RCB Vs CSK: "ಅನ್ನ ಹಾಕುವ ವೃತ್ತಿ ಮೇಲಾಣೆ, ನಾನು ತಪ್ಪು ಮಾಡಿಲ್ಲ" ಎಂದು ತಮಿಳರ ಕ್ಷಮೆ ಕೇಳಿದ್ದೇಕೆ ಕನ್ನಡ ನಟಿ?
12 ವರ್ಷಗಳ ಹಿಂದೆ ವೈರಲ್ ಆಗಿದ್ದ ಪೋಸ್ಟ್ ಒಂದರ ಬಗ್ಗೆ ನಟಿ ಧನ್ಯಾ ಬಾಲಕೃಷ್ಣ ಈಗ ಕ್ಷಮೆ ಕೇಳಿದ್ದಾರೆ. ಬೆಂಗಳೂರಿನಲ್ಲಿ ಹುಟ್ಟಿಬೆಳೆದ ನಟಿ ಧನ್ಯಾ ತೆಲುಗು, ತಮಿಳು ಸಿನಿಮಾಗಳಲ್ಲಿ ನಟಿಸಿದ್ದು ಹೆಚ್ಚು. ಸದ್ಯ ಆಕೆ ನಟಿಸಿರುವ ತಮಿಳಿನ 'ಲಾಲ್ ಸಲಾಂ' ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ.
'ಲಾಲ್ ಸಲಾಂ' ರಿಲೀಸ್ ಹೊಸ್ತಿಲಲ್ಲಿ ಸಂಕಷ್ಟವೊಂದು ಶುರುವಾಗಿತ್ತು. ಅದಕ್ಕೆ ಕಾರಣ 12 ವರ್ಷಗಳ ಹಿಂದೆ ನಟಿ ಧನ್ಯಾ ಬಾಲಕೃಷ್ಣ ಮಾಡಿದ್ದರು ಎನ್ನಲಾಗಿದ್ದ ಪೋಸ್ಟ್. ಇದೇ ವಿಚಾರವಾಗಿ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆ ಶುರುವಾಗಿತ್ತು. ತಮಿಳುನಾಡಿನ ಬಗ್ಗೆ ವ್ಯಂಗ್ಯ ಮಾಡಿ ಧನ್ಯಾ ಮಾಡಿದ್ದರು ಎನ್ನಲಾಗಿದ್ದ ಪೋಸ್ಟ್ ಸ್ಕ್ರೀನ್ ಶಾಟ್ ವೈರಲ್ ಆಗ್ತಿದೆ. ಇದನ್ನು ನೋಡಿ ಆಕೆಯ ಬಗ್ಗೆ ತಮಿಳು ಪ್ರೇಕ್ಷಕರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ನೀನು ನಟಿಸಿರುವ 'ಲಾಲ್ ಸಲಾಂ' ಸಿನಿಮಾ ಬಾಯ್ಕಾಟ್ ಮಾಡಬೇಕು ಎಂದು ಆಗ್ರಹಿಸಿದ್ದರು.

ತಮ್ಮದಲ್ಲದ ತಪ್ಪಿಗೆ ತಮ್ಮ ಮೇಲೆ ಆಕ್ರೋಶ ವ್ಯಕ್ತವಾಗುತ್ತಿದ್ದಂತೆ ಎಚ್ಚೆತ್ತುಕೊಂಡ ನಟ ಧನ್ಯಾ ಬಾಲಕೃಷ್ಣ ಕ್ಷಮೆ ಕೇಳಿದ್ದಾರೆ. 'ಲಾಲ್ ಸಲಾಂ' ಚಿತ್ರಕ್ಕೆ ಸಮಸ್ಯೆ ಆಗುತ್ತದೆ ಎಂದು ಭಾವಿಸಿ ಆಕೆ ತಮಿಳಿನಲ್ಲೇ ಸುದೀರ್ಘ ಪತ್ರ ಬರೆದು ಸೋಶಿಯಲ್ ಮೀಡಿಯಾ ವೇದಿಕೆಯಲ್ಲಿ ಕ್ಷಮೆ ಯಾಚಿಸಿದ್ದಾರೆ. 12 ವರ್ಷಗಳ ಹಿಂದೆ RCB Vs CSK ಪಂದ್ಯದ ಸಮಯದಲ್ಲಿ ತಮಿಳರನ್ನು ವ್ಯಂಗ್ಯ ಮಾಡಿ ಧನ್ಯ ಮಾಡಿದ್ದರು ಎನ್ನಲಾಗಿದ್ದ ಪೋಸ್ಟ್ ಸದ್ದು ಮಾಡಿತ್ತು. ಆಕೆ ಕ್ಷಮೆ ಸಹ ಕೇಳಿದ್ದರು. ಆದರೂ ಈಗ ಆ ಸ್ಕ್ರೀನ್ ಶಾಟ್ ವೈರಲ್ ಆಗುತ್ತಿದೆ.
ಕ್ಷಮೆ ಕೇಳಿ ತಮಿಳಿನಲ್ಲಿ ಪತ್ರ
"ಕೆಲವು ದಿನಗಳಿಂದ ನನ್ನ ಹೆಸರಿನಲ್ಲಿ ವೈರಲ್ ಆಗುತ್ತಿರುವ ಸ್ಕ್ರೀನ್‌ಶಾಟ್ ನನ್ನದಲ್ಲ, ನಾನು ತಮಿಳುನಾಡಿನ ವಿರುದ್ಧ ಆಕ್ಷೇಪಾರ್ಹ ಕಾಮೆಂಟ್‌ಗಳನ್ನು ಮಾಡಿದಂತೆ ಅದರಲ್ಲಿದೆ. ಆದರೆ ಅದು ನನ್ನ ಪೋಸ್ಟ್ ಅಲ್ಲ, ಯಾರೋ ನನ್ನ ಹೆಸರನ್ನು ಎಡಿಟ್ ವೈರಲ್ ಮಾಡುತ್ತಿದ್ದಾರೆ. ಇದೇ ಸತ್ಯ. ನನಗೆ ಅನ್ನ ನೀಡುತ್ತಿರುವ ವೃತ್ತಿ ಮೇಲೆ ಆಣೆ ಮಾಡಿ ಹೇಳುತ್ತಿದ್ದೇನೆ. ನನ್ನನ್ನು ಟ್ರೋಲ್ ಮಾಡಲು ಕೆಲವರು ಇದನ್ನು ಬೇಕಂತಲೇ ಸೃಷ್ಟಿಸಿದ್ದಾರೆ. ಇದು ನನ್ನ ವಿರುದ್ಧದ ಷಡ್ಯಂತ್ರ. ಈ ಬಗ್ಗೆ 12 ವರ್ಷಗಳ ಹಿಂದೆಯೇ ಸ್ಪಷ್ಟನೆ ನೀಡಿದ್ದೆ. ಈಗ ಕೂಡ ಅದನ್ನೇ ಹೇಳುತ್ತಿದ್ದೇನೆ ಎಂದು ಧನ್ಯಾ ಪತ್ರದಲ್ಲಿ ತಿಳಿಸಿದ್ದಾರೆ.
"ಇಷ್ಟು ದಿನ ಈ ಬಗ್ಗೆ ಸುಮ್ಮನಿರುವುದಕ್ಕೆ ಕಾರಣವಿದೆ. ಆ ಸಮಯದಲ್ಲಿ ಈ ವಿಚಾರವಾಗಿ ನನ್ನ ಮನೆಯವರಿಗೆ ಬೆದರಿಕೆ ಹಾಕಲಾಗಿತ್ತು. ಅವರನ್ನು ರಕ್ಷಿಸುವ ಜವಾಬ್ದಾರಿ ನನ್ನ ಮೇಲಿದೆ ಹಾಗಾಗಿ ಈ ಬಗ್ಗೆ ಬಾಯಿ ಬಿಟ್ಟಿಲ್ಲ" ಎಂದು ವಿವರಿಸಿದರು. "ತಮಿಳು ಸಿನಿಮಾದಿಂದ ನನ್ನ ಸಿನಿಮಾ ಜೀವನ ಆರಂಭವಾಯಿತು. ಅಂತಹ ಉದ್ಯಮ ಮತ್ತು ಇಲ್ಲಿನ ಜನರ ಬಗ್ಗೆ ನನಗೆ ಅಪಾರ ಗೌರವವಿದೆ. ಇಲ್ಲಿ ನನ್ನ ಅಭಿಮಾನಿಗಳ ಪ್ರೀತಿಗೆ ಬೆಲೆ ಕಟ್ಟಲಾಗದು. ಅದಕ್ಕೇ ನಾನು ಈ ರಾಜ್ಯದ ಬಗ್ಗೆ ಯಾವತ್ತೂ ತಪ್ಪಾಗಿ ಮಾತನಾಡಿಲ್ಲ. ನಟಿಯಾಗಿ, ಮಹಿಳೆಯಾಗಿ ನಾನು ಯಾರನ್ನೂ ನೋಯಿಸುವ ಕೆಲಸ ಮಾಡಿಲ್ಲ. ತಮಿಳಿನಲ್ಲಿ ಮೂರು ಸಿನಿಮಾ ಮತ್ತು ವೆಬ್ ಸೀರಿಸ್ ಮಾಡಿದ್ದೇನೆ. ಆದರೆ ಆ ಪೋಸ್ಟ್ ಬಗ್ಗೆ ಎಲ್ಲಿಯೂ ಉಲ್ಲೇಖವಿಲ್ಲ. ಕಾರಣ ನಾನು ತಪ್ಪು ಮಾಡಿಲ್ಲ. ಆದರೆ ಆ ಸ್ಕ್ರೀನ್ ಶಾಟ್‌ನಿಂದ ತಮಿಳು ಜನರಿಗೆ ಏನಾದರೂ ನೋವಾಗಿದ್ದರೆ ನನ್ನನ್ನು ಕ್ಷಮಿಸಿ, ಎಂದು ಬೆಂಗಳೂರು ಬೆಡಗಿ ತಮಿಳಿನಲ್ಲಿ ಬರೆದುಕೊಂಡಿದ್ದಾರೆ.
ರಜನಿಕಾಂತ್- ಐಶ್ವರ್ಯಗೂ ಕ್ಷಮೆ
ಈ ವೈರಲ್ ಸ್ಕ್ರೀನ್ ಶಾಟ್‌ನಿಂದ ಸಂಕಷ್ಟಕ್ಕೆ ಸಿಲುಕಿರುವ 'ಲಾಲ್ ಸಲಾಂ' ತಂಡಕ್ಕೆ ರಜನಿಕಾಂತ್ ಹಾಗೂ ನಿರ್ದೇಶಕಿ ಐಶ್ವರ್ಯಾ ರಜನಿಕಾಂತ್‌ಗೂ ಧನ್ಯಾ ಕ್ಷಮೆ ಯಾಚಿಸಿದ್ದಾರೆ. ಈ ಸ್ಕ್ರೀಟ್ ಶಾಟ್ ತನ್ನ ಕಾಮೆಂಟ್ ಅಲ್ಲ ಹಾಗೂ ಅದನ್ನು ಸಾಬೀತುಪಡಿಸಲು ತನ್ನ ಬಳಿ ಯಾವುದೇ ಪುರಾವೆಗಳಿಲ್ಲ ಎಂದು ಆಕೆ ಸ್ಪಷ್ಟಪಡಿಸಿದ್ದಾರೆ.
ವೈರಲ್ ಪೋಸ್ಟ್‌ನಲ್ಲಿ ಏನಿದೆ?
12 ವರ್ಷಗಳ ಹಿಂದೆ ಸಿಎಸ್‌ಕೆ ಹಾಗೂ ಆರ್‌ಸಿಬಿ ಪಂದ್ಯದ ವೇಳೆ ಧನ್ಯಾ ಮಾಡಿದ್ದರು ಎನ್ನಲಾಗಿದ್ದ ಪೋಸ್ಟ್ ವೈರಲ್ ಆಗಿತ್ತು. ಇದರಲ್ಲಿ ತಮಿಳು ಜನರ ಬಗ್ಗೆ ವ್ಯಂಗ್ಯ ಮಾಡಿದಂತೆ ಬರೆಯಲಾಗಿತ್ತು. "ಆತ್ಮೀಯ ತಮಿಳುನಾಡಿನ ಜನರೇ, ನೀವು ನೀರು ಕೇಳಿದ್ದೀರಿ, ನಾವು ಕೊಟ್ಟಿದ್ದೇವೆ. ನೀವು ವಿದ್ಯುತ್ ಕೇಳಿದ್ದೀರಿ ಅದನ್ನೂ ಕೊಟ್ಟಿದ್ದೇವೆ. ಇಲ್ಲಿ ಬಂದು ಜೀವನ ಕಟ್ಟಿಕೊಳ್ಳುತ್ತೀರ, ಅದಕ್ಕೆ ನಾವು ಅವಕಾಶ ಕೊಡುತ್ತೇವೆ. ನಮ್ಮ ನಗರ ಹಾಳು ಮಾಡುತ್ತೀರ, ನಾವು ಸಹಿಸಿಕೊಳ್ಳುತ್ತೇವೆ. ಈಗ ಪ್ಲೇಆಫ್ಗೆ ಹೋಗಲು ಸಹ ನಮ್ಮ ಸಹಾಯವೇ ನಿಮಗೆ ಬೇಕಾಯ್ತು. ನಾಚಿಕೆ ಆಗಲ್ವಾ? ನಿಮಗೆ" ಎಂದು ಆ ಪೋಸ್ಟ್‌ನಲ್ಲಿದೆ.


Click it and Unblock the Notifications











