ಇವರದ್ದು ತ್ರೈವಾರ್ಷಿಕ ಯೋಜನೆ .. ಅವರದ್ದು ಪಂಚವಾರ್ಷಿಕ ಯೋಜನೆ ..
ಧ್ರುವ ಸರ್ಜಾ ಗಂಧದಗುಡಿಯ ಆಕ್ಷನ್ ಪ್ರಿನ್ಸ್. ಕನ್ನಡ ಚಿತ್ರರಂಗಕ್ಕೆ ಧ್ರುವ ಸರ್ಜಾ ಬಂದು ಹನ್ನೆರಡು ವರ್ಷಗಳೇ ಕಳೆದಿವೆ. ಆದರೆ, ಈ ಹನ್ನೆರಡು ವರ್ಷಗಳಲ್ಲಿ ಧ್ರುವ ಅಭಿನಯದ ಸಿನಿಮಾ ತೆರೆಗೆ ಬಂದಿದ್ದು ಕೇವಲ ಐದು ಮಾತ್ರ. ಈ ವಿಚಾರದಲ್ಲಿ ಖುದ್ದು ಧ್ರುವ ಅಭಿಮಾನಿಗಳಲ್ಲಿಯೇ ಪ್ರೀತಿ ತುಂಬಿದ ತಕರಾರು ಇದೆ. ವರ್ಷಕ್ಕೆ ಎರಡು ಸಿನಿಮಾ ಬೇಡ ಕೊನೆ ಪಕ್ಷ ಒಂದು ಸಿನಿಮಾವನ್ನಾದರೂ ಬಿಡುಗಡೆ ಮಾಡಿ ಎಂಬ ಮನವಿಯನ್ನೂ ಧ್ರುವ ಅವರ ವಿಐಪಿ ಬಳಗ ಮೇಲಿಂದ ಮೇಲೆ ಮಾಡ್ತಾನೇ ಬಂದಿದೆ.
ಆದರೆ ಅದೇನೋ ಗೊತ್ತಿಲ್ಲ. ಧ್ರುವ ಸರ್ಜಾ ಅವರ ಈ ತ್ರೈವಾರ್ಷಿಕ ಯೋಜನೆ ಮುಕ್ತಾಯವಾಗ್ತಿಲ್ಲ. ಇದಕ್ಕೆ ಉದಾಹರಣೆ ಎಂಬಂತೆ ಧ್ರುವ ಅಭಿನಯದ ಪೊಗರು ಚಿತ್ರ ಬಿಡುಗಡೆಯಾಗಿ ಎರಡೂವರೆ ವರ್ಷ ಕಳೆದಿವೆ. ನಿಜಾ.. ಈ ಎರಡೂವರೆ ವರ್ಷದಲ್ಲಿ ಧ್ರುವ ಅಭಿನಯದ ಎರಡು ಪ್ಯಾನ್ ಇಂಡಿಯಾ ಸಿನಿಮಾಗಳು ಸೆಟ್ಟೇರಿವೆ. ಆದರೆ, ಚಿತ್ರಮಂದಿರದ ಬಾಗಿಲಿಗೆ ಇನ್ನೂ ಯಾವ ಸಿನಿಮಾ ಕೂಡ ಬಂದಿಲ್ಲ. ಯಾವತ್ತೂ ಬರಬಹುದು ಅನ್ನುವ ಪ್ರಶ್ನೆಗೆ ಕೂಡ ಸದ್ಯಕ್ಕೆ ಸ್ಪಷ್ಟವಾದ ಉತ್ತರ ಇಲ್ಲ. ಈ ಕಾರಣಕ್ಕೆ ವಿಚಲಿತಗೊಂಡಿರುವ ಧ್ರುವ ಸರ್ಜಾ ಅವರ ವಿಐಪಿ ಫ್ಯಾನ್ಸ್, ಇನ್ನೊಮ್ಮೆ ಸಾಮಾಜಿಕ ಜಾಲತಾಣದ ಬಾಗಿಲು ಬಡೆಯುತ್ತಿದ್ದಾರೆ. ಸಾಕಿನ್ನೂ ಮೌನ ಏನಾದರೊಂದು ಮಾಹಿತಿಯನ್ನ ನೀಡಿಯೆಂಬ ಮನವಿಯನ್ನೂ ಧ್ರುವ ಸರ್ಜಾ ಅವರಲ್ಲಿ ಮಾಡ್ತಿದ್ದಾರೆ.

ಇವರದ್ದು ತ್ರೈವಾರ್ಷಿಕ.. ಅವರದ್ದು ಪಂಚವಾರ್ಷಿಕ..
ಧ್ರುವ ಸರ್ಜಾ ಅವರದ್ದು ತ್ರೈವಾರ್ಷಿಕ ಯೋಜನೆ ಆದರೆ, ಕನ್ನಡ ಚಿತ್ರರಂಗದ ರಾಕಿಂಗ್ ಸ್ಟಾರ್ ಯಶ್ ಅವರದ್ದು ಪಂಚವಾರ್ಷಿಕ ಯೋಜನೆ. ಕೆ.ಜಿ.ಎಫ್ ಮೂಲಕ ನ್ಯಾಷನಲ್ ಸ್ಟಾರ್ ಪಟ್ಟವನ್ನ ಅಲಂಕರಿಸಿರುವ ಯಶ್, ಸದ್ಯಕ್ಕೆ ಜಗತ್ತು ಗೆಲ್ಲುವ ಹುಮ್ಮಸ್ಸಿನಲ್ಲಿದ್ದಾರೆ. ಟಾಕ್ಸಿಕ್ ಚಿತ್ರದಲ್ಲಿ ತಮ್ಮನ್ನ ತಾವು ತೋಡಗಿಸಿಕೊಂಡಿದ್ದಾರೆ. ಆದರೆ ಇವರ ಈ ಪ್ರಯತ್ನದ ಲಾಭ-ನಷ್ಟದ ಲೆಕ್ಕ ತಿಳಿದುಕೊಳ್ಳಲು ಇನ್ನೂ ಒಂದು ವರ್ಷ ಅಭಿಮಾನಿಗಳು ಸಂಯಮದಿಂದ ಕಾಯ್ಲೇಬೇಕು.
ಹೀಗೆ ಆದರೆ ಕನ್ನಡ ಚಿತ್ರರಂಗದ ಕಥೆ ಏನು..?
ಯಶ್, ದರ್ಶನ್, ಧ್ರುವ, ಸುದೀಪ್, ಶಿವಣ್ಣ, ಉಪೇಂದ್ರ ಕನ್ನಡ ಚಿತ್ರರಂಗದಲ್ಲಿ ಮುಂಚೂಣಿಯಲ್ಲಿರುವ ಕಲಾವಿದರು. ಇವರೆಲ್ಲರಿಗೂ ಅವ್ರದ್ದೇ ಆದ ಅಭಿಮಾನಿ ಬಳಗ ಇದೆ. ಇವರೆಲ್ಲ ಎರಡು ಅಥವಾ ಮೂರು ವರ್ಷಕ್ಕೆ ಒಂದು ಸಿನಿಮಾ ಮಾಡಿದರೆ, ಚಿತ್ರರಂಗಕ್ಕೆ ನಷ್ಟ ಕಟ್ಟಿಟ್ಟ ಬುತ್ತಿ. ಖುದ್ದು ಚಿತ್ರಮಂದಿರದ ಮಾಲೀಕರು, ನಿರ್ಮಾಪಕರು ಕೂಡ ಹಿಂದೆ ಈ ಮಾತನ್ನ ಹೇಳಿದ್ದು ಇದೆ. ಈ ಕಾರಣಕ್ಕೆ ಪ್ಯಾನ್ ಇಂಡಿಯಾ ಎಂಬ ಭ್ರಮೆಯಿಂದ ಇವರೆಲ್ಲ ಹೊರಗೆ ಬಂದು ವರ್ಷಕ್ಕೆ ಎರಡು ಬಾರಿಯಾದರೂ ಬಣ್ಣ ಹಚ್ಚಲೇಬೇಕಿರುವ ಅನಿವಾರ್ಯತೆ ಇದೆ.


Click it and Unblock the Notifications











