ಅಭಿಮಾನಿಗಳ ಮಹತ್ಕಾರ್ಯಕ್ಕೆ ಶಿರಬಾಗಿದ ಚಾಲೆಂಜಿಂಗ್ ಸ್ಟಾರ್ ದರ್ಶನ್; ಧನ್ಯವಾದ ತಿಳಿಸಿದ ನಟ
ನಟ ದರ್ಶನ್ ಬರೀ ಸಿನಿಮಾಗಳಿಂದ ಮಾತ್ರವಲ್ಲ ತಮ್ಮ ಪ್ರಾಣಿ- ಪಕ್ಷಿ ಕಾಳಜಿ, ಸಹಾಯಹಸ್ತ ಚಾಚುವ ಗುಣದಿಂದ ಅಭಿಮಾನಿಗಳಿಗೆ ಹತ್ತಿರವಾದವರು. ನನಗೆ ಅಭಿಮಾನಿಗಳೇ ಎಲ್ಲರಿಗಿಂತ ಹೆಚ್ಚು ಎಂದು ದರ್ಶನ್ ಹೇಳುತ್ತಿರುತ್ತಾರೆ. ಅದೇ ರೀತಿ "ನಮ್ ಬಾಸ್ ನಮಗೆಲ್ಲಾ" ಎಂದು ಅಭಿಮಾನಿಗಳು ಪ್ರೀತಿ ತೋರಿಸುತ್ತಿರುತ್ತಾರೆ.
ಅಭಿಮಾನಿಗಳು ತಮ್ಮ ನೆಚ್ಚಿನ ನಟನ ಹುಟ್ಟುಹಬ್ಬ, ಸಿನಿಮಾ ಬಿಡುಗಡೆಗೆ ಹಾರ ಹಾಕಿ, ಪಟಾಕಿ ಸಿಡಿಸಿ, ಜೈಕಾರ ಹಾಕಿ ಸಂಭ್ರಮಿಸುವುದು ಗೊತ್ತೇಯಿದೆ. ದರ್ಶನ್ ಅಭಿಮಾನಿಗಳು ಇದರಲ್ಲಿ ಒಂದು ಕೈ ಮುಂದಿರುತ್ತಾರೆ. ಇಷ್ಟೇ ಅಲ್ಲ, ಅವರು ಹೇಳಿದ ಮಾತನ್ನು ಪಾಲಿಸುತ್ತಾ ಬರ್ತಿದ್ದಾರೆ. ನಟ ದರ್ಶನ್ ಪ್ರಾಣಿ- ಪಕ್ಷಿ ಪ್ರೀತಿ ಎಂಥದ್ದು ಎನ್ನುವುದು ಗೊತ್ತೇಯಿದೆ. ಕರ್ನಾಟಕ ಅರಣ್ಯ ಇಲಾಖೆ ರಾಯಭಾರಿ ಕೂಡ ಆಗಿರುವ ದರ್ಶನ್ ಸಾಕಷ್ಟು ಪ್ರಾಣಿ-ಪಕ್ಷಿಗಳನ್ನು ಸಾಕಿದ್ದಾರೆ. ಮೃಗಾಲಯಗಳಲ್ಲಿ ಪ್ರಾಣಿಗಳನ್ನು ದತ್ತು ಪಡೆಯುತ್ತಾರೆ. ತಮ್ಮ ಆಪ್ತರಿಗೂ, ಅಭಿಮಾನಿಗಳು ಪ್ರಾಣಿಗಳನ್ನು ದತ್ತು ಪಡೆಯಲು ಸಲಹೆ ನೀಡುತ್ತಾರೆ.

ರಾಜ್ಯದಲ್ಲಿ ದಿನದಿಂದ ದಿನಕ್ಕೆ ತಾಪಮಾನ ಹೆಚ್ಚಾಗುತ್ತಿದೆ. ಬೇಸಿಗೆ ಆರಂಭಕ್ಕೂ ಮುನ್ನ ರಾಜ್ಯದಲ್ಲಿ ಕುಡಿಯುವ ನೀರಿಗಾಗಿ ಹಾಹಾಕಾರ ಶುರುವಾಗಿದೆ. ಬಿಸಿಲಿನ ಝಳ ತೀವ್ರಗೊಳ್ಳುತ್ತಿದ್ದು ಪ್ರಾಣಿ, ಪಕ್ಷಿಗಳು ಗುಟುಕು ನೀರಿಗಾಗಿ ಪರದಾಡುವಂತಾಗಿದೆ. ಇದೇ ಕಾರಣಕ್ಕೆ ನಟ ದರ್ಶನ್ ಪ್ರತಿವರ್ಷ ಅಭಿಮಾನಿಗಳಲ್ಲಿ ಮನವಿ ಮಾಡುತ್ತಾರೆ. ಎಲ್ಲರೂ ತಮ್ಮ ತಮ್ಮ ಮನೆಗಳ ಮುಂದೆ, ಮನೆ ಚಾವಣಿ ಮೇಲೆ ಪ್ರಾಣಿ ಪಕ್ಷಿಗಳಿಗಾಗಿ ಕುಡಿಯುವ ನೀರಿನ ವ್ಯವಸ್ಥೆ ಮಾಡಿ ಎಂದು ಕೇಳಿಕೊಳ್ಳುತ್ತಾರೆ.
ಇತ್ತೀಚೆಗೆ ನಗರದ ಜೆಬಿ ಪಾರ್ಕ್‌ನಲ್ಲಿ ನಡೆದ ಶಿವರಾತ್ರಿ ಸಂಭ್ರಮ ಕಾರ್ಯಕ್ರಮದಲ್ಲಿ ನಟ ದರ್ಶನ್ ಭಾಗಿ ಆಗಿದ್ದರು. ಈ ವೇಳೆ "ಮನೆ ಮುಂದೆ ಮನೆ ಮೇಲೆ ದಯಮಾಡಿ ಪ್ರಾಣಿ, ಪಕ್ಷಿಗಳಿಗೆ ನೀರು ಇಡಿ. ಇದನ್ನು ಯಾವಾಗಲೂ ಕೇಳಿಕೊಳ್ಳುತ್ತೇನೆ. ನಮಗೂ ಸರಿಯಾಗಿ ನೀರು ಸಿಗುತ್ತಿಲ್ಲ. ನಾವಾದರೂ ನೀರು ಕೊಡಿ ಎಂದು ಕೇಳಬಹುದು. ಪಾಪ ಅವು ಕೇಳಿಕೊಳ್ಳಲ್ಲ. ದಯಮಾಡಿ ಈ ಕೆಲಸ ಮಾಡಿ ಎಂದು ಮನವಿ ಮಾಡಿದರು. ದರ್ಶನ್ ಮನವಿಗೆ ಸ್ಪಂದಿಸಿರುವ ಅಭಿಮಾನಿಗಳು ಪ್ರಾಣಿ-ಪಕ್ಷಿಗಳ ದಾಹ ತಣಿಸುವ ಕೆಲಸ ಮಾಡುತ್ತಿದ್ದಾರೆ.

ಕೆಲ ಅಭಿಮಾನಿಗಳು ಸಣ್ಣ ಸಣ್ಣ ಮಡಿಕೆಗಳು, ತೆಂಗಿನ ಚಿಪ್ಪು, ಹೂವಿನ ಕುಂಡಗಳನ್ನು ಸಿದ್ಧಪಡಿಸಿ ಮರಗಳ ಮೇಲೆ, ರಸ್ತೆಗಳ ಬದಿಗಳಲ್ಲಿ, ಮನೆಗಳ ಚಾವಣಿಗಳಲ್ಲಿ ಪ್ರಾಣಿ- ಪಕ್ಷಿಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಿದ್ದಾರೆ. ಇದಕ್ಕೆ ಸಂಬಂಧಿಸಿದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಈ ವಿಡಿಯೋ ನಟ ದರ್ಶನ್ ಗಮನಕ್ಕೂ ಬಂದಿದೆ. ಕೂಡಲೇ ಈ ಬಗ್ಗೆ ಪ್ರತಿಕ್ರಿಯಿಸಿ ದರ್ಶನ್ ಅಭಿಮಾನಿಗಳಿಗೆ ಧನ್ಯವಾದ ತಿಳಿಸಿದ್ದಾರೆ.
"ಪ್ರಾಣಿ-ಪಕ್ಷಿಗಳಿಗಾಗಿ ಯಾರು ಈ ಕೆಲಸ ಮಾಡಿದ್ದಿರೋ ನಿಜಕ್ಕೂ ಇದು ಅತ್ಯುತ್ತಮ ಕೆಲಸ. ಈ ಅದ್ಭುತ ಕೆಲಸಕ್ಕೆ ಧನ್ಯವಾದ" ಎಂದು ದರ್ಶನ್ ಇನ್‌ಸ್ಟಾಗ್ರಾಂನಲ್ಲಿ ರಿಪ್ಲೇ ಮಾಡಿದ್ದಾರೆ.
ದರ್ಶನ್ ಸಿನಿಮಾಗಳ ವಿಚಾರಕ್ಕೆ ಬಂದರೆ ಸದ್ಯ 'ಡೆವಿಲ್' ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈ ವಾರವೇ ಸಿನಿಮಾ ಚಿತ್ರೀಕರಣ ಆರಂಭವಾಗಲಿದೆ. ರಾಕ್‌ಲೈನ್ ಸ್ಟುಡಿಯೋದಲ್ಲಿ ಮೊದಲ ಶೆಡ್ಯೂಲ್ ಶೂಟಿಂಗ್ ನಡೆಯಲಿದೆ. ಮಿಲನಾ ಪ್ರಕಾಶ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳಲಿದ್ದಾರೆ. ಸಿನಿಮಾ ಚಿತ್ರೀಕರಣ ಆರಂಭಿಸುವ ಮುನ್ನ ಚಿತ್ರತಂಡ ಧರ್ಮಸ್ಥಳ, ಕುಕ್ಕೆ ಸುಬ್ರಮಣ್ಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದೆ. ನಟ ದರ್ಶನ್ ಕೂಡ ಸ್ನೇಹಿತರ ಜೊತೆ ಧರ್ಮಸ್ಥಳಕ್ಕೆ ಭೇಟಿ ನೀಡಿದ್ದ ಫೋಟೊಗಳು ವೈರಲ್ ಆಗಿತ್ತು.


Click it and Unblock the Notifications











