ಕಾಜಲ್, ತಮನ್ನಾ, ಕೀರ್ತಿ ಸುರೇಶ್ 'ಯುವರತ್ನ'ನಿಗೆ ಜೋಡಿಯಾಗೋದು ಬೇಡವಂತೆ!
ನಟ ಪುನೀತ್ ರಾಜ್ ಕುಮಾರ್ ಅವರ ಹೊಸ ಸಿನಿಮಾಗೆ 'ಯುವರತ್ನ' ಎಂಬ ಹೆಸರು ಫಿಕ್ಸ್ ಆಗಿದೆ. ನಿರ್ದೇಶಕ ಸಂತೋಷ್ ಆನಂದ್ ರಾಮ್ ಹಾಗೂ ಪುನೀತ್ ರಾಜ್ ಕುಮಾರ್ ಜೋಡಿಯ ಎರಡನೇ ಸಿನಿಮಾ ಇದಾಗಿದೆ.
ಅಂದಹಾಗೆ, ಈ ಸಿನಿಮಾದ ನಾಯಕಿ ಯಾರಾಗಬಹುದು ಎಂಬ ಕುತೂಹಲ ಪುನೀತ್ ಅಭಿಮಾನಿಗಳಲ್ಲಿ ಇದೆ. ಈ ಬಗ್ಗೆ ಚಿತ್ರತಂಡ ಇನ್ನೂ ಸ್ಪಷ್ಟನೆ ನೀಡಿಲ್ಲವಾದರೂ ಸೌತ್ ಇಂಡಿಯಾದ ದೊಡ್ಡ ನಟಿ ಚಿತ್ರಕ್ಕೆ ಬರ್ತಾರೆ ಎಂದು ಸುಳಿವು ನೀಡಿತ್ತು.
ಸಂತೋಷ್ ಆನಂದ್ ರಾಮ್ ನೀಡಿದ್ದ ಸುಳಿವಿನ ಪ್ರಕಾರ ಸದ್ಯ ದಕ್ಷಿಣ ಭಾರತದಲ್ಲಿ ದೊಡ್ಡ ಹೆಸರು ಮಾಡಿರುವ ಕೆಲ ನಟಿಯರ ಹೆಸರನ್ನು 'ಫಿಲ್ಮಿಬೀಟ್ ಕನ್ನಡ' ಓದುಗರ ಮುಂದೆ ಇಟ್ಟಿತ್ತು. ಅವುಗಳಿಗೆ ಸಾಕಷ್ಟು ಜನರು ತಮ್ಮ ಪ್ರತಿಕ್ರಿಯೆ ನೀಡಿದ್ದಾರೆ. ಮುಂದೆ ಓದಿ...

ಫಿಲ್ಮಿ ಬೀಟ್ ಕನ್ನಡ ಪೋಲ್
'ಯುವರತ್ನ' ಸಿನಿಮಾಗೆ ಯಾರು ನಾಯಕಿ ಆಗಬೇಕು? ಎಂದು 'ಫಿಲ್ಮಿಬೀಟ್ ಕನ್ನಡ' ಪೋಲ್ ಏರ್ಪಡಿಸಿತ್ತು. ಅದರಲ್ಲಿ ನಟಿಯರಾದ ತಮನ್ನಾ ಭಾಟಿಯಾ, ಕೀರ್ತಿ ಸುರೇಶ್, ಕಾಜಲ್ ಅಗರ್ವಾಲ್ ಹಾಗೂ ಕನ್ನಡದ ನಟಿಯೇ ಇರಲಿ ಎಂದು ಮೂರು ಆಯ್ಕೆಗಳನ್ನು ನೀಡಿತ್ತು.

ಕನ್ನಡದ ನಟಿಯೇ ಇರಲಿ ಎಂದ ಓದುಗರು
ವಿಶೇಷ ಅಂದರೆ, ಈ ಪೋಲ್ ನಲ್ಲಿ ತಮನ್ನಾ ಭಾಟಿಯಾ, ಕೀರ್ತಿ ಸುರೇಶ್, ಕಾಜಲ್ ಅಗರ್ವಾಲ್ ಗಿಂತ ಹೆಚ್ಚು ಜನರು ಕನ್ನಡದ ನಟಿಯೇ ಇರಲಿ ಎಂದು ಹೇಳಿದ್ದಾರೆ. 53% ಜನರು ಈ ಸಿನಿಮಾದಲ್ಲಿ ಅಪ್ಪು ಜೊತೆಗೆ ಕನ್ನಡ ನಟಿ ನಟಿಸಲಿ ಎಂದು ಅಭಿಪ್ರಾಯಪಟ್ಟಿದ್ದಾರೆ.

ಕೀರ್ತಿ ಸುರೇಶ್ ಗೆ ಹೆಚ್ಚು ಮತ
ಉಳಿದಂತೆ 'ಮಹಾನಟಿ' ಖ್ಯಾತಿಯ ಕೀರ್ತಿ ಸುರೇಶ್ ಗೆ 23 % ಜನರ ಅಭಿಮತ ಸಿಕ್ಕಿದೆ. ಕಾಜಲ್ ಹಾಗೂ ತಮನ್ನಾಗೆ ಹೋಲಿಸಿದರೆ ಅತಿ ಹೆಚ್ಚು ಜನರು ಕೀರ್ತಿ ಸುರೇಶ್ ಮೇಲೆ ಪ್ರೀತಿ ಹೊಂದಿದ್ದಾರೆ. ಮೂಲಗಳ ಪ್ರಕಾರ ಇತ್ತ ಚಿತ್ರತಂಡ ಕೂಡ ಇವರ ಬಗ್ಗೆ ಹೆಚ್ಚು ಒಲವು ಹೊಂದಿದೆಯಂತೆ.

ತಮನ್ನಾ 15%, ಕಾಜಲ್ 10%
ನಟಿಯರಾದ ತಮನ್ನಾ ಭಾಟಿಯಾಗೆ 15% ಹಾಗೂ ಕಾಜಲ್ ಅಗರ್ವಾಲ್ ಅವರಿಗೆ 10% ಜನರು ತಮ್ಮ ಬೆಂಬಲ ನೀಡಿದ್ದಾರೆ. ಕೆಲ ತಿಂಗಳುಗಳ ಹಿಂದೆ ಪುನೀತ್ ಜೊತೆಗೆ ತಮನ್ನಾ ಒಂದು ಜಾಹಿರಾತಿನಲ್ಲಿ ನಟಿಸಿದ್ದರು. 'ಚಕ್ರವ್ಯೂಹ' ಸಿನಿಮಾಗೆ ಕಾಜಲ್ ಹಾಡು ಹಾಡಿದ್ದರು.

ಸಂತೋಷ್ ಹೇಳಿದ್ದೇನು?
'ಯುವರತ್ನ' ಸಿನಿಮಾದ ಟೈಟಲ್ ಲಾಂಚ್ ಕಾರ್ಯಕ್ರಮದಲ್ಲಿ ಚಿತ್ರದ ನಟಿಯ ಬಗ್ಗೆ ನಿರ್ದೇಶಕ ಸಂತೋಷ್ ಆನಂದ್ ರಾಮ್ ಮಾತನಾಡಿದ್ದರು. ''ಸದ್ಯಕ್ಕೆ ನಾಯಕಿ ಫೈನಲ್ ಆಗಿಲ್ಲ. ಆದ್ರೆ, ದೊಡ್ಡ ನಟಿಯೊಬ್ಬರನ್ನ ಆಯ್ಕೆ ಮಾಡುವ ಯೋಚನೆ ಇದೆ. ಆ ನಟಿ ಕನ್ನಡದವರು ಆಗಿರ್ತಾರೋ ಗೊತ್ತಿಲ್ಲ, ಬಟ್, ಸಿನಿಮಾದಲ್ಲಿ ಕನ್ನಡದವರ ರೀತಿ ಕಾಣಿಸಿಕೊಳ್ತಾರೆ' ಎಂದಿದ್ದರು.


Click it and Unblock the Notifications











