಸಾಕಷ್ಟು ಜನರನ್ನು ಭೇಟಿ ಆಗಿದ್ದೆ. ಪಾಪ ಕೆಲವರು ತಾವು ಮಾಡದೇ ಇರುವ ತಪ್ಪಿಗೆ ಒಳಗಿದ್ದಾರೆ. ಇನ್ನು ಕೆಲವರು ಕೋಪದ ಕೈಗೆ ಬುದ್ದಿಕೊಟ್ಟು ಈಗ ವ್ಯಥೆಪಡುತ್ತಿದ್ದಾರೆ. ಇದನ್ನೆಲ್ಲಾ ನಾನು ಯೋಚಿಸುತ್ತಿರುತ್ತೀನಿ. ಮರ್ಡರ್ ಮಾಡುವಾಗಲೂ ಆತುರದಲ್ಲಿ ಮಾಡಿಬಿಟ್ಟಿರ್ತಾನೆ. ಬಟ್ ಈಗ ಅದಕ್ಕೆ ರಿಗ್ರೆಟ್ ಮಾಡುತ್ತಿರುತ್ತಾನೆ. ಸ್ವಲ್ಪ ತಾಳ್ಮೆಯಿಂದ ಇದ್ದಿದ್ದರೆ ಏನಾದರೂ ಆಗುತ್ತಿತ್ತು. ಇದೆಲ್ಲಾ ನಾನು ಜೈಲಿನಲ್ಲಿದ್ದಾಗ ಕಲಿತ ಪಾಠ" ಎಂದು ದರ್ಶನ್ ಹೇಳಿದ್ದರು.
ನೆಟ್ಟಿಗರೊಬ್ಬರು ಈ ವೀಡಿಯೋ ಹಂಚಿಕೊಂಡು "ಆ ಕ್ಷಣದಲ್ಲಿ ಅವರು ವಿಷಾದಪಡಲಿ ಬಿಡಿ" ಎಂದು ಕ್ಯಾಪ್ಷನ್ ಕೊಟ್ಟಿದ್ದಾರೆ. ದರ್ಶನ್ ಹೇಳಿಕೊಂಡಂತೆ ರೇಣುಕಾಸ್ವಾಮಿ ವಿಚಾರದಲ್ಲೂ ಇದೇ ರೀತಿ ಕೊಂಚ ತಾಳ್ಮೆಯಿಂದ ವರ್ತಿಸಿದ್ದರೆ ಇಷ್ಟೆಲ್ಲಾ ಆಗುತ್ತಿರಲಿಲ್ಲ ಎಂದು ಕೆಲವರು ಕಾಮೆಂಟ್ ಮಾಡುತ್ತಿದ್ದಾರೆ.
13 ವರ್ಷಗಳ ಹಿಂದೆ ದರ್ಶನ್ ತಮ್ಮ ಪತ್ನಿ ವಿಜಯಲಕ್ಷ್ಮಿಯ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದ ಪ್ರಕರಣದಲ್ಲಿ ಜೈಲು ಸೇರುವಂತಾಗಿತ್ತು. ಅಂದು 1ನೇ ಎಸಿಎಂಎಂ ವೆಂಕಟೇಶ್ ಹುಲಗಿ ಜಾಮೀನು ನಿರಾಕರಿಸಿದ್ದು, 14 ದಿನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದರು. ದರ್ಶನ್ ಜೈಲಿನಲ್ಲಿದ್ದಾಗಲೇ 'ಸಾರಥಿ' ಸಿನಿಂಆ ಬಿಡುಗಡೆ ಆಗಿ ಯಶಸ್ಸು ಕಂಡಿತ್ತು. ಬಳಿಕ ಎಲ್ಲಾ ಮರೆತು ದರ್ಶನ್ ಸಿನಿಮಾಗಳಲ್ಲಿ ನಟಿಸುತ್ತಾ ಬಂದರು. ಆದರೂ ಸಾಕಷ್ಟು ವಿವಾದಗಳು ಸುತ್ತಿಕೊಂಡಿದ್ದವು.


Click it and Unblock the Notifications










