Martin ; ಮಾರ್ಟಿನ್ ಸುತ್ತ ಮುತ್ತ ಯಾಕಿಷ್ಟು ಅಪಪ್ರಚಾರ ? ಕನ್ನಡಿಗರೇ ಕನ್ನಡದ ಚಿತ್ರವನ್ನು ಬೆಂಬಲಿಸದಿದ್ದರೆ ಹೇಗೆ..?
ಹತ್ ಹತ್ರ ಶತಮಾನದ ಇತಿಹಾಸವನ್ನೊಂದಿರುವ ಕನ್ನಡ ಚಿತ್ರರಂಗದಲ್ಲಿ ಈಗೀಗ ಅಭಿಮಾನದ ಹೆಸರಿನಲ್ಲಿ ಅಂಧಾಭಿಮಾನವನ್ನು ಪ್ರದರ್ಶನ ಮಾಡುವವರ ಸಂಖ್ಯೆ ಹೆಚ್ಚಾಗುತ್ತಿದೆ. ಚಿತ್ರ ಯಾರದ್ದೇ ಇರಲಿ, ಆ ಚಿತ್ರ ಬಿಡುಗಡೆಯಾದ ದಿನದಿಂದನೇ ಆ ತಂಡದ ಶ್ರಮವನ್ನು ಲೆಕ್ಕಕ್ಕೆ ತೆಗೆದುಕೊಳ್ಳದೇ ಆ ಚಿತ್ರದ ಅಪಪ್ರಚಾರ ಮಾಡುವುದೇ ಅನೇಕರಿಗೆ ಫುಲ್ ಟೈಮ್ ಉದ್ಯೋಗವಾಗಿದೆ. ಇದಕ್ಕೆ ಧ್ರುವ ಸರ್ಜಾ ಅಭಿನಯದ ಮಾರ್ಟಿನ್ ಬಲಿಯಾಗುತ್ತಿರುವುದು ದುರ್ದೈವ.
ಹೌದು, ಅಸಲಿಗೆ.. ಕೆ.ಜಿ.ಎಫ್ .. ವಿಕ್ರಾಂತ್ ರೋಣ.. 777 ಚಾರ್ಲಿ ಮತ್ತು ಕಾಂತಾರದ ನಂತರ ಪ್ಯಾನ್ ಇಂಡಿಯಾ ಲೆವಲ್‌ನಲ್ಲಿ ಬಿಡುಗಡೆಯಾದ ಕನ್ನಡದ ಚಿತ್ರ ಮಾರ್ಟಿನ್ ಎಂದು ಕನ್ನಡದ ಕಲಾರಸಿಕರು ಸಂಭ್ರಮ ಪಡಬೇಕಿತ್ತು. ಚಿತ್ರದ ಪ್ಲಸ್ ಮತ್ತು ಮೈನಸ್‌ಗಳೇನೇ ಇರಲಿ ಅದೆಲ್ಲವನ್ನು ಕಡೆಗಣಿಸಿ ಕನ್ನಡದ ಚಿತ್ರವೆಂಬ ಕಾರಣಕ್ಕಾದರೂ ಚಿತ್ರವನ್ನು ಬೆಂಬಲಿಸಬೇಕಿತ್ತು. ನೀರಿನಂತೆ ಹಣ ಸುರಿದ ನಿರ್ಮಾಪಕ ಉದಯ್ ಮೆಹ್ತಾ, ಚಿತ್ರವೊಂದಕ್ಕೆ ಮೂರು ವರ್ಷ ಪಣಕ್ಕಿಟ್ಟ ಧ್ರುವ ಸರ್ಜಾ ಮತ್ತು ನಿರ್ದೇಶಕ ಎ.ಪಿ.ಅರ್ಜುನ್ ಅವರನ್ನು ಕನ್ನಡಿಗರು ಅಭಿನಂದಿಸಬೇಕಿತ್ತು.

ಆದರೆ, ಕನ್ನಡಿಗರು ವಿಶಾಲ ಹೃದಯವರು. ಅಕ್ಕ-ಪಕ್ಕದ ರಾಜ್ಯದಿಂದ ದಂಡೆತ್ತಿ ಬಂದ ಸೂಪರ್ ಸ್ಟಾರ್‌ಗಳನ್ನು ಮೊದಲಿಂದ ಮೆರೆಸುತ್ತಾ ಬಂದ ಕೀರ್ತಿ ನಮ್ಮದು. ಇದಕ್ಕೆ ಇನ್ನೊಂದು ಉದಾಹರಣೆ ಎನ್ನುವಂತೆ ಮಾರ್ಟಿನ್ ಬಗ್ಗೆ ಮನ ಬಂದಂತೆ ಮಾತನಾಡುತ್ತಿರುವ ಅನೇಕರು ಮಾರ್ಟಿನ್ ಎದುರು ಬಂದ ಪರಭಾಷೆಯ ಚಿತ್ರಗಳನ್ನು ಹೊಗಳುತ್ತಿದ್ದಾರೆ. ಅರ್ಧ ಡಜನ್ ಸ್ಟಾರ್‌ಗಳು ಚಿತ್ರದಲ್ಲಿದ್ದರೂ ಗಲ್ಲಾಪೆಟ್ಟಿಗೆಯಲ್ಲಿ ಹಣ ಗಳಿಸಲು ತಿಣುಕುತ್ತಿರುವ ಚಿತ್ರವನ್ನು ತಲೆ ಮೇಲೆ ಹೊತ್ತು ಮೆರೆಸುತ್ತಿದ್ದಾರೆ. ಮಾರ್ಟಿನ್ ಚಿತ್ರವನ್ನು ಕಾಲಿನಡಿ ಹೊಸಕಿ ಹಾಕುವ ಪ್ರಯತ್ನವನ್ನು ಮಾಡುತ್ತಿದ್ದಾರೆ. ಇದಕ್ಕೆ ಪುರಾವೆ ಎಂಬಂತೆ ಸಾಮಾಜಿಕ ಜಾಲತಾಣದಲ್ಲಿ ಅನೇಕರು ಮಾರ್ಟಿನ್ ಕಾಲೆಳೆಯುತ್ತಿದ್ದಾರೆ. ಅದ್ಯಾರದ್ದೋ ಮೇಲಿನ ಅಭಿಮಾನ, ಇನ್ಯಾರದ್ದೋ ಮೇಲಿನ ಸೇಡಿನಿಂದ ಮಾರ್ಟಿನ್ ಚಿತ್ರವನ್ನು ನೋಡದೇ ಮನಸೋಇಚ್ಛೆ ತೆಗಳುತ್ತಿದ್ದಾರೆ.
ಕೆಲವರು ಮಾರ್ಟಿನ್ ಚಿತ್ರವನ್ನು ಕೆ.ಜಿ.ಎಫ್ ಚಿತ್ರದ ಜೊತೆ ಹೋಲಿಕೆ ಮಾಡುತ್ತಿದ್ದಾರೆ. ಈ ಮೂಲಕ ಯಶ್ ಮತ್ತು ಧ್ರುವಾ ಸರ್ಜಾ ತಂದಿಡುವ ಕೆಲಸವನ್ನು ಪ್ರಾಮಾಣಿಕವಾಗಿ ಮಾಡುತ್ತಿದ್ದಾರೆ. ಪ್ರಶಾಂತ್ ನೀಲ್ ಜೊತೆ ಎ.ಪಿ.ಅರ್ಜುನ್ ಅವರನ್ನು ಹೋಲಿಕೆ ಮಾಡುತ್ತಿದ್ದಾರೆ. ಕೆ.ಜಿ.ಎಫ್ ಚಿತ್ರದಿಂದ ಪ್ರೇರಣೆ ಪಡೆದಿದ್ದು ಸಾಕು ನೀವ್ಯಾರು ಯಶ್ ಅಲ್ಲ, ಪ್ರಶಾಂತ್ ನೀಲ್ ಅಲ್ಲ ಈ ಸತ್ಯವನ್ನು ಬೇಗ ಅರ್ಥ ಮಾಡಿಕೊಂಡರೆ ಒಳ್ಳೇಯದು ಎನ್ನುತ್ತಿದ್ದಾರೆ.
ಇನ್ನೂ ಕೆಲವರು ದರ್ಶನ್ ಮತ್ತು ಧ್ರುವಾ ಸರ್ಜಾ ನಡುವಿನ ಮನಸ್ತಾಪವನ್ನು ಇಲ್ಲಿ ಪ್ರಸ್ತಾಪ ಮಾಡುತ್ತಿದ್ಧಾರೆ. ಮಾರ್ಟಿನ್ ಚಿತ್ರವನ್ನು ನೋಡಬೇಡಿ ಎನ್ನುವ ಮನವಿಗಳನ್ನು ಮಾಡುತ್ತಿದ್ದಾರೆ. ಚಿತ್ರಮಂದಿರದಲ್ಲಿ ದರ್ಶನ್ ಅವರ ಹೆಸರನ್ನು ಕೂಗಿರುವ ವಿಡಿಯೋಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಮಾರ್ಟಿನ್ ಈ ವರ್ಷ ಬಂದ ಅತ್ಯಂತ ಕಳಪೆ ಸಿನಿಮಾ ಎಂದು ಸೋಶಿಯಲ್ ಮೀಡಿಯಾದಲ್ಲಿ ಪುಕಾರು ಹಬ್ಬಿಸುತ್ತಿದ್ದಾರೆ.
ಮತ್ತೂ ಕೆಲವರು ದರ್ಶನ್ ಅವರ ಭಾವ ಚಿತ್ರವನ್ನು ತಮ್ಮ ಡಿಪಿಯನ್ನಾಗಿ ಮಾಡಿಕೊಂಡು, ಮಾರ್ಟಿನ್ ಚಿತ್ರ ನೋಡಲು ಸಾಧ್ಯವಾಗದೇ ಚಿತ್ರಮಂದಿರದಿಂದ ಎಲ್ಲರು ಹೊರ ಹೋಗುತ್ತಿದ್ದಾರೆ ಎಂದು ವಿಡಿಯೋವನ್ನು ಹಂಚಿಕೊಳ್ಳುತ್ತಿದ್ದಾರೆ. ಈ ಮೂಲಕ ಕನ್ನಡ ಚಿತ್ರವೊಂದರ ಕಗ್ಗೊಲೆಯನ್ನು ತಮ್ಮ ಕೈಯಾರೆ ತಾವೇ ಮಾಡುತ್ತಿದ್ದಾರೆ.
ಇನ್ನೂ ವಿಶೇಷ ಅಂದರೆ ಮಾರ್ಟಿನ್ ಚಿತ್ರದ ಕುರಿತು ಕೇವಲ ಕರುನಾಡಿನೆಲ್ಲೆಡೆ ಅಪಪ್ರಚಾರ ಮಾಡುವ ಕೆಲಸವಾಗುತ್ತಿಲ್ಲ. ಬದಲಿಗೆ ಹಿಂದಿಯಲ್ಲಿ ಕೂಡ ಈ ಚಿತ್ರವನ್ನು ಯಾರು ನೋಡಬಾರದು ಎಂಬಂತೆ ಕೆಲವರು ಪಿತೂರಿ ನಡೆಸಿದ್ದಾರೆ. ಇದಕ್ಕೆ ಒಂದು ಸಾಕ್ಷಿ ಎಂಬಂತೆ ಬಾಲಿವುಡ್ ದಾದಿ ಎಂಬ ಹೆಸರಿನಲ್ಲಿ ಖಾತೆಯೊಂದನ್ನು ತೆರೆಯಲಾಗಿದ್ದು ಮಾರ್ಟಿನ್ ಈ ವರ್ಷ ಬಂದ ಕಳಪೆ ಸಿನಿಮಾ ಎಂದು ಫೋಸ್ಟ್ ಮಾಡಲಾಗಿದೆ. ಮಾರ್ಟಿನ್ ಹೊರತು ಪಡಿಸಿ ಈ ಖಾತೆಯಲ್ಲಿ ಬೇರೆ ಯಾವ ಕನ್ನಡ ಚಿತ್ರವನ್ನು ಉಲ್ಲೇಖಿಸಿ ವರದಿಯನ್ನು ಮಾಡದಿರುವುದು ವಿಶೇಷ.
ಒಟ್ನಲ್ಲಿ ಇದು ಆ ನಟನ ವಿಷಯ, ಈ ನಟನ ವಿಷಯ ಎಂದು ನೋಡದೇ ಕನ್ನಡ ಚಿತ್ರರಂಗದ ಭವಿಷ್ಯವೆಂದು ನೋಡಿ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆಯಾದ ಮಾರ್ಟಿನ್ ಚಿತ್ರವನ್ನು ಬೆಂಬಲಿಸಬೇಕಿತ್ತು. ಪ್ರೋತ್ಸಾಹಿಸಬೇಕಿತ್ತು. ಆದರೆ. ಹಾಗಾಗಲಿಲ್ಲ ಅನ್ನುವುದೇ ದುರದೃಷ್ಟಕರ ಸಮಾಚಾರ.


Click it and Unblock the Notifications











