ಸರಿಗಮಪ ಗಾಯಕಿ ಪೃಥ್ವಿ ಭಟ್ ಕೈ ಹಿಡಿದ ಅಭಿಷೇಕ್ ಯಾರು? ಇಬ್ಬರ ಲವ್ ಸ್ಟೋರಿ ಶುರುವಾಗಿದ್ದೇಗೆ?
ಸರಿಗಮಪ ಖ್ಯಾತಿಯ ಗಾಯಕಿ ಪೃಥ್ವಿ ಭಟ್ ಹಾಗೂ ಅಭಿಷೇಕ್ ಮದುವೆ ವಿಚಾರ ಕಳೆದೆರಡು ದಿನಗಳಿಂದ ಭಾರೀ ಸದ್ದು ಮಾಡ್ತಿದೆ. ಮಾ.27ರಂದು ಇಬ್ಬರ ಮದುವೆ ನಡೆದಿತ್ತು. ಖಾಸಗಿ ವಾಹಿನಿಯಲ್ಲಿ ಅಭಿಷೇಕ್ ಕೆಲಸ ಮಾಡುತ್ತಿದ್ದಾರೆ. ಮಗಳ ಮದುವೆ ಬಗ್ಗೆ ತಂದೆ ಶಿವಪ್ರಸಾದ್ ಮಾತನಾಡಿದ್ದ ವೀಡಿಯೋ ಹೊರಬಂದು ಚರ್ಚೆ ಹುಟ್ಟುಹಾಕಿದೆ.
ತಂದೆಯ ಆರೋಪಗಳಿಗೆ ಪೃಥ್ವಿ ಭಟ್ ಕೂಡ ಪ್ರತಿಕ್ರಿಯಿಸಿದ್ದಾರೆ. ನೀವು ತೋರಿಸಿದ್ದ ಹುಡುಗನನ್ನೇ ಮದುವೆ ಆಗುತ್ತೇನೆ ಎಂದು ಪ್ರಮಾಣ ಮಾಡಿದ್ದ ಪೃಥ್ವಿ ಭಟ್ ಬಳಿಕ ಅಭಿಷೇಕ್ ಜೊತೆ ಮದುವೆ ಆಗಿದ್ದಾಳೆ ಎಂದು ಶಿವಪ್ರಸಾದ್ ಆಡಿಯೋದಲ್ಲಿ ತಿಳಿಸಿದ್ದರು. ಇನ್ನು ಇದಕ್ಕೆಲ್ಲಾ ಸರಿಗಮಪ ಕಾರ್ಯಕ್ರಮದ ಜ್ಯೂರಿ ನರಹರಿ ದೀಕ್ಷಿತ್ ಕಾರಣ ಎಂದು ಹೇಳಿದ್ದರು. ಈ ಬಗ್ಗೆ ಖುದ್ದು ಪೃಥ್ವಿ ಭಟ್ ಹಾಗೂ ನರಹರಿ ದೀಕ್ಷಿತ್ ಸ್ಪಷ್ಟನೆ ನೀಡಿದ್ದಾರೆ.

"ನಮ್ಮ ಮದುವೆ ವಿಚಾರದಲ್ಲಿ ದೀಕ್ಷಿತ್ ಸರ್ ಅವರದ್ದು ಯಾವುದೇ ತಪ್ಪು ಇಲ್ಲ. ಮದುವೆಗೂ ನರಹರಿ ದೀಕ್ಷಿತ್ ಸರ್ ಅವರಿಗೂ ಯಾವುದೇ ಸಂಬಂಧವಿಲ್ಲ. ಸಾಧ್ಯವಾದರೆ ನನ್ನನ್ನು ಕ್ಷಮಿಸಿ ನನ್ನಿಂದ ತಪ್ಪಾಗಿದೆ" ಎಂದು ಪೃಥ್ವಿ ಭಟ್ ಮಾತನಾಡಿದ್ದ ಆಡಿಯೋದಲ್ಲಿ ತಿಳಿಸಿದ್ದರು. ಇನ್ನು ಖುದ್ದು ಗಾಯಕ ನರಹರಿ ದೀಕ್ಷಿತ್ ಪತ್ರ ಬರೆದು ಸ್ಪಷ್ಟನೆ ನೀಡಿದ್ದರು. ಬಳಿಕ ಫಿಲ್ಮಿಬೀಟ್‌ಗೆ ಪ್ರತಿಕ್ರಿಯಿಸಿದ್ದರು. "ಪೃಥ್ವಿ ಪೋಷಕರಿಗೆ ನೋವಾಗಿದೆ ನಿಜ. ಆದರೆ ಸುಖಾಸುಮ್ಮನೆ ನನ್ನನ್ನು ದೂರುತ್ತಿದ್ದಾರೆ" ಎಂದು ತಿಳಿಸಿದ್ದರು.
ಅಷ್ಟಕ್ಕೂ ಗಾಯಕಿ ಪೃಥ್ವಿ ಭಟ್ ಕೈಹಿಡಿದ ಅಭಿಷೇಕ್ ಯಾರು? ಆತನ ಹಿನ್ನೆಲೆ ಏನು? ಇಬ್ಬರ ಪ್ರೀತಿ ಶುರುವಾಗಿದ್ದು ಹೇಗೆ? ಹೀಗೆ ಸಾಕಷ್ಟು ಪ್ರಶ್ನೆಗಳು ಅಭಿಮಾನಿಗಳನ್ನು ಕಾಡುತ್ತಿದೆ. ಇದೆಲ್ಲದರ ನಡುವೆ ಪೃಥ್ವಿ ಭಟ್ ತಂದೆ ಶಿವಪ್ರಸಾದ್ ಆಡಿಯೋ ವೈರಲ್ ಆಗುತ್ತಿದ್ದಂತೆ ಸಾಕಷ್ಟು ಊಹಾಪೋಹ, ವದಂತಿ ಹರಿದಾಡಿತ್ತು. ಯೂಟ್ಯೂಬ್ ಸೇರಿದಂತೆ ಕೆಲ ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿ ಹಬ್ಬಿಸಲಾಗಿತ್ತು. ಈ ವಿಚಾರ ಭಾರೀ ಸದ್ದು ಮಾಡುತ್ತಿದೆ.
ಪಾಂಡವಪುರದಲ್ಲಿ ಹುಟ್ಟಿದ ಅಭಿಷೇಕ್ ಮೂಲತಃ ಮೈಸೂರಿನವರು. ಸದ್ಯ ಜೀ ಕನ್ನಡ ವಾಹಿನಿಯ ಸರಿಗಮಪ ರಿಯಾಲಿಟಿ ಶೋ ಸಹ ನಿರ್ದೇಶಕರಾಗಿ ಅವರು ಕೆಲಸ ಮಾಡುತ್ತಿದ್ದಾರೆ. ಬೆಂಗಳೂರಿನಲ್ಲಿ ಕೆಎಲ್‌ಇ ಕಾಲೇಜಿನಲ್ಲಿ ಓದಿ ಬೆಳೆದ ಅಭಿಷೇಕ್ ಬಳಿಕ ಮೈಸೂರಿನ ಜ್ಞಾನ ಗಂಗೋತ್ರಿ ವಿಶ್ವವಿದ್ಯಾಲಯದಲ್ಲಿ ಪತ್ರಿಕೋದ್ಯಮ ವಿಭಾಗದಲ್ಲಿ ಪದವಿ ಪಡೆದಿದ್ದರು. ನಂತರ ಕಲರ್ಸ್ ಕನ್ನಡ, ಸುವರ್ಣ ನ್ಯೂಸ್ ವಾಹಿನಿಗಳಲ್ಲಿ ಕೆಲ ದಿನಗಳ ಕಾಲ ಕೆಲಸ ಮಾಡಿದ್ದ ಅಭಿಷೇಕ್ ಬಳಿಕ ಜೀ ಕನ್ನಡ ಮನರಂಜನಾ ವಾಹಿನಿಗೆ ಸೇರಿದ್ದರು.
ಕಳೆದ 9 ವರ್ಷಗಳಿಂದ ಅಭಿಷೇಕ್ ಜೀ ಕನ್ನಡ ವಾಹಿನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ರಿಯಾಲಿಟಿ ಶೋಗಳ ಎಕ್ಸಿಕ್ಯೂಟಿವ್ ಪ್ರೊಡ್ಯೂಸರ್ ಆಗಿ ಗುರ್ತಿಸಿಕೊಂಡಿದ್ದಾರೆ. ಮದುವೆ ಬಳಿಕ ಅಭಿಷೇಕ್, ಪೃಥ್ವಿ ಭಟ್ ತಮ್ಮ ಮನೆಯಲ್ಲೇ ನೆಲೆಸಿದ್ದಾರೆ. ತಮ್ಮ ತಮ್ಮ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಶೀಘ್ರದಲ್ಲೇ ಪೃಥ್ವಿ ಭಟ್ ಪೋಷಕರು ಕೂಡ ಎಲ್ಲಾ ಮರೆಯುತ್ತಾರೆ, ಸಮಸ್ಯೆ ಬಗೆಹರಿಯುತ್ತದೆ ಎನ್ನುವ ನಿರೀಕ್ಷೆಯಲ್ಲಿದೆ ಜೋಡಿ.

ಮದುವೆ ಸಂಬಂಧ ಅಭಿಷೇಕ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿ ಮದುವೆಯನ್ನು ರಿಜಿಸ್ಟರ್ ಕೂಡ ಮಾಡಿಸಿದ್ದಾರೆ. ಸರಿಗಮಪ ಶೋ 10 ಸೀಸನ್‌ಗಳಿಗೆ ಕೆಲಸ ಮಾಡಿದ್ದಾರೆ. ಇದೇ ಶೋ 15ನೇ ಸೀಸನ್‌ನಲ್ಲಿ ಪೃಥ್ವಿ ಭಟ್ ಸ್ಪರ್ಧಿಯಾಗಿದ್ದರು. ಅದೇ ವೇಳೆ ಇಬ್ಬರು ನಡುವೆ ಪರಿಚಯವಾಗಿತ್ತು. ಮೊದಲು ಸ್ನೇಹಿತರಾಗಿದ್ದರು. ಬಳಿಕ ಆ ಸ್ನೇಹ ಪ್ರೀತಿಗೆ ತಿರುಗಿತ್ತು. ಅಭಿಷೇಕ್ ಪ್ರಪೋಸ್ ಮಾಡಿದ್ದರಂತೆ. ಪೃಥ್ವಿ ಭಟ್ ಕೂಡ ಅದಕ್ಕೆ ಒಪ್ಪಿದ್ದರು, ಆದರೆ ಆಗಿನ್ನು ಕಾಲೇಜಿಗೆ ಹೋಗುತ್ತಿದ್ದರು. ಹಾಗಾಗಿ ಮದುವೆ ಬಗ್ಗೆ ಹೆಚ್ಚು ಯೋಚಿಸಿರಲಿಲ್ಲ.
ಇತ್ತೀಚಿನ ವರ್ಷಗಳಲ್ಲಿ ಅಭಿಷೇಕ್ ಮನೆಯಲ್ಲಿ ಮದುವೆಗೆ ಹುಡುಗಿಯನ್ನು ಹುಡುಕಲು ಆರಂಭಿಸಿದ್ದರು. ತಮ್ಮ ಪ್ರೀತಿ ವಿಚಾರವನ್ನು ಅಭಿ ತಮ್ಮ ಪೋಷಕರಿಗೆ ತಿಳಿಸಿದ್ದರು. ಪೃಥ್ವಿ ಭಟ್ ಕಾಲೇಜು ಓದು ಮುಗಿಸಿ ಸಿನಿಮಾಗಳಲ್ಲಿ ಹಾಡಲು ಶುರು ಮಾಡಿದ್ದರು. ಬಳಿಕ ಇಬ್ಬರೂ ಮದುವೆ ಆಗಲು ನಿರ್ಧರಿಸಿದ್ದರು. ತಮ್ಮ ಮದುವೆ ಬಗ್ಗೆ ಸ್ವತಃ ಪೃಥ್ವಿ ಭಟ್ ಆಡಿಯೋದಲ್ಲಿ ಮಾತನಾಡಿದ್ದಾರೆ. ಪರಸ್ಪರ ಒಪ್ಪಿ ಪ್ರೀತಿಸಿ ಮದುವೆ ಆಗಿರುವ ಜೋಡಿಗೆ ಶುಭವಾಗಲಿ ಎಂದು ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ಶುಭ ಹಾರೈಸುತ್ತಿದ್ದಾರೆ.


Click it and Unblock the Notifications











