ಅಂದು ಯಶ್ ವಿರುದ್ಧ ತಿರುಗಿಬಿದ್ದಿದ್ದ ಸುದೀಪ್ ಫ್ಯಾನ್ಸ್; ಕೊನೆಗೆ ಕಿಚ್ಚ ಮಧ್ಯಪ್ರವೇಶಿಸಬೇಕಾಯ್ತು
ಉಪೇಂದ್ರ ನಿರ್ದೇಶಿಸಿ ನಟಿಸಿರುವ 'ಯುಐ' ಸಿನಿಮಾ ಭರ್ಜರಿ ಪ್ರದರ್ಶನ ಮುಂದುವರೆಸಿದೆ. ಎರಡನೇ ವಾರದತ್ತ ಸಿನಿಮಾ ದಾಪುಗಾಲು ಇಟ್ಟಿದೆ. ಪ್ರೇಕ್ಷಕರ ಜೊತೆಗೆ ಕನ್ನಡ ಸಿನಿಮಾ ತಾರೆಯರ ಬೆಂಬಲವೂ ಚಿತ್ರಕ್ಕೆ ಸಿಕ್ಕಿದೆ. ಅಚ್ಚರಿ ಎನ್ನುವಂತೆ ಸುದೀಪ್ ಹಾಗೂ ಯಶ್ ಒಟ್ಟಿಗೆ 'ಯುಐ' ತಂಡದ ಜೊತೆ ಸಿನಿಮಾ ವೀಕ್ಷಿಸಿದ್ದಾರೆ.
ಬಹಳ ವರ್ಷಗಳ ಬಳಿಕ ಉಪೇಂದ್ರ, ಸುದೀಪ್ ಹಾಗೂ ಯಶ್ ಒಟ್ಟೊಟ್ಟಿಗೆ ಕಾಣಿಸಿಕೊಂಡಿದ್ದು ವಿಶೇಷ. ನಗರದ ಒರಾಯನ್ ಮಾಲ್‌ನಲ್ಲಿ ಚಿತ್ರದ ಸೆಲೆಬ್ರೆಟಿ ಶೋ ಏರ್ಪಡಿಸಲಾಗಿತ್ತು. ನೆಚ್ಚಿನ ಕಲಾವಿದರನ್ನು ನೋಡಲು ಸಾಕಷ್ಟು ಸಂಖ್ಯೆಯಲ್ಲಿ ಅಭಿಮಾನಿಗಳು ಜಮಾಯಿಸಿದ್ದರು. 'ಯುಐ' ಸಿನಿಮಾ ನೋಡಲು ಪತ್ನಿ ರಾಧಿಕಾ ಪಂಡಿತ್ ಜೊತೆ ಯಶ್ ಚಿತ್ರಮಂದಿರಕ್ಕೆ ಬಂದಿದ್ದರು.

ನಟ ಯಶ್ ಸದ್ಯ 'ಟಾಕ್ಸಿಕ್' ಸಿನಿಮಾ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಕಳೆದ ಒಂದು ತಿಂಗಳಿನಿಂದ ಮುಂಬೈನಲ್ಲಿ ಚಿತ್ರೀಕರಣ ನಡೀತಿದೆ. ಬಿಡುವು ಮಾಡಿಕೊಂಡು ಬೆಂಗಳೂರಿಗೆ ಬಂದಿದ್ದಾರೆ. ಇನ್ನು ಸುದೀಪ್ ಹಾಗೂ ಯಶ್ ಸಾರ್ವಜನಿಕವಾಗಿ ಒಟ್ಟಿಗೆ ಕಾಣಿಸಿಕೊಂಡು ಬಹಳ ದಿನಗಳಾಗಿತ್ತು. ಅವರಿಬ್ಬರ ಅಪೂರ್ವ ಸಂಗಮ, ಅಪ್ಪುಗೆ ವೈರಲ್ ಆಗುತ್ತಿದೆ. ಇದೇ ವೇಳೆ ಅಂದಿನ ಆ ಘಟನೆ ನೆನಪಾಗುತ್ತಿದೆ.
6 ವರ್ಷಗಳ ಹಿಂದೆ ಅದೊಂದು ಘಟನೆ ಸುದೀಪ್ ಅಭಿಮಾನಿಗಳ ಬೇಸರಕ್ಕೆ ಕಾರಣವಾಗಿತ್ತು. ಅಂದು ತಮ್ಮ ನೆಚ್ಚಿನ ನಟನ ವಿಚಾರದಲ್ಲಿ ಯಶ್ ಮಹಾಪರಾಧ ಮಾಡಿದ್ದಾರೆ ಎನ್ನುವಂತೆ ಸುದೀಪಿಯನ್ಸ್ ಬೇಸರಗೊಂಡಿದ್ದರು. ಯಶ್ ವಿರುದ್ಧ ಕೆಂಡಾಮಂಡಲವಾಗಿದ್ದರು. ಇದು ಇಬ್ಬರ ನಟರ ಅಭಿಮಾನಿಗಳ ನಡುವೆ ಕೆಸರೆರಚಾಟಕ್ಕೆ ಕಾರಣವಾಗಿತ್ತು. ನಮ್ಮ ನೆಚ್ಚಿನ ನಟನಿಗೆ ಯಶ್ ಗೌರವ ಕೊಟ್ಟಿಲ್ಲ ಎಂದು ಸುದೀಪ್ ಫ್ಯಾನ್ಸ್ ಆಕ್ರೋಶ ವ್ಯಕ್ತಪಡಿಸಿದ್ದರು.
2018ರಲ್ಲಿ 'ಹಮ್ ಫಿಟ್ ತೋ ಇಂಡಿಯಾ ಫಿಟ್' (#HumFitThoIndiaFit) ಎಂಬ ಹ್ಯಾಶ್ ಟ್ಯಾಗ್ ಅಡಿ ಫಿಟ್ನೆಸ್ ಕ್ಯಾಂಪೇನ್ ನಡೀತಿತ್ತು. ಇದರ ಭಾಗವಾಗಿ ತಾರೆಯರ ತಮ್ಮ ಆಪ್ತರಿಗೆ ಫಿಟ್ನೆಸ್ ಚಾಲೆಂಜ್ ಕೊಟ್ಟಿದ್ದರು. ಈ ಚಾಲೆಂಜ್ ಸ್ವೀಕರಿಸಿದ್ದ ಕಿಚ್ ಬಳಿಕ ಯಶ್, ಶಿವಣ್ಣ ಸೇರಿ ಹಲವರಿಗೆ ಚಾಲೆಂಜ್ ಕೊಟ್ಟಿದ್ದರು.
ಸುದೀಪ್ ನೀಡಿದ ಚಾಲೆಂಜ್ ಸ್ವೀಕರಿಸಿ ನಟ ಯಶ್ ಒಂದು ವೀಡಿಯೋ ಮಾಡಿದ್ದರು. ನಾವು ಫಿಟ್ ಆಗಿರುವುದು ಮಾತ್ರವಲ್ಲ, ನಮ್ಮ ಆಪ್ತರ ಫಿಟ್ ಆಗಿರಬೇಕು ಎಂದು ತಮ್ಮ ಸ್ಣೇಹಿತ ಚೇತನ್ ಕೈಯಲ್ಲಿ ವ್ಯಾಯಾಮ ಮಾಡಿಸಿ ವೀಡಿಯೋ ಪೊಸ್ಟ್ ಮಾಡಿದ್ದರು. ಆದರೆ ಈ ವೀಡಿಯೋದಲ್ಲಿ ಯಶ್ ಮಾತನಾಡುತ್ತಾ ಸುದೀಪ್ ಅವರನ್ನು ಸಂಭೋದಿಸಿದ್ದ ರೀತಿ ಸುದೀಪಿಯನ್ಸ್ ಬೇಸರಕ್ಕೆ ಕಾರಣವಾಗಿತ್ತು.
ವೀಡಿಯೋ ಆರಂಭದಲ್ಲಿ "ಹಾಯ್ ಸುದೀಪ್" ಎಂದು ಯಶ್ ಹೇಳಿದ್ದರು. ಇದು ಕಿಚ್ಚನ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿತ್ತು. ತಮ್ಮ ನೆಚ್ಚಿನ ನಟನನ್ನು ಸರ್ ಎಂದು ಕರೆಯಲಿಲ್ಲ. ಕೊನೆಯ ಪಕ್ಷ "ಸುದೀಪ್ ಅವರೇ" ಎಂದು ಹೇಳಲಿಲ್ಲ. ಇದರಿಂದ ಸುದೀಪ್ ಅವರಿಗೆ ಯಶ್ ಗೌರವ ಕೊಟ್ಟಿಲ್ಲ. ಯಶ್‌ಗಿಂತ ಸುದೀಪ್ ಹಿರಿಯರು, ಅವರಿಗೆ ಗೌರವ ಕೊಡಬೇಕು ಎನ್ನುವುದು ಗೊತ್ತಾಗಲ್ವಾ? ಎಂದು ಕಿಚ್ಚನ ಫ್ಯಾನ್ಸ್ ಗರಂ ಆಗಿದ್ದರು.
ಯಶ್ ಅಭಿಮಾನಿಗಳು ಈ ವಿಚಾರದಲ್ಲಿ ತಮ್ಮ ನೆಚ್ಚಿನ ನಟನನ್ನು ಬೆಂಬಲಿಸಿದ್ದರು. "ಹಾಯ್ ಸುದೀಪ್, ನೀವು" ಎಂದು ಗೌರವದಿಂದಲೇ ಯಶ್ ಮಾತನಾಡಿದ್ದಾರೆ. ಅದರಲ್ಲೇನು ತಪ್ಪಿಲ್ಲ ಎಂದು ಪರ ವಹಿಸಿದ್ದರು. ಆದರೆ ಸುದೀಪ್ ಅಭಿಮಾನಿಗಳು ಯಶ್ ಅವರನ್ನು ಸಿಕ್ಕಾಪಟ್ಟೆ ಟ್ರೋಲ್ ಮಾಡಿದ್ದರು. ಕೊನೆಗೆ ಸುದೀಪ್ ಮಧ್ಯ ಪ್ರವೇಶಿಸಬೇಕಾಯಿತು.
ಸುದೀಪ್ ಟ್ವೀಟ್ ಮಾಡಿ ಅಭಿಮಾನಿಗಳಲ್ಲಿ ಮನವಿ ಮಾಡಿದ್ದರು. ಯಾರು ಕೂಡ ಯಶ್ ಬಗ್ಗೆ ಕೆಟ್ಟದಾಗಿ ಪೋಸ್ಟ್ ಮಾಡಬೇಡಿ ಎಂದು ಕೇಳಿಕೊಂಡಿದ್ದರು. ಈ ಟ್ವೀಟ್ ಬಳಿಕ ವಿವಾದ ತಣ್ಣಗಾಗಿತ್ತು. ಈ ಘಟನೆ ಬಳಿಕ ಯಶ್ ಹಾಗೂ ಸುದೀಪ್ ಅಭಿಮಾನಿಗಳ ನಡುವೆ ಸೋಶಿಯಲ್ ಮೀಡಿಯಾದಲ್ಲಿ ಶೀತರ ಸಮರ ನಡೆಯುತ್ತಲೇ ಇದೆ.


Click it and Unblock the Notifications











