ಗಂಡನ ಅಫೇರ್ ಗೊತ್ತಿದ್ದರೂ ವಿಜಯಲಕ್ಷ್ಮೀ ಗೊತ್ತಿಲ್ಲದಂತೆ ಇರಬೇಕಿತ್ತು- ಕೆ.ಮಂಜು
ಕನ್ನಡದ ಗಂಡುಗಲಿ ನಿರ್ಮಾಪಕ ಅಂತಲೇ ಹೆಸರಾದವರು ಕೆ. ಮಂಜು . ಸಾಹಸ ಸಿಂಹ ಡಾ. ವಿಷ್ಣುವರ್ಧನ್ ಅವರ ಸಿನಿಮಾ ಸೇರಿದಂತೆ ಸುದೀಪ್, ಯಶ್ ತನಕ ಕನ್ನಡದ ಬಹುತೇಕ ಸ್ಟಾರ್ ಹೀರೋಗಳ ಚಿತ್ರಗಳನ್ನು ನಿರ್ಮಾಣ ಮಾಡಿದ ಹೆಗ್ಗಳಿಕೆ ಶ್ರೀಯುತರದ್ದು. ಇಂಥಾ ಕೆ.ಮಂಜು ಇಲ್ಲಿವರೆಗೆ ಎಲ್ಲಿದ್ದರೋ ಗೊತ್ತಿಲ್ಲ. ಆದರೆ ಸದ್ಯಕ್ಕೆ ದಿಗ್ಗನೆ ಎದ್ದು ಬಂದು ದರ್ಶನ್ ಪರ ಬೆಂಬಲದ ಧ್ವಜ ಹಾರಿಸಲು ಶುರು ಮಾಡಿದ್ದಾರೆ. ಇದಕ್ಕೆ ಕಾರಣ ಏನೇ ಇರಬಹುದು. ಆದರೆ, ಕನ್ನಡ ಚಿತ್ರರಂಗದ ಒಬ್ಬ ಹಿರಿಯ ನಿರ್ಮಾಪಕ ಎಂದು ಕರೆಸಿಕೊಂಡ ಕೊಬ್ರಿ ಮಂಜು ಒಬ್ಬ ಆರೋಪಿಯ ಪರ ನಿಂತಿರುವುದು ನಿಜಕ್ಕೂ ದುರದೃಷ್ಟಕರ ಬೆಳವಣಿಗೆ ಅನ್ನುವ ಮಾತು ಬೇರೇ ಎಲ್ಲೂ ಅಲ್ಲ ನಿರ್ಮಾಪಕರ ಸಂಘದ ನೂತನ ಬಿಲ್ಡಿಂಗ್‌ನಲ್ಲಿಯೇ ಕೇಳಿ ಬರುತ್ತಿದೆ.
ನಿಜಾ.. ದರ್ಶನ್ ಅಪರಾಧಿ ಹೌದೋ ಅಲ್ಲವೋ ಎನ್ನುವುದು ಮುಂಬರುವ ದಿನಗಳಲ್ಲಿಯೇ ಗೊತ್ತಾಗಲಿದೆಯಾದರೂ, ದರ್ಶನ್ ಸದ್ಯಕ್ಕೆ ಆರೋಪಿ. ಈ ವಿಚಾರವನ್ನಂತೂ ಯಾರು ಅಲ್ಲಗೆಳೆಯಲು ಸಾಧ್ಯವೇ ಇಲ್ಲ. ಇನ್ನೂ ದರ್ಶನ್ ಹೆಸರು ಕೇಳಿ ಬಂದಿರುವುದು ''ಪಿಕ್ ಪಾಕೆಟ್'' ಕೇಸ್‌ನಲ್ಲಿ ಅಲ್ಲ. ಭೀಭತ್ಸವಾಗಿ ನಡೆದ ''ಕೊಲೆ'' ಪ್ರಕರಣದಲ್ಲಿ. ಹೀಗಾಗಿ ಕೊನೆ ಪಕ್ಷ ದರ್ಶನ್ ಅವರನ್ನು ಸಮರ್ಥಿಸಿಕೊಳ್ಳುವ ಮುನ್ನ.. ಅವರು ತೀರಾ ಮುಗ್ದರು, ಅಮಾಯಕರು .. ಎಂದು ಮಾಧ್ಯಮದವರ ಮುಂದೆ ಪುಂಖಾನುಪುಂಖವಾಗಿ ಮಾತನಾಡುವ ಮುನ್ನ, ಅರೆ ಕ್ಷಣವಾದರೂ ಸನ್ಮಾನ್ಯ ಕೆ.ಮಂಜು ಅವರು ಯೋಚ್ನೇ ಮಾಡಬೇಕಿತ್ತು.

ಆದರೆ ಅದನ್ನು ಮಾಡದೇ ದರ್ಶನ್ ಕೊಲೆ ಮಾಡಿದ್ದನ್ನು ನೀವು ನೋಡಿದ್ದೀರಾ ಎಂದು ಕೇಳುವ ಕೆ. ಮಂಜು, ಮಾಡದ ತಪ್ಪಿಗೆ ದರ್ಶನ್ ಶಿಕ್ಷೆ ಅನುಭವಿಸುತ್ತಿದ್ದಾರೆ ಎಂದು ಖುದ್ದು ತಾವೇ ತೀರ್ಪು ಪ್ರಕಟಿಸುತ್ತಾರೆ. ಮಹಾತ್ಮ ಗಾಂಧಿ ಕೂಡ ಜೈಲಿಗೆ ಹೋಗಿದ್ದರು, ಅವರು ಕೆಟ್ಟವರಾ ಎಂಬ ಪ್ರಶ್ನೆ ಕೇಳ್ತಾರೆ, ದರ್ಶನ್ ಪರ ವಕಾಲತ್ತು ವಹಿಸುತ್ತಿದ್ದಾರೆ ಎಂದರೆ ''ನಾನು ದರ್ಶನ್‌ಗೆ ಕಾಕಾ ಹೊಡೆಯಲ್ಲ ಎಂದು ಹೇಳ್ತಾನೇ, ಕಾಕಾ ಹೊಡೆಯುವ ಕೆಲಸ''ವನ್ನು ಕೆ.ಮಂಜು ಮಾಡ್ತಿದ್ದಾರೆ ಎನ್ನುವುದನ್ನು ನಾವು-ನೀವು ಅರ್ಥ ಮಾಡಿಕೊಳ್ಳಬೇಕು ಎನ್ನುತ್ತಿದೆ ಗಾಂಧಿನಗರ.
ಯಾಕೆಂದರೆ.. ಪರಪ್ಪನ ಅಗ್ರಹಾರದಲ್ಲಿರುವ ದರ್ಶನ್ ಅವರಲ್ಲಿ ಕೆ.ಮಂಜು ಅವರಿಗೆ ಕನ್ನಡ ಚಿತ್ರರಂಗದ ಮುಂದಿನ ಭವಿಷ್ಯ ಕಾಣುತ್ತಿದೆ. ದರ್ಶನ್ ಆಚೆ ಬಂದ ನಂತರ ಹಣದ ಮಳೆ ಬೀಳುವ ಕನಸು ಕೆ.ಮಂಜು ಅವರಿಗೆ ಬಿದ್ದಿದೆ. ಖುದ್ದು..ಕೆ.ಮಂಜು ಅವರೇ ''ದರ್ಶನ್ ಹೊರ ಬಂದ್ಮೇಲೆ ಡಬಲ್ ಕ್ರೇಜ್ ಇರುತ್ತೆ, ಒಂದೂವರೆ ಪಟ್ಟು ವ್ಯಾಪಾರ ಆಗುತ್ತೆ'' ಎಂಬ ಹೇಳಿಕೆಯನ್ನು ನೀಡಿದ್ದಾರೆ.

ಇನ್ನೂ ನಿಮಗೆ ಗೊತ್ತು.. ದರ್ಶನ್ ಮುಂದೆ ಸಾಲು ಸಾಲು ಚಿತ್ರಗಳಿವೆ. ಈ ಪೈಕಿ ಮಿಲನ ಪ್ರಕಾಶ್ ನಿರ್ದೇಶನದ ಡೆವಿಲ್, ಜೋಗಿ ಪ್ರೇಮ್ ನಿರ್ದೇಶನದ ಚಿತ್ರ ಮಾತ್ರವಲ್ಲದೆ ತರುಣ್ ಕಿಶೋರ್ ನಿರ್ದೇಶನದಲ್ಲಿ ವೀರ ಸಿಂಧೂರ ಲಕ್ಷ್ಮಣ ಚಿತ್ರಗಳು ಜಾಹೀರಾತುಗಳ ಮೂಲಕ ಹಿಂದೆ ಅನೌನ್ಸ್ ಆಗಿವೆ. ಇನ್ನೂ..ಈ ಚಿತ್ರಗಳ ಸಾಲಿನಲ್ಲಿ ನನ್ನದೂ ಒಂದು ಸಿನಿಮಾ ಇದೆ ,ಇತ್ತೀಚೆಗೆ ಭೇಟಿಯಾಗಿ ದರ್ಶನ್‌ಗೆ ಅಡ್ವಾನ್ಸ್ ಕೊಟ್ಟಿದ್ದೇನೆ ಎಂದು ಕೂಡ ಮೊನ್ನೆಯಷ್ಟೇ ಕೆ.ಮಂಜು ಹೇಳಿದ್ಧಾರೆ. ಹೀಗಾಗಿಯೇ ಭವಿಷ್ಯದಲ್ಲಿ ನಿರ್ಮಾಣವಾಗುವ ತಮ್ಮ ಚಿತ್ರಕ್ಕೆ ಮಂಜು ಸಾಹೇಬ್ರು ಬುನಾದಿ ಹಾಕುತ್ತಿದ್ದಾರೆ, ಇಷ್ಟೇ ಅಲ್ಲದೇ ''ಲಂಕೇಶ್ ಪತ್ರಿಕೆ''ಯ ನಂತರ ವಿರುದ್ಧ ದಿಕ್ಕಿನತ್ತ ಹೋಗಿದ್ದ ಕೊಬ್ರಿ ಮಂಜು ಈ ಮೂಲಕ ಮತ್ತೊಮ್ಮೆ ರಾಜರಾಜೇಶ್ವರಿ ನಗರದ ಸುತ್ತ ಮುತ್ತ ಕ್ಯಾಂಪ್ ಹಾಕುವ ಪ್ರಯತ್ನ ಮಾಡುತ್ತಿದ್ದಾರಾ ಅನ್ನುವ ಅನುಮಾನ ಅನೇಕರನ್ನು ಈಗ ಕಾಡುತ್ತಿದೆ.
ಇನ್ನೂ ಕೆ.ಮಂಜು ಒಂದು ಕಾಲದಲ್ಲಿ ಡಾ.ವಿಷ್ಣುವರ್ಧನ್ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡವರು. ವಿಷ್ಣುವರ್ಧನ್ ಅವರ ಜೊತೆ ಜಮೀನ್ದಾರ್ರು.. ಹೃದಯವಂತ.. ನೀನೆಲ್ಲೋ ನಾನಲ್ಲಿ.. ಮಾತಾಡ್ ಮಾತಾಡು ಮಲ್ಲಿಗೆ..ಬಳ್ಳಾರಿ ನಾಗ ಅಂತಹ ಸದಭಿರುಚಿ ಚಿತ್ರಗಳನ್ನು ನಿರ್ಮಾಣ ಮಾಡಿದವರು. ಹೀಗೆ ಡಾ.ವಿಷ್ಣುವರ್ಧನ್ ಅವರಂತಹ ಮೇರು ವ್ಯಕ್ತಿತ್ವ, ಸಜ್ಜನರ ಸಹವಾಸ ಮಾಡಿದರೂ, ದರ್ಶನ್ ಮೇಲಿನ ಆರೋಪ ತಳ್ಳಿ ಹಾಕುವುದಷ್ಟೇ ಅಲ್ಲ, ದರ್ಶನ್ ಅವರ ಅನೈತಿಕ ಸಂಬಂಧವನ್ನೂ ಕೂಡ ಕೆ.ಮಂಜು ಸಮರ್ಥಿಸಿಕೊಳ್ಳುತ್ತಾರೆ ಎಂದರೆ ಅವರ ಬೌದ್ಧಿಕ ಮಟ್ಟದ ಬಗ್ಗೆ ಪ್ರಶ್ನೆ ಎದ್ದೇಳುತ್ತೆ ಎನ್ನುತ್ತಾರೆ ಕನ್ನಡ ಚಿತ್ರರಂಗದ ಮತ್ತೊಬ್ಬ ಹಿರಿಯ ನಿರ್ಮಾಪಕರು

ಹೌದು, ನಿಮಗೆ ಗೊತ್ತಿರಲಿ.. ಜೀ ಕನ್ನಡ ನ್ಯೂಸ್ ಜೊತೆ 05 ದಿನದ ಹಿಂದೆ ಮಾತನಾಡಿದ್ದ ಕೆ.ಮಂಜು, ಪವಿತ್ರಾ ಗೌಡ ತುಂಬಾನೇ ಒಳ್ಳೇಯ ಹುಡುಗಿ ಎಂದಿದ್ದರು. ಇದಿಷ್ಟೇ ಅಲ್ಲ ಈ ತರಹದ ವಿಚಾರದಲ್ಲಿ ಗೊತ್ತಿದ್ದೂ ಗೊತ್ತಿಲ್ಲದಂತೆ ಸುಮ್ನೆ ಇದ್ದು ಬಿಡಬೇಕು ಎಂದು ಕಾನೂನು ಪ್ರಕಾರ ದರ್ಶನ್ ಅವರ ಪತ್ನಿಯಾಗಿರುವ ವಿಜಯಲಕ್ಷ್ಮೀ ಅವರಿಗೆ ಕಿವಿ ಮಾತನ್ನೂ ಹೇಳಿದ್ದರು. ಅಕ್ರಮ ಸಂಬಂಧವನ್ನು ಹೊಂದಿರುವ ವ್ಯಕ್ತಿ ಕೇವಲ ದರ್ಶನ್ ಮಾತ್ರನಾ ಪ್ರಪಂಚದಲ್ಲಿ ಬೇರೆ ಯಾರಿಗೂ ಅನೈತಿಕ ಸಂಬಂಧವೇ ಇಲ್ಲವಾ ಎಂಬ ಪ್ರಶ್ನೆಯನ್ನೂ ಮಾಡಿದ್ದರು ಕೆ.ಮಂಜು. ಇವರ ಈ ಸಮರ್ಥನೆ-ಮಾತುಗಳನ್ನೂ ನೀವು ಹೇಗೆ ಅರ್ಥೈಸಿಕೊಳ್ತೀರಾ ಎನ್ನುವುದು ನಿಮಗೆ ಬಿಟ್ಟಿರುವ ವಿಚಾರ.
ಒಟ್ನಲ್ಲಿ ಸದ್ಯಕ್ಕೆ ಕೆ.ಮಂಜು ಅವರ ಈ ನಡೆ-ನುಡಿಯ ಬಗ್ಗೆ ಗಾಂಧಿನಗರದಲ್ಲಿಯೇ ಅಪಸ್ವರ ಎದ್ದಿದೆ. ಇನ್ನೂ.. ದಿನನಿತ್ಯ ಚಿತ್ರರಂಗದಲ್ಲಿ ಕೆಲವರು ಮಾಡಿಕೊಳ್ಳುತ್ತಿರುವ ಸಮರ್ಥನೆಯನ್ನೂ ಕಂಡು ಅನೇಕರಿಗೆ ವಾಕರಿಕೆ ಬರುತ್ತಿದೆ. ಚಿತ್ರರಂಗ ಎಂದರೆ ಅನೇಕರು ಅಸಹ್ಯವನ್ನೂ ಪಡುತ್ತಿದ್ದಾರೆ ಕೂಡ. ಅಂದ್ಹಾಗೇ ದರ್ಶನ್ ಅವರಿಗೆ ಸಿನಿಮಾ ಮಾಡ್ತೀನಿ ಎಂದು ಕೆ,ಮಂಜು ಅವರಂತೆ ಕಾಲು ಶತಮಾನದಿಂದಲೂ ಓಡಾಡುತ್ತಿರುವ ಇನ್ನು ಇಬ್ಬರು ನಿರ್ಮಾಪಕರು ಕನ್ನಡ ಚಿತ್ರರಂಗದಲ್ಲಿದ್ದಾರೆ. ಅವರ ಹೆಸರು ಎಂ.ಜಿ. ರಾಮಮೂರ್ತಿ ಮತ್ತು ಸೂರಪ್ಪ ಬಾಬು.


Click it and Unblock the Notifications











