ದೊಡ್ಡ ದೊಡ್ಡ ಸ್ಟಾರ್‌ಗಳ ಸಿನಿಮಾಗಳೇ ಓಡ್ತಿಲ್ಲ, ನನ್ಯಾರ್ ನೋಡ್ತಾರೆ ; ಸಿನಿಮಾ ಸಹವಾಸ ಬೇಡ ಎಂದ ಕುರಿಗಾಹಿ ಹನುಮಂತ
ಹನುಮಂತ ಅಂದರೆ ಆಕರ್ಷಣೆ. ಚಿಲ್ಲೂರ ಬಡ್ನಿ ತಾಂಡಾದ ಈ ವ್ಯಕ್ತಿಯ ಬಗ್ಗೆ ಅನೇಕರಿಗೆ ಆಸಕ್ತಿ. ಕುರಿ ಕಾಯುತ್ತಿದ್ದ ಹುಡುಗನೊಬ್ಬ ಇಷ್ಟೊಂದು ಹೆಸರು ಮಾಡುತ್ತಿದ್ದಾನಲ್ಲ ? ಎನ್ನುವ ಕುತೂಹಲ. ಇದೆಲ್ಲದಕ್ಕೆ ಕೈಗನ್ನಡಿಯೇ ''ಬಿಗ್ ಬಾಸ್'' ಕಾರ್ಯಕ್ರಮ.
ಕಳೆಗುಂದಿದ್ದ ಹನ್ನೊಂದನೇ ಸೀಸನ್‌ನ ''ಬಿಗ್ ಬಾಸ್'' ಕಾರ್ಯಕ್ರಮದ ಕಳೆ ಹೆಚ್ಚಿಸಿದ ಹನುಮಂತ, ದಾಖಲೆ ಮತಗಳನ್ನು ಪಡೆಯುವ ಮೂಲಕ ಟ್ರೋಫಿಯನ್ನು ಮುಡಿಗೇರಿಸಿಕೊಂಡಿದ್ದರು.50 ಲಕ್ಷ ಹಣ ಗೆದ್ದರು. ಹೊಸ ಇತಿಹಾಸ ಬರೆದರು.

ಹಾಗಂಥ ''ಬಿಗ್ ಬಾಸ್''ವರೆಗಿನ ಹನುಮಂತುನ ಪ್ರಯಾಣ ಸುಲಭದ್ದಾಗಿರಲಿಲ್ಲ. ಕಲ್ಲು ಮುಳ್ಳಿನ ಹಾದಿಯಲ್ಲಿ ನಡೆಯುತ್ತಾ ಸ್ನೇಹಿತರ ಒತ್ತಾಯಕ್ಕೆ ಮಣಿದು ''ಬಿಗ್ ಬಾಸ್'' ಮುನ್ನ ಜೀ ಕನ್ನಡ ವಾಹಿನಿಯ ''ಸರಿಗಮಪ'' ಕಾರ್ಯಕ್ರಮಕ್ಕೆ ಬಂದಿದ್ದ ಹನುಮಂತ ಆಡಿಷನ್ ನೀಡಿದರು. ತಮ್ಮ ಹಾಡುಗಾರಿಕೆಯಿಂದ ಕರುನಾಡಿನ ಹೃದಯವನ್ನು ಗೆದ್ದರು.
ಇಂಥಾ ಹನುಮಂತ ಮನಸು ಮಾಡಿದ್ದರೆ, ಚಿತ್ರರಂಗಕ್ಕೆ ಯಾವತ್ತೋ ಬರಬಹುದಿತ್ತು. ನಾಯಕನಾಗಿ ಕೂಡ ಬೆಳ್ಳಿಪರದೆಯ ಮೇಲೆ ಮಿಂಚಬೇಕಿತ್ತು. ಯಾಕೆಂದರೆ, ಚಿತ್ರರಂಗದಲ್ಲಿ ಗೆದ್ದೆತ್ತಿನ ಬಾಲ ಹಿಡಿಯೋರ ಸಂಖ್ಯೆ ಕಡಿಮೆ ಇಲ್ಲ. ಇದಕ್ಕೆ ಕೈಗನ್ನಡಿ ಎಂಬಂತೆ ಸದ್ಯ ''ಬಿಗ್ ಬಾಸ್-12''ರ ವಿನ್ನರ್ ಗಿಲ್ಲಿ ಹಿಂದೆ ಚಿತ್ರರಂಗ ಬಿದ್ದಿದೆ. ನಾಯಕನಾಗುವ ಯೋಗ ಕೂಡ ಗಿಲ್ಲಿಗೆ ಕೂಡಿ ಬಂದಿದೆ. ಚಿತ್ರ ಕೂಡ ಘೋಷಣೆ ಆಗಿದೆ.
ಈ ಹಿನ್ನೆಲೆ ಗಿಲ್ಲಿಯಂತೆ ಹನುಮಂತ ಯಾಕೆ ಹೀರೋ ಆಗಲಿಲ್ಲ ಎಂಬ ಜಿಜ್ಞಾಸೆ ಇದ್ದೇ ಇದೆ. ಈ ಕುತೂಹಲಕ್ಕೆ ಖುದ್ದು ಹನುಮಂತ ಲಮಾಣಿ ಈಗ ಉತ್ತರ ನೀಡಿದ್ಧಾರೆ. ತಾವ್ಯಾಕೇ ಚಿತ್ರರಂಗಕ್ಕೆ ನಾಯಕನಾಗಿ ಎಂಟ್ರಿ ಕೊಡಲಿಲ್ಲ ಎಂದು ಹೇಳಿದ್ಧಾರೆ. ಇದಲ್ಲದೇ ವೈಯಕ್ತಿಕ ಬದುಕಿನ ಕೆಲ ವಿಚಾರಗಳನ್ನು ಕೂಡ ಹಂಚಿಕೊಂಡಿದ್ಧಾರೆ.
ಈ ಕುರಿತು ''ಟಿವಿ9 ಕನ್ನಡ''ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಹನುಮಂತ,ಅಭಿನಯದಲ್ಲಿ ನನಗ್ಯಾವ ಆಸಕ್ತಿಯೂ ಇಲ್ಲ, ಎಲ್ಲಕ್ಕಿಂತ ಮುಖ್ಯವಾಗಿ ನನಗೆ ಆಕ್ಟಿಂಗ್ ಬರಲ್ಲ ಎಂದು ಹೇಳಿದ್ಧಾರೆ. ''ಬಿಗ್ ಬಾಸ್'' ಕಾರ್ಯಕ್ರಮದಿಂದ ಹೊರ ಬರುತ್ತಿದ್ದಂತೆಯೇ ಎರಡ್ಮೂರು ಜನ ಸಿನಿಮಾ ಮಾಡೋಣ ಎಂದು ಬಂದಿದ್ದರು ಎಂದು ಹೇಳಿರುವ ಹನುಮಂತ, ಎಂಥೆಂಥ ದೊಡ್ಡ ದೊಡ್ಡ ಸ್ಟಾರ್ ಹೀರೋಗಳ ಸಿನಿಮಾಗಳೇ ಓಡ್ತಿಲ್ಲ, ಹೀಗಿರುವಾಗ ನಮ್ಮಂತಹವರ ಸಿನಿಮಾ ನೋಡಲು ಯಾರು ಬರುತ್ತಾರೆ..? ಎಂದು ಪ್ರಶ್ನೆ ಮಾಡಿದ್ದಾರೆ.

ಮುಂದುವರೆದು ನಿರ್ಮಾಪಕರ ಕಷ್ಟ-ನಷ್ಟದ ಕುರಿತು ಕೂಡ ಮಾತನಾಡಿರುವ ಹನುಮಂತ, ಈಗ ನಾಲ್ಕು ದಿನ ನಮ್ಮ ಹೆಸರು ಇದೆ ಅಂತ್ಹೇಳಿ, ನಮ್ಮನ್ನ ಹಾಕೊಂಡು ಸಿನಿಮಾ ಮಾಡ್ತಾರೆ. ಆದರೆ, ಪಾಪ ನಮ್ಮಿಂದ ಅವರಿಗೆ ತೊಂದರೆ ಆಗ್ಬಾರ್ದು ಅಲ್ವಾ..? ಎಂದಿದ್ದಾರೆ. ಸಿನಿಮಾ ಓಡಿದ್ರೆ ಸರಿ. ಓಡ್ಲಿಲ್ಲ ಅಂದರೆ..! ಸುಮ್ಮನೆ ಯಾಕೆ ಬೇಕು ಎಂದು ನಾನೇ ಸುಮ್ಮನಾದೆ ಎಂದಿದ್ದಾರೆ.
ಹೀಗೆ ಸಿನಿಮಾ ಸಹವಾಸ ಸದ್ಯಕ್ಕೆ ಬೇಡ ಎಂದಿರುವ ಹನುಮಂತ ''ಬಿಗ್ ಬಾಸ್'' ಮನೆಯಲ್ಲಿ ಗೆದ್ದ ಐವತ್ತು ಲಕ್ಷಹಣವನ್ನು ಏನು ಮಾಡಿದ ಎನ್ನುವ ಪ್ರಶ್ನೆ ಕೂಡ ಹಲವರನ್ನು ಕಾಡುತ್ತಿದೆ. ಇದಕ್ಕೆ ಪುರಾವೆ ಎನ್ನುವಂತೆ ಹನುಮಂತ ಹೋದಲ್ಲಿ ಬಂದಲ್ಲಿ ಅನೇಕರು ಈ ಪ್ರಶ್ನೆಯನ್ನೇ ಕೇಳುತ್ತಿದ್ದಾರೆ. ಈಗಲೂ ಕೂಡ ಕೇಳಿದ್ದಾರೆ.
ಈ ಪ್ರಶ್ನೆಗೆ ಕೂಡ ಉತ್ತರ ನೀಡಿರುವ ಹನುಮಂತ, ''ಬಿಗ್ ಬಾಸ್''ನಿಂದ ಪೂರ್ತಿ ಹಣ ಬರಲಿಲ್ಲ ಎನ್ನುವುದನ್ನು ಸ್ಪಷ್ಟಪಡಿಸಿದ್ದಾರೆ. ನಿಯಮಾವಳಿಯ ಪ್ರಕಾರ ಟ್ಯಾಕ್ಸ್ ಕಡಿತಗೊಂಡು, ಅಂತಿಮವಾಗಿ 35 ಲಕ್ಷ ರೂಪಾಯಿ ಮಾತ್ರ ನನ್ನ ಕೈಗೆ ಬಂತು ಎಂದು ಹೇಳಿರುವ ಹನುಮಂತ ಆ ಹಣದಲ್ಲಿ ನಮ್ಮೂರಿನಲ್ಲಿ ಮನೆ ಕಟ್ಟಿಸುತ್ತಿದ್ದೇನೆ ಎಂದು ಹೇಳಿದ್ದಾರೆ.
ಸ್ವಂತ ಮನೆ ಕಟ್ಟುವುದು ಅಂದುಕೊಂಡಷ್ಟು ಸುಲಭದ ಕೆಲಸವಲ್ಲ, ಅದು ನಿಜಕ್ಕೂ ತುಂಬಾ ಕಷ್ಟದ ಕೆಲಸ ಎಂದು ಕೂಡ ಹೇಳಿರುವ ಹನುಮಂತ, ನಮ್ಮ ಹಿರಿಯರು ಸುಮ್ಮನೆ ''ಮನೆ ಕಟ್ಟಿ ನೋಡು, ಮದುವೆ ಮಾಡಿ ನೋಡು'' ಎಂದು ಗಾದೆ ಮಾತು ಹೇಳಿಲ್ಲ. ಅದರ ಅಸಲಿ ಕಷ್ಟ ಏನೆಂಬುದು ಈಗ ನನಗೆ ಗೊತ್ತಾಗುತ್ತಿದೆ ಎಂದು ನಸು ನಕ್ಕಿದ್ದಾರೆ. ಇದೇ ಸಮಯದಲ್ಲಿ ಮಳೆ ಆಗಿದೆ, ಕೆಲಸ ಏನೂ ಇಲ್ಲ. ಹೀಗಾಗಿ ಸದ್ಯಕ್ಕೆ ''ಕ್ವಾಟ್ಲೆ ಕಿಚನ್''ಗೆ ಬಂದೆ ಎಂದು ಕೂಡ ಹೇಳಿದ್ದಾರೆ.


Click it and Unblock the Notifications