BBK 11 ; ಮುಂದಿನ ವರ್ಷದಿಂದ ಕನ್ನಡದ ಬಿಗ್ ಬಾಸ್‌ಗೆ ದಿಕ್ಕು ಯಾರು...?
ಸುದೀಪ್ ಕೇವಲ ನಾಯಕ ಮಾತ್ರ ಅಲ್ಲ ನಿರ್ದೇಶಕ ಕೂಡ ಹೌದು. ಗಾಯಕ ಕೂಡ ಹೌದು. ಕ್ರಿಕೆಟ್ ಪ್ಲೇಯರ್ ಕೂಡ ಹೌದು. ಕೇವಲ ಇಷ್ಟೇ ಅಲ್ಲ ಸುದೀಪ್ ತಾವು ಅತ್ಯುತ್ತಮ ನಿರೂಪಕ ಕೂಡ ಹೌದು ಎನ್ನುವುದನ್ನು ಕಳೆದ ಹತ್ತು ವರ್ಷಗಳ ಹಿಂದೆಯೇ ಸಾಬೀತು ಮಾಡಿದ್ದಾರೆ. ಕಳೆದ ಹತ್ತು ವರ್ಷಗಳಿಂದ ಬಿಗ್ ಬಾಸ್ ಕಾರ್ಯಕ್ರಮವನ್ನು ಯಶಸ್ವಿಯಾಗಿ ಮುನ್ನಡೆಸಿಕೊಂಡು ಬಂದಿದ್ದಾರೆ.
ಇಂಥಾ ಸುದೀಪ್ ಈಗ ಬಿಗ್ ಬಾಸ್ ಕಾರ್ಯಕ್ರಮಕ್ಕೆ ದೀರ್ಘ ದಂಡ ನಮಸ್ಕಾರ ಹಾಕಿದ್ದಾರೆ. ಈ ಹನ್ನೊಂದನೇ ಆವೃತ್ತಿಯೇ ನನ್ನ ಪಾಲಿಗೆ ಕೊನೆಯ ಬಿಗ್ ಬಾಸ್ ಎಂದಿದ್ದಾರೆ. ಸಹಜವಾಗಿ ಸುದೀಪ್ ಅವರ ಈ ನಿರ್ಧಾರ ಅನೇಕರಿಗೆ ಬೇಸರವನ್ನುಂಟು ಮಾಡಿದೆ. ಯಾಕೆಂದರೆ.. ಎಲ್ಲರಿಗೆ ಗೊತ್ತಿರುವಂತೆ ಬಿಗ್ ಬಾಸ್ ಸುದೀಪ್ ಅವರ ಪಾಲಿಗೆ ಸೈಡ್ ಪ್ರಾಜೆಕ್ಟ್ ಆಗಿರಲಿಲ್ಲ. ಬದುಕಿನ ಬಹುಮುಖ್ಯವಾದ ಭಾಗವಾಗಿತ್ತು. ಖುದ್ದು ಸುದೀಪ್ ಈ ಮಾತನ್ನು ಈ ಹಿಂದೆ ಹೇಳಿದ್ದರು ಕೂಡ.

ಇನ್ನೂ.. ಈ ಹನ್ನೊಂದು ವರ್ಷದಲ್ಲಿ ಬಿಗ್ ಬಾಸ್ ಪ್ರಸಾರ ಮಾಡುವ ವಾಹಿನಿ ಬದಲಾದರೂ ಕೂಡ ಸುದೀಪ್ ಬದಲಾಗಲಿಲ್ಲ. ಯಥಾ ಪ್ರಕಾರ ಕಾರ್ಯಕ್ರಮದ ನಿರೂಪಣೆಯನ್ನು ಮಾಡುತ್ತಾನೇ ಬಂದಿದ್ದರು. ಇವರ ನಿರೂಪಣೆ ಜನರ ಹೃದಯಕ್ಕೆ ಎಷ್ಟರ ಮಟ್ಟಿಗೆ ಹತ್ತಿರವಾಗಿತ್ತು ಅಂದರೆ ವಾರದ ಕೊನೆಯಲ್ಲಿ ಸುದೀಪ್ ಅವರು ಬರೋದನ್ನೇ ಕಾದು ಜನ ಕಾರ್ಯಕ್ರಮ ನೋಡುತ್ತಿದ್ದರು. ಇವೆಲ್ಲ ಕಾರಣಗಳಿಂದ ಬಿಗ್ ಬಾಸ್ ಜೊತೆ ಎಲ್ಲರಿಗೆ ಒಂದು ರೀತಿಯ ಅವಿನಾಭಾವ ಸಂಬಂಧ ಬೆಸೆದಿತ್ತು. ಆದರೆ ಈಗ ಆ ಸಂಬಂಧದ ಕೊಂಡಿ ಕಳಚಿ ಬಿದ್ದಿದೆ. ಇದರ ಜೊತೆಗೆ ಬಿಗ್ ಬಾಸ್ ಮುಂದೆ ದಿಕ್ಕು ಯಾರು ಎನ್ನುವ ಪ್ರಶ್ನೆ ಕೂಡ ಎದ್ದಿದೆ.
ಹೌದು, ಅಸಲಿಗೆ ನಿಮಗೆ ನೆನಪಿದ್ದರೆ.. ಈ ವರ್ಷದ ಬಿಗ್ ಬಾಸ್ ಆರಂಭಕ್ಕೂ ಮುನ್ನ, ಸುದೀಪ್ ಈ ಬಾರಿ ಬಿಗ್ ಬಾಸ್ ಕಾರ್ಯಕ್ರಮ ನಡೆಸಿಕೊಡುವುದಿಲ್ಲ ಎನ್ನುವ ಮಾತು ಕೇಳಿ ಬಂದಿತ್ತು. ಸುದೀಪ್ ಬದಲು ರಿಷಬ್ ಶೆಟ್ಟಿ ಅಥವಾ ರಮೇಶ್ ಅರವಿಂದ್ ಬಿಗ್ ಬಾಸ್ ಜವಾಬ್ಧಾರಿ ವಹಿಸಿಕೊಳ್ಳಬಹುದು ಎನ್ನುವ ಸುದ್ದಿ ಸದ್ದು ಮಾಡಿತ್ತು. ಆದರೆ. ಅಂತೆ ಕಂತೆ ಸುಳ್ಳಾಗಿತ್ತು. ಸುದೀಪ್ ಹೆಗಲಿಗೆ ಮತ್ತೊಮ್ಮೆ ಬಿಗ್ ಬಾಸ್ ಜವಾಬ್ಧಾರಿಯನ್ನು ವಹಿಸಲಾಗಿತ್ತು.
ಇನ್ನೂ.. ಬಿಗ್ ಬಾಸ್ ಆರಂಭಕ್ಕೂ ಮುನ್ನ ಖುದ್ದು ಸುದೀಪ್ ಈ ವರ್ಷ ಬಿಗ್ ಬಾಸ್ ಸಹವಾಸ ಸಾಕು ಎಂದುಕೊಂಡಿದ್ದೇ ಎಂದು ಹೇಳಿ ಎಲ್ಲರನ್ನೂ ಅಚ್ಚರಿಗೆ ದೂಡಿದ್ದರು. ಬಿಗ್ ಬಾಸ್ ಕಾರ್ಯಕ್ರಮವನ್ನು ಮತ್ತೊಮ್ಮೆ ಒಪ್ಪಿಕೊಳ್ಳಲು ಕಾರಣವನ್ನೂ ಹೇಳಿದ್ದರು. ಆದರೆ ಈಗ ಕಾರಣವನ್ನು ಹೇಳದೇ ಕಾರ್ಯಕ್ರಮದಿಂದ ಸುದೀಪ್ ಹೊರ ನಡೆಯುವ ನಿರ್ಧಾರವನ್ನು ಮಾಡಿದ್ದಾರೆ. ಹೀಗಾಗಿಯೇ ಸುದೀಪ್ ಬದಲು ಬಿಗ್ ಬಾಸ್ ಕಾರ್ಯಕ್ರಮ ನಡೆಸುವ ಸಾಮರ್ಥ್ಯ ಯಾರಿಗಿದೆ ಎನ್ನುವ ಚರ್ಚೆಯನ್ನು ಅನೇಕರು ಮಾಡಲು ಶುರು ಮಾಡಿದ್ದಾರೆ. ಆ ಪೈಕಿ ರಿಷಬ್ ಶೆಟ್ಟಿ ಹೆಸರು ಮುಂಚೂಣಿಯಲ್ಲಿದೆ. ಆದರೆ ರಿಷಬ್ ಸದ್ಯ ನ್ಯಾಷನಲ್ ಸ್ಟಾರ್ ಆಗಿದ್ದಾರೆ. ಕಾಂತಾರದ ಧ್ಯಾನ ಮಾಡುತ್ತಿದ್ಧಾರೆ. ಮುಂದಿನ ವರ್ಷ ಇಷ್ಟೊತ್ತಿಗೆಲ್ಲ ಕಾಂತಾರ ಬಿಡುಗಡೆಯಾಗಿರುತ್ತಾದರೂ ಸದ್ಯದ ಪರಿಸ್ಥಿತಿಯಲ್ಲಿ ರಿಷಬ್ ಶೆಟ್ಟಿ ಬಿಗ್ ಬಾಸ್ ಜವಾಬ್ಧಾರಿಯನ್ನು ವಹಿಸಿಕೊಳ್ಳುವುದು ಕಷ್ಟವೆನ್ನುವ ಮಾತು ಕೇಳಿ ಬರುತ್ತಿದೆ.
ರಿಷಬ್ ಶೆಟ್ಟಿ ಹೊರತು ಪಡಿಸಿದರೆ ರಮೇಶ್ ಅರವಿಂದ್ ಬಿಗ್ ಬಾಸ್ ಜವಾಬ್ಧಾರಿಯನ್ನು ವಹಿಸಿಕೊಳ್ಳಬಹುದು. ಪ್ರೀತಿಯಿಂದ ರಮೇಶ್, ವೀಕೆಂಡ್ ವಿತ್ ರಮೇಶ್ ಸೇರಿ ಅನೇಕ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸಿದ ಹೆಗ್ಗಳಿಕೆ ಇವರದ್ದು. ಈ ಕಾರಣಕ್ಕೆ ಸುದೀಪ್ ಸ್ಥಾನಕ್ಕೆ ರಮೇಶ್ ಅರವಿಂದ್ ಸೂಕ್ತವಾದ ವ್ಯಕ್ತಿ ಎನ್ನುವ ಮಾತು ಸದ್ಯ ಸಾರ್ವತ್ರಿಕ ವಲಯದಲ್ಲಿ ಕೇಳಿ ಬರುತ್ತಿದೆ.
ರಿಷಬ್ ಮತ್ತು ರಮೇಶ್ ಹೊರತು ಪಡಿಸಿದರೆ ಗೋಲ್ಡನ್ ಸ್ಟಾರ್ ಗಣೇಶ್ ಬಿಗ್ ಬಾಸ್ ಮನೆಗೆ ನಿರೂಪಕರಾಗಿ ಬರಬಹುದು. ನಿರೂಪಕರಾಗಿಯೇ ವೃತ್ತಿ ಬದುಕನ್ನು ಆರಂಭ ಮಾಡಿ ಸ್ಟಾರ್ ಆದ ಗಣೇಶ್ ಸೂಪರ್ ಮಿನಿಟ್ ಸೇರಿ ಇನ್ನೂ ಎರಡು ಮೂರು ಕಾರ್ಯಕ್ರಮಗಳನ್ನು ಮುನ್ನಡೆಸಿದ್ದಾರೆ. ಈ ಕಾರಣಕ್ಕೆ ಬಿಗ್ ಬಾಸ್ ಗಣೇಶ್ ಅವರ ಬಗ್ಗೆ ಆಲೋಚನೆಯನ್ನು ಮಾಡಿದರು ಮಾಡಬಹುದು.
ಇನ್ನೂ.. ಶಿವಣ್ಣ ಕೂಡ ಬಿಗ್ ಬಾಸ್ ಜವಾಬ್ಧಾರಿಯನ್ನು ವಹಿಸಿಕೊಂಡರು ವಹಿಸಿಕೊಳ್ಳಬಹುದು. ಮುಖ್ಯ ತೀರ್ಪುಗಾರರಾಗಿ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಕಾರ್ಯಕ್ರಮದಲ್ಲಿ ಕಾಣಿಸಿಕೊಳ್ಳುವ ಶಿವಣ್ಣ ಬಿಗ್ ಬಾಸ್ ಸುದೀಪ್ ಸ್ಥಾನಕ್ಕೆ ಬಂದರೆ ಆ ಸ್ಥಾನಕ್ಕೆ ಮತ್ತು ಆ ಮನೆಗೆ ಒಂದು ಘನತೆ ಮತ್ತು ತೂಕ ಇರುತ್ತೆ ಎನ್ನುವ ಅಭಿಪ್ರಾಯವನ್ನು ಸದ್ಯಕ್ಕೆ ಅನೇಕರು ವ್ಯಕ್ತಪಡಿಸುತ್ತಿದ್ದಾರೆ.
ಇವರೆಲ್ಲರನ್ನು ಹೊರತು ಪಡಿಸಿದರೆ ಅಚ್ಚರಿ ಎಂಬಂತೆ ಅನೇಕರು ಸುದೀಪ್ ಅವರ ಸ್ಥಾನದಲ್ಲಿ ಡಾಲಿ ಧನಂಜಯ್ ಅವರನ್ನು ನೋಡಲು ಬಯಸುತ್ತಿದ್ದಾರೆ. ಜನರೊಂದಿಗೆ ಡಾಲಿ ಧನಂಜಯ್ ಬೆರೆಯುವ ರೀತಿ, ತೋರಿಸುವ ಆತ್ಮೀಯತೆ, ಅವರ ಸರಳತೆ ಎಲ್ಲವೂ ಬಿಗ್ ಬಾಸ್ ಕಾರ್ಯಕ್ರಮಕ್ಕೆ ಸೂಕ್ತವಾಗುತ್ತೆ ಎನ್ನುವ ಅಭಿಪ್ರಾಯವನ್ನು ಅನೇಕರು ಸಾಮಾಜಿಕ ಜಾಲತಾಣದಲ್ಲಿ ವ್ಯಕ್ತ ಪಡಿಸುತ್ತಿದ್ದಾರೆ.
ಅಂದ್ಹಾಗೇ ಬಿಗ್ ಬಾಸ್ ಕಾರ್ಯಕ್ರಮ ನಡೆಸಿಕೊಡುವುದು ಸುಲಭ ಅಲ್ಲ. ಯಾಕೆಂದರೆ ಎಲ್ಲಿಯೇ ಇದ್ದರೂ, ಯಾವುದೇ ಚಿತ್ರದ ಚಿತ್ರೀಕರಣದಲ್ಲಿದ್ದರೂ ಕೂಡ ಬಿಗ್ ಬಾಸ್ ಸಲುವಾಗಿ ಓಡೋಡಿ ಬರಬೇಕು. ನಿದ್ರೆಯನ್ನು ಮರೆಯಬೇಕು. ಜ್ವರ ಇದ್ದರೂ ಕೂಡ ಕಾರ್ಯಕ್ರಮ ನಡೆಸಿಕೊಡಬೇಕು. ಇವೆಲ್ಲವೂ ಸುದೀಪ್ ಅವರ ಅನುಭವಕ್ಕೆ ಬಂದಿವೆ. ಒಮ್ಮೊಮ್ಮೆ ಸಂದರ್ಭ ಸನ್ನಿವೇಶಗಳಿಂದ ಸುದೀಪ್ ಹೈರಾಣಾಗಿದ್ದು ಇದೆ. ಖುದ್ದು ಸುದೀಪ್ ಅವರೇ ಈ ಹಿಂದೆ ಈ ಮಾತುಗಳನ್ನು ಹೇಳಿದ್ದಾರೆ. ಆದರೂ ಈ ಬಾಧೆಗಳನ್ನೆಲ್ಲ ಕಿರುತೆರೆಯಲ್ಲಿ ತೋರಿಸಿಕೊಳ್ಳದೇ, ಅಚ್ಚು ಕಟ್ಟಾಗಿ ಕಾರ್ಯಕ್ರಮ ನಿಭಾಯಿಸಿಕೊಂಡು ಬಿಗ್ ಬಾಸ್ ಭಾರವನ್ನು ತಮ್ಮ ಹೆಗಲ ಮೇಲೆ ಹತ್ತು ವರ್ಷಗಳ ಕಾಲ ಹೊತ್ತು ಸುದೀಪ್ ನಡೆದುಕೊಂಡು ಬಂದಿದ್ದರು. ಆದರೆ ಈಗ ಸುದೀಪ್ ಹೊರ ಬಂದಿದ್ದಾರೆ. ಸುದೀಪ್ ಅವರ ಸ್ಥಾನಕ್ಕೆ ಮುಂದೆ ಯಾರೇ ಬಂದರೂ ಬಿಗ್ ಬಾಸ್ ನಲ್ಲಿ ಸುದೀಪ್ ಅವರ ಅನುಪಸ್ಥಿತಿ ಕಿರುತೆರೆಯ ಪ್ರೇಕ್ಷಕರಿಗೆ ಕಾಡುವುದರಲ್ಲಿ ಅನುಮಾನ ಇಲ್ಲ.


Click it and Unblock the Notifications











