ಮಗ, ಬ್ರದರ್, ಡಿ ಬಾಸ್ ಅಂದೋರೆಲ್ಲ ಎಲ್ಲಿ? ಸುಮಲತಾ ಸೈಲೆಂಟ್ ಆಗಿರೋದ್ಯಾಕೆ?
ಕನ್ನಡ ಚಿತ್ರರಂಗದಲ್ಲಿ ದರ್ಶನ್ ಗತ್ತು, ಖದರ್ ಬೇರೆನೇ ಇತ್ತು. ಡಿ ಬಾಸ್, ಬಾಸ್ ಅಂತ ಅವರ ಜೊತೆ ಕಾಣಿಸಿಕೊಳ್ಳುತ್ತಿದ್ದವರಿಗೇನು ಕಮ್ಮಿಯಿಲ್ಲ. ಮತ್ತೆ ಕೆಲವರು ದರ್ಶನ್‌ಗೆ ಬೆನ್ನೆಲುಬಾಗಿ ನಿಂತಿದ್ದರು. ದರ್ಶನ್ ಸಿನಿಮಾಗಳು ಬಂದಾಗ, ಇವರೇ ವೇದಿಕೆ ಏರಿ ಬಾಸ್ ಅಂತ ಹೊಗಳಿ ಅಟ್ಟಕ್ಕೂ ಏರಿಸುತ್ತಿದ್ದರು. ದರ್ಶನ್ ಕೂಡ ಕೂತಲ್ಲೇ ಸ್ಮೈಲ್ ಕೊಟ್ಟು ದೊಡ್ಡವರೆನಿಸಿಕೊಳ್ಳುತ್ತಿದ್ದರು.
ದರ್ಶನ್ ಕಾಡು ಮೇಡು ಸುತ್ತುವುದಕ್ಕೆ ಹೋದಾಗಲೂ ಅಷ್ಟೇ. ಅಲ್ಲೂ ಒಂದಿಷ್ಟು ಜನರ ಗುಂಪು ಇದ್ದೇ ಇರುತ್ತಿತ್ತು. ಆದ್ರೀಗ ದರ್ಶನ್ ಅರೆಸ್ಟ್ ಆದ್ಮೇಲೆ ಇವರೆಲ್ಲರೂ ಕಾಣಿಸಿಕೊಳ್ಳುತ್ತಲೇ ಇಲ್ಲ. ದರ್ಶನ್ ಕೊಲೆ ಮಾಡುವ ವ್ಯಕ್ತಿ ಅಲ್ಲ ಅಂತಾನೋ.. ಇಲ್ಲ ದರ್ಶನ್ ಅವರ ಸಹಚರರು ಮಾಡಿದ್ದು ತಪ್ಪು ಅಂತಲೋ.. ಹೇಳಬೇಕಿತ್ತಲ್ಲ. ಯಾಕೆ ಹೇಳುತ್ತಿಲ್ಲ? ಅನ್ನೋ ಪ್ರಶ್ನೆ ಕನ್ನಡಿಗರನ್ನು ಈಗ ಕಾಡುತ್ತಿರುವುದಂತೂ ನಿಜ.

ದರ್ಶನ್‌ಗೆ ಹಿಂದಿನಿಂದಲೂ ಬೆಂಬಲವಾಗಿ ನಿಂತಿದ್ದವರು ಸುಮಲತಾ. ದರ್ಶನ್ ಇನ್ನೂ ಚಿತ್ರರಂಗದಲ್ಲಿ ಕಾಲೂರುತ್ತಿದ್ದಾಗಿನಿಂದಲೂ ಸುಮಲತಾನೇ ಬೆಂಬಲವಾಗಿ ನಿಂತಿದ್ದರು ಅಂತ ಬಲ್ಲವರು ಹೇಳುತ್ತಾರೆ. ಬೆಳೆಯುವ ಹಂತದಲ್ಲಿ ಎಷ್ಟೋ ಸಿನಿಮಾಗಳಿಗೆ ಅವಕಾಶ ಕೊಡಿಸಿದ್ದೇ ಸುಮಲತಾ ಎನ್ನುವವರೂ ಇದ್ದಾರೆ. ಅದಕ್ಕೆ ದರ್ಶನ್ ಬಾಯಿ ತುಂಬಾ ಅಮ್ಮ ಅಂತಿದ್ದರು. ಸುಮಲತಾ ಕೂಡ ತನ್ನ ಹಿರಿಯ ಮಗ ಅಂತಿದ್ದರು.
ಈಗ ಹಿರಿಯ ಮಗ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿ ಸ್ಥಾನದಲ್ಲಿ ನಿಂತಿದ್ದಾರೆ. ಆದರೆ, ಈ ಪ್ರಕರಣ ಸಂಚಲನ ಸೃಷ್ಟಿಯಾದಲ್ಲಿಂದ ಸುಮಲತಾ ಎಲ್ಲೂ ಕಾಣಿಸಿಕೊಂಡಿಲ್ಲ. ಮಗ ಮಾಡಿದ್ದು ತಪ್ಪು ಅಂತಾನೋ, ಸರಿ ಅಂತಾನೋ ಪ್ರತಿಕ್ರಿಯೆ ಕೊಡದೆ ಸೈಲೆಂಟ್ ಆಗಿದ್ದಾರೆ. ಇವರೊಂದಿಗೆ ದರ್ಶನ್‌ನ ಬಿಗ್ ಬ್ರದರ್ ಅಂತ ಕರೆಯೋ ಅಭಿಷೇಕ್ ಅಂಬರೀಶ್ ಕೂಡ ಪ್ರತಿಕ್ರಿಯೆ ಕೊಟ್ಟಿಲ್ಲ.

ಬಾಯಿ ತುಂಬಾ ಬಾಸ್ ಅಂತ ಕರೆಯೋ ವಿನೋದ್ ಪ್ರಭಾಕರ್ ಕೂಡ ಸೈಲೆಂಟ್ ಆಗಿದ್ದಾರೆ. ಮೊದಲ ಬಾರಿಗೆ ಚಿಕ್ಕಣ್ಣ ಹೀರೋ ಆದಾಗ ದರ್ಶನ್ ಸಪೋರ್ಟ್ ಮಾಡಿದ್ದರು. ತಮ್ಮ ವಿರೋಧಿನೇ ನಿರ್ಮಾಪಕ ಆಗಿದ್ದರೂ, ಚಿಕ್ಕಣ್ಣನಿಗೋಸ್ಕರ ಸಿನಿಮಾ ಬೆಂಬಲಿಸಿ ಎಂದು ದರ್ಶನ್ ಹೇಳಿದ್ದರು. ದರ್ಶನ್ ಸುತ್ತಮುತ್ತ ಓಡಾಡಿಕೊಂಡಿದ್ದವರು ಸುಳಿವೇ ಇಲ್ಲದಂತೆ ಮೌನವಾಗಿದ್ದಾರೆ. ಇನ್ನೊಂದು ಸ್ಯಾಂಡಲ್‌ವುಡ್‌ನ ಕೆಲವೇ ಕೆಲವು ಮಂದಿ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ್ದಾರೆ.
ಮೋಹಕತಾರೆ ರಮ್ಯಾ, ನವರಸ ನಾಯಕ ಜಗ್ಗೇಶ್ ಪರೋಕ್ಷವಾಗಿ ಈ ಕೃತ್ಯವನ್ನು ವಿರೋಧಿಸಿದ್ದಾರೆ. ಅದು ಬಿಟ್ಟರೆ, ನಟರಾದ ಧರ್ಮ, ಅಶ್ವಥ್ ನೀನಾಸಂ ಪ್ರತಿಕ್ರಿಯೆ ನೀಡಿದ್ದಾರೆ. ಕನ್ನಡ ಚಿತ್ರರಂಗದ ಹಿರಿಯರೇ ಈ ಪ್ರಕರಣದ ಬಗ್ಗೆ ಧ್ವನಿ ಎತ್ತುವುದಕ್ಕೆ ಹಿಂದೇಟು ಹಾಕುತ್ತಿದ್ದಾರೆ. ಮಂಡ್ಯ, ಚಿತ್ರದುರ್ಗ ಸೇರಿದಂತೆ ಹಲವು ಕಡೆಗಳಲ್ಲಿ ದರ್ಶನ್ ವಿರುದ್ಧ ಪ್ರತಿಭಟನೆಗಳು ಆಗುತ್ತಿವೆ. ಚಿತ್ರರಂಗದಿಂದಲೇ ಬ್ಯಾನ್ ಮಾಡಬೇಕು ಅನ್ನೋ ಕೂಗು ಕೇಳಿ ಬರುತ್ತಿದೆ. ಏನೇ ಇದ್ದರೂ, ದರ್ಶನ್ ಜೊತೆ ಗುರುತಿಸಿಕೊಂಡಿದ್ದ ಸುಮಲತಾ, ಅಭಿಷೇಕ್, ವಿನೋದ್ ಪ್ರಭಾಕರ್, ಚಿಕ್ಕಣ್ಣ, ರಾಕ್‌ಲೈನ್ ವೆಂಕಟೇಶ್ ಸೇರಿದಂತೆ ಹಲವರು ಪ್ರತಿಕ್ರಿಯೆ ನೀಡಿದೆ ದೂರ ಉಳಿದುಕೊಂಡಿದ್ದಾರೆ.


Click it and Unblock the Notifications











