ಸೆ. 20ರಂದು ಬರಲ್ಲ ಟ್ರೈಲರ್; 'ಕಾಂತಾರ- 1' ಪ್ರಮೋಷನ್ ಆರಂಭಿಸದಿರಲು ಕಾರಣ ಬಹಿರಂಗ
ರಿಷಬ್ ಶೆಟ್ಟಿ ನಿರ್ದೇಶಿಸಿ ನಟಿಸಿರುವ 'ಕಾಂತಾರ-1' ಸಿನಿಮಾ ಸಿಕ್ಕಾಪಟ್ಟೆ ಹೈಪ್ ಕ್ರಿಯೇಟ್ ಮಾಡಿದೆ. ಸಿನಿಮಾ ಬಿಡುಗಡೆಗೆ ಇನ್ನು 13 ದಿನ ಮಾತ್ರ ಬಾಕಿಯಿದೆ. ಆದರೆ ಚಿತ್ರದ ಪ್ರಚಾರ ಮಾತ್ರ ಇನ್ನು ಆರಂಭವಾಗಿಲ್ಲ. ಇದು ಸಹಜವಾಗಿಯೇ ಅಭಿಮಾನಿಗಳ ಬೇಸರಕ್ಕೆ ಕಾರಣವಾಗಿದೆ.
ಹೊಂಬಾಳೆ ಫಿಲ್ಮ್ಸ್ ತಮ್ಮ ಸಿನಿಮಾ ಪ್ರಚಾರದ ವಿಚಾರದಲ್ಲಿ ಸದಾ ಮುಂದೆ ನಿಲ್ಲುತ್ತದೆ. ಭಿನ್ನ ವಿಭಿನ್ನ ರೀತಿಯಲ್ಲಿ ಪ್ರಚಾರ ಮಾಡಿ ಗಮನ ಸೆಳೆಯುತ್ತದೆ. ಆದರೆ 'ಕಾಂತಾರ ಚಾಪ್ಟರ್- 1' ವಿಚಾರದಲ್ಲಿ ಯಾಕೆ ಟೀಂ ಸೈಲೆಂಟ್ ಆಗಿದೆ ಎನ್ನುವುದು ಈಗ ಬಹಿರಂಗವಾಗಿದೆ. ಸೆಪ್ಟೆಂಬರ್ 20ರಂದು ಚಿತ್ರದ ಟ್ರೈಲರ್ ಬಿಡುಗಡೆ ಆಗುತ್ತದೆ ಎನ್ನುವ ಊಹಾಪೋಹ ಕೇಳಿಬಂದಿತ್ತು. ಇನ್ನು ಎರಡು ದಿನ ತಡವಾಗುವ ಸುಳಿವು ಸಿಕ್ಕಿದೆ. ಇದಕ್ಕೆಲ್ಲಾ ಕಾರಣ ಹೊಂಬಾಳೆ ಫಿಲ್ಮ್ಸ್ ನಂಬಿಕೆ.

3 ವರ್ಷಗಳ ಹಿಂದೆ ಬಂದಿದ್ದ 'ಕಾಂತಾರ' ಸಿನಿಮಾ ಬಾಕ್ಸಾಫೀಶ್ ಶೇಕ್ ಮಾಡಿತ್ತು. ಕೇವಲ 15 ಕೋಟಿ ರೂ. ಬಜೆಟ್‌ನಲ್ಲಿ ನಿರ್ಮಾಣವಾಗಿದ್ದ ಸಿನಿಮಾ 300 ಕೋಟಿ ರೂ.ಗೂ ಅಧಿಕ ಗ್ರಾಸ್ ಕಲೆಕ್ಷನ್ ಮಾಡಿತ್ತು. ಕನ್ನಡ ಮಾತ್ರವಲ್ಲದೇ ಬೇರೆ ಭಾಷೆಗಳಿಗೆ ಡಬ್ ಆಗಿ ಸಿನಿಮಾ ಸದ್ದು ಮಾಡಿತ್ತು. ವಿದೇಶಗಳಲ್ಲಿ ಕೂಡ ಜನ ಕ್ಯೂ ನಿಂತು ಟಿಕೆಟ್ ಖರೀದಿಸಿ ಸಿನಿಮಾ ವೀಕ್ಷಿಸಿದ್ದರು. ಆ ಸಕ್ಸಸ್ ನೋಡಿ ಪ್ರೀಕ್ವೆಲ್ ಮಾಡುವ ಪ್ರಯತ್ನ ಆರಂಭವಾಯಿತು. ಸಿನಿಮಾ ಇದೀಗ ಬಿಡುಗಡೆಗೆ ಸಜ್ಜಾಗಿದೆ. ದಸರಾ ಸಂಭ್ರಮದಲ್ಲಿ ಅಕ್ಟೋಬರ್ 2ರಂದು ಸಿನಿಮಾ 30 ದೇಶಗಳಲ್ಲಿ ಏಕಕಾಲಕ್ಕೆ ಬಿಡುಗಡೆ ಆಗುತ್ತಿದೆ.
ಚಿತ್ರದ ಪ್ರಚಾರ ಯಾಕೆ ಆರಂಭಿಸಿಲ್ಲ ಎಂದು ಅಭಿಮಾನಿಗಳು ಬೇಸರ ವ್ಯಕ್ತಪಡಿಸುತ್ತಿದ್ದಾರೆ. 1000 ಕೋಟಿ ರೂ. ಕಲೆಕ್ಷನ್ ಮಾಡುವ ಸಾಮರ್ಥ್ಯ ಚಿತ್ರಕ್ಕಿದೆ ಎನ್ನುವ ಚರ್ಚೆ ಶುರುವಾಗಿದೆ. ಕರ್ನಾಟಕ ಮಾತ್ರವಲ್ಲದೇ ಹೊರ ರಾಜ್ಯಗಳಲ್ಲಿ ವಿದೇಶಗಳಲ್ಲಿ ಕೂಡ ಭರ್ಜರಿ ಬೆಲೆಗೆ ಡಿಸ್ಟ್ರಿಬ್ಯೂಷನ್ ರೈಟ್ಸ್ ಮಾರಾಟವಾಗಿದೆ. ಯಾರೆಲ್ಲಾ ರೈಟ್ಸ್ ಖರೀದಿಸಿದ್ದಾರೆ ಎನ್ನುವ ಬಗ್ಗೆ ಹೊಂಬಾಳೆ ಫಿಲ್ಮ್ಸ್ ಮಾಹಿತಿ ನೀಡಿದೆ. ರಾಜ್ಯದಲ್ಲಿ ಸ್ವತಃ ಸಂಸ್ಥೆಯೇ ಚಿತ್ರವನ್ನು ಪ್ರೇಕ್ಷಕರ ಮುಂದೆ ತರ್ತಿದೆ. ಒಂದು ದಿನ ಮೊದ್ಲು ಅಂದ್ರೆ ಅಕ್ಟೋಬರ್ 1ರಂದು ಸಂಜೆ ದೇಶಾದ್ಯಂತ 2000ಕ್ಕೂ ಅಧಿಕ ಪೇಯ್ಡ್ ಪ್ರೀಮಿಯರ್ ಶೋ ಏರ್ಪಡಿಸುವ ಲೆಕ್ಕಾಚಾರ ನಡೀತಿದೆ.

ಸದ್ಯ ಪಿತೃಪಕ್ಷ ನಡೀತಿದೆ. ಸೆಪ್ಟೆಂಬರ್ 7ರಿಂದ ಆರಂಭವಾಗಿರುವ ಪಿತೃಪಕ್ಷ ಮಹಾಲಯ ಅಮಾವಾಸ್ಯೆಯಂದು(ಸೆಪ್ಟೆಂಬರ್ 21) ಪಿತೃಪಕ್ಷದ ಕೊನೆಯ ದಿನ ಆಗಿರುತ್ತದೆ. ಆ ಬಳಿಕ ನವರಾತ್ರಿ ಶುರುವಾಗಲಿದೆ. ಪಿತೃಪಕ್ಷದ ಸಮಯದಲ್ಲಿ ಶುಭ ಕಾರ್ಯ ನಿಷಿದ್ಧ ಎನ್ನುವ ನಂಬಿಕೆಯಿದೆ. ಅದೇ ಕಾರಣಕ್ಕೆ ಹೊಂಬಾಳೆ ಫಿಲ್ಮ್ಸ್ ಸಂಸ್ಥೆ ಇನ್ನು 'ಕಾಂತಾರ- 1' ಸಿನಿಮಾ ಪ್ರಚಾರ ಆರಂಭಿಸಿಲ್ಲ ಎನ್ನಲಾಗ್ತಿದೆ. ಸೆಪ್ಟೆಂಬರ್ 22ರ ಬಳಿಕ ಹೊಂಬಾಳೆ ಸಂಸ್ಥೆ ಟ್ರೈಲರ್ ರಿಲೀಸ್, ಪ್ರೀ ರಿಲೀಸ್ ಈವೆಂಟ್ ಸೇರಿದಂತೆ ಭರ್ಜರಿಯಾಗಿ ಸಿನಿಮಾ ಪ್ರಚಾರ ಮಾಡಲು ಮುಂದಾಗಿದೆ.
ಹೊಂಬಾಳೆ ಸಂಸ್ಥೆ ಮೊದಲಿನಿಂದಲೂ ದೈವ, ಆಚಾರ ವಿಚಾರದ ಬಗ್ಗೆ ಬಹಳ ನಂಬಿಕೆ ಇಟ್ಟುಕೊಂಡಿದೆ. ಶುಭ ಮುಹೂರ್ತದಲ್ಲಿ ಒಳ್ಳೆ ಕೆಲಸಗಳನ್ನು ಆರಂಭಿಸುತ್ತಾ ಬರ್ತಿದೆ. 'ಸಲಾರ್' ಚಿತ್ರದ ಟೀಸರ್ ಅನ್ನು ಬೆಳ್ಳಂ ಬೆಳಗ್ಗೆ ಬಿಡುಗಡೆ ಮಾಡಿದ್ದರು. ಬೆಳಗ್ಗೆ 5.12ಕ್ಕೆ ಟೀಸರ್ ರಿಲೀಸ್ ಮಾಡಲು ಒಳ್ಳೆ ಮುಹೂರ್ತ ಎಂದು ಹೇಳಿದ್ದ ಕಾರಣಕ್ಕೆ ಆ ಸಮಯವನ್ನು ನಿಗದಿಪಡಿಸಿದ್ದರು. ಬಹಳ ಶ್ರದ್ದಾ ಭಕ್ತಿಯಿಂದ 'ಕಾಂತಾರ- 1' ಚಿತ್ರವನ್ನು ನಿರ್ಮಿಸಲಾಗಿದೆ. ಈ ಬಾರಿ ಕೂಡ ದೈವಗಳ ಕಥೆ ಚಿತ್ರದಲ್ಲಿದೆ. ಹಾಗಾಗಿ ಅಷ್ಟೇ ಶ್ರದ್ಧಾ ಭಕ್ತಿಯಿಂದ ಸಿನಿಮಾ ಪ್ರಚಾರ ಹಾಗೂ ಬಿಡುಗಡೆಗೆ ಚಿತ್ರತಂಡ ಮುಂದಾಗಿದೆ.
ಇನ್ನೊಂದು ವಾರ ಬಾಕಿಯಿದೆ. ಯಾವಾಗ ಪ್ರಚಾರ ಆರಂಭಿಸುತ್ತಿರಾ ಎಂದು ಕೇಳುವವರು ಮೂಗಿನ ಮೇಲೆ ಬೆರಳಿಟ್ಟುಕೊಳ್ಳುವ ರೇಂಜ್‌ನಲ್ಲಿ 'ಕಾಂತಾರ- 1' ಪ್ರಮೋಷನ್ ಇರಲಿದೆ. ಅಕ್ಟೋಬರ್ 2ರಂದು ತೆರೆಮೇಲೆ ಮ್ಯಾಜಿಕ್ ನಡೆಯಲಿದೆ. ಮೊದಲ ದಿನವೇ ಸಿನಿಮಾ ಭರ್ಜರಿ ಓಪನಿಂಗ್ ಪಡೆದುಕೊಳ್ಳಲಿದೆ. ಪಾಸಿಟಿವ್ ಟಾಕ್ ಬಂದ್ರೆ 1000 ಕೋಟಿ ರೂ. ಗ್ಯಾರೆಂಟಿ ಎಂದು ಅಭಿಮಾನಿಗಳು ಕಾಮೆಂಟ್ ಮಾಡುತ್ತಿದ್ದಾರೆ.


Click it and Unblock the Notifications











