ಚುನಾವಣೆ ಅಖಾಡಕ್ಕೆ ಧುಮುಕಿರುವ ನಿಖಿಲ್ ಮುಂದಿನ ಸಿನಿಮಾ ಯಾವುದು?
'ಸೀತಾರಾಮ ಕಲ್ಯಾಣ' ಸಿನಿಮಾದ ಬಳಿಕ ನಿಖಿಲ್ ಕುಮಾರ್ ಮುಂದಿನ ಸಿನಿಮಾ ಯಾವುದು ಎಂಬ ಚರ್ಚೆಯಾಗಬೇಕಿತ್ತು. ಅಷ್ಟರಲ್ಲೇ ನಿಖಿಲ್ ರಾಜಕೀಯ ಪ್ರವೇಶ ಮಾಡುವ ಬಗ್ಗೆ ಸುದ್ದಿ ಸದ್ದು ಮಾಡಿತು. ಇದೀಗ, ಮಂಡ್ಯ ಲೋಕಸಭೆ ಕ್ಷೇತ್ರದಿಂದ ನಿಖಿಲ್ ಕುಮಾರ್ ಸ್ಪರ್ಧಿಸುವ ಸಾಧ್ಯತೆ ಹೆಚ್ಚಾಗಿದ್ದು, ಸದ್ಯಕ್ಕೆ ನಿಖಿಲ್ ಸಿನಿಮಾ ಸ್ಥಗಿತವಾಗಿದೆ.
ಸೀತಾರಾಮ ಕಲ್ಯಾಣ ಚಿತ್ರದ ಬಳಿಕ ಭಾರತೀಯ ಚಿತ್ರರಂಗದಲ್ಲೇ ಬಹುದೊಡ್ಡ ಚಿತ್ರವನ್ನ ನಿರ್ಮಿಸಿದ್ದ ಸಂಸ್ಥೆಯಡಿ ಹೊಸ ಸಿನಿಮಾ ಮಾಡುತ್ತಿರುವುದಾಗಿ ಸ್ವತಃ ನಿಖಿಲ್ ಘೋಷಿಸಿದ್ದರು. ಅದು ಈಗ ಎಲ್ಲಿಗೆ ಬಂದು ನಿಂತಿದೆ ಎಂಬುದು ಕುತೂಹಲ.
ಮತ್ತೊಂದೆಡೆ ಮುನಿರತ್ನ ನಿರ್ಮಾಣದ ಕುರುಕ್ಷೇತ್ರ ಚಿತ್ರದಲ್ಲಿ ನಿಖಿಲ್ ಅಭಿಮನ್ಯು ಪಾತ್ರ ನಿರ್ವಹಿಸಿದ್ದಾರೆ. ಆದ್ರೆ, ಈ ಚಿತ್ರವೂ ಇನ್ನು ಬಿಡುಗಡೆಯಾಗಿಲ್ಲ. ಹಾಗಿದ್ರೆ, ನಿಖಿಲ್ ಮುಂದಿನ ಸಿನಿಮಾ ಯಾವುದು? ಯಾವಾಗ ಆರಂಭ? ಮುಂದೆ ಓದಿ.....

ಲೈಕಾ ಸಂಸ್ಥೆಯಲ್ಲಿ ನಿಖಿಲ್ ಮುಂದಿನ ಸಿನಿಮಾ
ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯಿಸಿದ್ದ ಬಹುಕೋಟಿ ವೆಚ್ಚದ '2.0' ಚಿತ್ರ ನಿರ್ಮಾಣ ಮಾಡಿದ್ದು, ಲೈಕಾ ಪ್ರೊಡಕ್ಷನ್ ನಿಖಿಲ್ ಮುಂದಿನ ಚಿತ್ರಕ್ಕೆ ಬಂಡವಾಳ ಹೂಡಲು ಮುಂದಾಗಿದೆ. ಈ ಬಗ್ಗೆ ನಿಖಿಲ್ ಕುಮಾರ್ ಅವರೇ ಸ್ಪಷ್ಟಪಡಿಸಿದ್ದರು. ಆದ್ರೀಗ, ಈ ಚಿತ್ರಕ್ಕೆ ತಾತ್ಕಲಿಕ ಬ್ರೇಕ್ ಬಿದ್ದಿರಬಹುದು.

ಎಲೆಕ್ಷನ್ ಪರಿಣಾಮ ನೋ ಸಿನಿಮಾ
ಮಂಡ್ಯ ಲೋಕಸಭೆ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ನಿಖಿಲ್ ಕುಮಾರ್ ಸ್ಪರ್ಧೆ ಮಾಡುವ ಸಾಧ್ಯತೆ ಹೆಚ್ಚಿದ್ದು, ಈಗಾಗಲೇ ಮಂಡ್ಯ ರಾಜಕಾರಣದಲ್ಲಿ ಸಿಎಂ ಪುತ್ರ ಸಂಪೂರ್ಣವಾಗಿ ತೊಡಗಿಕೊಂಡಿದ್ದಾರೆ. ಹಾಗಾಗಿ, ಎಲೆಕ್ಷನ್ ಮುಗಿಯೋವರೆಗೂ ಸಿನಿಮಾ ಬಗ್ಗೆ ನಿಖಿಲ್ ಆಸಕ್ತಿ ನೀಡುವುದು ಬಹುತೇಕ ಅನುಮಾನ.

ಬಹುಭಾಷೆಯ ಚಿತ್ರ ಇದಾಗಿದೆ
ಅಂದ್ಹಾಗೆ, ಲೈಕಾ ಸಂಸ್ಥೆ ನಿರ್ಮಿಸಲಿರುವ ಈ ಚಿತ್ರ ಬಹುಭಾಷೆಯಲ್ಲಿ ಅಂದ್ರೆ ಕನ್ನಡ, ತೆಲುಗು ಮತ್ತು ತಮಿಳಿನಲ್ಲಿ ಮೂಡಿಬರುವ ಸಾಧ್ಯತೆ ಇದೆ. ಸದ್ಯಕ್ಕೆ ನಿರ್ದೇಶಕರು ಕೂಡ ಅಂತಿಮವಾಗಿಲ್ಲ. ನಿರ್ಮಾಪಕರ ಜೊತೆ ಮಾತ್ರ ಮಾತುಕತೆಯಾಗಿದ್ದು ಸಿನಿಮಾ ಮಾಡುವುದಕ್ಕೆ ಒಪ್ಪಿಗೆ ನೀಡಿದ್ದರು.

ಜಯಣ್ಣ ಜೊತೆಯೂ ಮಾತುಕತೆ.!
ಇನ್ನು ಈ ಕಡೆ ಕನ್ನಡದ ಸ್ಟಾರ್ ನಿರ್ಮಾಪಕ ಎನಿಸಿಕೊಂಡಿರುವ ಜಯಣ್ಣ ಅವತ ಜೊತೆಯಲ್ಲಿ ನಿಖಿಲ್ ಸಿನಿಮಾ ಬಗ್ಗೆ ಮಾತುಕತೆಯಾಗಿದ್ದು, ಈ ಬ್ಯಾನರ್ ನಲ್ಲೂ ಸಿನಿಮಾ ಮಾಡುವ ಒಲವು ತೋರಿದ್ದಾರೆ ನಿಖಿಲ್. ಕಳೆದ ಕೆಲವು ತಿಂಗಳ ಹಿಂದೆ ಹೀಗೆ ಸಿನಿಮಾ ಕಮಿಟ್ ಮೆಂಟ್ ಇಟ್ಕೊಂಡಿದ್ದ ನಿಖಿಲ್ ಈಗ ಎಂಪಿ ಸ್ಥಾನಕ್ಕೆ ಸ್ಪರ್ಧೆ ಮಾಡುವ ತಯಾರಿ ನಡೆಸಿಕೊಂಡಿದ್ದಾರೆ. ಹಾಗಾಗಿ, ಈ ಸಿನಿಮಾಗಳ ಸೆಟ್ಟೇರುತ್ತಾ ಎಂಬ ಕುತೂಹಲ ಕಾಡಿದೆ.

ಸದ್ಯಕ್ಕೆ ಕುರುಕ್ಷೇತ್ರವೂ ಅನುಮಾನ
ಹಾಗ್ನೋಡಿದ್ರೆ, ನಿರ್ಮಾಪಕ ಮುನಿರತ್ನ ಅವರು ಏಪ್ರಿಲ್ ಮೊದಲನೇ ವಾರ ಕುರುಕ್ಷೇತ್ರ ಚಿತ್ರವನ್ನ ರಿಲೀಸ್ ಮಾಡುತ್ತೇನೆ ಎಂದಿದ್ದಾರೆ. ಈ ಕಡೆ ನಿಖಿಲ್ ಚುನಾವಣೆಗೆ ಸ್ಪರ್ಧೆ ಮಾಡಿದ್ರೆ, ನೀತಿ ಸಂಹಿತೆ ಉಲ್ಲಂಘನೆ ಕಾರಣ ಬಿಡುಗಡೆಯೂ ಮುಂದಕ್ಕೆ ಹೋಗುವ ಸಾಧ್ಯತೆ ಇದೆ. ಸೋ, ಇದೆಲ್ಲಾ ಗಮನಿಸಿದ್ರೆ, ನಿಖಿಲ್ ಮುಂದಿನ ಸಿನಿಮಾ ಸದ್ಯಕ್ಕಂತೂ ಇಲ್ಲ.


Click it and Unblock the Notifications











