ಮತಎಣಿಕೆ ಟ್ವೀಟ್‌ಗೆ ಸಿಕ್ಕಾಪಟ್ಟೆ ನೆಗೆಟಿವ್ ರಿಪ್ಲೈ; ನೆಟ್ಟಿಗರನ್ನು ಬಾಲಕರಿಗೆ ಹೋಲಿಸಿ ಚಾಟಿ ಬೀಸಿದ ಉಪ್ಪಿ!
ಇಂದು ( ಮಾರ್ಚ್ 29 ) ಕೇಂದ್ರ ಚುನಾವಣಾ ಆಯೋಗ ಕರ್ನಾಟಕ ರಾಜ್ಯದ ವಿಧಾನಸಭಾ ಚುನಾವಣೆಯ ದಿನಾಂಕವನ್ನು ಪಕ್ರಟಗೊಳಸಿತು. ಮೇ 10ರಂದು ಚುನಾವಣೆ ನಡೆಯಲಿದ್ದು, ಮೇ 13ರಂದು ಮತ ಎಣಿಕೆ ಕಾರ್ಯಕ್ರಮ ನಡೆಯಲಿದೆ ಎಂದು ಚುನಾವಣಾ ಆಯೋಗ ಪ್ರಕಟಿಸಿತು. ಹೀಗೆ ದಿನಾಂಕ ಪ್ರಕಟಗೊಂಡ ಬೆನ್ನಲ್ಲೇ ರಾಜಕೀಯ ಚಟುವಟಿಕೆಗಳು ರಾಜ್ಯದಲ್ಲಿ ಗರಿಗೆದರಿದ್ದು, ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗಳೂ ಸಹ ಏರ್ಪಟ್ಟಿವೆ.
ಇನ್ನು ಈ ಬಾರಿಯ ಚುನಾವಣೆಯಲ್ಲಿ ರಾಜಕೀಯ ಪಕ್ಷಗಳ ಜತೆಗೆ ಉಪೇಂದ್ರ ಮುಂದಾಳತ್ವದ ಉತ್ತಮ ಪ್ರಜಾಕೀಯ ಪಕ್ಷ ಸಹ ಸ್ಪರ್ಧೆಗೆ ಇಳಿಯಲಿದ್ದು, ರಿಯಲ್ ಸ್ಟಾರ್ ಉಪೇಂದ್ರ ಚುನಾವಣೆ ದಿನಾಂಕ ಘೋಷಣೆಯಾಗುತ್ತಾ ಇದ್ದಂತೆ ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ಟ್ವೀಟ್ ಒಂದನ್ನು ಮಾಡಿದ್ದು, ಮತ ಎಣಿಕೆಗೆ ಎರಡು ದಿನಗಳು ಬೇಕಾ ಎಂದು ಪ್ರಶ್ನಿಸಿ ಟೀಕೆಗೆ ಗುರಿಯಾಗಿದ್ದಾರೆ.

"ಕರ್ನಾಟಕದಲ್ಲಿ ಮೇ 10, ಬುಧವಾರದಂದು ಒಂದೇ ಹಂತದ ಮತದಾನ ಮತ್ತು ಮೇ 13, ಶನಿವಾರ ಫಲಿತಾಂಶ ಪ್ರಕಟ. ಮತ ಎಣಿಕೆಗೆ ಎರಡು ದಿನ ಬೇಕೆ ?! ಏಕೆಂದು ಬಲ್ಲವರು ತಿಳಿಸುತ್ತೀರಾ ?" ಬರೆದುಕೊಂಡಿದ್ದರು. ಈ ಮೂಲಕ ಮತ ಎಣಿಕೆಗೆ ಎರಡು ದಿನಗಳ ಸಮಯವೇಕೆ ಎಂದು ಪ್ರಶ್ನಿಸಿದ್ದರು. ಉಪೇಂದ್ರ ಅವರ ಈ ಟ್ವೀಟ್‌ಗೆ ಸಾಕಷ್ಟು ನೆಗೆಟಿವ್ ಕಾಮೆಂಟ್ ಬಂದಿದ್ದವು. ಇದೇನು ಸಿನಿಮಾ ಎಂದುಕೊಂಡ್ರಾ ಈಗ ಮತದಾನ ಮಾಡಿ ಇನ್ನೆರಡು ನಿಮಿಷಗಳಲ್ಲಿ ಎಣಿಕೆ ಮಾಡೋಕೆ ಎಂದು ಕೆಲವರು ಕಾಮೆಂಟ್ ಮಾಡಿದ್ದರು.
ಇನ್ನೂ ಕೆಲವರು ನಿಮ್ಮ ಸಿನಿಮಾ ಶೂಟಿಂಗ್ ಮುಗಿದ ದಿನವೇ ರಿಲೀಸ್ ಮಾಡ್ತೀರಾ? ಏಕೆಂದು ತಿಳಿಸುವಿರಾ ಸ್ವಾಮಿ?, ಚುನಾವಣೆ ಸಿನೆಮಾ ಅಲ್ಲ ಮದ್ವೆ ಆದ ದೃಶ್ಯದ ನಂತರ ಮಗು ಆಗೋಕೆ, ಕಾಮನ್ ಸೆನ್ಸ್ ಬೇಕು ಗುರು ಹಾಗೂ ಚುನಾವಣೆಯಾದ ಬಳಿಕ ಮತಪೆಟ್ಟಿಗೆಗಳನ್ನು ಎಣಿಕೆ ಕೇಂದ್ರಗಳಿಗೆ ತರಬೇಕು, ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ತಡೆಯಬೇಕು ಹಾಗಾಗಿ ತಡವಾಗುತ್ತೆ ಎಂದು ತಮ್ಮ ಅಭಿಪ್ರಾಯವನ್ನು ತಿಳಿಸಿದ್ದರು. ಹೀಗೆ ಉಪ್ಪಿ ಮಾಡಿದ ಕಾಮೆಂಟ್‌ಗೆ ನೆಟ್ಟಿಗರು ಕೌಂಟರ್ ಮೇಲೆ ಕೌಂಟರ್ ನೀಡಿದ್ದರು.

ಹೀಗೆ ನೆಟ್ಟಿಗರಿಂದ ಸಿಕ್ಕಾಪಟ್ಟೆ ನೆಗೆಟಿವ್ ಕಾಮೆಂಟ್ಸ್ ಬಂದ ಬಳಿಕ ಮತ್ತೊಂದು ಟ್ವೀಟ್ ಮಾಡಿರುವ ಉಪೇಂದ್ರ "ಡಿಜಿಟಲ್ ವೋಟಿಂಗ್ ಅಲ್ವಾ ? ಮತ ಎಣಿಕೆಗೆ 2 ದಿನಾ ಬೇಕಾ? ನನಗೆ ಗೊತ್ತಿಲ್ಲಾ, ಗೊತ್ತಿದ್ದರೆ ತಿಳಿಸಿ ಅಂದೆ ಅಷ್ಟೇ. ಅಬ್ಬಬ್ಬಾ ಏನು ಕಾಮೆಂಟ್ಸ್ ಗಳು ?!ವಾರೆ ವಾಹ್.. ವ್ಯಾಪಾರೀ ರಾಜಕೀಯ, ಭ್ರಷ್ಟಾಚಾರ, ಕುದುರೆ ವ್ಯಾಪಾರ ಇದರ ಬಗ್ಗೆ ಕಾಮೆಂಟ್ ಮಾಡಿ ನೋಡೋಣ ಅತಿ ಬುದ್ವಂತ್ರು, ದೇಶ ಪ್ರೇಮಿಗಳು, ರಾಜಕೀಯ ಪಕ್ಷಗಳ ಹಿಂ ಬಾಲಕರು" ಎಂದು ಬರೆದುಕೊಂಡಿದ್ದಾರೆ. ಈ ಮೂಲಕ ತಮ್ಮ ಟ್ವೀಟ್‌ಗೆ ನೆಗೆಟಿವ್ ಕಾಮೆಂಟ್ ಮಾಡಿದ್ದವರನ್ನು ಉಪ್ಪಿ ಬಾಲಕರಿಗೆ ಹೋಲಿಸಿ ಟಾಂಗ್ ನೀಡಿದರು.
ಇದಾದ ಬೆನ್ನಲ್ಲೇ ಮತ್ತೊಂದು ಟ್ವೀಟ್ ಮಾಡಿರುವ ಉಪೇಂದ್ರ "ಇದು ತಂತ್ರಜ್ಞಾನ ಯುಗ. ಅನಕ್ಷರಸ್ತ ರಸ್ತೆ ವ್ಯಾಪಾರಿಗಳು ಫೋನ್ ಮೂಲಕ ಡಿಜಿಟಲ್ ನಲ್ಲಿ ಹಣದ ವ್ಯವಹಾರ ಮಾಡುತ್ತಾರೆ, ವ್ಯಾಪಾರಸ್ತರು ಕೋಟ್ಯಾಂತರ ಹಣ ಸುರಕ್ಷಿತವಾಗಿ ಆನ್ಲೈನ್ ನಲ್ಲಿ ಟ್ರಾನ್ಸ್ಫರ್ ಮಾಡುತ್ತಾರೆ. ಬಹು ಮುಖ್ಯ ದಾಖಲೆಗಳೊಂದಿಗೆ ವ್ಯವಹಾರ ಮಾಡುವ ದೊಡ್ಡ ದೊಡ್ಡ ಅಂತರರಾಷ್ಟ್ರೀಯ ಕಂಪನಿಗಳು ಡಿಜಿಟಲ್ ಮೂಲಕ ವ್ಯವಹರಿಸುತ್ತಾರೆ. ಪ್ರದಾನ ಮಂತ್ರಿಗಳು ತಮ್ಮ ಬೆರಳಿಂದಲೇ ಲಕ್ಷಾಂತರ ಬ್ಯಾಂಕ್ ಖಾತೆಗೆ ಏಕಕಾಲಕ್ಕೆ ಹಣ ವರ್ಗಾಯಿಸುತ್ತಾರೆ ! ಇಷ್ಟೆಲ್ಲಾ ಬದಲಾವಣೆ ಆದರೂ ಚುನಾವಣೆಯಲ್ಲಿ ಮತದಾರರು ಅವರಿರುವ ಜಾಗದಿಂದಲೇ ಮತದಾನ ಮಾಡುವ ತಂತ್ರಜ್ಞಾನ ಏಕೆ ಬರುತ್ತಿಲ್ಲ ? ಯೋಚಿಸಿ. ಇದು ಪ್ರಶ್ನೆ ಅಷ್ಟೇ. ಟೀಕೆ ಅಲ್ಲ" ಎಂದು ಬರೆದುಕೊಂಡಿದ್ದಾರೆ.
ಈ ಮೂಲಕ ನಿಂತ ಜಾಗದಿಂದ ಫೋನ್‌ಪೇ, ಗೂಗಲ್ ಪೇ ಮೂಲಕ ಸಾವಿರಾರು ರೂಪಾಯಿಗಳನ್ನು ಸುಲಭವಾಗಿ ವರ್ಗಾವಣೆ ಮಾಡುವ ಜನರು ಅದೇ ರೀತಿ ಏಕೆ ಮತದಾನ ಮಾಡಲು ಆಗುವುದಿಲ್ಲ ಎಂದು ಪ್ರಶ್ನೆ ಹಾಕಿದ್ದಾರೆ. ಉಪೇಂದ್ರ ಅವರ ಈ ಹೇಳಿಕೆಗೂ ಸಹ ನೆಟ್ಟಗರು ಮಿಶ್ರ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.


Click it and Unblock the Notifications











