ದರ್ಶನ್ ಗೆಳತಿ ಪವಿತ್ರಾ ಗೌಡಗೆ ಜಾಮೀನು ಶ್ಯೂರಿಟಿ ನೀಡಿದ ಮನೀಶ್ ಯಾರು..?
ದರ್ಶನ್ ಪಾಲಿಗೆ ಮಗ್ಗಲ ಮುಳ್ಳು ಆದವರು ಪವಿತ್ರಾ ಗೌಡ. ಮಾಡಬಾರದ್ದನ್ನೆಲ್ಲ ಮಾಡಿ ಒಂದು ಸುಂದರ ಸಂಸಾರವನ್ನು ಹಾಳುಗೆಡುವುದರ ಜೊತೆ ಒಬ್ಬ ಸೂಪರ್ ಸ್ಟಾರ್‌ನ ದುರಹಂಕಾರವನ್ನೆಲ್ಲ ಮಣ್ಣು ಮುಕ್ಕಿಸಿದ ಕುಖ್ಯಾತಿ ಹೊಂದಿರುವ ಪವಿತ್ರಾ ಗೌಡಗೆ ದರ್ಶನ್ ಹಿಂದೆ ಹಿಂದೆಯೇ ಜಾಮೀನು ಸಿಕ್ಕಿದೆ. ಈ ಮೂಲಕ 07 ತಿಂಗಳ ವನವಾಸ ಮುಕ್ತಾಯವಾಗಿದೆ.
ಇನ್ನು ಮೊನ್ನೆ ಪವಿತ್ರಾ ಗೌಡ ಜಾಮೀನು ಮಂಜೂರು ಮಾಡಿದ್ದ ನ್ಯಾಯಾಲಯ ಹೊರಗಡೆ ಬರಬೇಕೆಂದರೆ ಇಬ್ಬರು ವ್ಯಕ್ತಿಗಳು ಶ್ಯೂರಿಟಿ ನೀಡಬೇಕೆಂದು ಹೇಳಿತ್ತು. ಈ ಕಾರಣಕ್ಕೆ ಪವಿತ್ರಾ ಗೌಡಗೆ ಶ್ಯೂರಿಟಿ ನೀಡುವವರು ಯಾರು ಎನ್ನುವ ಕುತೂಹಲ ಎಲ್ಲರಲ್ಲಿತ್ತು. ಯಾಕೆಂದರೆ ಗೆಳೆಯ ದರ್ಶನ್ ಸಹಚರರು ಮತ್ತು ಸಂಗಡಿಗರ ಕಣ್ಣಿನಲ್ಲಿ ಪವಿತ್ರಾ ಗೌಡ ಸದ್ಯಕ್ಕೆ ಖಳನಾಯಕಿ. ಇನ್ನೂ ಭದ್ರತೆಯನ್ನು ನೀಡಲು ಆಸ್ತಿ ಪತ್ರವನ್ನು ನೀಡಬೇಕು. ಈ ಕಾರಣಕ್ಕೆ ಪವಿತ್ರಾ ಗೌಡ ಬಿಡುಗಡೆಗೆ ಅಗತ್ಯ ದಾಖಲೆಗಳನ್ನು ಯಾರು ಪೂರೈಸುತ್ತಾರೆ ಎನ್ನುವ ಪ್ರಶ್ನೆ ಅನೇಕರನ್ನು ಕಾಡುತ್ತಿತ್ತು. ಇದಕ್ಕೀಗ ಉತ್ತರ ಸಿಕ್ಕಿದೆ.

ಹೌದು, ಮನೀಶ್ ಎಂಬುವವರು ಪವಿತ್ರಾ ಗೌಡಗೆ ಶ್ಯೂರಿಟಿಯನ್ನು ನೀಡಿದ್ದಾರೆ. ತಮ್ಮ ಆಸ್ತಿ ಪತ್ರದ ದಾಖಲೆಯನ್ನು ನೀಡಿದ್ದಾರೆ. ಈ ಮೂಲಕ ಪವಿತ್ರಾ ಗೌಡ ಅವರನ್ನು ಹೊರ ಕರೆತಂದಿದ್ದಾರೆ. ಇನ್ನು, ಪವಿತ್ರಾ ಗೌಡ ಅವರಿಗೆ ಮನೀಶ್ ಭದ್ರತೆಯನ್ನು ಒದಗಿಸಿದ ಬೆನ್ನಲ್ಲಿಯೇ ಮನೀಶ್ ಯಾರು ಎನ್ನುವ ಪ್ರಶ್ನೆ ಈಗ ಎದ್ದಿದೆ. ಸದ್ಯ ಪವಿತ್ರಾ ಗೌಡ ಅವರಿಗೆ ಶ್ಯೂರಿಟಿಯನ್ನು ನೀಡಿದ ಈ ಮನೀಶ್ ತಲಘಟ್ಟಪುರದಲ್ಲಿರುವ ತಮ್ಮ ಆಸ್ತಿಯ ದಾಖಲೆಯನ್ನು ಸಲ್ಲಿಸಿದ್ದಾರೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ.ಪವಿತ್ರಾ ಗೌಡ ಅವರಿಗೆ ಪರಿಚಯಸ್ಥರು ಎಂಬ ಮಾತು ಕೂಡ ಕೇಳಿ ಬರುತ್ತಿದೆ.
ಮನೀಶ್ ಅವರನ್ನು ಹೊರತು ಪಡಿಸಿದರೆ ಪವಿತ್ರಾ ಗೌಡ ಅವರ ತಾಯಿಯ ಸ್ನೇಹಿತೆ ಶ್ಯೂರಿಟಿಗೆ ಸಹಿಯನ್ನು ಹಾಕಿದ್ದಾರೆ. ತಮ್ಮ ಆಸ್ತಿಯನ್ನು ಶ್ಯೂರಿಟಿಯಾಗಿ ನೀಡಿದ್ದಾರೆ. ಇನ್ನು ದರ್ಶನ್ ಮುಂದೆಯೇ ಕೊಲೆ ಪ್ರಕರಣದ ಎ1 ಆರೋಪಿಯಾದ ಪವಿತ್ರಾ ಗೌಡ ಶ್ಯೂರಿಟಿ ಪ್ರಕ್ರಿಯೆ ನಡೆದಿದ್ದು, ಮನೀಶ್ ಮತ್ತು ದರ್ಶನ್ ನಡುವೆ ಸ್ನೇಹ ಸಂಬಂಧವೇನಾದರೂ ಇದೆಯಾ ಎನ್ನುವ ಅನುಮಾನ ಕೂಡ ಅನೇಕರನ್ನು ಈಗ ಕಾಡುತ್ತಿದೆ. ಈ ಕುರಿತು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಕೂಡ ನಡೆಯುತ್ತಿದೆ.
ಇನ್ನು 57ನೇ ಸಿಸಿಹೆಚ್ ಕೋರ್ಟ್‌ನಲ್ಲಿ ದರ್ಶನ್ ಪರವಾಗಿ ದರ್ಶನ್ ಸಹೋದರ ದಿನಕರ್ ತೂಗುದೀಪ ಮತ್ತು ದರ್ಶನ್ ಅವರ ಆಪ್ತ ಧನ್ವೀರ್ ಗೌಡ ಶ್ಯೂರಿಟಿಗೆ ಸಹಿ ಹಾಕಿದ್ದಾರೆ. ಈ ಸಮಯದಲ್ಲಿ ಆರೋಪಿ ನಿಮಗೆ ಏನಾಗಬೇಕು ಎನ್ನುವ ಪ್ರಶ್ನೆಯನ್ನು ನ್ಯಾಯಾಧೀಶರು ಕೇಳಿದಾಗ ದಿನಕರ್ ಸಹೋದರ ಎಂದು ಮಾಹಿತಿಯನ್ನು ನೀಡಿದರೆ, ಧನ್ವೀರ್ ಸ್ನೇಹಿತ ಎಂದು ಉತ್ತರಿಸಿದ್ಧಾರೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ.
ಇನ್ನುಳಿದಂತೆ ಇಂದು ದರ್ಶನ್ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಬಹುದು ಎಂದು ಅಭಿಮಾನಿಗಳು ಅಂದುಕೊಂಡಿದ್ದರು. ಮನೆಯ ಬಳಿ ಜಮಾಯಿಸಿದ್ದರು. ಆದರೆ ಕೆಂಗೇರಿಯ ಆಸ್ಪತ್ರೆಯಿಂದ ಹೊರ ಬಂದ ದರ್ಶನ್ ನೇರವಾಗಿ ಸೆಷನ್ಸ್ ಕೋರ್ಟ್‌ಗೆ ತೆರಳಿದರು. ಜಡ್ಜ್ ಮುಂದೆ ಹಾಜರಾಗಿ ಸಹಿ ಹಾಕಿದರು. ಆ ನಂತರ ಜಾಮೀನು ಮತ್ತು ಶ್ಯೂರಿಟಿಗೆ ಸಂಬಂಧಿಸಿದ ಪ್ರಕ್ರಿಯೆಗಳನ್ನು ಮುಗಿಸಿ ಮತ್ತೆ ಬಿಜಿಎಸ್ ಆಸ್ಪತ್ರೆಗೆ ಮರಳಿದರು. ಅಂದ್ಹಾಗೇ ಶಸ್ತ್ರ ಚಿಕಿತ್ಸೆಯ ನೆಪವೊಡ್ಡಿ ದರ್ಶನ್ ಜೈಲಿಂದ ಹೊರ ಬಂದಿದ್ದರು. ಆದರೆ ಇನ್ನೂ ದರ್ಶನ್ ಅವರಿಗೆ ಶಸ್ತ್ರ ಚಿಕಿತ್ಸೆ ಆಗಿಲ್ಲ. ಇದರ ನಡುವೆ ಡಿಸೆಂಬರ್ 18 ಅಥವಾ 19ರಂದು ಡಿಸ್ಚಾರ್ಜ್ ಆಗಿ ಮನೆಗೆ ಮರಳಲಿದ್ದಾರೆ ಎನ್ನುವ ಮಾತು ಕೇಳಿ ಬರುತ್ತಿದೆ.


Click it and Unblock the Notifications











