'ಟಾಕ್ಸಿಕ್'ಗೂ ಮುನ್ನ ಭಾರತೀಯ ಭಾಷೆ ಜೊತೆ ಇಂಗ್ಲೀಷ್‌ನಲ್ಲಿ ತಯಾರಾಗಿದ್ದ ಚಿತ್ರಗಳು ಯಾವುವು?
ಗೀತು ಮೋಹನ್ ದಾಸ್ ನಿರ್ದೇಶನದ 'ಟಾಕ್ಸಿಕ್' ಪ್ಯಾನ್ ಇಂಡಿಯಾ ಅಲ್ಲ, ಪ್ಯಾನ್ ವರ್ಲ್ಡ್ ಸಿನಿಮಾ ಎನ್ನುವುದು ಖಚಿತವಾಗಿದೆ. ಕನ್ನಡದ ಜೊತೆಗೆ ಇಂಗ್ಲೀಷ್‌ನಲ್ಲಿ ಸಿನಿಮಾ ನಿರ್ಮಾಣವಾಗುತ್ತಿದೆ ಎನ್ನುವ ಮಾತುಗಳು ಇತ್ತೀಚೆಗೆ ಕೇಳಿಬಂದಿತ್ತು. ಇದೀಗ ಅಧಿಕೃತವಾಗಿ ಚಿತ್ರತಂಡವೇ ಇದನ್ನು ಖಚಿತಪಡಿಸಿದೆ. ಈ ಸುದ್ದಿ ಕೇಳಿ ರಾಕಿಂಗ್ ಸ್ಟಾರ್ ಫ್ಯಾನ್ಸ್ ಥ್ರಿಲ್ಲಾಗಿದ್ದಾರೆ.
'KGF- 2' ಬಳಿಕ ವಾಟ್ ನೆಕ್ಟ್ಸ್ ಎಂದವರಿಗೆಲ್ಲಾ ದೊಡ್ಡದಾಗಿಯೇ ಏನೋ ಪ್ಲ್ಯಾನ್ ಮಾಡ್ತಿದ್ದೀನಿ ಎಂದು ಯಶ್ ಹೇಳುತ್ತಾ ಬಂದಿದ್ದರು. ಸ್ಟಾರ್ ನಿರ್ದೇಶಕರನ್ನೆಲ್ಲಾ ಬಿಟ್ಟು ಮಲಯಾಳಂ ನಿರ್ದೇಶಕಿ ಜೊತೆ ಕೈ ಜೋಡಿಸಿದ್ದರು. ನಟನೆ ಜೊತೆಗೆ ತಾವೇ ನಿರ್ಮಾಣಕ್ಕೆ ಇಳಿದಿದ್ದರು. ಸದ್ದಿಲ್ಲದೇ ಸಿನಿಮಾ ಚಿತ್ರೀಕರಣ ಮಾಡುತ್ತಾ ಬರುತ್ತಿದ್ದಾರೆ. 'ಟಾಕ್ಸಿಕ್' ಬಗ್ಗೆ ಯಾವುದೇ ಮಾಹಿತಿ ಲೀಕ್ ಆಗದಂತೆ ಚಿತ್ರತಂಡ ಎಚ್ಚರಿಕೆ ವಹಿಸಿದೆ.

'ಟಾಕ್ಸಿಕ್' ಭಾರತೀಯ ಚಿತ್ರರಂಗದಲ್ಲೇ ಬಹಳ ಅದ್ಧೂರಿ ಸಿನಿಮಾ ಎನ್ನಲಾಗ್ತಿದೆ. ಕನ್ನಡದ ಜೊತೆಗೆ ಭಾರತದ ಹಲವು ಭಾಷೆಗಳಿಗೆ ಚಿತ್ರ ಡಬ್ ಆಗಲಿದೆ. ಅದೇ ರೀತಿ ಇಂಗ್ಲೀಷ್ ಜೊತೆಗೆ ವಿದೇಶದ ಭಾಷೆಗಳಿಗೆ ಸಿನಿಮಾ ಡಬ್ ಆಗಿ ವಿಶ್ವದಾದ್ಯಂತ ತೆರೆಗಪ್ಪಳಿಸಲಿದೆ. ಮೇಕಿಂಗ್ ಹಂತದಲ್ಲೇ ಸಿನಿಮಾ ಭಾರೀ ಹೈಪ್ ಕ್ರಿಯೇಟ್ ಮಾಡಿದೆ.
ಪ್ಯಾನ್ ಇಂಡಿಯಾ ಅಂದ್ರೆ ಒಂದು ಭಾಷೆಯಲ್ಲಿ ಚಿತ್ರೀಕರಣವಾದ ಚಿತ್ರವನ್ನು ಐದಾರು ಭಾಷೆಗಳಿಗೆ ಡಬ್ ಮಾಡಿ ಬಿಡುಗಡೆ ಮಾಡಲಾಗುತ್ತಿದೆ. ದಶಕಗಳಿಂದ ಇದು ಚಿತ್ರರಂಗದಲ್ಲಿ ಚಾಲ್ತಿಯಲ್ಲಿತ್ತು. ಬಳಿಕ ಈ ಟ್ರೆಂಡ್ ಕಮ್ಮಿ ಆಗಿ ರೀಮೇಕ್ ಮುನ್ನಗೆ ಬಂದಿತ್ತು. ಆದರೆ ರಾಜಮೌಳಿ ನಿರ್ದೇಶನದ 'ಬಾಹುಬಲಿ' ಸರಣಿ ಪ್ಯಾನ್ ಇಂಡಿಯಾ ಹೆಸರಿನಲ್ಲಿ ಅದನ್ನು ಹೊಸದಾಗಿ ಮತ್ತೆ ಚಾಲ್ತಿಗೆ ತಂದಿತ್ತು. 'KGF' ಸರಣಿ ಅದನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ದಿತ್ತು.
ಇತ್ತೀಚೆಗೆ ಕೆಲ ಸೂಪರ್ ಹಿಟ್ ಸಿನಿಮಾಗಳನ್ನು ಇಂಗ್ಲೀಷ್ ಭಾಷೆಗೆ ಡಬ್ ಮಾಡಿ ರಿಲೀಸ್ ಮಾಡುವ ಪ್ರಯತ್ನ ನಡೀತಿದೆ. 'ಕಾಂತಾರ' ಹಾಗೂ 'RRR' ಚಿತ್ರಗಳ ವಿಚಾರದಲ್ಲಿ ಹೀಗೆ ಮಾಡಲಾಗಿತ್ತು. ಆದರೆ ಓಟಿಟಿಯಲ್ಲಿ ಮಾತ್ರ ಇಂಗ್ಲೀಷ್ ವರ್ಷನ್ ಬಂದಿತ್ತು. ಇದೀಗ 'ಟಾಕ್ಸಿಕ್' ಚಿತ್ರವನ್ನು ಏಕಕಾಲಕ್ಕೆ ಕನ್ನಡ ಹಾಗೂ ಇಂಗ್ಲೀಷ್‌ನಲ್ಲಿ ಕಟ್ಟಿಕೊಡಲಾಗುತ್ತಿದೆ. ಅಂದರೆ ಕಲಾವಿದರು ಒಂದೇ ಸನ್ನಿವೇಶವನ್ನು ಕನ್ನಡ ಹಾಗೂ ಇಂಗ್ಲೀಷ್‌ನಲ್ಲಿ 2 ಬಾರಿ ಚಿತ್ರೀಕರಿಸಲಾಗುತ್ತಿದೆ. ಈ ಪ್ರಯತ್ನ ಅಪರೂಪಗಳಲ್ಲಿ ಅಪರೂಪ.

ಈ ಹಿಂದೆ ಕೆಲ ಸಿನಿಮಾಗಳನ್ನು ಭಾರತೀಯ ಭಾಷೆಯ ಜೊತೆಗೆ ಇಂಗ್ಲೀಷ್‌ನಲ್ಲಿ ಚಿತ್ರೀಕರಿಸಿದ ಉದಾಹರಣೆಯಿದೆ. ಕನ್ನಡದಲ್ಲೂ ಇಂತಹ ಪ್ರಯತ್ನ ನಡೆದಿತ್ತು. 1965ರಲ್ಲಿ ಬಂದಿದ್ದ 'ಗೈಡ್' ಹಿಂದಿ ಹಾಗೂ ಇಂಗ್ಲೀಷ್ ಭಾಷೆಗಳಲ್ಲಿ ನಿರ್ಮಾಣವಾಗಿತ್ತು. ಬಳಿಕ 1978ರಲ್ಲಿ 'ಶಾಲಿಮಾರ್' ಚಿತ್ರವನ್ನು ಸಹ ಇದೇ ರೀತಿ ಇಂಗ್ಲೀಷ್ ಹಾಗೂ ಹಿಂದಿ ಭಾಷೆಗಳಲ್ಲಿ ಕಟ್ಟಿಕೊಡುವ ಪ್ರಯತ್ನ ಮಾಡಿದ್ದರು.
ದಕ್ಷಿಣ ಭಾರತದಲ್ಲಿ 'ನಥಿಂಗ್ ಬಟ್ ಲೈಫ್' (2004) ಚಿತ್ರವನ್ನು ಮಲಯಾಳಂ ಹಾಗೂ ಇಂಗ್ಲೀಷ್ ಭಾಷೆಯಲ್ಲಿ ನಿರ್ಮಿಸಲಾಗಿತ್ತು. ಅಷ್ಟೆಲ್ಲಾ ಯಾಕೆ ಸಮ್ಮರ್ ಹಾಲಿಡೇಸ್ ಎಂಬ ಮಕ್ಕಳ ಚಿತ್ರವನ್ನು ಕವಿತಾ ಲಂಕೇಶ್ ಕನ್ನಡ ಹಾಗೂ ಇಂಗ್ಲೀಷ್ ಭಾಷೆಗಳಲ್ಲಿ ಕಟ್ಟಿಕೊಟ್ಟಿದ್ದರು. ಆದರೆ ಈ ಎಲ್ಲಾ ಸಿನಿಮಾಗಳ ಬಜೆಟ್, ಸ್ಟಾರ್‌ಕಾಸ್ಟ್ ಸಣ್ಣದಿತ್ತು. ಭಾರತೀಯ ಭಾಷೆಯ ಜೊತೆಗೆ ಇಂಗ್ಲೀಷ್‌ನಲ್ಲಿ ಸಿದ್ಧವಾಗುತ್ತಿರುವ ಬಹಳ ದುಬಾರಿ ಸಿನಿಮಾ 'ಟಾಕ್ಸಿಕ್' ಎನ್ನುವುದು ವಿಶೇಷ.

ನಯನತಾರಾ, ಕಿಯಾರಾ ಅದ್ವಾನಿ ಸೇರಿದಂತೆ ಘಟಾನುಘಟಿ ಕಲಾವಿದರು ಚಿತ್ರದಲ್ಲಿ ನಟಿಸುತ್ತಿದ್ದಾರೆ. ಹಾಲಿವುಡ್ ಕಲಾವಿದರು, ತಂತ್ರಜ್ಞರು ಚಿತ್ರದಲ್ಲಿ ಕೆಲಸ ಮಾಡುತ್ತಿದ್ದಾರೆ. ಒಂದೇ ಮಾತಲ್ಲಿ ಹೇಳಬೇಕು ಅಂದ್ರೆ ಸ್ಯಾಂಡಲ್‌ವುಡ್‌ನಲ್ಲಿ ನಿರ್ಮಾಣವಾಗುತ್ತಿರುವ ಹಾಲಿವುಡ್ ಸಿನಿಮಾ 'ಟಾಕ್ಸಿಕ್'.


Click it and Unblock the Notifications











