ಕನ್ನಡ ಇಂಡಸ್ಟ್ರಿ ಚಿಕ್ಕದು ಎಂದ ತೆಲುಗು ನಿರ್ಮಾಪಕನಿಗೆ ಅಲ್ಲೇ ತಿರುಗೇಟು ಕೊಟ್ಟಿದ್ದ ಯಶ್!
ಕನ್ನಡ ಭಾಷೆಯ ಬಗ್ಗೆ ನಟ ಕಮಲ್ ಹಾಸನ್ ಹೇಳಿಕೆ ವಿವಾದ ಇನ್ನು ತಣ್ಣಗಾಗಿಲ್ಲ. ಈ ಬಗ್ಗೆ ಕಮಲ್ ಸ್ಪಷ್ಟನೆ ಕೊಟ್ಟರೂ ಕನ್ನಡಿಗರು ಕರಗುತ್ತಿಲ್ಲ. ಕ್ಷಮೆ ಕೇಳಲೇಬೇಕು ಎಂದು ಆಗ್ರಹಿಸಿದ್ದಾರೆ. ನಟ ಶಿವರಾಜ್‌ಕುಮಾರ್ ಕೂಡ ವಿವಾದದ ಬಗ್ಗೆ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ.
ಇತ್ತೀಚೆಗೆ ಚೆನ್ನೈನಲ್ಲಿ ನಡೆದ 'ಥಗ್ ಲೈಫ್' ಸಿನಿಮಾ ಆಡಿಯೋ ಲಾಂಚ್ ಕಾರ್ಯಕ್ರಮದಲ್ಲಿ ಕನ್ನಡ ನಟ ಶಿವರಾಜ್‌ಕುಮಾರ್ ಕೂಡ ಭಾಗಿ ಆಗಿದ್ದರು. ವೇದಿಕೆಯಲ್ಲಿ ಕಮಲ್ ಹಾಸನ್ ಮಾತನಾಡುತ್ತಾ ಡಾ. ರಾಜ್‌ಕುಮಾರ್ ಫ್ಯಾಮಿಲಿ ಜೊತೆಗಿನ ಒಡನಾಟ ನೆನಪಿಸಿಕೊಂಡಿದ್ದರು. ಮಾತಿನ ಕೊನೆಯಲ್ಲಿ ತಮಿಳಿನಿಂದ ಕನ್ನಡ ಹುಟ್ಟಿದ್ದು ಎಂದು ಹೇಳಿ ವಿವಾದ ಮೈಮೇಲೆ ಎಳೆದುಕೊಂಡಿದ್ದಾರೆ.

ಕಮಲ್ ಹಾಸನ್ ಹೇಳಿಕೆ ಬಗ್ಗೆ ಪರ ವಿರೋಧ ಚರ್ಚೆ ನಡೀತಿದೆ. ಅವರು ಕ್ಷಮೆ ಕೇಳಬೇಕು ಎಂದು ಕನ್ನಡ ಪರ ಸಂಘಟನೆಗಳು ಪಟ್ಟು ಹಿಡಿದಿವೆ. ರಾಜ್ಯದ ಕೆಲವೆಡೆ ಪ್ರತಿಭಟನೆ ಕೂಡ ನಡೆದಿದೆ. ಕಮಲ್ ಈ ಮಾತು ಹೇಳುವಾಗ ಶಿವಣ್ಣ ಅಲ್ಲೇ ಇದ್ದರು. ಯಾಕೆ ಅಲ್ಲೇ ಸರಿ ಮಾಡಲಿಲ್ಲ ಎಂದು ಕೆಲವರು ಚಕಾರ ಎತ್ತಿದ್ದಾರೆ. ಕನ್ನಡದ ಬಗ್ಗೆ ಕಮಲ್ ಹಾಸನ್ ಅವ್ರಿಗೂ ಪ್ರೀತಿಯಿದೆ, ಯಾಕೆ ಅದನ್ನ ದೊಡ್ಡ ವಿಷಯ ಮಾಡ್ತೀರಾ? ಎಲ್ಲಾ ಅವ್ರೇ ಸರಿಪಡಿಕೊಳ್ಳುತ್ತಾರೆ ಎಂದು ಶಿವಣ್ಣ ಈಗಾಗಲೇ ಪ್ರತಿಕ್ರಿಯಿಸಿದ್ದಾರೆ.
ಶಿವಣ್ಣ ಅವರನ್ನು ಟ್ರೋಲ್ ಮಾಡುವವರಿಗೆ ಅಭಿಮಾನಿಗಳು ತಿರುಗೇಟು ಕೊಡುತ್ತಿದ್ದಾರೆ. ಅವರ ಕನ್ನಡಾಭಿಮಾನದ ಬಗ್ಗೆ ಯಾರು ಪ್ರಶ್ನಿಸಬೇಡಿ ಎಂದು ಸೋಶಿಯಲ್ ಮೀಡಿಯಾದಲ್ಲಿ ಕಾಮೆಂಟ್ ಮಾಡುತ್ತಿದ್ದಾರೆ. ಇದೆಲ್ಲದರ ನಡುವೆ ಈ ಹಿಂದೆ ತೆಲುಗು ನಿರ್ಮಾಪಕ ಕನ್ನಡ ಚಿತ್ರರಂಗದ ಚಿಕ್ಕದು ಎಂದು ಮಾತನಾಡಿದಾಗ ಯಶ್ ಅಲ್ಲೇ ಅದಕ್ಕೆ ತಿರುಗೇಟು ಕೊಟ್ಟಿದ್ದ ವೀಡಿಯೋವನ್ನು ಕೆಲವರು ವೈರಲ್ ಮಾಡುತ್ತಿದ್ದಾರೆ.
ಯಶ್ ನಟನೆಯ 'KGF' ಸರಣಿ ಸಿನಿಮಾಗಳು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸದ್ದು ಮಾಡಿದ್ದು ಗೊತ್ತೇಯಿದೆ. ಹೈದರಾಬಾದ್‌ನಲ್ಲಿ 'KGF'-2 ಚಿತ್ರದ ಈವೆಂಟ್ ನಡೆದಿತ್ತು. ಈ ವೇಳೆ ತೆಲುಗಿನ ಖ್ಯಾತ ನಿರ್ಮಾಪಕ ದಿಲ್ ರಾಜು ಮಾತನಾಡಿ ಯಶ್ ಹಾಗೂ 'KGF' ಚಿತ್ರವನ್ನು ಕೊಂಡಾಡಿದ್ದರು. "ಒಂದ್ಕಾಲದಲ್ಲಿ ಭಾರತೀಯ ಸಿನಿಮಾ ಅಂದರೆ ಬಾಲಿವುಡ್ ಚಿತ್ರಗಳ ಬಗ್ಗೆ ಮಾತನಾಡುತ್ತಿದ್ದರು. ಬಳಿಕ ತೆಲುಗು ಸಿನಿಮಾಗಳ ಬಗ್ಗೆ ದೊಡ್ಡದಾಗಿ ಹೇಳುತ್ತಿದ್ದರು. ತಮಿಳಿನಲ್ಲಿ ರಜನಿಕಾಂತ್ ಸೇರಿ ಕೆಲ ನಟ ಸಿನಿಮಾಗಳನ್ನು ಹಾಡಿ ಹೊಗಳುತ್ತಿದ್ದರು. ಮಲಯಾಳಂನಲ್ಲಿ ವಿಭಿನ್ನ ಸಿನಿಮಾ ಮಾಡ್ತಾರೆ ಎನ್ನುತ್ತಿದ್ದರು. ಕನ್ನಡದ ವಿಷಯಕ್ಕೆ ಬಂದರೆ ಇಂಡಸ್ಟ್ರಿ ಚಿಕ್ಕದು, ಅವ್ರ ಮ್ಯಾಕ್ಸಿಮಮ್ ಬಜೆಟ್ 5 ಕೋಟಿ ರೂ. ಅಂತ ನಾವೆಲ್ಲಾ ಕೇಳುತ್ತಿದ್ದೆವು. ಆದರೆ 'KGF' ಚಿತ್ರಕ್ಕೆ ಕನ್ನಡದಲ್ಲಿ ದೊಡ್ಡ ಸಿನಿಮಾ ಕಲೆಕ್ಷನ್‌ಗೆ ಎರಡರಷ್ಟು ಬಂಡವಾಳ ಹಾಕುತ್ತಿದ್ದಾರೆ ಎಂದಾಗ ಅಚ್ಚರಿಯಾಗಿತ್ತು. ಆದರೆ ಯಶ್ ಹಾಗೂ ಪ್ರಶಾಂತ್ ನೀಲ್ ಟೀಂ 'KGF' ಸಿನಿಮಾ ಮಾಡಿ ಇಡೀ ಭಾರತೀಯ ಚಿತ್ರರಂಗವೇ ಸ್ಯಾಂಡಲ್‌ವುಡ ಕಡೆ ತಿರುಗಿ ನೋಡುವಂತೆ ಮಾಡಿದ್ರು" ಎಂದಿದ್ದರು.
ದಿಲ್ ರಾಜು ಮಾತನಾಡಿದ ಬಳಿಕ ನಟ ಯಶ್ ವೇದಿಕೆ ಏರಿ ಮಾತನಾಡಿದ್ದರು. ಈ ವೇಳೆ ಕನ್ನಡ ಚಿತ್ರರಂಗ ಚಿಕ್ಕದು ಅಂತ ನಾವು ಅಂದುಕೊಂಡಿದ್ದೆವು ಎಂದಿದ್ದ ದಿಲ್ ರಾಜುಗೆ ನೇರವಾಗಿ ಕೌಂಟರ್ ಕೊಟ್ಟಿದ್ದರು. ತೆಲುಗು ಸಿನಿಮಾಗಳನ್ನು ಅಲ್ಲಿನ ಪ್ರೇಕ್ಷಕರನ್ನು ಕೊಂಡಾಡುತ್ತಲೇ ನಮ್ಮ ಕನ್ನಡ ಸಿನಿಮಾ ಹೆಗ್ಗಳಿಕೆ ಬಗ್ಗೆ ಮಾತನಾಡಿದ್ದರು. "ದಿಲ್ ರಾಜು ಅವರು ಕೂಡ ನಮ್ಮ ಇಂಡಸ್ಟ್ರಿ ಬಗ್ಗೆ ಮಾತನಾಡಿದ್ರು. ಆದರೆ ನಮ್ಮ ಕಲಾವಿದರು, ತಂತ್ರಜ್ಞರು ಸಾಕಷ್ಟು ಪರಿಶ್ರಮಪಡುತ್ತಿದ್ದಾರೆ. ನಮ್ಮ ಕನ್ನಡ ಸಿನಿಮಾಗಳು 50 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿವೆ. ಅದು ಪರಭಾಷೆಯ ಕೆಲವರಿಗೆ ಗೊತ್ತಿಲ್ಲ. ಅದಕ್ಕೆ ಕಾರಣ ಏನು ಎನ್ನುವುದು ಗೊತ್ತಿಲ್ಲ" ಎಂದು ಯಶ್ ಸ್ಪಷ್ಟನೆ ಕೊಟ್ಟಿದ್ದರು.


Click it and Unblock the Notifications











