ಮಿಲನ ಪ್ರಕಾಶ್ ವಿಚಾರಣೆ ಮಾಡಿದ್ದೇಕೆ ಪೊಲೀಸ್? ಡೆವಿಲ್' ನಿರ್ದೇಶಕರಿಗೂ ದರ್ಶನ್ ಕೇಸ್‌ಗೂ ಏನು ಸಂಬಂಧ?
ಚಿತ್ರದುರ್ಗದ ರೇಣುಕಾಸ್ವಾಮಿ ಪ್ರಕರಣಕ್ಕೆ ಸಂಬಂಧಿಸಿದಂತೆ ದರ್ಶನ್‌ರನ್ನು ಮತ್ತೆ 14 ದಿನಗಳ ಕಾಲ ನ್ಯಾಯಾಂಗ ಬಂಧನ ನೀಡಲಾಗಿದೆ. ಇತ್ತ ಪೊಲೀಸರು ತನಿಖೆಯನ್ನು ಮತ್ತಷ್ಟು ಚುರುಕುಗೊಳಿಸಿದ್ದಾರೆ. ಈ ಕೇಸ್‌ಗೆ ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಸಂಬಂಧಪಟ್ಟವರಿಗೆ ನೋಟಿಸ್ ನೀಡಿ ವಿಚಾರಣೆ ಮಾಡಲಾಗುತ್ತಿದೆ. ಹಾಗೇ ಡೆವಿಲ್ ಸಿನಿಮಾದ ನಿರ್ದೇಶಕ ಮಿಲನ ಪ್ರಕಾಶ್‌ಗೂ ನೋಟಿಸ್ ನೀಡಲಾಗಿತ್ತು.
ಈ ಸಂಬಂಧ ದರ್ಶನ್ ನಟಿಸುತ್ತಿದ್ದ 'ಡೆವಿಲ್' ಸಿನಿಮಾದ ನಿರ್ದೇಶಕ ಮಿಲನ ಪ್ರಕಾಶ್ ಬಸವೇಶ್ವರ ನಗರ ಪೊಲೀಸ್ ಠಾಣೆಯಲ್ಲಿ ವಿಚಾರಣೆಗೆ ಹಾಜರಾಗಿದ್ದರು. ಸುಮಾರು ಒಂದೂವರೆ ಗಂಟೆಗಳ ಕಾಲ ನಿರ್ದೇಶನ ಮಿಲನ ಪ್ರಕಾಶ್ ಅವರನ್ನು ವಿಚಾರಣೆ ಮಾಡಲಾಗಿದೆ ಎಂದು ವರದಿಯಾಗಿದೆ. ದರ್ಶನ್ ಜೈಲು ಸೇರಿದ ಮೇಲೆ ತೀವ್ರಗೊಂಡ ವಿಚಾರಣೆಯಲ್ಲಿ ಯಶಸ್ಸು ಸೂರ್ಯ, ವಿಲನ ಪ್ರಕಾಶ್ ಅಂತಹ ಹೆಸರುಗಳು ಬಂದಿವೆ.

ಆದರೆ, ದರ್ಶನ್ ಕೇಸ್‌ನಲ್ಲಿ ಮಿಲನ ಪ್ರಕಾಶ್‌ಗೆ ಪೊಲೀಸರು ನೋಟಿಸ್ ಕೊಟ್ಟಿದ್ದು ಏಕೆ? ಈ ಕೇಸ್‌ಗೂ ಮಿಲನ ಪ್ರಕಾಶ್‌ಗೂ ಏನು ಸಂಬಂಧ? ಈ ಪ್ರಶ್ನೆಗಳಿಗೆ ಉತ್ತರವೆಂಬಂತೆ ಒಂದಿಷ್ಟು ಸುದ್ದಿಗಳು ಓಡಾಡುತ್ತಿದೆ. ಅಷ್ಟಕ್ಕೂ ಒಂದೂವರೆ ಗಂಟೆಯಲ್ಲಿ ಪೊಲೀಸರು ಮಿಲನ ಪ್ರಕಾಶ್‌ರಿಂದ ಏನೆಲ್ಲ ಮಾಹಿತಿ ಪಡೆದರು ಅನ್ನೋದನ್ನು ಕೆಲವು ಮಾಧ್ಯಮಗಳು ವರದಿ ಮಾಡಿವೆ.
ದರ್ಶನ್ ನಟಿಸುತ್ತಿದ್ದ 'ಡೆವಿಲ್' ಸಿನಿಮಾದ ನಿರ್ಮಾಪಕ ಕಮ್ ನಿರ್ದೇಶಕ ಮಿಲನ ಪ್ರಕಾಶ್‌ಗೆ ನೋಟಿಸ್ ನೀಡಿದ ಬೆನ್ನಲ್ಲೇ ವಿಚಾರಣೆಗೆ ಹಾಜರಾಗಿದ್ದರು. ಎಸಿಪಿ ಕಚೇರಿಯಲ್ಲಿ ಇವರನ್ನು ವಿಚಾರಣೆಗೆ ಹಾಜರಾಗಿದ್ದು, ರೇಣುಕಾಸ್ವಾಮಿ ಕೊಲೆಯಾದ ಬಳಿಕ ಮೈಸೂರಿನಲ್ಲಿ ದರ್ಶನ್ 'ಡೆವಿಲ್' ಸಿನಿಮಾ ಶೂಟಿಂಗ್‌ಗೆ ಭಾಗಿಯಾಗಿದ್ದರು. ಅಲ್ಲಿನ ಕೆಲವು ವಿಚಾರಗಳನ್ನು ಮಿಲನ ಪ್ರಕಾಶ್ ಅವರಿಂದ ಮಾಹಿತಿ ಪಡೆದಿದ್ದಾರೆ ಎನ್ನಲಾಗಿದೆ.
ಜೂನ್ 10ನೇ ತಾರೀಕು ದರ್ಶನ್ ಮೈಸೂರಿನಲ್ಲಿ ನಡೆಯುತ್ತಿದ್ದ 'ಡೆವಿಲ್' ಶೂಟಿಂಗ್‌ನಲ್ಲಿ ಭಾಗಿಯಾಗಿದ್ದರು. ಈ ವೇಳೆ ಸಿನಿಮಾದ ನಿರ್ದೇಶಕರನ್ನು ಭೇಟಿಯಾಗಿದ್ದರು. ಚಿತ್ರತಂಡವೇ ದರ್ಶನ್ ಅವರನ್ನು ಮೈಸೂರಿನ ರಾಡಿಸನ್ ಬ್ಲ್ಯೂ ಹೊಟೇಲ್‌ನಲ್ಲಿ ರೂಮ್ ಅನ್ನು ಬುಕ್ ಮಾಡಿತ್ತು. ಹೀಗಾಗಿ ದರ್ಶನ್ ಬಂಧನ ಆಗುವವರೆಗೂ ಮೈಸೂರಿನಲ್ಲಿ ಸಿನಿಮಾ ಸೆಟ್ಟಿಗೆ ಸಂಬಂಧಿಸಿದಂತೆ ಏನೆಲ್ಲ ನಡೀತು ಅನ್ನುವ ಮಾಹಿತಿಯನ್ನು ಕಲೆ ಹಾಕಿದ್ದರು ಎನ್ನಲಾಗಿದೆ.

ಕೆಲವು ದಿನಗಳ ಹಿಂದೆ ದರ್ಶನ್ ಮನೆಯಲ್ಲಿ 37 ಲಕ್ಷ ರೂಪಾಯಿ ಹಾಗೂ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂಪಾಯಿ ಹಣ ವಶಕ್ಕೆ ಪೊಲೀಸರು ವಶಕ್ಕೆ ಪಡೆದಿದ್ದರು. ಈ ಹಣಕ್ಕೂ ಮಿಲನ ಪ್ರಕಾಶ್‌ಗೂ ಸಂಬಂಧವಿದೆ ಅನ್ನೋ ಮಾತು ಕೇಳಿ ಬಂದಿತ್ತು. ಹೀಗಾಗಿ ಈ ಎಲ್ಲಾ ವಿಚಾರಕ್ಕೆ ಸಂಬಂಧ ಪಟ್ಟಂತೆ ನಿರ್ದೇಶಕ ಮಿಲನ ಪ್ರಕಾಶ್ ಅವರ ಬಳಿ ಮಾಹಿತಿ ಕಲೆ ಹಾಕಿದ್ದಾರೆಂದು ಕೆಲವು ಮಾಧ್ಯಮಗಳಲ್ಲಿ ವರದಿ ಮಾಡಲಾಗಿದೆ.
ಸದ್ಯ ಮಿಲನ ಪ್ರಕಾಶ್ ತನಿಖಾಧಿಕಾರಿಗಳು ಕೇಳಿದ ಎಲ್ಲಾ ಪ್ರಶ್ನೆಗಳಿಗೂ ಉತ್ತರ ಕೊಟ್ಟಿದ್ದು, ಪೊಲೀಸರು ಅಗತ್ಯ ಬಿದ್ದರೆ ಮತ್ತೆ ಬರಬೇಕಾಗುತ್ತೆ ಎಂದು ಹೇಳಿ ಕಳುಹಿಸಿದ್ದಾರೆ ಎಂದೂ ಹೇಳಲಾಗುತ್ತಿದೆ. ಆದರೆ, ವಿಚಾರಣೆಯ ಬಳಿಕ ಮಿಲನ ಪ್ರಕಾಶ್ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡುವುದಕ್ಕೆ ನಿರಾಕರಿಸಿದ್ದಾರೆ. ಹೀಗಾಗಿ ಪೊಲೀಸರು ಮಿಲನ ಪ್ರಕಾಶ್‌ಗೆ ಯಾಕೆ ನೋಟಿಸ್ ನೀಡಿದರು? ವಿಚಾರಣೆಯಲ್ಲಿ ಮಿಲನ ಪ್ರಕಾಶ್ ಏನೆಲ್ಲಾ ಮಾಹಿತಿ ನೀಡಿದ್ದಾರೆ? ಅನ್ನೋದು ಅಧಿಕೃತವಾಗಿ ರಿವೀಲ್ ಆಗಿಲ್ಲ.


Click it and Unblock the Notifications











