'ಪಿನಾಕ' ಸಿನಿಮಾ ಮೇಲೆ ನಂಬಿಕೆ ಕಳ್ಕೊಂಡ್ರಾ ಗಣೇಶ್? ಏನ್ ಸಾರ್ ಇದೆಲ್ಲಾ?
ಗೋಲ್ಡನ್ ಸ್ಟಾರ್ ಗಣೇಶ್ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಎರಡು ವರ್ಷಗಳಿಂದ ಗಣೇಶ್ ನಟಿಸಿದ ಯಾವುದೇ ಸಿನಿಮಾ ತೆರೆಗೆ ಬಂದಿಲ್ಲ. ಈ ವರ್ಷ ಎರಡು ವಾರದ ಅಂತರದಲ್ಲಿ ಎರಡೆರಡು ಸಿನಿಮಾ ಬಿಡುಗಡೆ ಮಾಡುವುದಾಗಿ ಘೋಷಿಸಿದ್ದಾರೆ. 2 ವರ್ಷದಿಂದ ಸುಮ್ಮನಿದ್ದು 2 ವಾರಕ್ಕೆ 2 ಸಿನಿಮಾ ಯಾಕೆ? ಎನ್ನುವ ಪ್ರಶ್ನೆ ಎದ್ದಿದೆ.
ಒಂದ್ಕಾಲದಲ್ಲಿ ಹಿಟ್ ಸಿನಿಮಾಗಳನ್ನು ಕೊಡ್ತಿದ್ದ ಗಣಿ ಕ್ರೇಜ್ ಕಮ್ಮಿ ಆಗಿದೆ. ಆದರೆ 2 ವರ್ಷದ ಹಿಂದೆ 'ಕೃಷ್ಣಂ ಪ್ರಣಯ ಸಖಿ' ಸಿನಿಮಾ ಮೂಲಕ ಕಂಬ್ಯಾಕ್ ಮಾಡಿದ್ದರು. ರೊಮ್ಯಾಂಟಿಕ್ ಎಂಟರ್‌ಟೈನರ್ ಸಿನಿಮಾ ಬ್ಲಾಕ್‌ಬಸ್ಟರ್ ಹಿಟ್ ಆಗಿತ್ತು. ಅದರ ಬೆನ್ನಲ್ಲೇ ಮೂರ್ನಾಲ್ಕು ಸಿನಿಮಾಗಳಲ್ಲಿ ಗಣಿ ನಟಿಸೋಕೆ ಆರಂಭಿಸಿದರು. ಬ್ಯಾಕ್ ಟು ಬ್ಯಾಕ್ ಸಿನಿಮಾ ಬರುತ್ತೆ ಎಂದು ಕಾದವರಿಗೆ ನಿರಾಸೆ ಕಾದಿತ್ತು. ಬಹಳ ಹಿಂದೆ ಶುರುವಾಗಿದ್ದ 'ಯುವರ್ಸ್ ಸಿನ್ಸಿಯರ್ಲಿ ರಾಮ್' ಸಿನಿಮಾ ಸದ್ಯಕ್ಕೆ ತೆರೆಗೆ ಬರುವ ಲಕ್ಷಣಗಳು ಕಾಣ್ತಿಲ್ಲ.

ವರ್ಷದ ಮೊದಲ 6 ತಿಂಗಳು ಸೈಲೆಂಟ್ ಆಗಿದ್ದ ಕನ್ನಡ ಚಿತ್ರರಂಗ ಈಗ ಎದ್ದು ಕುಂತಿದೆ. ಮುಂದಿನ ತಿಂಗಳಲ್ಲಿ ಒಂದರ ಹಿಂದೆ ಒಂದು ಸಿನಿಮಾ ತೆರೆಗೆ ಬರಲಿದೆ. 'ಟಾಕ್ಸಿಕ್' ಆರ್ಭಟ ಕಮ್ಮಿ ಆಗ್ತಿದ್ದಂತೆ ಚಿತ್ರಮಂದಿರಕ್ಕೆ ಬರಲು ಗಣೇಶ್ ಸಿದ್ಧತೆ ನಡೆಸಿದ್ದಾರೆ. ಅಕ್ಟೋಬರ್ 2ರಂದು 'ಪಿನಾಕ' ಸಿನಿಮಾ ತೆರೆಗೆ ಬರಲಿದೆ. ಎರಡು ವಾರಗಳ ಅಂತರದಲ್ಲಿ ಅಂದ್ರೆ ಅಕ್ಟೋಬ್ 16ರಂದು 'ಬೃಂದಾವಿಹಾರಿ' ಸಿನಿಮಾ ಬಿಡುಗಡೆ ಆಗಲಿದೆ.
2 ವಾರದ ಅಂತರದಲ್ಲಿ ಗಣೇಶ್ ನಟನೆಯ 2 ಸಿನಿಮಾ ಬಿಡುಗಡೆ ಮಾಡುತ್ತಿರುವುದು ಯಾಕೆ? ಎನ್ನುವ ಚರ್ಚೆ ಶುರುವಾಗಿದೆ. ಸ್ಟಾರ್ ನಟರು ವರ್ಷಕ್ಕೆ 2 ಸಿನಿಮಾ ಮಾಡಬೇಕು ಎನ್ನುವ ಕೂಗು ಕೇಳಿಬರ್ತಿದೆ. ಆದರೆ 2 ವಾರಕ್ಕೆ 2 ಸಿನಿಮಾ ಬಿಡುಗಡೆ ಮಾಡುವ ಸಾಹಸ ಯಾಕೆ ಎನ್ನುವಂತಾಗಿದೆ. 'ಪಿನಾಕ' ಸಿನಿಮಾ ಬಗ್ಗೆ ಸ್ವತಃ ಗಣೇಶ್ ಅವರಿಗೆ ನಂಬಿಕೆ ಇಲ್ಲ. ಅದಕ್ಕೆ ಈ ಲೆಕ್ಕಾಚಾರ ಎಂದು ಕೆಲವರು ಕಾಮೆಂಟ್ ಮಾಡುತ್ತಿದ್ದಾರೆ. ಸ್ಟಾರ್ ನಟರ ಸಿನಿಮಾಗಳ ನಡುವೆ ಕ್ಲ್ಯಾಶ್ ಬೇಡ ಎಂದು ಅಳೆದು ತೂಗಿ ಸಿನಿಮಾ ರಿಲೀಸ್ ಡೇಟ್ ಮಾಡುತ್ತಾರೆ. ಆದರೆ ಈ ಎರಡು ಸಿನಿಮಾಗಳ ವಿಚಾರದಲ್ಲಿ ಈ ನಿರ್ಧಾರ ಯಾಕೆ ಎನ್ನುವ ಪ್ರಶ್ನೆ ಎದ್ದಿದೆ.

ಮೊದಲಿನಿಂದಲೂ ಗಣೇಶ್ ನಟನೆಯ 'ಪಿನಾಕ' ಅಷ್ಟೇನು ಕುತೂಹಲ ಮೂಡಿಸಿಲ್ಲ. ಚಿತ್ರದ ಪೋಸ್ಟರ್ಸ್, ಟೀಸರ್ ಗಮನ ಸೆಳೆಯಲಿಲ್ಲ. ಗಣೇಶ್ ಅವರನ್ನು ಮಂತ್ರವಾದಿ ಅವತಾರದಲ್ಲಿ ಊಹಿಸಿಕೊಳ್ಳಲು ಅಭಿಮಾನಿಗಳಿಗೆ ಇಷ್ಟವಾಗ್ತಿಲ್ಲ. ಇದೇ ಕಾರಣಕ್ಕೋ ಏನೋ ಸ್ವತಃ ಗೋಲ್ಡನ್ ಸ್ಟಾರ್ 'ಬೃಂದಾವಿಹಾರಿ' ಸಿನಿಮಾ ಮೇಲೆ ಹೆಚ್ಚು ನಿರೀಕ್ಷೆ ಇಟ್ಟುಕೊಂಡಿದ್ದಾರೆ ಅನ್ನಿಸ್ತಿದೆ. ಕೊರಿಯೋಗ್ರಫರ್ ಧನಂಜಯ್ 'ಪಿನಾಕ' ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಪೀಪಲ್ ಮೀಡಿಯಾ ಫ್ಯಾಕ್ಟರಿ ಬ್ಯಾನರ್ ಅಡಿಯಲ್ಲಿ ಟಿ.ಜಿ. ವಿಶ್ವಪ್ರಸಾದ್ ಹಾಗೂ ಕೃತಿ ಪ್ರಸಾದ್ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ.
ಸೂಪರ್ ಹಿಟ್ 'ಕೃಷ್ಣಂಪ್ರಣಯ ಸಖಿ' ಕಾಂಬಿನೇಷನ್‌ನಲ್ಲಿ ಬರ್ತಿರೋ ಮತ್ತೊಂದು ರೊಮ್ಯಾಂಟಿಕ್ ಮ್ಯೂಸಿಕಲ್ ಎಂಟರ್‌ಟೈನ್ ಸಿನಿಮಾ 'ಬೃಂದಾವಿಹಾರಿ'. ಶ್ರೀನಿವಾಸ್ ರಾಜು ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಸಮೃದ್ಧಿ ವಿ. ಮಂಜುನಾಥ್ ಚಿತ್ರಕ್ಕೆ ಹಣ ಹೂಡಿದ್ದಾರೆ. ದೇವಿಕಾ ಭಟ್ ಹಾಗೂ ಮಾಳವಿಕಾ ಶರ್ಮಾ ಚಿತ್ರದಲ್ಲಿ ನಾಯಕಿಯರಾಗಿ ನಟಿಸಿದ್ದಾರೆ. 'ಡಿಜಾಂಗೋ ಕೃಷ್ಣಮೂರ್ತಿ' ಹಾಗೂ 'ನಿಮ್ಮ ಸುಖಾಗಮನ ಬಯಸುವ' ಎಂಬ ಮತ್ತೆರಡು ಸಿನಿಮಾಗಳಲ್ಲಿ ಗಣೇಶ್ ನಟಿಸುತ್ತಿದ್ದಾರೆ. ಮುಂದಿನ ವರ್ಷ ಈ ಎರಡು ಸಿನಿಮಾಗಳು ತೆರೆಗೆ ಬರಲಿವೆ.


Click it and Unblock the Notifications