"ಪರದೆ ಮೇಲೆ ಕಾಣಿಸಿದ ಇದರ ಬಗ್ಗೆ ಯಾರೂ ಏಕೆ ಮಾತಾಡುತ್ತಿಲ್ಲ?"; ಉಪೇಂದ್ರ ಪ್ರಶ್ನೆ
'ಯುಐ' ಸಿನಿಮಾ ಯಶಸ್ವಿ ಪ್ರದರ್ಶನ ಮುಂದುವರೆಸಿದೆ. ಫಸ್ಟ್ ವೀಕೆಂಟ್ 20 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿರುವ ಅಂದಾಜಿದೆ. ದಿನದಿಂದ ದಿನಕ್ಕೆ ಪ್ರೇಕ್ಷಕರ ಸಂಖ್ಯೆ ಹೆಚ್ಚಾಗಿ ಸಿನಿಮಾ ಸಖತ್ ಸದ್ದು ಮಾಡಿದೆ. ಕೆಲವರು ಮತ್ತೆ ಸಿನಿಮಾ ನೋಡಲು ಚಿತ್ರಮಂದಿರಕ್ಕೆ ಹೋಗುತ್ತಿದ್ದಾರೆ.
'ಯುಐ' ಸಿನಿಮಾ ಬಗ್ಗೆ ಸಿಕ್ಕಾಪಟ್ಟೆ ಚರ್ಚೆ ಆಗುತ್ತಿದೆ. ಒಬ್ಬೊಬ್ಬರು ಒಂದೊಂದು ರೀತಿ ಚಿತ್ರವನ್ನು ಬಣ್ಣಿಸುತ್ತಿದ್ದಾರೆ. ಕೆಲವರು ಅದ್ಭುತ ಎಂದರೆ ಮತ್ತೆ ಕೆಲವರು ಫಿಲಾಸಫಿ ಜಾಸ್ತಿ ಆಯ್ತು, ಮನರಂಜನೆ ಇಲ್ಲ ಎನ್ನುತ್ತಿದ್ದಾರೆ. ಇನ್ನು ಚಿತ್ರದ ಆರಂಭದಲ್ಲಿ ಬರುವ "ನೀವು ಬುದ್ದಿವಂತರಾಗಿದ್ರೆ ಈಗಲೇ ಚಿತ್ರಮಂದಿರದಿಂದ ಎದ್ದೋಗಿ, ನೀವು ದಡ್ಡರಾಗಿದ್ರೆ ಈ ಚಿತ್ರ ಪೂರ್ತಿ ನೋಡಿ" ಎಂದು ಹಾಕಿದ್ದರೆ ಬಗ್ಗೆಯೂ ಭಾರೀ ಚರ್ಚೆ ಆಗುತ್ತಿದೆ.

ದುಡ್ಡು ಕೊಟ್ಟು ಸಿನಿಮಾ ನೋಡಲು ಬಂದವರನ್ನು "ಚಿತ್ರಮಂದಿರದಿಂದ ಎದ್ದೋಗಿ" ಎಂದು ಹೇಳುವುದು ಎಷ್ಟು ಸರಿ ಎಂದು ಕೆಲವರು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಈ ಬಗ್ಗೆ ಇದೀಗ ಸ್ವತಃ ಉಪೇಂದ್ರ ಪ್ರತಿಕ್ರಿಯಿಸಿದ್ದಾರೆ. ಆರಂಭದಲ್ಲಿ ಬಂದ ಈ ಸಾಲುಗಳ ಬಗ್ಗೆ ಇಷ್ಟೆಲ್ಲಾ ಮಾತನಾಡುತ್ತಿದ್ದೀರಾ? ಅಲ್ಲವೇ "ಪರದೆ ಮೇಲೆ ಕಾಣಿಸಿದ ಇದರ ಬಗ್ಗೆ ಯಾರೂ ಏಕೆ ಮಾತಾಡುತ್ತಿಲ್ಲ ?" ಎಂದು ಕೇಳಿದ್ದಾರೆ.
"ನೀವು ದಡ್ಡರಾಗಿದ್ರೆ ಈ ಚಿತ್ರ ಪೂರ್ತಿ ನೋಡಿ" ಎನ್ನುವ ಸಾಲುಗಳ ಬಂದ ಬಳಿಕ "ನಿಜವಾದ ಬುದ್ದಿವಂತರು ದಡ್ಡರ ತರ ಇರ್ತಾರೆ.. ಆದರೆ ದಡ್ಡರು ತಾವು ಬುದ್ಧಿವಂತರು ತಂತ ಎಗರಾಡ್ತಿರ್ತಾರೆ" ಎನ್ನುವ ಸಾಲುಗಳು ಹೀಗೆ ಬಂದು ಹಾಗೆ ಹೋಗುತ್ತದೆ. ಆದರೆ ಇದರ ಬಗ್ಗೆ ಯಾರು ಕಾಮೆಂಟ್ ಮಾಡುತ್ತಿಲ್ಲ ಯಾಕೆ ಎಂದು ಉಪ್ಪಿ ಕೇಳಿದ್ದಾರೆ.
ತಮ್ಮ ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ಸ್ಕ್ರೀನ್ ಶಾಟ್ ಹಂಚಿಕೊಂಡು ಯಾಕೆ ಇದರ ಬಗ್ಗೆ ಯಾರು ಮಾತನಾಡುತ್ತಿಲ್ಲ ಎಂದು ಕಾಮೆಂಟ್ ಮಾಡಿದ್ದಾರೆ. ಉಪೇಂದ್ರ ಪ್ರಶ್ನೆಗೆ ತರಹೇವಾರಿ ಕಾಮೆಂಟ್ ಮಾಡುತ್ತಿದ್ದಾರೆ. ನೀವು ಸೂಪರ್ ಸರ್, ನೀವು ಹೇಳಿದ್ದು ಸರಿ ಸರ್ ಎಂದು ಹೇಳುತ್ತಿದ್ದಾರೆ. ಮತ್ತೆ ಕೆಲವರು ಈ ಸಾಲುಗಳು ಬಹಳ ಹೊತ್ತು ಸ್ಕ್ರೀನ್‌ಮೇಲೆ ಇರಲ್ಲ, ಹೀಗೆ ಬಂದು ಹಾಗೆ ಹೋಗುತ್ತದೆ ಎಂದು ರಿಪ್ಲೇ ಮಾಡಿದ್ದಾರೆ.
ಜನ ನೆಗೆಟಿವ್ ಹುಡುಕುವುದು ಜಾಸ್ತಿ. ಅದಕ್ಕೆ ಮೊದಲು ಬಂದ ಸಾಲುಗಳ ಬಗ್ಗೆ ಇಷ್ಟೆಲ್ಲಾ ಚರ್ಚೆ ಆಗುತ್ತಿದೆ. ಬಳಿಕ ನೀವು ಹೇಳಿದ ಸಾಲುಗಳು ಯಾರಿಗೂ ಬೇಕಿಲ್ಲ ಎಂದು ಕೆಲವರು ಕಾಮೆಂಟ್ ಮಾಡಿದ್ದಾರೆ. ಒಟ್ಟಾರೆ 'ಯುಐ' ಸಿನಿಮಾ ರಿಲೀಸ್ ಬಳಿಕ ಸೈಲೆಂಟ್ ಆಗಿದ್ದ ಉಪ್ಪಿ ಇದೀಗ ಪ್ರತಿಕ್ರಿಯಿಸಲು ಮುಂದಾಗಿದ್ದಾರೆ. ಶೀಘ್ರದಲ್ಲೇ ಸಂದರ್ಶನ ನೀಡಿ ಸಿನಿಮಾ ಬಗ್ಗೆ ಮಾತಾಡಿ ಎಂದು ಅಭಿಮಾನಿಗಳು ಮನವಿ ಮಾಡುತ್ತಿದ್ದಾರೆ.
'ಯುಐ' ಚಿತ್ರದಲ್ಲಿ ಉಪೇಂದ್ರ ದ್ವಿಪಾತ್ರದಲ್ಲಿ ನಟಿಸಿದ್ದಾರೆ. ಇನ್ನು ನಿರ್ದೇಶಕ ಉಪೇಂದ್ರ ಆಗಿಯೂ ತೆರೆಮೇಲೆ ಬಂದಿದ್ದಾರೆ. ಮೆಟಾಫರ್‌ಗಳಲ್ಲೇ ಸಾಕಷ್ಟು ವಿಚಾರಗಳನ್ನು ದಾಟಿಸಲು ಪ್ರಯತ್ನಿಸಿದ್ದಾರೆ ಅದನ್ನೆಲ್ಲಾ ನೀವೇ ಡಿಕೋಡ್ ಮಾಡಿ ಎಂದು ಬಿಟ್ಟಿದ್ದಾರೆ. ಕೆಲವರು ಅರ್ಥ ಮಾಡಿಕೊಂಡು ಇಷ್ಟೆಲ್ಲಾ ಅರ್ಥ ಇದ್ಯಾ? ಎಂದು ಹುಬ್ಬೇರಿಸುತ್ತಿದ್ದಾರೆ.


Click it and Unblock the Notifications











