ಕಿಚ್ಚನಿಂದ ಸಲ್ಮಾನ್ ಖಾನ್ ವರೆಗೂ 'ಬಿಗ್ ಬಾಸ್' ನಿರೂಪಣೆಯಲ್ಲಿ ಯಾರು ದಿ ಬೆಸ್ಟ್?
ಧಾರಾವಾಹಿ, ಸಿನಿಮಾ, ಚರ್ಚೆ, ಸಂಗೀತ, ಹಾಸ್ಯ ಕಾರ್ಯಕ್ರಮಗಳು ಮುಂತಾದವುಗಳಿಂದ ಕೂಡಿದ್ದ ಕಿರುತೆರೆ ಲೋಕವನ್ನು ಬದಲಿಸಿದ್ದು, ರಿಯಾಲಿಟಿ ಶೋಗಳು. ಈ ರಿಯಾಲಿಟಿ ಶೋಗಳ ಸ್ವರೂಪವನ್ನು ಮತ್ತಷ್ಟು ರೋಚಕಗೊಳಿಸುವಂತೆ ಪ್ರೇರಣೆ ನೀಡಿದ್ದು 'ಬಿಗ್ ಬಾಸ್'.
ವಿವಿಧ ರಂಗಗಳಲ್ಲಿ ಹೆಸರು ಮಾಡಿದ ಸೆಲೆಬ್ರಿಟಿಗಳು, ವಿವಾದಿತ ವ್ಯಕ್ತಿಗಳನ್ನು ಒಂದು ಮನೆಯಲ್ಲಿ ಸೇರಿಸಿ, ಅವರ ವೈಯಕ್ತಿಕ ಬದುಕನ್ನು ಅನಾವರಣಗೊಳಿಸುವ ಜತೆಯಲ್ಲಿ ಅವರ ನಡುವಿನ ಕಿತ್ತಾಟ, ಗೆಳೆತನ, ಪ್ರೀತಿ ಪ್ರೇಮದ ಪ್ರಸಂಗಗಳು, ಆಟ, ತಮಾಷೆ ಮುಂತಾದವುಗಳನ್ನು ಜನರ ಮುಂದಿಡುವ ಈ ಕಾರ್ಯಕ್ರಮ ಬಹಳ ಜನಪ್ರಿಯ.
ಅಂದಹಾಗೆ ಬಿಗ್ ಬಾಸ್ ಪರಿಕಲ್ಪನೆ ಭಾರತದಲ್ಲ. ಬಿಗ್ ಬಾಸ್ ರಿಯಾಲಿಟಿ ಶೋನ ಮೂಲ ನೆದರ್ಲ್ಯಾಂಡ್ಸ್. ಅಲ್ಲಿನ 'ಬಿಗ್ ಬ್ರದರ್'ನ ಭಾರತೀಯ ಅವತರಣಿಕೆಯಷ್ಟೇ. ಡಚ್ ರಿಯಾಲಿಟಿ ಶೋವನ್ನು ರೂಪಿಸಿದ್ದು ಜಾನ್ ಡಿ ಮೋಲ್ ಜೂನಿಯರ್ ಎಂಬಾತ. 1999ರಲ್ಲಿ ನೆದರ್ಲ್ಯಾಂಡ್ಸ್ ನಲ್ಲಿ ಇದು ಮೊದಲು ಪ್ರಸಾರವಾಗಿತ್ತು. ಬಳಿಕ ಅದರ ಜನಪ್ರಿಯತೆ ಕಂಡು ಬೇರೆ ಬೇರೆ ದೇಶಗಳೂ ಅದನ್ನು ತಮ್ಮದಾಗಿಸಿಕೊಂಡವು. ಬಿಗ್ ಬಾಸ್‌ನಲ್ಲಿ ನೋಡುವ 'ಕಣ್ಣು' ಕೂಡ ಬಿಗ್ ಬ್ರದರ್ ನ ಮೂಲದ್ದೇ.

ಬಿಗ್ ಬಾಸ್ ಸೀಸನ್ ನ ಮೊದಲ ನಿರೂಪಕ ಅರ್ಷದ್ ವರ್ಸಿ
ಬಿಗ್ ಬ್ರದರ್ ಭಾರತದಲ್ಲಿ ಬಿಗ್ ಬಾಸ್ ಆಗಿ ಸಾಕಷ್ಟು ಜನಪ್ರಿಯಗಳಿಸಿದೆ. ಬಿಗ್ ಬಾಸ್ ಶೋ ಮೊದಲು ಹಿಂದಿ ಕಿರುತೆರೆಯಲ್ಲಿ ಪ್ರಾರಂಭವಾಗಿದೆ. ಬಳಿಕ ಕನ್ನಡ ಸೇರಿದಂತೆ ಬೇರೆ ಬೇರೆ ಭಾಷೆಗಳಲಿಗೆ ಎಂಟ್ರಿ ಕೊಟ್ಟಿದೆ. ಭಾರತದಲ್ಲಿ ಮೊದಲು 2006ರಲ್ಲಿ ಬಿಗ್ ಬಾಸ್ ರಿಯಾಲಿಟಿ ಶೋ ಪ್ರಾರಂಭವಾಯಿತು. ಭಾರತದಲ್ಲಿ ಮೊದಲ ಶೋ ನಿರೂಪಣೆ ಮಾಡಿದ ಖ್ಯಾತಿ ಬಾಲಿವುಡ್ ನಟ, ಗಾಯಕ, ನಿರ್ಮಾಪಕ ಅರ್ಷದ್ ವರ್ಸಿ ಅವರಿಗೆ ಸಲ್ಲುತ್ತದೆ.

ಶಿಲ್ಪ ಶೆಟ್ಟಿ, ಅಮಿತಾಬ್, ಸಂಜಯ್ ದತ್ ಕೂಡ ನಿರೂಪಣೆ ಮಾಡಿದ್ದಾರೆ
ಹಿಂದಿ ಕಿರುತೆರೆಯಲ್ಲಿ ಮೊದಲ ಬಿಗ್ ಬಾಸ್ ಶೋ ಅನ್ನು ಅರ್ಷದ್ ನಿರೂಪಣೆ ಮಾಡಿದ್ರೆ, ಎರಡನೇ ಶೋ ನಿರೂಪಣೆ ಮಾಡುವ ಜವಾಬ್ದಾರಿ ನಟಿ ಶಿಲ್ಪಾ ಶೆಟ್ಟಿ ಪಾಲಾಯಿತು. ಬಳಿಕ ಅಮಿತಾಬ್ ಬಚ್ಚನ್ ಸಹ ಒಂದು ಶೋ ನಿರೂಪಣೆ ಮಾಡಿದ್ದಾರೆ. ಬಿಗ್ ಬಾಸ್ ಸೀಸನ್-4 ಮತ್ತು 5ಅನ್ನು ನಿರೂಪಣೆ ಮಾಡುವ ಜವಾಬ್ದಾರಿಯನ್ನು ನಟ ಸಲ್ಮಾನ್ ಖಾನ್ ವಹಿಸಿಕೊಂಡರು. ವಿಶೇಷ ಎಂದರೆ ಬಿಗ್ ಬಾಸ್-5 ಅನ್ನು ಸಂಜಯ್ ದತ್ ಸಹ ನಿರೂಪಣೆ ಮಾಡಿದ್ದಾರೆ. ಬಳಿಕ ಫರಾ ಖಾನ್ ಕೂಡ ಬಿಗ್ ಬಾಸ್ ನಿರೂಪಣೆ ಮಾಡಿದ್ದಾರೆ.

ಸದ್ಯ ಸಲ್ಮಾನ್ ಖಾನ್ ನಿರೂಪಣೆಯಲ್ಲಿ ಹಿಂದಿ ಬಿಗ್ ಬಾಸ್
ಇವರೆಲ್ಲರ ಬಳಿಕ ಮತ್ತೆ ಸಲ್ಮಾನ್ ಖಾನ್ ನಿರೂಪಣೆಯ ಹೊಣೆ ಹೊತ್ತುಕೊಂಡರು. ಸದ್ಯ ಬಿಗ್ ಬಾಸ್ 14ನೇ ಸೀಸನ್ ನಡೆಯುತ್ತಿದ್ದು, ಇಲ್ಲಿಯವರೆಗೂ ಸಲ್ಮಾನ್ ಖಾನ್ ಬಿಗ್ ಬಾಸ್ ನಿರೂಪಣೆಯನ್ನು ಯಶಸ್ವಿಯಾಗಿ ಮಾಡಿಕೊಂಡು ಬಂದಿದ್ದಾರೆ.

7 ಸೀಸನ್ ಗಳನ್ನು ನಿರೂಪಣೆ ಮಾಡಿರುವ ಸುದೀಪ್
ಕನ್ನಡದ ವಿಚಾರಕ್ಕೆ ಬರುವುದಾದರೆ, ಬಿಗ್ ಬಾಸ್ ಕನ್ನಡ ರಿಯಾಲಿಟಿ ಶೋ ಪ್ರಾರಂಭವಾಗಿದ್ದು 2013ರಲ್ಲಿ. ಮೊದಲ ಸೀಸನ್ ನಿಂದ ಸೀಸನ್ 7ರವರೆಗೂ ಯಶಸ್ವಿಯಾಗಿ, ಅದ್ಭುತವಾಗಿ ನಡೆಸಿಕೊಂಡು ಬರ್ತಿದ್ದಾರೆ. ಸದ್ಯ ಬಿಗ್ ಬಾಸ್ ಸೀಸನ್ 8ಕ್ಕೆ ತಯಾರಿ ನಡೆಸುತ್ತಿದ್ದು, ಫೆಬ್ರವರಿ ಕೊನೆಯಲ್ಲಿ ಬಿಗ್ ಬಾಸ್ ಸೀಸನ್ 8 ಪ್ರಾರಂಭವಾಗಲಿದೆ ಎನ್ನಲಾಗುತ್ತಿದೆ. ಸೀಸನ್ 8ಅನ್ನು ಕಿಚ್ಚ ಸುದೀಪ್ ನಡೆಸಿಕೊಡುತ್ತಿದ್ದಾರೆ.

'ಬಿಗ್ ಬಾಸ್'ನ ಯಶಸ್ವಿ ನಿರೂಪಕ ಎನ್ನುವ ಖ್ಯಾತಿ
ಸ್ಪರ್ಧಿಗಳ ಜೊತೆ ಸುದೀಪ್ ಸಂಬಂಧ, ವಾರದ ಅಂತ್ಯದಲ್ಲಿ ಕಿಚ್ಚನ ನ್ಯಾಯ ತೀರ್ಮಾನ, ಎಂತದ್ದೇ ಸಮಯದಲ್ಲೂ ತಾಳ್ಮೆ ಕಳೆದುಕೊಳ್ಳದೆ ನಾಜೂಕಾಗಿ, ಸೂಕ್ಷ್ಮವಾಗಿ ಪರಿಸ್ಥಿತಿ ನಿಭಾಯಿಸುವ ಕಿಚ್ಚ ನೆಚ್ಚಿನ ನಿರೂಪಕರಾಗಿರುವ ಜೊತೆ ಅತ್ಯಂತ ಯಶಸ್ವಿ ನಿರೂಪಕರೂ ಆಗಿದ್ದಾರೆ. ಬೇರೆ ಬೇರೆ ಭಾಷೆಗಳಲ್ಲಿ ಸೀಸನ್ ಗೆ ಒಬ್ಬರು ನೀರೂಪಣೆ ಮಾಡಿದ್ರೆ ಕನ್ನಡದಲ್ಲಿ 7 ಸೀಸನ್ ಅನ್ನು ಕಿಚ್ಚ ಸುದೀಪ್ ಒಬ್ಬರೇ ನಿಭಾಯಿಸಿಕೊಂಡು ಬಂದಿದ್ದಾರೆ. ಈ ಮೂಲಕ ಯಶಸ್ವಿ ನಿರೂಪಕ ಎನ್ನುವ ಖ್ಯಾತಿ ಸಹ ಗಳಿಸಿದ್ದಾರೆ.

ಬಿಗ್ ಬಾಸ್ ತಮಿಳು
ಬಿಗ್ ಬಾಸ್ ತಮಿಳಿನಲ್ಲಿ ನಟ ಕಮಲ್ ಹಾಸನ್ ನಡೆಸಿಕೊಡುತ್ತಿದ್ದಾರೆ. ಇತ್ತೀಚಿಗಷ್ಟೆ ಬಿಗ್ ಬಾಸ್ ಸೀಸನ್ 4 ಮುಕ್ತಾಯವಾಗಿದೆ. ನಾಲ್ಕು ಸೀಸನ್ ಅನ್ನು ಕಮಲ್ ಹಾಸನ್ ಅವರೇ ನಡೆಸಿಕೊಟ್ಟಿದ್ದಾರೆ.

'ಬಿಗ್ ಬಾಸ್' ತೆಲುಗು ಹೋಸ್ಟ್ ಮಾಡಿದ 3 ಕಲಾವಿದರು
ಇನ್ನೂ ಬಿಗ್ ಬಾಸ್ ತೆಲುಗು ಪ್ರಾರಂಭವಾಗಿದ್ದು 2017ರಲ್ಲಿ. ಬಿಗ್ ಬಾಸ್ ಮೊದಲ ಸೀಸನ್ ಅನ್ನು ಜೂ.ಎನ್ ಟಿ ಆರ್ ನಿರೂಪಣೆ ಮಾಡಿದ್ರೆ, 2ನೇ ಶೋ ನಿರೂಪಣೆ ಮಾಡುವ ಜವಾಬ್ದಾರಿ ನಟ ನಾನಿ ಪಾಲಾಯಿತು. ಬಳಿಕ ಸೀಸನ್ 3 ಮತ್ತು 4ನೇ ಅನ್ನು ನಟ ನಾಗಾರ್ಜುನ ನಿರೂಪಣೆ ಮಾಡಿದ್ದಾರೆ.
Recommended Video

ಬಿಗ್ ಬಾಸ್ ಮಲಯಾಳಂ ಮತ್ತು ಇತರೆ
ಇನ್ನು ಮಲಯಾಳಂ ಬಿಗ್ ಬಾಸ್ ನಿರೂಪಣೆ ಮಾಡುವ ಜವಾಬ್ದಾರಿಯನ್ನು ಮೋಹನ್ ಲಾಲ್ ವಹಿಸಿಕೊಂಡಿದ್ದಾರೆ. ಸದ್ಯ ಮಲಯಾಳಂನಲ್ಲಿ 3ನೇ ಸೀಸನ್ ಗೆ ಸಿದ್ಧತೆ ನಡೆಯುತ್ತಿದ್ದು, ಈಗಾಗಲೇ ಪ್ರೋಮೋ ರಿಲೀಸ್ ಆಗಿದೆ. ಇನ್ನು ಉಳಿದಂತೆ ಮರಾಠಿ, ಬೆಂಗಾಲಿ ಸೇರಿದಂತೆ ಬೇರೆ ಬೇರೆ ಭಾಷೆಗಳಲ್ಲಿ ಬಿಗ್ ಬಾಸ್ ಪ್ರಾರಂಭವಾಗಿದೆ. ಆದರೆ ಎರಡು ಅಥವಾ ಮೂರು ಸೀಸನ್ ನಲ್ಲೇ ಕೊನೆಗೊಂಡಿದೆ.


Click it and Unblock the Notifications











