ಅಂದು ಸ್ನೇಹಿತನಿಗಾಗಿ ನಿರ್ಧಾರ ಬದಲಿಸಿದ್ದ ಕಿಚ್ಚ ಮತ್ತೆ ಯೂಟರ್ನ್ ಹೊಡೆದಿದ್ದೇಕೆ?
ಕಿಚ್ಚ ಸುದೀಪ್ ಭಾರತೀಯ ಚಿತ್ರರಂಗ ಕಂಡ ಅದ್ಭುತ ನಟ. ಅವರ ಪ್ರತಿಭೆ ಮೆಚ್ಚಿ ಅಭಿಮಾನಿಗಳು 'ಅಭಿನಯ ಚಕ್ರವರ್ತಿ' ಎಂಬ ಬಿರುದು ಕೊಟ್ಟಿದ್ದಾರೆ. 'ಹುಚ್ಚ', 'ಈಗ', 'ಆಟೋಗ್ರಾಫ್', 'ಸ್ವಾತಿಮುತ್ತು' ಸಿನಿಮಾಗಳಲ್ಲಿ ಅಂತೂ ಕಿಚ್ಚನ ನಟನೆಗೆ ಅವರೇ ಸಾಟಿ.
'ಪೈಲ್ವಾನ್' ಚಿತ್ರದ ನಟನೆಗಾಗಿ ಸುದೀಪ್ ಅವರಿಗೆ ಅತ್ಯುತ್ತಮ ನಟ ರಾಜ್ಯ ಪ್ರಶಸ್ತಿ ಸಿಕ್ಕಿದೆ. ಆದರೆ ಅದನ್ನು ಅವರು ತಿರಸ್ಕರಿಸಿದ್ದಾರೆ. 16 ವರ್ಷಗಳ ಕಾಲ ಪ್ರಶಸ್ತಿ ಸಮಾರಂಭಗಳಿಂದ ದೂರವೇ ಉಳಿದಿದ್ದ ಸುದೀಪ್ 5 ವರ್ಷಗಳ ಹಿಂದೆ ತಮ್ಮ ನಿರ್ಧಾರ ಬದಲಿಸಿದ್ದರು. ಅದಕ್ಕೂ ಮುನ್ನ 2003ರಲ್ಲಿ ಕೊನೆಯದಾಗಿ ತಾವು ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಹಾಜರಾಗಿದ್ದಾಗಿ ಸುದೀಪ್ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು.

ಯಾವುದೇ ಪ್ರಶಸ್ತಿ ಘೋಷಣೆ ಆದಾಗ ಕೆಲವರು ಚಕಾರ ಎತ್ತುತ್ತಾರೆ. ವಿಜೇತರನ್ನು ಆಯ್ಕೆ ಮಾಡುವಾಗ ಲಾಬಿ, ರಾಜಕೀಯ ನಡೆಯುತ್ತದೆ ಎನ್ನುವ ಆರೋಪ ಕೇಳಿ ಬರುತ್ತದೆ. ಇಂಥದ್ದೇ ಕಾರಣಕ್ಕೆ ಸುದೀಪ್ ಅವರೂ ಪ್ರಶಸ್ತಿಗಳ ಮೇಲೆ ನಂಬಿಕೆ ಕಳೆದುಕೊಂಡಿದ್ದರು ಎನ್ನಲಾಗ್ತಿದೆ. ಜನರ ಚಪ್ಪಾಳೆಯೇ ದೊಡ್ಡ ಪ್ರಶಸ್ತಿ ಎಂದು ಭಾವಿಸಿದ್ದರು. ಆದರೆ ಸ್ನೇಹಿತನಿಗಾಗಿ ನಿರ್ಧಾರ ಬದಲಿಸಿದ್ದವರು ಈಗ ಯಾಕೆ? ರಾಜ್ಯ ಪ್ರಶಸ್ತಿ ಬೇಡ ಎನ್ನುತ್ತಿದ್ದಾರೆ ಎನ್ನುವುದು ಕೆಲವರ ಪ್ರಶ್ನೆ.
ಪ್ರಶಸ್ತಿಗಳ ಬಗ್ಗೆ ಆಸಕ್ತಿ ಇಲ್ಲ ಎನ್ನುವವರು 'ಈಗ' ಚಿತ್ರದ ನಟನೆಗಾಗಿ ಅತ್ಯುತ್ತಮ ಖಳನಟ ನಂದಿ ಪ್ರಶಸ್ತಿ ಬಂದಾಗ ಸಂತಸ ವ್ಯಕ್ತಪಡಿಸಿದ್ದರು. ಆ ಪ್ರಶಸ್ತಿಯನ್ನು ಚಿತ್ರದ ನಿರ್ದೇಶಕ ರಾಜಮೌಳಿ ಅವರಿಗೆ ಅರ್ಪಿಸಿದ್ದರು. ಈ ಬಗ್ಗೆ ಟ್ವೀಟ್ ಮಾಡಿದ್ದರು. ಇನ್ನು 'ಜೀ ತಮಿಳು ಅವಾರ್ಡ್ಸ್' ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದರು. 'ಕನ್ನಡ ಚಿತ್ರರಂಗದ ಹೆಮ್ಮೆ' ಎಂಬ ಪ್ರಶಸ್ತಿಯನ್ನು ವೈಯಕ್ತಿಕವಾಗಿ ಹೋಗಿ ಸ್ವೀಕರಿಸಿದ್ದರು. ಚೆನ್ನೈನಲ್ಲಿ ನಡೆದ ಈ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ನಟಿ ನಯನತಾರ ಪ್ರಶಸ್ತಿ ಪ್ರದಾನ ಮಾಡಿದ್ದರು.
'ಕನ್ನಡ ಚಿತ್ರರಂಗದ ಹೆಮ್ಮೆ' ಪ್ರಶಸ್ತಿ ಪಡೆದ ಬಗ್ಗೆ ನಟ ಸುದೀಪ್ ಟ್ವೀಟ್ ಮಾಡಿದ್ದರು. "ಬಹಳ ವರ್ಷಗಳ ಬಳಿಕ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗಿ ಆಗಿದ್ದು ಕೊಂಚ ವಿಚಿತ್ರ ಎನಿಸಿತು. ಖುಷಿ ಕೂಡ ಆಯಿತು. ನನ್ನ ಸ್ನೇಹಿತನಿಗಾಗಿ ನಿರ್ಧಾರ ಬದಲಿಸಿದೆ. ನಾನು ಕಾರ್ಯಕ್ರಮಕ್ಕೆ ಹಾಜರಾಗಿದ್ದು ಕೆಲವರಿಗೆ ಖುಷಿ ತಂದಿದ್ದು ಅದು ನನಗೂ ಸಂತಸ ತಂದಿದೆ" ಎಂದು ಬರೆದುಕೊಂಡಿದ್ದರು.
ಸದ್ಯ 2019ನೇ ಸಾಲಿನ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ ಘೋಷಣೆ ಆಗಿದೆ. 'ಪೈಲ್ವಾನ್' ಚಿತ್ರಕ್ಕಾಗಿ ಕಿಚ್ಚನಿಗೆ ಅತ್ಯುತ್ತನ ನಡ ಪ್ರಶಸ್ತಿ ಸಿಕ್ಕಿದೆ. ಆದರೆ ಅದನ್ನು ಸ್ವೀಕರಿಸಲು ನಯವಾಗಿಯೇ ನಿರಾಕರಿಸಿ ಸುದೀಪ್ ಟ್ವೀಟ್ ಮಾಡಿದ್ದಾರೆ. ಇತ್ತೀಚೆಗೆ ತುಮಕೂರು ವಿವಿ ಡಾಕ್ಟರೇಟ್ ಗೌರವವನ್ನು ಸುದೀಪ್ ಕೂಡ ನಿರಾಕರಿಸಿದ್ದರು. ಕಿಚ್ಚನ ಈ ನಡೆಯನ್ನು ಅಭಿಮಾನಿಗಳು ಸ್ವಾಗತಿಸಿದ್ದಾರೆ. ಇದಕ್ಕೆ ನೀವು ಚಿತ್ರರಂಗದ ಮಾಣಿಕ್ಯ ಎಂದು ಮೆಚ್ಚುಗೆ ಸೂಚಿಸುತ್ತಿದ್ದಾರೆ.
ರಾಜ್ಯ ಪ್ರಶಸ್ತಿ ಬಗ್ಗೆ ಟ್ವೀಟ್ ಮಾಡಿದ್ದ ಸುದೀಪ್, "ಅತ್ಯುತ್ತಮ ನಟ ವಿಭಾಗದಲ್ಲಿ ರಾಜ್ಯ ಪ್ರಶಸ್ತಿಯನ್ನು ಪಡೆದಿರುವುದು ನಿಜಕ್ಕೂ ಒಂದು ಸೌಭಾಗ್ಯ. ಇದಕ್ಕಾಗಿ ನಾನು ಗೌರವಾನ್ವಿತ ತೀರ್ಪುಗಾರರಿಗೆ ನನ್ನ ಹೃತ್ಪೂರ್ವಕ ಧನ್ಯವಾದ ತಿಳಿಸುತ್ತೇನೆ. ಆದರೆ ನಾನು ಕೆಲ ವರ್ಷಗಳಿಂದ ಪ್ರಶಸ್ತಿ ಪಡೆಯುವುದ ನಿಲ್ಲಿಸಿದ್ದೇನೆ. ವೈಯಕ್ತಿಕ ಕಾರಣಗಳಿಂದ ಈ ನಿರ್ಧಾರಕ್ಕೆ ಬಂದಿದ್ದೇನೆ. ಚಿತ್ರರಂಗದಲ್ಲಿ ಈ ಗೌರವಕ್ಕೆ ಪಾತ್ರರಾಗುವಂತಹ ಹಲವು ಕಲಾವಿದರಿದ್ದಾರೆ. ಅವರಿಗೆ ಸಿಗಬೇಕು. ನೀವು ನನ್ನನ್ನು ಗುರ್ತಿಸಿದ್ದೆ ದೊಡ್ಡ ಬಹುಮಾನ. ಜ್ಯೂರಿ ಸದಸ್ಯರು ಹಾಗೂ ರಾಜ್ಯ ಸರ್ಕಾರದವರಿಗೆ ನಿರಾಸೆಯಾಗಿದ್ದರೆ ಕ್ಷಮೆ ಕೇಳುತ್ತೇನೆ" ಎಂದಿ ಬರೆದುಕೊಂಡಿದ್ದಾರೆ.
ಕಿಚ್ಚನ ನಿರ್ಧಾರದ ಬಗ್ಗೆ ಹೊಸ ಚರ್ಚೆ ಶುರುವಾಗಿದೆ. ಸುದೀಪ್ ಕರ್ನಾಟಕದಲ್ಲಿ ನೀಡುವ ಪ್ರಶಸ್ತಿಗಳನ್ನು ಮಾತ್ರ ಪಡೆಯಲು ನಿರಾಕರಿಸುತ್ತಾರಾ? ಎನ್ನುವ ಚರ್ಚೆ ಮುನ್ನಲೆಗೆ ಬಂದಿದೆ. ಆಂಧ್ರದ ನಂದಿ ಪ್ರಶಸ್ತಿ, ತಮಿಳಿನ ಜೀ ಪ್ರಶಸ್ತಿ ಪಡೆದಿದ್ದರು. ಆದರೆ ಕರ್ನಾಟಕ ರಾಜ್ಯ ಪ್ರಶಸ್ತಿ ಯಾಕೆ ಬೇಡ ಎನ್ನುತ್ತಾರೆ? ಎಂದು ಕೆಲವರು ಕೇಳುತ್ತಿದ್ದಾರೆ. ಬೇಡ ಎನ್ನುವಂತಿದ್ದರೆ ಪ್ರಶಸ್ತಿಗಾಗಿ ಅರ್ಜಿ ಸಲ್ಲಿಸುವಾಗ ಅತ್ಯುತ್ತಮ ನಟ ವಿಭಾಗದಲ್ಲಿ ತಮ್ಮ ಹೆಸರು ಕೈಬಿಡಲು ಚಿತ್ರತಂಡಕ್ಕೆ ಸೂಚಿಸಬೇಕಿತ್ತಲ್ಲವೇ ಎನ್ನುವವರು ಇದ್ದಾರೆ.
ಬಹಳ ಹಿಂದೆ 'ರಂಗ ಎಸ್‌ಎಸ್‌ಎಲ್‌ಸಿ' ಹಾಗೂ 'ಮುಸ್ಸಂಜೆ ಮಾತು' ಚಿತ್ರಗಳಿಗೆ ಸುದೀಪ್ ಅವರಿಗೆ ಪ್ರಶಸ್ತಿ ಬರಬೇಕಿತ್ತಂತೆ. ಸ್ವತ: ಜ್ಯೂರಿ ಸದಸ್ಯರಿಂದಲೇ ಈ ಬಗ್ಗೆ ಸುಳಿವು ಸಿಕ್ಕಿತ್ತಂತೆ. ಆದರೆ ಬಳಿಕ ಬೇರೆಯವರಿಗೆ ಪ್ರಶಸ್ತಿ ಕೊಟ್ಟಿದ್ದರು. ಇದೇ ಕಾರಣಕ್ಕೆ ಸುದೀಪ್ ಪ್ರಶಸ್ತಿಗಳ ಬಗ್ಗೆ ನಂಬಿಕೆ ಕಳೆದುಕೊಂಡಿದ್ದಾರೆ ಎನ್ನುವ ಮಾತುಗಳು ಕೇಳಿಬರ್ತಿದೆ.


Click it and Unblock the Notifications











